90ರ ದಶಕದಲ್ಲಿ ಖಳನಾಯಕ ಹಾಗೂ ನಾಯಕ ನಟನಾಗಿ ಜನಪ್ರಿಯರಾಗಿದ್ದ ಸಚಿವ ಬಿ.ಸಿ.ಪಾಟೀಲ, ಇದೀಗ ಮತ್ತೊಮ್ಮೆ ಬಣ್ಣ ಹಚ್ಚಿದ್ದು, ‘ಗರಡಿ’ ಎಂಬ ಸಿನಿಮಾದಲ್ಲಿ ಗರಡಿ ಮನೆಯ ಯಜಮಾನ ರಂಗಣ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಬಾಗಲಕೋಟೆ (ಮಾ.21): 90ರ ದಶಕದಲ್ಲಿ ಖಳನಾಯಕ ಹಾಗೂ ನಾಯಕ ನಟನಾಗಿ ಜನಪ್ರಿಯರಾಗಿದ್ದ ಸಚಿವ ಬಿ.ಸಿ.ಪಾಟೀಲ (BC Patil), ಇದೀಗ ಮತ್ತೊಮ್ಮೆ ಬಣ್ಣ ಹಚ್ಚಿದ್ದು, ‘ಗರಡಿ’ (Garadi) ಎಂಬ ಸಿನಿಮಾದಲ್ಲಿ ಗರಡಿ ಮನೆಯ ಯಜಮಾನ ರಂಗಣ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಭಾನುವಾರದಿಂದ ಒಂದು ವಾರ ಕಾಲ ಬಾದಾಮಿಯ ಮೇಣಬಸದಿ, ಐತಿಹಾಸಿಕ ಭೂತನಾಥ ದೇವಾಲಯ ಹಾಗೂ ಚಾಲುಕ್ಯರ ಕಾಲದ ವಸ್ತು ಸಂಗ್ರಹಾಲಯದ ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು, ಭಾನುವಾರದ ಚಿತ್ರೀಕರಣದಲ್ಲಿ ಸಚಿವ ಬಿ.ಸಿ.ಪಾಟೀಲ್ ಪಾಲ್ಗೊಂಡರು.
ಗರಡಿಯವರು ತಪ್ಪು ಮಾಡಬಾರದು, ತಪ್ಪು ಬಾಳಬಾರದು ಅನ್ನುವ ಸಿದ್ಧಾಂತದೊಂದಿಗೆ ಚಿತ್ರ ಸಿದ್ಧವಾಗುತ್ತಿದ್ದು, ಚಿತ್ರಕ್ಕೆ ಯೋಗರಾಜ ಭಟ್ (Yogaraj Bhat) ಅವರ ನಿರ್ದೇಶನವಿದೆ. ನಾಯಕ ನಟನಾಗಿ ಯಶಸ್ ಸೂರ್ಯ (Yashas Surya) ಕಾಣಿಸಿಕೊಂಡರೆ, ನಾಯಕಿಯಾಗಿ ಸೋನಾಲ್ ಮೊಂತೆರೋ, ಖಳನಾಯಕನಾಗಿ ರವಿಶಂಕರ ಅವರು ಪಾತ್ರ ನಿರ್ವಹಿಸಲಿದ್ದಾರೆ. ವಿ.ಹರಿಕೃಷ್ಣ ಅವರ ಸಂಗೀತ ನಿರ್ದೇಶನವಿದೆ. ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಸಹ ವಿಶೇಷ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
Yogaraj Bhat 'ಗರಡಿ' ಮನೆಯಿಂದ ಹೊರಬಂದ ರಚಿತಾ ರಾಮ್: ಡಿಂಪಲ್ ಕ್ವೀನ್ ಜಾಗಕ್ಕೆ ಸೋನಾಲ್!
ನಾನು ರಾಜಕೀಯಕ್ಕೆ ಬರುವ ಮುನ್ನ ಪೊಲೀಸ್ ಅಧಿಕಾರಿಯಾಗಿದ್ದೆ. ಸರ್ಕಾರಿ ನೌಕರರು ಸಿನಿಮಾ ಮಾಡಬಾರದು ಎಂದು ಆದೇಶವಾಗಿತ್ತು. ಆಗ ನಾನು ನಾಯಕ ನಟನಾಗಿದ್ದೆ, ಇಲಾಖೆಯಲ್ಲಿದ್ದರೆ ಸಿನಿಮಾ ಮಾಡಲು ಆಗುವುದಿಲ್ಲ ಎಂದು ರಾಜೀನಾಮೆ ನೀಡಿ ಹೊರಬಂದೆ ಎಂದು ಸಚಿವರು ನೆನಪಿಸಿಕೊಂಡರು.
