MCDCC Bank Elections 2025: ಕೃಷಿ ಸಹಕಾರ ಕ್ಷೇತ್ರದ ಆಡಳಿತಕ್ಕೆ ರಾಜಕಾರಣಿಗಳ ಏಂಟ್ರಿ!

Kannadaprabha News, Ravi Janekal |   | Kannada Prabha
Published : Jun 19, 2025, 04:19 PM ISTUpdated : Jun 19, 2025, 04:44 PM IST
Mysuru

ಸಾರಾಂಶ

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌ನ ಚುನಾವಣೆ ರಾಜಕೀಯ ಕದನಕ್ಕೆ ತಿರುಗಿದೆ. ನ್ಯಾಯಾಲಯದ ಆದೇಶದ ನಂತರವೂ ಸರ್ಕಾರ ಚುನಾವಣೆ ವಿಳಂಬ ಮಾಡಿದ್ದು, ಈಗ 13 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಸಲು ನಿರ್ಧರಿಸಿದೆ. ಜಿ.ಡಿ. ಹರೀಶ್ ಗೌಡ ವಿರುದ್ಧ ಹಲವು ಕಾಂಗ್ರೆಸ್ ನಾಯಕರು ಕಣಕ್ಕಿಳಿದಿದ್ದಾರೆ.

ಮೈಸೂರು (ಜೂ.19): ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌(ಎಂಸಿಡಿಸಿಸಿ)ನ ಅವಧಿ ಪೂರ್ಣಗೊಂಡು ಒಂದೂವರೆ ವರ್ಷವಾದರೂ ಚುನಾವಣೆ ನಡೆಸದ ರಾಜ್ಯ ಸರ್ಕಾರ ಇದೀಗ ನ್ಯಾಯಾಲಯದ ತೀರ್ಪಿನಂತೆ ಚುನಾವಣೆ ನಡೆಸಲು ಸಜ್ಜಾಗಿದೆ.

ಈ ಮಧ್ಯ ಮೊಸರಲ್ಲಿ ಕಲ್ಲು ಹುಡುಕಿದಂತೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕಿನ 17 ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಸಬೇಕಿದ್ದು, 13 ಸ್ಥಾನಗಳಿಗೆ ಚುನಾವಣೆ ನಡೆಸಲು ತಯಾರಿ ಮಾಡಿಕೊಂಡಿದ್ದು, ಉಳಿದ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಸದೆ ಕುಂಟು ನೆಪವೊಡ್ಡಿ ಕ್ಷೇತ್ರದ ಚುನಾಯಿತ ಆಕಾಂಕ್ಷಿಗಳಿಗೆ ಮಣ್ಣು ಎರೆಚಿದೆ.

ಎಂಸಿಡಿಸಿಸಿ ಬ್ಯಾಂಕಿಗೆ ಕೃಷಿ ಮತ್ತು ಸಹಕಾರ ಕ್ಷೇತ್ರದಲ್ಲಿ ಸೇವೆ ಮಾಡುವ ಮನೋಭಾವ ಹೊಂದಿರುವವರು ಸ್ಪರ್ಧೆ ಮಾಡಿ ಆಯ್ಕೆಯಾಗುವುದು ಈ ಹಿಂದಿನಿಂದಲೂ ನಡೆದು ಬಂದಿರುವ ಪ್ರತೀತಿ. ಆದರೆ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಬೇಕೆಂಬ ಆಕಾಂಕ್ಷಿಗಳನ್ನು ಗಮನಿಸಿದರೆ ಬ್ಯಾಂಕ್‌ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬ ಆತಂಕ ಸಹಕಾರಿಗಳಲ್ಲಿ ಮನೆ ಮಾಡಿದೆ.

