ಭೂ ಹಗರಣದ ಸೈಟ್ ರಿಟರ್ನ್ಸ್ ಸರ್ಕಾರ: ಸಿದ್ದು ಬೆನ್ನಲ್ಲೇ ಖರ್ಗೆಯಿಂದಲೂ 5 ಎಕರೆ ಸೈಟ್ ವಾಪಸ್!

By Sathish Kumar KHFirst Published Oct 13, 2024, 1:46 PM IST
Highlights

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್ ಒಂದೇ ಉದ್ದೇಶಕ್ಕೆ ಎರಡು ಬಾರಿ ಭೂಮಿ ಪಡೆದ ಹಗರಣ ಬೆಳಕಿಗೆ ಬಂದಿದೆ. ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕ ಖರ್ಗೆ ಕುಟುಂಬ ಭೂಮಿಯನ್ನು ವಾಪಸ್ ನೀಡಿದೆ.

ಬೆಂಗಳೂರು (ಅ.13): ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಜನರ ಕಣ್ಣಿಗೆ ಮಣ್ಣೆರೆಚಿ ಹೇಗೆ ಹಗರಣ ಮಾಡುತ್ತಿದ್ದಾರೆ ಎಂಬುದು ಇದೀಗ ಮತ್ತೊಂದು ಪ್ರಕರಣದಲ್ಲಿ ಜಗಜ್ಜಾಹೀರು ಆಗುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್‌ನಿಂದ ಒಂದೇ ಉದ್ದೇಶಕ್ಕೆ ಕೇವಲ 15 ವರ್ಷಗಳ ಅಂತದಲ್ಲಿಯೇ ಎರೆಡೆರಡು ಕಡೆಗಳಲ್ಲಿ ಭೂಮಿಯನ್ನು ಸರ್ಕಾರದಿಂದ ಪಡೆದುಕೊಂಡು ಜನ ಸಾಮಾನ್ಯರಿಗೆ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕ ತನಿಖೆಗೆ ಹೆದರಿಕೊಂಡು ಇದೀಗ ಕೆಐಡಿಎಬಿ ಸೈಟ್‌ ಅನ್ನು ಮಲ್ಲಿಕಾರ್ಜುನ ಖರ್ಗೆ ಕುಟುಂಬಸ್ಥರು ವಾಪಸ್ ನೀಡಿದ್ದಾರೆ.

ರಾಜ್ಯದಲ್ಲಿ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಗರಣದ ಆರೋಪಿ ಸಿಎಂ ಸಿದ್ದರಾಮಯ್ಯ ಅವರು ಇದೀಗ ತಾವು ಪಡೆದಿದ್ದ 14 ಸೈಟುಗಳನ್ನು ಸರ್ಕಾರಕ್ಕೆ ವಾಪಸ್ ಕೊಟ್ಟಿದ್ದಾರೆ. ಇದರ ಬೆನ್ನಲ್ಲಿಯೇ ಭಾರತೀಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದಿಂದಲೂ ಸರ್ಕಾರದ ಭೂಮು ಹಂಚಿಕೆಯಲ್ಲಿ ಹಗರಣ ಮಾಡಿದೆ ಎಂದು ಬಿಜೆಪಿ ನಾಯಕ ಎನ್.ಆರ್. ರಮೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದರ ಬೆನ್ನಲ್ಲಿಯೇ ಲೋಕಾಯುಕ್ತ ಇಲಾಖೆಯಿಂದ ತನಿಖೆ ಆರಂಭಿಸುವ ಮುನ್ನವೇ ಮಲ್ಲಿಕಾರ್ಜುನ ಖರ್ಗೆ ಕುಟುಂಬದಿಂದಲೂ 5 ಎಕರೆ ಭೂಮಿಯನ್ನು ಕೆ.ಎ.ಎ.ಡಿ.ಬಿ ಸಂಸ್ಥೆಗೆ ಭೂಮಿ‌ ವಾಪಸ್ ನೀಡಲಾಗಿದೆ.

