ಮಹಾರಾಷ್ಟ್ರ ಮಳೆ: ರಾಜ್ಯದ 4 ಜಿಲ್ಲೆಗಳಲ್ಲಿ ಅಲರ್ಟ್‌, ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ!

By Kannadaprabha News  |  First Published Jul 26, 2024, 8:25 AM IST

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪ್ರವಾಹವನ್ನೇ ಸೃಷ್ಟಿಸಿದೆ. ಕೃಷ್ಣಾ, ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ, ಬಳ್ಳಾರಿ ನಾಲಾಗಳಿಂದಾಗಿ ಬೆಳಗಾವಿ ಜಿಲ್ಲೆಯ ಅಥಣಿ, ಹುಕ್ಕೇರಿ, ಗೋಕಾಕ, ಚಿಕ್ಕೋಡಿ ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ತಂದೊಡ್ಡಿದೆ. 


ಬೆಳಗಾವಿ (ಜು.26): ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪ್ರವಾಹವನ್ನೇ ಸೃಷ್ಟಿಸಿದೆ. ಕೃಷ್ಣಾ, ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ, ಬಳ್ಳಾರಿ ನಾಲಾಗಳಿಂದಾಗಿ ಬೆಳಗಾವಿ ಜಿಲ್ಲೆಯ ಅಥಣಿ, ಹುಕ್ಕೇರಿ, ಗೋಕಾಕ, ಚಿಕ್ಕೋಡಿ ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ತಂದೊಡ್ಡಿದೆ. ಬೆಳಗಾವಿ ಜಿಲ್ಲೆಯಲ್ಲಿ 30ಕ್ಕೂ ಅಧಿಕ, ಬಾಗಲಕೋಟೆ ಜಿಲ್ಲೆಯಲ್ಲಿ 5ಕ್ಕೂ ಅಧಿಕ ಸೇತುವೆಗಳು ಸೇರಿದಂತೆ ಒಟ್ಟು 45ಕ್ಕೂ ಅಧಿಕ ಸೇತುವೆಗಳು ಮುಳುಗಡೆಯಾಗಿವೆ. ಅಥಣಿ ತಾಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹದಿಂದಾಗಿ ಎರಡು ಗ್ರಾಮಗಳ 75 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 

ಜತೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ, ಅಥಣಿ, ಗೋಕಾಕ, ಚಿಕ್ಕೋಡಿ ಸೇರಿದಂತೆ ಒಟ್ಟು 45ಕ್ಕೂ ಹಳ್ಳಿಗಳು ಪ್ರವಾಹ ಬಾಧಿತವಾಗುವ ಸಾಧ್ಯತೆ ಇದೆ. ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ಪ್ರವಾಹ ಸಂದರ್ಭ ಒದಗಿ ಬಂದರೆ 427 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದ್ದು, 35 ಬೋಟ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಜತೆಗೆ ಅಗತ್ಯ ಬಿದ್ದರೆ ಕಾರವಾರದಿಂದ ಇನ್ನೂ ಹೆಚ್ಚಿನ ಬೋಟ್‌ಗಳನ್ನು ಕಾರ್ಯಾಚರಣೆ ಬಳಸಿಕೊಳ್ಳಲು ಜಿಲ್ಲಾಡಳಿತ ಸಿದ್ಧವಾಗಿದೆ.

Tap to resize

Latest Videos

undefined

ಗಣಿ ತೆರಿಗೆ ಸಂಗ್ರಹ ಅಧಿಕಾರ ಕೇಂದ್ರ ಸರ್ಕಾರಕ್ಕಿಲ್ಲ, ರಾಜ್ಯಕ್ಕೆ ಮಾತ್ರ: ಸುಪ್ರೀಂಕೋರ್ಟ್‌ ತೀರ್ಪು

ಬಾಗಲಕೋಟೆ ಜಿಲ್ಲೆಯಲ್ಲಿ 203 ಹಳ್ಳಿಗಳು ಮುಳುಗಡೆ ಭೀತಿ: ಬಾಗಲಕೋಟೆ ಜಿಲ್ಲೆಯಲ್ಲಿ ಘಟಪ್ರಭಾ, ಕೃಷ್ಣಾ, ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು 31 ಗ್ರಾಮಗಳು ಸಂಪೂರ್ಣ ಮುಳುಗಡೆ ಭೀತಿ ಹೊಂದಿದ್ದರೆ, 172 ಗ್ರಾಮಗಳು ಭಾಗಶಃ ಮುಳುಗಡೆ ಭೀತಿ ಹೊಂದಿವೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕೂಡ ಎಚ್ಚರಿಕೆ ವಹಿಸಿದ್ದು, ಜಿಲ್ಲೆಯ ನಾನಾ ಭಾಗಗಳಲ್ಲಿ 216 ಕಾಳಜಿ ಕೇಂದ್ರಗಳನ್ನು ಗುರುತಿಸಿದೆ.