'ಗರಡಿ' ಚಿತ್ರದ ನಾಯಕ ಯಶಸ್ ಸೂರ್ಯ ಈ ಚಿತ್ರದೊಂದಿಗೆ ಆ್ಯಕ್ಷನ್ ನಟನಾಗಿ ಹೊರ ಹೊಮ್ಮುವ ಸಾಧ್ಯತೆ ಇದ್ದು, 'ಬಿ ರೆಡಿ' ಎನ್ನುವ ಟ್ಯಾಗ್‌ಲೈನ್ ಚಿತ್ರಕ್ಕಿದೆ. ಇತ್ತೀಚೆಗಷ್ಟೇ ಚಿತ್ರದ ಪೋಸ್ಟರ್ (Poster) ಬಿಡುಗಡೆಯಾಗಿತ್ತು. ಆ್ಯಕ್ಷನ್ ಡ್ರಾಮಾ 'ಗರಡಿ' ಚಿತ್ರದಲ್ಲಿ ಸಾಂಪ್ರದಾಯಿಕ ವ್ಯಾಯಾಮ ಶಾಲೆಗಳು ಮತ್ತು ಪೈಲ್ವಾನ್‌ಗಳ ಫಿಟ್‌ನೆಸ್‌ಗಳ ಬಗ್ಗೆ ಕಥೆಯಿರುತ್ತದೆ. ಉತ್ತರ ಕರ್ನಾಟಕದ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲುಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ.
ವಿಶೇಷವಾಗಿ ಯೋಗರಾಜ್ ಭಟ್ ಸಿನಿಮಾಗಳು ಬೇರೆ ರೀತಿ ಇರುತ್ತವೆ. ಹಾಗಾಗಿ ಯೋಗರಾಜ್ ಭಟ್ಟರ ಸಿನಿಮಾ ಅಂದರೆ ಅಲ್ಲಿ ಪ್ರೇಮ ಕತೆಯೇ ಪ್ರಧಾನವಾಗಿ ಇರುತ್ತದೆ. ಹಾಗಾಗಿ ಈ ಚಿತ್ರದಲ್ಲಿ ಆ್ಯಕ್ಷನ್ ಜೊತೆಗೆ ಸುಂದರ ಪ್ರೇಮ ಇರುವುದು ಮಿಸ್ ಆಗುವುದಿಲ್ಲ. ಚಿತ್ರಕ್ಕೆ ನಿರಂಜನ್ ಬಾಬು ಕ್ಯಾಮರಾ ಕೈಚಳಕ, ವಿಕಾಸ್ ಚಿತ್ರಕಥೆಯಿದೆ. ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಜಯಂತ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ ಸಾಹಿತ್ಯ ರಚಿಸಲಿದ್ದಾರೆ.
Yogaraj Bhat 'ಗರಡಿ' ಮನೆಗೆ ಎಂಟ್ರಿ ಕೊಟ್ಟ ಯಶಸ್ ಸೂರ್ಯ
ಉತ್ತರ ಕರ್ನಾಟಕ ಹಾಗೂ ಮೈಸೂರು ಭಾಗಗಳಲ್ಲಿ ಕುಸ್ತಿ ಬಹಳ ಪ್ರಸಿದ್ಧವಾಗಿದ್ದು, ನಾನು ಮತ್ತು ಚಿತ್ರದ ನಿರ್ದೇಶಕರಾದ ಯೋಗರಾಜ ಭಟ್‌ರು ಉತ್ತರ ಕರ್ನಾಟಕದವರಾಗಿದ್ದರಿಂದ ಬಾದಾಮಿಯ ಐತಿಹಾಸಿಕ ಸ್ಥಳದಲ್ಲಿ ಚಿತ್ರೀಕರಣ ನಡೆಸಲು ಆಸಕ್ತಿ ತೋರಿದ್ದೇವೆ.
-ಬಿ.ಸಿ.ಪಾಟೀಲ, ಕೃಷಿ ಸಚಿವ