ಅಪಘಾತದಲ್ಲೇ ಮಗಳು, ಅತ್ತೆಯನ್ನ ಕಳೆದುಕೊಂಡಿದ್ದೇನೆ, ಗಾಯಾಳುಗಳಿಗೆ ಸಮಧಾನ ಹೇಳಿದ ಸಚಿವ

By Suvarna News  |  First Published Mar 20, 2022, 4:30 PM IST

* ತುಮಕೂರಿನ ಪಾವಗಡದಲ್ಲಿ ಬಸ್ ಅಪಘಾತ ಪ್ರಕರಣ
* ತುಮಕೂರು ಜಿಲ್ಲಾಸ್ಪತ್ರೆಗೆ ಗೃಹ ಸಚಿವ  ಆರಗ ಜ್ಞಾನೇಂದ್ರ ಭೇಟಿ
* ಗಾಯಾಳುಗಳ ಆರೋಗ್ಯ ವಿಚಾರಿಸಿ ಸಾರಿಗೆ ಅಧಿಕಾರಿಗಳ ಸಭೆ ಕೂಡ ನಡೆಸಿದ್ರು.


ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ತುಮಕೂರು(ಮಾ20): ರಸ್ತೆ ಅಪಘಾತ (Road Accident) ನಡೆದಾಗ ಏನ್ ಮಾಡಬೇಕು ಅನ್ನೋ ಗಡಿಬಿಡಿ ಆಗಿಬಿಡತ್ತೆ. ಯಾಕೆಂದರೆ ರೋಡ್ ಆಕ್ಸಿಡೆಂಟ್ ನಲ್ಲಿ ನನ್ನ ಮಗಳನ್ನ, ನನ್ನ ಅತ್ತೆಯನ್ನೂ  ಕಳೆದುಕೊಂಡಿದ್ದೇನೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ. 

Tap to resize

Latest Videos

ತುಮಕೂರಿನ (Tumakuru) ಪಾವಗಡದ ಪಳವಳ್ಳಿ ಕಟ್ಟೆ ಖಾಸಗಿ ಬಸ್ ಅಪಘಾತದಲ್ಲಿ (Bus Accident) ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯವನ್ನು ಆರಗ ಜ್ಞಾನೇಂದ್ರ ವಿಚಾರಿಸಿದರು.  ಈ ವೇಳೆ ಮಾತನಾಡಿದ ತುಮಕೂರು ಉಸ್ತುವಾರಿ ಸಚಿವರೂ ಆಗಿರುವ ಆರಗ ಜ್ಞಾನೇಂದ್ರ, ಅಪಘಾತದಲ್ಲಿ (Accident) ಮೃತಪಟ್ಟವರಿಗೆ ಸರಿಯಾದ ಬಟ್ಟೆ ಕೂಡ ಮುಚ್ಚದೇ ಸ್ಥಳಾಂತರಿಸಲಾಗಿದೆ ಎಂಬ ಆರೋಪಕ್ಕೆ ಉತ್ತರಿಸಿದ್ರು. 

Tumakuru Accident: 'ಒಂದು ಕೈಯಲ್ಲಿ ಮೊಬೈಲ್, ಒಂದು ಕೈಯಲ್ಲಿ ಸ್ಟೇರಿಂಗ್ ಹಿಡಿದಿದ್ದೇ ದುರಂತಕ್ಕೆ ಕಾರಣ'

ಅಪಘಾತದ ಸಂದರ್ಭದಲ್ಲಿ ಏನು ಸಿಗತ್ತೋ ಅದನ್ನ ಬಳಸಿರುತ್ತಾರೆ ಅಷ್ಟೇ, ಉದ್ದೇಶ ಪೂರ್ವಕವಾಗಿ ಮಾಡಿರುವುದಿಲ್ಲ . ಯಾಕೆಂದರೆ ನಾನೂ ಕೂಡ ತೀರ್ಥಹಳ್ಳಿಯ ರಸ್ತೆ ಅಪಘಾತದಲ್ಲಿ ಮಗಳನ್ನ ಕಳೆದುಕೊಂಡಿದ್ದೇನೆ, ನನ್ನ ಅತ್ತೆ ಕೂಡ ರಸ್ತೆ ಅಪಘಾತದಿಂದ ಮೃತಪಟ್ಟಿದ್ದಾರೆ. ಅಪಘಾತವಾದ ಗಡಿಬಿಡಿ ವೇಳೆ ಏನು ಮಾಡಬೇಕು ಅಂತ ತೋಚುವುದಿಲ್ಲ. ಆ ಸಂದರ್ಭ‌ದಲ್ಲಿ ಉತ್ತಮವಾದದ್ದು ಏನು ಮಾಡಲು ಸಾಧ್ಯವೋ ಅದನ್ನ ಮಾಡಬೇಕಾಗುತ್ತೆ ಎಂದರು. 