ಸರ್ಕಾರ- ಜಿ.ಡಿ. ಹರೀಶ್‌ ಗೌಡ:

ಎಂಸಿಡಿಸಿಸಿ ಸಹಕಾರ ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷ ಜಿ.ಡಿ. ಹರೀಶ್‌ ಗೌಡ ಐದು ವರ್ಷಗಳ ತಮ್ಮ ಆಡಳಿತಾವಧಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ರಾಜ್ಯದಲ್ಲೇ ಮಾದರಿ ಸಹಕಾರಿ ಬ್ಯಾಂಕ್‌ಎಂಬ ಹೆಗ್ಗಳಿಕೆಯನ್ನು ಎಂಸಿಡಿಸಿಸಿ ಬ್ಯಾಂಕಿಗೆ ತಂದುಕೊಟ್ಟಿದ್ದಾರೆ. ನಿಗದಿಯಂತೆ ಜಿ.ಡಿ. ಹರೀಶ್‌ಗೌಡ ಅವರ ಅವಧಿ 2023ರ ನ. 22ಕ್ಕೆ ಅಂತ್ಯಗೊಂಡ ಹಿನ್ನೆಲೆ ಬ್ಯಾಂಕಿನ ಚುನಾವಣೆ ನಡೆಸಲು ಮುಂದಾದ ಆಡಳಿತ ಮಂಡಳಿಗೆ ರಾಜ್ಯದ ಕಾಂಗ್ರೆಸ್‌ಸರ್ಕಾರ ಚುನಾವಣೆ ನಡೆಸುವ ಬದಲಿಗೆ ನಿವೃತ್ತ ಅಧಿಕಾರಿಯನ್ನು ಬ್ಯಾಂಕಿನ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ, ಸಹಕಾರಿ ಕ್ಷೇತ್ರದ ತತ್ವಗಳಿಗೆ ತದ್ವಿರುದ್ಧವಾಗಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಕುಂಟು ನೆಪವೊಡ್ಡಿ ಚುನಾವಣೆ ಮುಂದೂಡಿತ್ತು.

ಸರ್ಕಾರದ ಈ ನಡೆಯನ್ನು ಪ್ರಶ್ನಿಸಿದ ಸಹಕಾರಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರ ಪರಿಣಾಮ ನ್ಯಾಯಾಲಯ ಚುನಾವಣೆ ನಡೆಸಲು ಸೂಚನೆ ನೀಡಿದರೂ ಸಹ ಇದನ್ನು ಧಿಕ್ಕರಿಸಿದ ಸರ್ಕಾರ ನ್ಯಾಯಾಲಯಕ್ಕೆ ನೆಪಗಳನ್ನೇ ದಾಖಲೆಯನ್ನಾಗಿ ನೀಡಿ ಚುನಾವಣೆಯನ್ನು ಮುಂದೂಡಿಸಿತ್ತು. ಆದರೆ ಇದೀಗ ಒಂದೂವರೆ ವರ್ಷಗಳು ಕಳೆದ ನಂತರದಲ್ಲಿ ನ್ಯಾಯಾಲಯದ ಆದೇಶದಿಂದ ಸಹಕಾರಿಗಳಿಗೆ ನ್ಯಾಯ ಸಿಕ್ಕಿತೆಂದು ಭಾವಿಸಿ ಚುನಾವಣೆಗೆ ಸಜ್ಜಾಗಿದ್ದರು. ಇದರ ನಡುವೆಯೂ 13 ಸ್ಥಾನಗಳಿಗೆ ಚುನಾವಣೆ ನಿಗದಿಪಡಿಸಿ, 4 ಸ್ಥಾನಗಳ ಚುನಾವಣೆಯನ್ನು ಮುಂದೂಡಿದೆ.

ಇದರ ನಡುವೆ ಬೈಲಾ ಗೊಂದಲವೂ ಉಂಟಾಗಿ ನ್ಯಾಯಾಲಯದಲ್ಲಿದೆ. ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್‌ ಗಳ ಅವಧಿ ಮುಗಿದ ಕೂಡಲೇ ಚುನಾವಣೆ ನಡೆಸಿರುವ ಸರ್ಕಾರ ಮುಖ್ಯಮಂತ್ರಿಗಳ ತವರು ಕ್ಷೇತ್ರ ವ್ಯಾಪ್ತಿಗೆ ಸೇರಿರುವ ಎಂಸಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯ ಅವಧಿ ಮುಕ್ತಾಯ ಗೊಂಡು ಒಂದೂವರೆ ವರ್ಷವಾದರೂ ಏಕೆ ಚುನಾವಣೆ ನಡೆಸಿಲ್ಲ ಎಂಬ ಅನುಮಾನ ಮೂಡಿಸಿದೆ.