75 ಕುಟುಂಬಗಳ ಸ್ಥಳಾಂತರ: ಕೃಷ್ಣಾ ನದಿಯ ನೀರಿನ ಒಳಹರಿವು 1,98,000 ಕ್ಯುಸೆಕ್‌ ದಾಟಿರುವುದರಿಂದ ಕೃಷ್ಣಾ ನದಿದಂಡೆಯ ವಸತಿ ಪ್ರದೇಶಗಳು ನಡುಗಡ್ಡೆಗಳಾಗುತ್ತಿವೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ ವಸತಿ ಪ್ರದೇಶದ 40ಕ್ಕೂ ಅಧಿಕ ಕುಟುಂಬಗಳ 120 ಜನರು ಹಾಗೂ ಜಾನುವಾರುಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಗುರುವಾರ ಪೂರ್ಣಗೊಂಡಿದೆ. ಜತೆಗೆ ಸಪ್ತಸಾಗರ ಗ್ರಾಮದ ಬನದ ತೋಟದ 35ಕ್ಕೂ ಅಧಿಕ ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ಎರಡೂ ತೋಟದ ವಸತಿ ಪ್ರದೇಶಗಳ 75ಕ್ಕೂ ಅಧಿಕ ಕುಟುಂಬಗಳನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಅಥಣಿ ತಾಲೂಕಿನ 22 ಗ್ರಾಮಗಳಿಗೆ ಪ್ರವಾಹದ ಆತಂಕ ಎದುರಾಗಿದೆ. ಜತೆಗೆ ತಾಲೂಕಿನ ಜನವಾಡ, ತೀರ್ಥ, ಸಪ್ತಸಾಗರ, ನದಿಇಂಗಳಗಾಂವ ಗ್ರಾಮಗಳ ಹತ್ತಿರದಲ್ಲಿಯೇ ಕೃಷ್ಣಾ ನೀರು ಬಂದಿರುವುದರಿಂದ ಈ ಗ್ರಾಮಗಳಿಗೆ ಯಾವುದೇ ಸಂದರ್ಭದಲ್ಲಿಯೂ ಪ್ರವಾಹಕ್ಕೆ ತುತ್ತಾಗಬಹುದು. ಹೀಗಾಗಿ ಈ ನಾಲ್ಕು ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ತಾಲೂಕು ಆಡಳಿತ ಸನ್ನದ್ಧ ಸ್ಥಿತಿಯಲ್ಲಿದೆ.

ಹಿರಣ್ಯಕೇಶಿ, ಮಾರ್ಕಂಡೇಯ, ಘಟಪ್ರಭಾದಿಂದಲೂ ಪ್ರವಾಹ: ಬೆಳಗಾವಿ ಜಿಲ್ಲೆಯಲ್ಲಿ ಹಿರಣ್ಯಕೇಶಿ, ಘಟಪ್ರಭಾ, ಮಾರ್ಕಂಡೇಯ ನದಿಗಳು ಮತ್ತು ಬಳ್ಳಾರಿ ನಾಲಾಗಳಿಂದಾಗಿ ಹುಕ್ಕೇರಿ ಮತ್ತು ಗೋಕಾಕ ತಾಲೂಕಿನಲ್ಲಿ ಪ್ರವಾಹ ಭೀತಿ ತಂದಿದೆ. ಹುಕ್ಕೇರಿ ತಾಲೂಕಿನಲ್ಲಿ ಹಿರಣ್ಯಕೇಶಿ ನದಿಯಿಂದ 26 ಹಳ್ಳಿಗಳು ಮತ್ತು ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿರುವುದರಿಂದ 4 ಹಳ್ಳಿಗಳು ಸೇರಿದಂತೆ ಒಟ್ಟು 30 ಹಳ್ಳಿಗಳು ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇದೆ. ಈಗಾಗಲೇ 9 ಸೇತುವೆಗಳು ಮುಳುಗಡೆಯಾಗಿವೆ. ಚಿಕ್ಕೋಡಿ ಉಪವಿಭಾಗದ ಪಂಚನದಿಗಳ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಗುರುವಾರ 1 ಅಡಿಯಷ್ಟು ಏರಿಕೆಯಾಗಿದ್ದು, ಸದಲಗಾ-ಬೋರಗಾಂವ ಸಂಚಾರ ಸ್ಥಗಿತಗೊಂಡಿದೆ. ತಾಲೂಕಿನ ಯಕ್ಸಂಬಾ, ಯಡೂರ, ಕಲ್ಲೋಳ, ಚಂದೂರ ಸೇರಿದಂತೆ ನದಿ ತೀರದ ಗ್ರಾಮಗಳ ಜನರು ದನ, ಕರುಗಳೊಂದಿಗೆ ಮನೆಯ ಎಲ್ಲ ಸರಂಜಾಮುಗಳಿಂದ ಗ್ರಾಮದಲ್ಲಿ ಇರುವ ಮನೆಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ.