Latest Videos

ಮಲ್ಲಿಕಾರ್ಜುನ ಖರ್ಗೆ ಕುಟುಂಬದವರು ನಡೆಸುತ್ತಿರುವ ಸಿದ್ಧಾರ್ಥ್ ಟ್ರಸ್ಟ್‌ನಿಂದ ಒಂದೇ ಕಾರಣಕ್ಕೆ, ಒಂದೇ ಸಂಸ್ಥೆಯಿಂದ ಎರಡು ಬಾರಿ ಸರ್ಕಾರಿ ಭೂಮಿಯನ್ನು ಪಡೆದುಕೊಳ್ಳಲಾಗಿದೆ ಎಂದು ಬಿಜೆಪಿ ನಾಯಕ ಹಾಗೂ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಎನ್.ಆರ್. ರಮೇಶ್ ಅವರು ಲೋಕಯುಕ್ತ ಇಲಾಖೆಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬಸ್ಥರು, ಇಬ್ಬರು ಸಚಿವರು ಹಾಗೂ ಹಿರಿಯ IAS ಅಧಿಕಾರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಸಿದ್ಧಾರ್ಥ ವಿಹಾರ ಟ್ರಸ್ಟ್‌ನ ಸದಸ್ಯರಾದ ಖರ್ಗೆ ಕುಟುಂಬದ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ ಖರ್ಗೆ, ರಾಹುಲ್ M. ಖರ್ಗೆ, ರಾಧಾಬಾಯಿ M. ಖರ್ಗೆ ಹಾಗೂ ಖರ್ಗೆ ಅವರ ಅಳಿಯ ರಾಧಾಕೃಷ್ಣ ವಿರುದ್ಧ ಭೂ ಕಬಳಿಕೆ ಆರೋಪ ಮಾಡಲಾಗಿತ್ತು. ಜೊತೆಗೆ, ಭೂಮಿ ಹಂಚಿಕೆ ಸಂಬಂಧ ಕೈಗಾರಿಕಾ ಸಚಿವ M.B. ಪಾಟೀಲ್ ಮತ್ತು ಐಎಎಸ್ ಅಧಿಕಾರಿ ಡಾ.ಎಸ್. ಸೆಲ್ವಕುಮಾರ್ ವಿರುದ್ಧ ಲೋಕಾಯುಕ್ತದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಆದರೆ, ಇದೀಗ ತನಿಖೆ ಆರಂಭಕ್ಕೂ ‌ಮುನ್ನವೇ ಕೆಐಎಡಿಬಿಯಿಂದ ಪಡೆದಿದ್ದ ಭೂಮಿಯನ್ನು ಸಿದ್ದಾರ್ಥ ವಿಹಾರ ಟ್ರಸ್ಟ್ ನಿಂದ ವಾಪಸ್ ನೀಡಿ ಪತ್ರ ಬರೆಯಲಾಗಿದೆ.

ಇದನ್ನೂ ಓದಿ: ಕೋಟಿ ಕೋಟಿ ಒಡೆಯನಾದರೂ ಮೀಸಲಾತಿಯಡಿ ಸಿಎ ನಿವೇಶನ ಪಡೆದ ಖರ್ಗೆ ಪುತ್ರ!

ಏನಿದು ಪ್ರಕರಣ?
ಮಲ್ಲಿಕಾರ್ಜುನ ಖರ್ಗೆ ಕುಟುಂಬಸ್ಥರ  'ಸಿದ್ಧಾರ್ಥ ವಿಹಾರ ಟ್ರಸ್ಟ್' ಸಂಸ್ಥೆ ಹೆಸರಿಗೆ ಒಂದೇ ಉದ್ದೇಶಕ್ಕೆ - 02 ಪ್ರತ್ಯೇಕ ಸರ್ಕಾರಿ ಸಂಸ್ಥೆಗಳ ಮೂಲಕ 02 ಬೃಹತ್  ಆಸ್ತಿಗಳ ಹಂಚಿಕೆ ಮಾಡಲಾಗಿತ್ತು ಎಂದು ದೂರು ಕೊಡಲಾಗಿತ್ತು. ಶಿಕ್ಷಣ ವ್ಯವಸ್ಥೆ ಎಂಬ ಹೆಸರಿನಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ, ಸರ್ಕಾರದ ಬೇರೆ ಬೇರೆ ಸಂಸ್ಥೆಗಳಿಂದ ಮೀಸಲಾತಿ ಅಡಿಯಲ್ಲಿ ಕಾನೂನು ಬಾಹಿರವಾಗಿ ಸರ್ಕಾರಿ ಸ್ವತ್ತುಗಳನ್ನು ಪಡೆದುಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಅಧಿಕಾರ ಮತ್ತು ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿಸಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.