ಸಹಕಾರಿ ಕ್ಷೇತ್ರ ಪ್ರಬಲವೇ?:

ಎಂಸಿಡಿಸಿಸಿ ಬ್ಯಾಂಕ್‌ನ 60 ವರ್ಷಗಳ ಇತಿಹಾಸದಲ್ಲಿ ಕೃಷಿಕರು ಹಾಗೂ ಸೇವಾ ಮನೋಭಾವ ಹೊಂದಿರುವವರೂ ಆಯ್ಕೆಯಾಗಿ ಬಂದಿದ್ದಾರೆ. ಆದರೆ ಈ ಬಾರಿ ಆಡಳಿತ ಮಂಡಳಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್‌, ಎರಡು ಜಿಲ್ಲೆಗಳ ಹನ್ನೊಂದು ಶಾಸಕರು, ಎಂಸಿಡಿಸಿಸಿ ಬ್ಯಾಂಕಿನ ಇಬ್ಬರು ಮಾಜಿ ಅಧ್ಯಕ್ಷರು, ಮಾಜಿ ಶಾಸಕರು, ಮಾಜಿ ಸಚಿವರು, ಕ್ಯಾಬಿನೆಟ್‌ ದರ್ಜೆಯ ಅಧ್ಯಕ್ಷರು, ಜೆಡಿಎಸ್‌ ವಕ್ತಾರ ಹಾಗೂ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್‌ ಗೌಡ ಅವರನ್ನು ಮಣಿಸಿ ಎಂಸಿಡಿಸಿಸಿ ಬ್ಯಾಂಕಿನ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದ್ದಾರೆಯೇ? ಎಂಬ ಅನುಮಾನಗಳು ಎಲ್ಲೆಡೆ ವ್ಯಕ್ತವಾಗುತ್ತಿದೆ.

ಸಿಎಂಗೆ ಪ್ರತಿಷ್ಠೆಯ ಪ್ರಶ್ನೆಯೇ?:

ಯಾವುದೇ ಚುನಾವಣೆಗಳು ಆಡಳಿತ ಪಕ್ಷದ ಪಾಲಿಗೆ ಪ್ರತಿಷ್ಠೆಯಾಗಿರಲಿದ್ದು, ಈ ನಡುವೆ ಎಂಸಿಡಿಸಿಸಿ ಬ್ಯಾಂಕಿನ ಚುನಾವಣೆಯೂ ಸಹ ರಾಜ್ಯ ಸರ್ಕಾರಕ್ಕೆ ಅದರಲ್ಲೂ ವಿಶೇಷವಾಗಿ ಮುಖ್ಯಮಂತ್ರಿಗಳಿಗೆ ಪ್ರತಿಷ್ಠೆಯ ಕದನವಾಗಿದೆ. ಈ ಕಾರಣದಿಂದಾಗಿ ಎಂಸಿಡಿಸಿಸಿ ಬ್ಯಾಂಕಿನ ಅವಧಿ ಮುಗಿದು ಒಂದೂವರೆ ವರ್ಷವೇ ಆದರೂ ಕುಂಟು ನೆಪವನ್ನೇ ಅಸ್ತ್ರವನ್ನಾಗಿಸಿಕೊಂಡು, ಚುನಾವಣೆ ಮುಂದೂಡುತ್ತಾ ಬಂದಿದ್ದು, ಇದೀಗ ಅಧಿಕಾರದ ಗದ್ದುಗೆ ಏರುವ ಸಲುವಾಗಿ ಓರ್ವ ಶಾಸಕನ ವಿರುದ್ಧ ಇಡೀ ಸರ್ಕಾರವೇ ತೊಡೆತಟ್ಟಿ ನಿಂತಿದ್ದು, ಇದಕ್ಕೆ ಸೂಕ್ತ ಕಾರಣವೇನು? ಎಂಬ ಪ್ರಶ್ನೆ ಮೂಡಿದೆ.