ಕುಸಿದ ಮನೆಗೋಡೆ: ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿ ಮನೆ ಗೋಡೆ ಕುಸಿತಗೊಂಡು ವ್ಯಕ್ತಿಯೊಬ್ಬ ಗಾಯಗೊಂಡಿದ್ದಾನೆ. ನಂತರ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಭೂತರಾಮನಹಟ್ಟಿ ಗ್ರಾಮದ ವಿಠ್ಠಲ ಸತ್ಯಪ್ಪ ಪಾಟೀಲಗೆ ಸೇರಿದ ಮನೆ ಕುಸಿತವಾಗಿದ್ದು, ಕುಟುಂಬಸ್ಥರಿದ್ದಾಗಲೇ ಏಕಾಏಕಿ ‌ನೆಲಕ್ಕುರುಳಿದೆ. ಅದೃಷ್ಟವಶಾತ್‌ ಇಡೀ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ. ದನಕ್ಕೆ ನೀರು ಕುಡಿಸುವಾಗ ವಿಠ್ಠಲನ ಮೇಲೆ ಮನೆಗೋಡೆ ಉರುಳಿಬಿದ್ದಿದೆ. ತಕ್ಷಣವೇ ವಿಠ್ಠಲನನ್ನು ಹೊರತೆಗೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ 36 ಗ್ರಾಮಗಳಲ್ಲಿ ಪ್ರವಾಹ ಭೀತಿ: ಆಲಮಟ್ಟಿ ಜಲಾಶಯದ ನೀರಿನ ಒಳಹರಿವು ಹೆಚ್ಚಾಗಿ ಗೇಟ್‌ನಿಂದ ನೀರು ಹೊರಬಿಡುತ್ತಿರುವುದರಿಂದ ಹುನಗುಂದ ತಾಲೂಕಿನ ನದಿ ಪಾತ್ರದ 36 ಗ್ರಾಮಗಳಲ್ಲಿ ನೆರೆ ಭೀತಿ ಬರುವ ಸಾಧ್ಯತೆ ಇದೆ. ಗ್ರಾಮಗಳಿಗೆ ಭೇಟಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಕೈಗೊಂಡು ಪ್ರವಾಹ ಎದುರಿಸಲು ಸನ್ನದ್ಧರಾಗಬೇಕು ಎಂದು ಎಚ್ಚರಿಸಿದ್ದಾರೆ. ಜಮಖಂಡಿ ತಾಲೂಕಿನಲ್ಲಿ 23 ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೃಷ್ಣಾ ನದಿಗೆ ಹೊಂದಿಕೊಂಡಿರುವ ಪ್ರತಿ ಗ್ರಾಮಗಳಲ್ಲಿ ತಲಾ ಒಂದು ಕಾಳಜಿ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ. ಮುತ್ತೂರು ನಡುಗಡ್ಡೆ ಪ್ರದೇಶದ 20 ಮನೆಗಳನ್ನು ಸ್ಥಳಾಂತರಿಸಲಾಗಿದೆ. ಬಾಕಿ ಇರುವ ಮನೆಗಳ ಹಿರಿಯರಿಗೆ ಮತ್ತು ರೈತರಿಗೆ ಸಾಧ್ಯವಾದಷ್ಟು ಬೇಗನೆ ಸ್ಥಳಾಂತರವಾಗುವಂತೆ ಸೂಚನೆ ನೀಡಲಾಗಿದೆ.

ವಾಲ್ಮೀಕಿ, ಮುಡಾ ಅಕ್ರಮ ಹಂಚಿಕೆ ಹಗರಣ ಗದ್ದಲಕ್ಕೆ ಮುಂಗಾರು ಕಲಾಪವೇ ಬಲಿ: ಧರಣಿ, ಕೋಲಾಹಲ

ತುಂಬಿ ಹರಿಯುತ್ತಿರುವ ಗೋಕಾಕ ಫಾಲ್ಸ್‌: ಕಳೆದ ಒಂದು ವಾರದಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಘಟಪ್ರಭಾ ನದಿ ತುಂಬಿ ಹರಿಯುತ್ತಿದೆ. ಹೀಗಾಗಿ ಗುರುವಾರ ಗೋಕಾಕ ಫಾಲ್ಸ್, ಗೋಡಚಿನಮಲ್ಕಿ ಫಾಲ್ಸ್ ಸಂಪೂರ್ಣವಾಗಿ ತುಂಬಿ ಹರಿಯುತ್ತಿವೆ. ಕೆಂಪು ಮೀಶ್ರಿತ ಬಣ್ಣದಲ್ಲಿ ಮೈದುಂಬಿ ಹರಿಯುತ್ತಿರುವ ಈ ಅವಳಿ ಜಲಪಾತಗಳನ್ನು ವೀಕ್ಷಿಸಲು ಸಾವಿರಾರು ಜನ ಪ್ರವಾಸಿಗರು ಜಲಪಾತಗಳತ್ತ ಮುಖಮಾಡಿದ್ದಾರೆ.

click me!