ಭೂಮಿ ಮಂಜುರಾತಿ ಯಾವಾಗ? 
ಸಿದ್ಧಾರ್ಥ ವಿಹಾರ ಟ್ರಸ್ಟ್ ಹೆಸರಿಗೆ 2014 ರಲ್ಲಿ 'ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ'(ಬಿಡಿಎ) ಮೂಲಕ  ಬಿಟಿಎಂ 4ನೇ ಹಂತದ 2ನೇ ಬ್ಲಾಕ್ ನ 8,002 ಚ. ಮೀ. (86,133 ಚ. ಅಡಿ) ವಿಸ್ತೀರ್ಣದ CA ನಿವೇಶನ ಸಂಖ್ಯೆ 05 ಹಂಚಿಕೆ ಮಾಡಲಾಗಿತ್ತು. 2014ರಲ್ಲಿ ಶೈಕ್ಷಣಿಕ ಉದ್ದೇಶಕ್ಕೆ ಬಿಡಿಎ ವತಿಯಿಂದ ಸಿಎ ಸೈಟ್ ಕೊಡಲಾಗಿತ್ತು. ಈ ಭೂಮಿಯನ್ನು 30 ವರ್ಷಗಳ ಗುತ್ತಿಗೆಗೆ ಪಡೆಯಲು ಸಿದ್ಧಾರ್ಥ ವಿಹಾರ ಟ್ರಸ್ಟ್‌ನಿಂದ ಬಿಡಿಗೆ ಕೇವಲ 1,99,56,572 ರೂಪಾಯಿಗಳಷ್ಟು (1.99 ಕೋಟಿ ರೂ.) ಹಣವನ್ನು ಪಾವತಿ ಮಾಡಲಾಗಿತ್ತು. ಈ ನಿವೇಶನವನ್ನು ಬಿಡಿಎದಿಂದ 'ಸಿದ್ಧಾರ್ಥ ವಿಹಾರ ಟ್ರಸ್ಟ್' ಕಾರ್ಯದರ್ಶಿ ಮಾರುತಿ ರಾವ್ ಡಿ. ಮಾಲೆ ಹೆಸರಿಗೆ ಸ್ವಾಧೀನ ಪತ್ರ ನೀಡಿದೆ. ಇನ್ನು BDAಯಿಂದ ಹಂಚಿಕೆ ಮಾಡಿರುವ CA ನಿವೇಶನಕ್ಕೆ ಬಿಬಿಎಂಪಿಯಿಂದ ಖಾತೆಯನ್ನೂ ಮಾಡಿಕೊಡಲಾಗಿದೆ. ಈ ಎಲ್ಲ ಭೂಮಿ ಹಂಚಿಕೆ ಕಾರ್ಯಗಳು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಡೆದಿದೆ.
 
ಇದಾದ ನಂತರ ಪುನಃ ಇದೀಗ ಸಿದ್ದರಾಮಯ್ಯ 2ನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ 2024ರಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಮತ್ತೆ ಸಿದ್ಧಾರ್ಥ ವಿಹಾರ ಟ್ರಸ್ಟ್ ವತಿಯಿಂದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ (Karnataka Industrial Area Development Board - KIADB) ಸಿಎ ನಿವೇಶನ ಹಂಚಿಕೆ ಮಾಡುವಂತೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಈ ವೇಳೆ 2024ರಲ್ಲಿ ಟ್ರಸ್ಟ್‌ನ ಟ್ರಸ್ಟೀ ರಾಹುಲ್ M. ಖರ್ಗೆ ಯಿಂದ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಈ ಅರ್ಜಿ ಬಂದ ಕೂಡಲೇ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದಕ್ಕೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿ, ಸಿದ್ಧಾರ್ಥ ವಿಹಾರ ಟ್ರಸ್ಟ್ ಹೆಸರಿಗೆ 05 ಎಕರೆ ವಿಸ್ತೀರ್ಣದ CA ನಿವೇಶನವನ್ನು ಹಂಚಿಕೆ ಮಾಡಲಾಗಿದೆ.