ಅಲ್ಲದೇ, ಎಂಸಿಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಈ ಬಾರಿ ಅಧಿಕಾರವನ್ನು ತಮ್ಮದಾಗಿಸಿಕೊಳ್ಳಲೇಬೇಕೆಂಬ ಬಗ್ಗೆ ಸರ್ಕಾರ ಸಾಕಷ್ಟು ರಣತಂತ್ರ ರೂಪಿಸಿಕೊಂಡಿದ್ದು, ಇದೇ ಕಾರಣದಿಂದ ಈ ಬಾರಿಯ ಎಂಸಿಡಿಸಿಸಿ ಚುನಾವಣೆಯಲ್ಲಿ ಅಧಿಕಾರ ಹಿಡಿಯಲೇಬೇಕೆಂಬ ಕುರಿತಂತೆ ಹಠಕ್ಕೆ ಬಿದ್ದಿದ್ದಾರೆಂಬ ಮಾತುಗಳು ಕೇಳಿಬಂದಿದೆ.

ಕನಸು ಕಾಣುತ್ತಿರುವ ಕಾಂಗ್ರೆಸ್ಸಿಗರು:

ಎಂಸಿಡಿಸಿಸಿ ಬ್ಯಾಂಕ್‌ ಚುನಾವಣೆ ಇನ್ನೂ ಮುಗಿಯದಿದ್ದರೂ ಕಾಂಗ್ರೆಸ್ಸಿಗರು ಮಾತ್ರ ಈಗಾಗಲೇ ಪ್ರತಿಷ್ಠಿತ ಸಹಕಾರಿ ಬ್ಯಾಂಕಿನ ಕುರ್ಚಿ ಮೇಲೆ ಕಣ್ಣಿಟ್ಟಿದ್ದು, ಆ ಮೂಲಕ ಆಡಳಿತದ ಗದ್ದುಗೆ ಏರುವ ಕನಸಿನಲ್ಲಿದ್ದಾರೆ. ಪ್ರಮುಖವಾಗಿ ಎಂಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಪುಟ್ಟರಂಗಶೆಟ್ಟಿ, ಕಾಂಗ್ರೆಸ್‌ಹಿರಿಯ ಮುಖಂಡ ದೊಡ್ಡಸ್ವಾಮೇಗೌಡ, ಚಂದ್ರಶೇಖರ್‌, ಮಾಜಿ ಶಾಸಕ ನರೇಂದ್ರ ಹಾಗೂ ಎಂಸಿಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಅವರು ರೇಸ್‌ ನಲ್ಲಿದ್ದಾರೆ. ಇದರ ನಡುವೆ ಅಪೆಕ್ಸ್‌ ಬ್ಯಾಂಕ್‌ ಪ್ರತಿನಿಧಿ ಹುದ್ದೆಗೆ ಶಾಸಕ ಅನಿಲ್‌ ಚಿಕ್ಕಮಾದು, ನರೇಂದ್ರ ಹಾಗೂ ಬಸವೇಗೌಡ ಅವರು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಇವರ ನಡುವೆ ನಿಕಟಪೂರ್ವ ಅಧ್ಯಕ್ಷರಾದ ಜಿ.ಡಿ. ಹರೀಶ್‌ ಗೌಡ ಅವರ ನೇತೃತ್ವದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಸಹಕಾರಿಗಳು ಕಾಂಗ್ರೆಸ್‌ ಸ್ಪರ್ಧಿಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಮೂಲಕ ತೀವ್ರ ಪೈಪೋಟಿ ನೀಡಲು ಸಜ್ಜಾಗಿದ್ದಾರೆ.

