Big Breaking: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ಖಚಿತಪಡಿಸಿದ ಡಿ.ಕೆ. ಶಿವಕುಮಾರ್

By Sathish Kumar KH  |  First Published Jun 6, 2024, 2:18 PM IST

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ. ಹಗರಣ ನೈತಿಕ ಹೊಣೆ ಹೊತ್ತು ಸಚಿವ ನಾಗೇಂದ್ರ ಅವರು ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ ಎಂಬ ಸುಳಿವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದಾರೆ.


ಬೆಂಗಳೂರು (ಜೂ.06): ರಾಜ್ಯದಲ್ಲಿ ತೀವ್ರ ರಾಜಕೀಯ ಕೆಸರೆರಚಾಟಕ್ಕೆ ದಾರಿ ಮಾಡಿಕೊಟ್ಟರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ. ಹಗರಣ ನೈತಿಕ ಹೊಣೆ ಹೊತ್ತು ಸಚಿವ ನಾಗೇಂದ್ರ ಅವರು ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ ಎಂಬ ಸುಳಿವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ. ಪಕ್ಷ ಹಾಗೂ ಸರ್ಕಾರದ ಘನತೆ ಉಳಿಸಲು ನಾಗೇಂದ್ರ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಪಕ್ಷ ಹಾಗೂ ಸರ್ಕಾರಗ ಘನತೆಗೆ ಧಕ್ಕೆಯಾಗಬಾರದು. ಹಾಗಾಗಿ ಸ್ವಯಂ ಪ್ರೇರಿತರಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ನಾನು, ಗೃಹ ಸಚಿವರು ಸಚಿವ ನಾಗೇಂದ್ರ ಅವರ ಜತೆ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.

Tap to resize

Latest Videos

ಸಚಿವ ನಾಗೇಂದ್ರ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ. ಆದರೆ, ಪಕ್ಷದ ಹಾಗೂ ಸರ್ಕಾರದ ಘನತೆಗೆ ಧಕ್ಕೆ ಬರಬಾರದು ಎಂದು ಸ್ವತಃ ನಾಗೇಂದ್ರ ಅವರೇ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇಂದು ಅವರು ರಾಜೀನಾಮೆ ನೀಡಬಹುದು. ಮುಖ್ಯಮಂತ್ರಿಗಳು ಪಕ್ಷದ ಹೈಕಮಾಂಡ್ ಜತೆ ಚರ್ಚೆ ಮಾಡಿ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ‌ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಲೋಕಸಭೆ ಗೆದ್ದರೂ ಬಿಜೆಪಿಗೆ ಕಹಿ.. ಸೋತರೂ ಕಾಂಗ್ರೆಸ್ಸಿಗೆ ಸಿಹಿ..

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೂಡ ತನಿಖೆಯನ್ನು ಕೈಗೆತ್ತಿಕೊಂಡಿದೆ. ಇನ್ನು ಎಸ್‌ಐಟಿ ಕೂಡ ತನಿಖೆ ಮಾಡುತ್ತಿದೆ. ಆದರೆ, ಈ ಹಗರಣದಲ್ಲಿ ಸಚಿವ ನಾಗೇಂದ್ರ ಅವರ ತಪ್ಪಿಲ್ಲ ಎಂದು ಸರ್ಕಾರದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳುತ್ತಿದ್ದರೂ ಹಗರಣದ ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಬೇಕು ಎನ್ನುವುದು ವಿಪಕ್ಷ ನಾಯಕರ ಆಗ್ರಹವಾಗಿದೆ. ಇನ್ನು ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿರುವ ಹಿನ್ನೆಲೆಯಲ್ಲಿ ದೊಡ್ಡ ಹಗರಣ ನಡೆದಿರುವನ ಬಗ್ಗೆ ಸರ್ಕಾರ ಮುಜುಗರದಿಂದ ತಪ್ಪಿಸಿಕೊಳ್ಳಲು ಸಚಿವ ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯುವುದು ಅನಿವಾರ್ಯವಾಗಿದೆ.

ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವ ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ ನಾಯಕರು ರಾಜ್ಯಾಪಾಲರಿಗೆ ಮನವಿ ಮಾಡಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ಅವರು, ಸಚಿವ ನಾಗೇಂದ್ರ ಕರ್ನಾಟದಲ್ಲಿರುವ ಎಸ್‌ಟಿ ಸಮುದಾಯದ ಬಡವರಿಗೆ ಮೋಸ ಮಾಡಿದ್ದಾರೆ. SC/ST ಹಣ ನುಂಗ್ತಾರೆ ಅಂದ್ರೇ ಇದು ದೊಡ್ಡ ಭ್ರಷ್ಟರ ಸರ್ಕಾರ. ಈ ಹಣವನ್ನ ರಿಯಲ್ ಎಸ್ಟೇಟ್, ಎಲೆಕ್ಷನ್ ಗೆ ಬಳಕೆ ಮಾಡಿದ್ದಾರೆ. ಇದನ್ನೆಲ್ಲಾ ಚುನಾವಣೆ ಬಳಸಿದ್ದಾರೆ. 