ಇದನ್ನೂ ಓದಿ: ಖರ್ಗೆ ಪುತ್ರನಿಗೆ ಕೊಟ್ಟ ಸಿಎ ನಿವೇಶನದ ಬಗ್ಗೆ ಟೀಕಿಸುವ ಛಲವಾದಿ ನಾರಾಯಣಸ್ವಾಮಿ ಒಬ್ಬ 'ಶೆಡ್' ಗಿರಾಕಿ!

ಬೆಂಗಳೂರಿನ ಹೊರ ವಲಯ ಯಲಹಂಕ ಬಳಿಯ ಬಾಗಲೂರಿನಲ್ಲಿ KIADB ಅಭಿವೃದ್ಧಿ ಪಡಿಸಿರುವ ಹೈ-ಟೆಕ್ ಡಿಫೆನ್ಸ್ ಅಂಡ್ ಏರೋಪಸ್ಪೇಸ್ ಪಾರ್ಕ್‌ನ (Hi - Tech Defence & Aerospace Park) ಹಾರ್ಡ್‌ವೇರ್ ಸೆಕ್ಟರ್‌ ವಿಭಾಗದಲ್ಲಿ 05 ಎಕರೆ ವಿಸ್ತೀರ್ಣದ CA ನಿವೇಶನ ಸಂಖ್ಯೆ AM - 4  ಹಂಚಿಕೆ ಮಾಡಲಾಗಿದೆ. ಮೇ.30ರಂದು KIADBಯಿಂದ ಸಿದ್ಧಾರ್ಥ ವಿಹಾರ ಟ್ರಸ್ಟ್" ನ ರಾಹುಲ್ M. ಖರ್ಗೆ ಅವರ ಹೆಸರಿಗೆ ಹಂಚಿಕೆ ಪತ್ರವನ್ನೂ ನೀಡಲಾಗಿದೆ. ಇದಕ್ಕಾಗಿ ಸಿದ್ದಾರ್ಥ ವಿಹಾರ ಟ್ರಸ್ಟ್‌ನಿಂದ 30 ವರ್ಷಗಳ ಗುತ್ತಿಗೆಗೆ 14,25,00,000 ರೂಪಾಯಿಗಳನ್ನು (14.25 ಕೋಟಿ ರೂ.) ನಿಗದಿ ಮಾಡಲಾಗಿದೆ.

ಪ್ರಸ್ತುತ ಬಾಗಲೂರಿನಲ್ಲಿ KIADB ಅಭಿವೃದ್ಧಿ ಪಡಿಸಿರುವ Aerospace Park ನಲ್ಲಿ ಮಾರುಕಟ್ಟೆ ಬೆಲೆ ಪ್ರತಿ ಚ. ಅಡಿಗೆ ₹ 5,000 ರೂಪಾಯಿಗಳು ಇರುತ್ತದೆ. ಸಿದ್ಧಾರ್ಥ ವಿಹಾರ ಟ್ರಸ್ಟ್"ಗೆ ಹಂಚಿಕೆ ಮಾಡಲಾಗಿರುವ Aerospace Park ನಲ್ಲಿ ಹಂಚಿಕೆ ಮಾಡಲಾಗಿರುವ 05 ಎಕರೆ ವಿಸ್ತೀರ್ಣದ CA ನಿವೇಶನದ ಪ್ರಸಕ್ತ ಮಾರುಕಟ್ಟೆ ಮೌಲ್ಯ ಕನಿಷ್ಠ ₹ 110 ಕೋಟಿ ರೂಪಾಯಿಗಳಿಗೂ ಅಧಿಕವಾಗಿದೆ. ಆದರೆ, ಇದನ್ನು ಮೀಸಲಾತಿ ಆಧಾರದಲ್ಲಿ ಕೇವಲ 14 ಕೋಟಿ ರೂ.ಗೆ ನೀಡಲಾಗಿತ್ತು. ಇದೀಗ ಲೋಕಾಯುಕ್ತಕ್ಕೆ ದೂರು ಕೊಟ್ಟ ಹಿನ್ನೆಲೆಯಲ್ಲಿ ಖರ್ಗೆ ಕುಟುಂಬದಿಂದ ಭೂಮಿ ವಾಪಸ್ ಕೊಡಲಾಗಿದೆ.

click me!