ಆಡಳಿತ ಯಂತ್ರದ ದುರ್ಬಳಕೆಯಾಗುತ್ತಿದೆಯೇ:

ಪ್ರತಿಷ್ಠಿತ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ರಾಜ್ಯ ಸರ್ಕಾರ ಇದಕ್ಕಾಗಿ ಅಧಿಕಾರದ ದುರ್ಬಳಕೆ ಮಾಡಿಕೊಂಡು, ಹಿಂಬಾಗಿಲಿನ ಮೂಲಕ ಅಧಿಕಾರ ಹಿಡಿಯುವ ಪ್ರಯತ್ನದಲ್ಲಿದೆ. ಇದಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ ಶಾಸಕ ಜಿ.ಡಿ. ಹರೀಶ್‌ ಗೌಡ ಸೇರಿದಂತೆ ಹಲವು ಸ್ಪರ್ಧಿಗಳನ್ನು ಅನರ್ಹ ಮಾಡುವ ಮೂಲಕ ಸಹಕಾರಿ ಕ್ಷೇತ್ರದ ನಿಯಮ ಗಳನ್ನೆಲ್ಲಾ ಗಾಳಿಗೆ ತೂರಿದೆ. ಆ ಮೂಲಕ ಅಧಿಕಾರದ ದುರ್ಬಳಕೆ ಮಾಡಿಕೊಂಡು, ಸರ್ಕಾರ ಸಹಕಾರ ಕ್ಷೇತ್ರದ ಬ್ಯಾಂಕ್‌ ಚುನಾವಣೆ ನಡೆಸುತ್ತಿದೆ ಎಂಬ ಕುರಿತುಂತೆ ಈಗಾಗಲೇ ಎಲ್ಲ ಕಡೆಗಳಲ್ಲಿ ಚರ್ಚೆ ನಡೆಯುತ್ತಿದೆ.

ಒಬ್ಬರ ವಿರುದ್ಧ ಹಲವರ ಪೈಪೋಟಿ:

ಈ ಬಾರಿಯ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌ಚುನಾವಣೆ ಓನ್‌ವರ್ಸಸ್‌ಸೋ ಮನಿ ಎನ್ನುವಂತಾಗಿದೆ. ಇದಕ್ಕೆ ಪೂರಕವೆಂಬಂತೆ ನಿಕಟಪೂರ್ವ ಅಧ್ಯಕ್ಷ ಜಿ.ಡಿ. ಹರೀಶ್‌ ಗೌಡ ಅವರು ಒಂದೆಡೆ ಏಕಾಂಗಿಯಾಗಿ ಸ್ಪರ್ಧೆಗೆ ಮುಂದಾಗಿದ್ದರೆ, ಇವರ ವಿರುದ್ಧ ಕಾಂಗ್ರೆಸ್‌ನ ಶಾಸಕರಾದ ಅನಿಲ್‌ ಚಿಕ್ಕಮಾದು (ಎಚ್‌.ಡಿ. ಕೋಟೆ), ಕೆ.ಆರ್.ನಗರ ಶಾಸಕ ಡಿ. ರವಿಶಂಕರ್‌ ಅವರ ತಂದೆ ದೊಡ್ಡಸ್ವಾಮಿಗೌಡ, ಸಚಿವ ಕೆ.ವೆಂಕಟೇಶ್‌ ಅವರ ನಿಕಟವರ್ತಿ ಸುನೀಲ್‌ (ಪಿರಿಯಾಪಟ್ಟಣ), ಶಾಸಕ ಪುಟ್ಟರಂಗಶೆಟ್ಟಿ (ಚಾಮರಾಜನಗರ), ಎಚ್‌.ಎಂ. ಗಣೇಶ್‌ ಪ್ರಸಾದ್‌ (ಗುಂಡ್ಲುಪೇಟೆ), ನರೇಂದ್ರ (ಕೊಳ್ಳೇಗಾಲ) ಅವರ ಜೊತೆಗೆ ಎಂಸಿಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ಸಿ. ಬಸವೇಗೌಡ, ಚಂದ್ರಶೇಖರ್‌ ಹಾಗೂ ರಾಜಕೀಯ ವ್ಯಕ್ತಿಗಳ ನಿಕಟವರ್ತಿಗಳು ಚುನಾವಣಾ ಕಣದಲ್ಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