ಪಾವಗಡದ ಅಪಘಾತದಲ್ಲಿ ಗಾಯಗೊಂಡವರ ಪೈಕಿ, ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ (Tumakuru District Hospital) ಒಟ್ಟು 19 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು(ಭಾನುವಾರ) ಗಾಯಾಳುಗಳ ಆರೋಗ್ಯ ವಿಚಾರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಸಾರಿಗೆ ಅಧಿಕಾರಿಗಳ ಸಭೆ ಕೂಡ ನಡೆಸಿದ್ರು. ಬಳಿಕ ಮಾತನಾಡಿದ ಅವರು ನಿನ್ನೆ ಬೆಳಗ್ಗೆ ಪಾವಗಡ ಬಸ್ ಅಪಘಾತ ಪ್ರಕರಣದಲ್ಲಿ ಒಟ್ಟು 6 ಜನ ಮೃತಪಟ್ಟಿದ್ದಾರೆ. ಕೆಲವರು ಗಾಯಾಳುಗಳಿದ್ದಾರೆ ಅವರನ್ನ ತುಮಕೂರು ಜಿಲ್ಲಾಸ್ಪತ್ರೆ, ಬೆಂಗಳೂರಿನ ಆಸ್ಪತ್ರೆಗಳು, ಪಾವಗಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗ್ತಿದೆ. ಗಾಯಾಳುಗಳಿಗೆ ಯಾವುದೇ ಔಷಧ ಬೇಕೆಂದರೂ ಹೊರಗಿನಿಂದ ತರಿಸಿ ಕೊಡುವಂತೆ ಸೂಚನೆ ನೀಡಿರೋದಾಗಿ ಹೇಳಿದರು. 

ಗಾಯಾಳುಗಳ ಚಿಕಿತ್ಸಾ ವೆಚ್ಚ ಸಂಪೂರ್ಣ ಸರ್ಕಾರವೇ ಭರಿಸಲಿದ್ದು, ಗಾಯಾಳುಗಳಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಿ ಎಂದು ಸೂಚನೆ ಕೊಟ್ಟಿದ್ದೇನೆ ಎಂದರು. ಎರಡು ಮೂರು ಬಸ್ ನಲ್ಲಿ ಹೋಗುವವರು ಒಂದೇ ಬಸ್ ನಲ್ಲಿ ಹೋಗಿದ್ದಕ್ಕೆ ಈ ಘಟನೆ ಆಗಿದೆ. ಯಾವುದೇ ಬಸ್ ಗಳು ಪರ್ಮಿಟ್ ಇದ್ದರೆ ಓಡಾಟ ಮಾಡಬೇಕು. ಯಾವುದೇ ಬಸ್ ಓಡಾಡಲಿಲ್ಲ ಅಂದರೆ ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಅಂತ ಸೂಚನೆ ಕೊಟ್ಟಿದ್ದೇನೆ ಎಂದು ಆರಗ ಜ್ಞಾನೇಂದ್ರ ಹೇಳಿದ್ರು‌. ಬಸ್ ಮೇಲೆ ಕೂತು ಪ್ರಯಾಣ ಮಾಡಿದವರಿಗೆ ಹೆಚ್ಚು ಹಾನಿ ಆಗಿದೆ. ತ್ವರಿತಗತಿಯಲ್ಲಿ ಅಧಿಕಾರಿಗಳು ಸ್ಪಂದಿಸಿದ್ದಾರೆ. ಇಲ್ಲದಿದ್ದರೆ ಸಾವುನೋವು ಹೆಚ್ಚಾಗುವ ಸಾಧ್ಯತೆ ಇತ್ತು ಎಂದು ತಿಳಿಸಿದರು.

ಮಾ.19ರ ಬೆಳಗ್ಗೆ ಖಾಸಗಿ ಬಸ್ ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಹೋಗುತ್ತಿತ್ತು. ಬಸ್‍ನ ಟಾಪ್‍ನಲ್ಲಿ 50ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಕುಳಿತಿದ್ದರು. ಆದರೆ ಬಸ್ ಓವರ್ ಲೋಡ್ ಹಾಗೂ ಚಾಲಕನ ನಿರ್ಲಕ್ಷ್ಯದಿಂದ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಯ ಕೆರೆ ಏರಿ ಮೇಲೆ ಬಸ್ ಉರುಳಿದೆ. ಇದರಿಂದಾಗಿ 8 ಮಂದಿ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಮಾತನಾಡಿ, 8 ಜನರು ಸಾವನ್ನಪ್ಪಿದ್ದಾರೆ. 4 ಮೃತ ದೇಹಗಳ ರವಾನೆ ಆಗಿದೆ. ಸಾಕಷ್ಟು ಜನರಿಗೆ ಗಂಭೀರ ಗಾಯ ಆಗಿದೆ. ಅತಿಯಾದ ಸ್ಪೀಡ್‍ನಿಂದ ಘಟನೆ ಆಗಿದೆ. ಸ್ಥಳೀಯವಾಗಿ ಎಲ್ಲಾ ತುರ್ತು ಆರೋಗ್ಯ ಸೇವೆ ಉಪಯೋಗಿಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

click me!