ಕೃಷಿ ಸಚಿವ ಚಲುವರಾಯಸ್ವಾಮಿಗೆ ಮಂತ್ರಿಗಿರಿ ಕುರ್ಚಿ ಕಂಟಕ: ಕಂಡಕ್ಟರ್ ಆಯ್ತು, ಈಗ ಕೃಷಿ ಅಧಿಕಾರಿಗಳಿಂದ ಆತ್ಮಹತ್ಯೆ ಬೆದರಿಕೆ

By Sathish Kumar KH  |  First Published Aug 7, 2023, 2:55 PM IST

ರಾಜ್ಯದ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ಮಂತ್ರಿಗಿರಿ ಕುರ್ಚಿಯನ್ನು ಅಲುಗಾಡಿಸುವ ಘಟನೆ ಮತ್ತೊಮ್ಮೆ ಮರುಕಳಿಸಿದೆ. 


ಮಂಡ್ಯ (ಆ.07): ರಾಜ್ಯ ರಾಜಕಾರಣದಲ್ಲಿ ಯಾವಾಗಲೂ ಸದ್ದು ಮಾಡುವ ಮಂಡ್ಯ ಜಿಲ್ಲೆಯಲ್ಲಿ, ಚುನಾವಣೆಯ ನಂತರವೂ ರಾಜಕೀಯ ಕೋಲಾಹಲ ಮುಂದುವರೆದಿದ್ದು, ಟಾರ್ಗೆಟ್‌ ಎನ್. ಚಲುವರಾಯಸ್ವಾಮಿ ಮುನ್ನೆಲೆಗೆ ಬಂದಿದೆ. ಈಗಾಗಲೇ ನಾಗಮಂಗಲ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್‌ ವಿಷ ಸೇವಿಸಿ ತನ್ನ ಆತ್ಮಹತ್ಯೆಗೆ ಸಚಿವ ಚಲುವರಾಯಸ್ವಾಮಿ ಕಾರಣ ಎಂಬ ಆರೋಪ ಉಂಟಾಗಿದ್ದು, ಅದರಿಂದ ಈಗಷ್ಟೇ ಸಚಿವರು ಹೊರ ಬಂದಿದ್ದರು. ಈಗ ಜಿಲ್ಲೆಯ 7 ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಚಲುವರಾಯಸ್ವಾಮಿ ತಮ್ಮಿಂದ ತಲಾ 6 ಲಕ್ಷ ರೂ. ಹಣ ಕೇಳುತ್ತಿದ್ದಾರೆ ಎಂದು ಸರ್ಕಾರಕ್ಕೆ ಬರೆದಿರುವ ಪತ್ರ ವೈರಲ್‌ ಆಗುತ್ತಿದೆ. ಇದರ ಬೆನ್ನಲ್ಲೇ ಗಂಭೀರ ಆರೋಪದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದು, ಮಂತ್ರಿಗಿರಿ ಕುರ್ಚಿಗೆ ಕಂಟಕ ಎದುರಾಗಿದೆ.

ಬಿಜೆಪಿ ವಕ್ತಾರರಾಗಿ ಹೆಚ್.ಡಿ. ಕುಮಾರಸ್ವಾಮಿ ನೇಮಕ; ಸಚಿವ ಚಲುವರಾಯಸ್ವಾಮಿ ಟೀಕೆ

Latest Videos

undefined

ಮಂಡ್ಯ ಜಿಲ್ಲೆ ಯಾವಾಗಲೂ ವಿಭಿನ್ನ ರಾಜಕಾರಣದಿಂದ ಸದ್ದು ಮಾಡುತ್ತಲೇ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆದ್ದಿತ್ತು. ನಂತರ, ಕೆ.ಆರ್. ಪೇಟೆ ಕ್ಷೇತ್ರದ ನಾರಾಯಣಸ್ವಾಮಿ ಬಿಜೆಪಿಗೆ ಹೋಗಿ ಗೆಲುವು ಸಾಧಿಸಿದ್ದರು. ಇದಾದ ನಂತರ 2023 ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ಪೇಟೆ ನಬಿಟ್ಟರೆ ಉಳಿದೆಲ್ಲಾ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿದೆ. ಜೆಡಿಎಸ್‌ ಸಂಪೂರ್ಣ ಹಿಡಿತ ಕಳೆದುಕೊಂಡಿದ್ದು, ಕಾಂಗ್ರೆಸ್‌ ನಾಯಕ ಎನ್. ಚಲುವರಾಯಸ್ವಾಮಿ ಜಿಲ್ಲೆಯ ರಾಜಕಾರಣದ ಮೇಲೆ ಹಿಡಿತ ಸಾಧಿಸಿದ್ದಾರೆ. ಕೃಷಿ ಸಚಿವರಾದ ಚಲುವರಾಯಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ.

