
ಬೆಂಗಳೂರು (ಜೂ.19): ರಾಜ್ಯದಲ್ಲಿ ಅತಿಹೆಚ್ಚು ಅಪರಾಧ ಕೃತ್ಯಗಳನ್ನು ನಡೆಸುತ್ತಿರುವುದು ಆರ್‌ಎಸ್‌ಎಸ್ ಸಂಘಟನೆ ಮತ್ತು ಬಜರಂಗದಳದವರು ಎಂಬ ವಿವಾದಾತ್ಮಕ ಹೇಳಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (42ನೇ ಎಸಿಜೆಎಂ ಕೋರ್ಟ್) ನೋಟಿಸ್ ಜಾರಿಗೊಳಿಸಿದೆ.
ಅವಹೇಳನಕಾರಿ ಹೇಳಿಕೆ ನೀಡುವ ಮುಖಾಂತರ ಆರ್‌ಎಸ್‌ಎಸ್ ಸಂಘಟನೆ ಗೌರವಕ್ಕೆ ಧಕ್ಕೆ ತಂದು ಮಾನನಷ್ಟ ಉಂಟು ಮಾಡಿದ ಆರೋಪದ ಮೇಲೆ ಬುಧವಾರ ಆ ಎಸ್‌ಎಸ್ ಕಾರ್ಯಕರ್ತ ಹಾಗೂ ವಕೀಲ ಎನ್.ಕಿರಣ್ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜೂ.26ಕ್ಕೆ ಮುಂದೂಡಿತು. ಪ್ರಕರಣ ಸಂಬಂಧ ದೂರುದಾರನ ಪ್ರಮಾಣೀಕೃತ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಕಾಗ್ನಿಜೆನ್ಸ್ ಸ್ವೀಕರಿಸುವ ಮುನ್ನ ಆರೋಪಿಗೆ ನೋಟಿಸ್ ಜಾರಿಗೊಳಿಸಿ ಅವರ ವಾದ ಆಲಿಸಬೇಕು ಎಂದು ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ(ಬಿಎನ್‌ಎಸ್ಎಸ್) ಸೆಕ್ಷನ್ 233 ಹೇಳುತ್ತದೆ. ಅದರಂತೆ ಪ್ರಕರಣದಲ್ಲಿ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಗೊಳಿಸಲಾಗಿದೆ ಎಂದು ಆದೇಶದಲ್ಲಿ ನ್ಯಾಯಾಲಯ ಉಲ್ಲೇಖಿಸಿದೆ.
ಏನಿದು ಪ್ರಕರಣ?: ದೂರುದಾರ ಎನ್.ಕಿರಣ್ ನೀಡಿದ ದೂರಿನ ಅನ್ವಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025ರ ಮಾ.17ರಂದು ವಿಧಾನಸಭೆಯಲ್ಲಿ ಮಾತನಾಡುತ್ತಾ, ರಾಜ್ಯದಲ್ಲಿ ಅತಿಹೆಚ್ಚು ಅಪರಾಧ ಕೃತ್ಯಗಳನ್ನು ನಡೆಸುತ್ತಿರುವುದು ಆರ್‌ಎಸ್‌ಎಸ್ ಸಂಘಟನೆ ಮತ್ತು ಬಜರಂಗದಳದವರು ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಯೂಟ್ಯೂಬ್ ಚಾನೆಲ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ.
ಆರ್‌ಎಸ್‌ಎಸ್ ಸಂಘಟನೆ ಕೇವಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತದೆ. ಯಾವುದೇ ಅಪರಾಧ ಕೃತ್ಯಗಳನ್ನು ಎಸೆಗಿಲ್ಲ. ಸಿದ್ದರಾಮಯ್ಯ ಅವರು ಈ ರೀತಿ ಅವಹೇಳನಕಾರಿಯಾಗಿ ಮಾತನಾಡಿರುವುದರಿಂದ ಆರ್‌ಎಸ್‌ಎಸ್ ಸಂಘಟನೆ ಕಾರ್ಯಕರ್ತನಾದ ನನ್ನ ಮನಸಿಗೆ ನೋವಾಗಿದೆ. ಹಾಗೆಯೇ ಸಂಘಟನೆಯ ಗೌರವಕ್ಕೆ ಧಕ್ಕೆ ಹಾಗೂ ಮಾನನಷ್ಟ ಉಂಟಾಗಿದೆ. ವಿಧಾನಸಭೆ ಕಾರ್ಯಕಲಾಪಗಳಿಗೆ ಸಂಬಂಧಿಸಿ ಆ ಎಸ್ಎಸ್ ಸಂಘಟನೆ ಪಾತ್ರ ಇಲ್ಲ. ಅನವಶ್ಯಕವಾಗಿ ಸಿಎಂ ಸಂಘಟನೆ ಹೆಸರು ಎಳೆತಂದು ಗೌರವಕ್ಕೆ ಚ್ಯುತಿ ಉಂಟು ಮಾಡಿದ್ದಾರೆ.
ಹೀಗಾಗಿ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್) 299 (ಧಾರ್ಮಿಕ ಭಾವನೆಗಳಿಗೆ ಧಕ್ಕೆ), 352 (ಶಾಂತಿ ಭಂಗಕ್ಕೆ ಪ್ರಚೋದನೆ) ಹಾಗೂ 356 (ಮಾನನಷ್ಟು ಅಡಿ ಕ್ರಮ ಜರುಗಿಸಬೇಕು ಎಂದು ದೂರುದಾರ ಕಿರಣ್ ದೂರಿನಲ್ಲಿ ಮನವಿ ಮಾಡಿದ್ದಾರೆ. ಕೇಸ್ ಸಂಬಂಧ ದೂರುದಾರನ ವಾದ ಆಲಿಸಿದ ಮತ್ತು ಆತನ ಪ್ರಮಾಣಿಕೃತ ಹೇಳಿಕೆ ದಾಖಲಿಸಿರುವ ನ್ಯಾಯಾಲಯವು ಸಿದ್ದರಾಮಯ್ಯಗೆ ನೋಟಿಸ್ ಜಾರಿಗೊಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