ವಾಲ್ಮೀಕಿ ನಿಗಮದ ಹಗರಣ ಸಿದ್ದರಾಮಯ್ಯನವರ ಮೂಗಿನ ಅಡಿಯಲ್ಲೇ ನಡೆದಿದೆ. 14 ಬಾರಿ ಬಜೆಟ್ ಮಂಡನೆ ಮಾಡಿದ್ದೇನೆ ಅಂತ ಹೇಳ್ತಾರೆ.. ಇದೇನಾ ಬಜೆಟ್ ಮಂಡನೆ..? ಅಪ್ಪ ಸಿದ್ದರಾಮಯ್ಯ ನಿನ್ನ ಮೂಗಿನ ಅಡಿಯಲ್ಲೇ ಈ ರೀತಿ ಆದ್ರೆ, ಹೆಂಗಪ್ಪಾ..? ಸಚಿವ ಶೇ.20 ತೆಗೆದುಕೊಂಡಿದ್ದಾನೆ. ಇದರಲ್ಲಿ ಸಿದ್ದರಾಮಯ್ಯ ಶೇ.80 ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ, ಕಾಂಗ್ರೆಸ್ ಗ್ಯಾರಂಟಿ ಲೂಟಿ ಗ್ಯಾರಂಟಿ. ಜಾಹಿರಾತಿನಲ್ಲೇ ಹೇಳಿದ್ರು ನುಡಿದಂತೆ ನಡೆಯುತ್ತೇವೆ. ಆದ್ರೆ ನುಡಿದಂತೆ ನಡೆಯೋದಕ್ಕೆ ಆಗ್ತಿಲ್ಲ. ಕಾಂಗ್ರೆಸ್ ಅಂದ್ರೇ ಲೂಟಿಕೋರರ ಪಾರ್ಟಿ ಆಗಿದೆ. ಇದನ್ನು CID ಗೆ ಕೊಡ್ತೀವಿ ಅಂದ್ರು, ಆಮೇಲೆ SIT ಅಂದ್ರು. ಈ ರೀತಿ ಒಂದೊಂದು ಹೇಳ್ತಿದಾರೆ. ಯಾವುದೇ ಹಗರಣದಲ್ಲಿ 2 ಕೇಸ್ ತಗೋಳಲ್ಲ. ಸಿದ್ದರಾಮಯ್ಯ ಶೇ.80 ತೆಗೆದುಕೊಂಡಿಲ್ಲ ಅಂದ್ರೆ ಅದರಲ್ಲಿ ರಾಹುಲ್ ಗಾಂಧೀಗೂ ಹೋಗಿದೆ. ಇದು ಟಕಾ ಟಕ್ ATM ಸರ್ಕಾರ ಎಂದು ಆರೋಪ ಮಾಡಿದರು.

ವಾಲ್ಮೀಕಿ ನಿಗಮ ಕೇಸಿಗೆ ಈಗ ಸಿಬಿಐ ಪ್ರವೇಶ: 5 ಮಂದಿ ವಿರುದ್ಧ ಎಫ್‌ಐಆ‌ರ್

ವಾಲ್ಮೀಕಿ ಸಮುದಾಯದ ಹಣ ಐಟಿ ಕಂಪನಿಗಳಿಗೆ ಹೆಂಗೆ ಹೋಯ್ತು.? ಸಿದ್ದರಾಮಯ್ಯ ನವರ PA ಅವರ ಮೂಲಕ ಹೋಗಿದೆ, ಯಾಕೆ ಸಿದ್ದರಾಮಯ್ಯ ಅವರ ಅಕೌಂಟ್ ನಿಂದ ಹೋಗಿಲ್ಲ? ನಾಗೇಂದ್ರ ಮತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಇಲ್ಲ ಅಂದ್ರೇ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡ್ತೀವಿ. ನಂತರ ಇಡೀ ರಾಜ್ಯದಲ್ಲಿ ಮಾಡ್ತೀವಿ. ರಾಜ್ಯಪಾಲರು ಇದಾರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆಂದು ಹೇಳಿದ್ದಾರೆ. ದಲಿತರ ಹಣವನ್ನ ಲೂಟಿ ಮಾಡಿದ್ರೂ, ಬಂಡತನದ ಮಾತನ್ನ ಸಿದ್ದರಾಮಯ್ಯ ಮಾತಾಡ್ತಾರೆ. ಇವರಿಗೆ ಜನರೇ ಉತ್ತರ ನೀಡ್ತಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದರು.

click me!