ಕುರ್ಚಿ ಕಿತ್ತುಕೊಳ್ಳಲು ಹರಸಾಹಸ: ಇನ್ನು ಕಳೆದ ಐದು ವರ್ಷಗಳಿಂದ ಯಾವುದೇ ಅಧಿಕಾರವಿಲ್ಲದೇ ಮನೆಯಲ್ಲಿ ಕುಳಿತಿದ್ದ ಚಲುವರಾಯಸ್ವಾಮಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಿಕ್ಕಿದ್ದೇ ತಡ ಜಿಲ್ಲೆ ಜೆಡಿಎಸ್‌ ನಾಯಕರಿಗೂ ಭಾರಿ ಹಿನ್ನಡೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನದಿಂದ ಕೆಳಗಳಿಸಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ. ಈಗಾಗಲೇ ನಾಗಮಂಗಲದ ಕೆಎಸ್‌ಆರ್‌ಟಿಸಿ ಡಿಪೋ ಕಂಡಕ್ಟರ್‌ ತನ್ನ ಸಾವಿಗೆ ಸಚಿವ ಚಲುವರಾಯಸ್ವಾಮಿಯೇ ಕಾರಣ ಎಂದು ಡೆತ್‌ನೋಟ್‌ ಬರೆದಿಟ್ಟು ವಿಷ ಸೇವನೆ ಮಾಡಿದ್ದನು. ಇದಾದ ನಂತರ ಆಸ್ಪತ್ರೆಗೆ ದಾಖಲಿಸಿ ಅವರ ಜೀವ ಉಳಿಸಲಾಯಿತು. ಈ ವಿಚಾರವಾಗಿ ಭಾರಿ ರಾಜಕೀಯ ಹೈಡ್ರಾಮಗಳೇ ನಡೆದಿದ್ದವು. ಇದು ತಣ್ಣಗಾದ ಬೆನ್ನಲ್ಲೇ ಕೃಷಿ ಅಧಿಕಾರಿಗಳ ಆತ್ಮಹತ್ಯೆ ಬೆದರಿಕೆ ಪತ್ರ ವೈರಲ್‌ ಆಗುತ್ತಿದೆ.

ಏನಿದೆ ಕೃಷಿ ಅಧಿಕಾರಿಗಳ ಪತ್ರದಲ್ಲಿ? "ಮಂಡ್ಯ ಜಿಲ್ಲೆಯ 7 ತಾಲೂಕುಗಳ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಂದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಲಾ 6-8 ಲಕ್ಷ ರೂ. ಹಣವನ್ನು ಕೊಡುವಂತೆ ಕೇಳುತ್ತಿದ್ದಾರೆ. ಇಲ್ಲವಾದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ನಾವು ಲಂಚ ಕೊಡಲಾಗದೇ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಸರ್ಕಾರದಿಂದ ಕೂಡಲದೇ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯದ ರಾಜಪಾಲರಿಗೆ ಪತ್ರವನ್ನು ಬರೆದಿದ್ದಾರೆ" ಎನ್ನಲಾದ ಪತ್ರ ವೈರಲ್‌ ಆಗಿದೆ. 

ಇದು ಫೇಕ್‌ ಲೆಟರ್ ಎಂದ ಚಲುವರಾಯಸ್ವಾಮಿ: ಕೃಷಿ ಅಧಿಕಾರಿಗಳ ಆರೋಪದ ಬಗ್ಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಅವರು, ಲೆಟರ್ ಬಗ್ಗೆ ನನಗೆ ಗೊತ್ತಿಲ್ಲ. ಕೃಷಿ ಇಲಾಖೆ ಜಂಟಿ ನಿರ್ದೇಶಕರ ಬಳಿ ಕೇಳಿದಾಗ ಫೇಕ್ ಲೆಟರ್ ಎಂದಿದ್ದಾರೆ. ಬಹಳ ಜನ ಹುಡುಕಿ ಹುಡುಕಿ ಗೊಂದಲ ಸೃಷ್ಟಿ ಮಾಡಲು ಕಾದಿದ್ದಾರೆ. ಒಂದು ವೇಳೆ ತಪ್ಪು ಎಸಗಿದ್ರೆ ಕಾರ್ಯದರ್ಶಿಗೆ ತನಿಖೆ ನಡೆಸಲು ಸೂಚಿಸುತ್ತೇನೆ. ಜಂಟಿ ನಿರ್ದೇಶಕರು ಫೇಕ್ ಲೆಟರ್, ನಮ್ಮಲ್ಲಿ ಯಾರು ಆ ತರಹದ ಅಧಿಕಾರಗಳಿಲ್ಲ ಎಂದಿದ್ದಾರೆ. ಆದರೂ ಈ ಬಗ್ಗೆ ಸತ್ಯಾಸತ್ಯತೆ ತಿಳದು ತನಿಖೆಗೆ ಸೂಚಿಸುತ್ತೇನೆ. ನಮ್ಮನ್ನ ಹೆಚ್ಚೆಚ್ಚು ಟಾರ್ಗೆಟ್ ಮಾಡುವುದರಿಂದ ಮತ್ತಷ್ಟು ಪ್ರಕಾಶಮಾನವಾಗುತ್ತೇವೆ. ಕೆಲವರಿಗೆ ಬೆಳಿಗ್ಗೆ ಎದ್ದು ತಿಂಡಿ, ಊಟ ಮಾಡದೆ ನನ್ನ ಟಾರ್ಗೆಟ್ ಮಾಡುವುದೆ ಕೆಲವರಿಗೆ ಕೆಲಸವಾಗಿದೆ. ಅದಕ್ಕೆ ನನಗೆ ಬೇಜಾರಿಲ್ಲ, ನನ್ನ ಕೆಲಸ ನಾನು ಮಾಡ್ತೀನಿ ಎಂದು ತಿಳಿಸಿದರು.

ರೈತನಿಗೆ ಹೆಣ್ಣು ಕೊಡೊಲ್ಲವೆಂದವರಿಗೆ ಸವಾಲು: ಟೊಮೆಟೊ ಮಾರಿ ಹೊಸ ಕಾರಿನಲ್ಲಿ ಕನ್ಯಾ ಕೇಳೋಕೆ ಹೋಗ್ತೀನೆಂದ ರೈತರು

ಕರೆ ಮಾಡಿ ಮಾಹಿತಿ ಕೇಳಿದ ಸಿಎಂ ಸಿದ್ದರಾಮಯ್ಯ: ಸಹಾಯಕ ಕೃಷಿ ನಿರ್ದೇಶಕರಿಂದ ರಾಜಭವನಕ್ಕೆ ದೂರು ಪ್ರಕರಣವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರು, ಕರೆ ಮಾಡಿ ಮಾಹಿತಿ ಕೇಳಿದ್ದು, ಪ್ರಕರಣದ ಬಗ್ಗೆ ಎಲ್ಲ ರೀತಿಯಲ್ಲೂ ತನಿಖೆ ಮಾಡುವಂತೆ ಮನವಿ ಮಾಡಿದ್ದೇನೆ. ಈ ಪತ್ರದ ಬಗ್ಗೆ ತನಿಖೆ ಮಾಡಿ ಸತ್ಯಾಸತ್ಯತೆ ಹೊರತರಲಿ. ಅಧಿಕಾರಿಗಳಿಂದಲೂ ಮಾಹಿತಿ ಪಡೆದಿದ್ದೇನೆ. ಮಂಡ್ಯ ಎಸ್ಪಿ, ಜಂಟಿ ಕೃಷಿ ನಿರ್ದೇಶಕರಿಂದ ಮಾಹಿತಿ ಪಡೆದಿದ್ದೇನೆ. ಜಂಟಿ ನಿರ್ದೇಶಕರು ಈಗಾಗಲೇ ಎಲ್ಲ ಸಹಾಯಕ ನಿರ್ದೇಶಕರೊಂದಿಗೆ ಸಭೆ ಮಾಡಿದ್ದಾರೆ. ಯಾವ ಸಹಾಯಕ ನಿರ್ದೇಶಕರೂ (ಎ.ಡಿ) ನಾವು ಪತ್ರ ಬರೆದಿಲ್ಲ ಅಂದಿದ್ದಾರೆ. ಮಂಡ್ಯ ಎಸ್ಪಿ ಅವರಿಗೂ ಈ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.

click me!