ಕೊಲೆ ಆರೋಪಿ ದರ್ಶನ್‌ಗೆ ಬಿರಿಯಾನಿ ಕೊಡಲಾಗದು: ಕೋರ್ಟ್‌ ಹೇಳಿದ್ದೇನು?

By Kannadaprabha News  |  First Published Jul 26, 2024, 4:52 AM IST

ಕರ್ನಾಟಕ ಕಾರಾಗೃಹಗಳು ಮತ್ತು ತಿದ್ದುಪಡಿ ಸೇವೆಗಳ ಕೈಪಿಡಿ ಅಧಿನಿಯಮ 728ರ ಪ್ರಕಾರ, ಕೊಲೆ ಆರೋಪ ಎದುರಿಸುತ್ತಿರುವ ವಿಚಾರಣಾಧೀನ ಕೈದಿಗಳಿಗೆ ಸ್ವಂತ ಖರ್ಚಿನಲ್ಲಿ ಬಟ್ಟೆ, ಹಾಸಿಗೆ, ಚಪ್ಪಲಿ, ಆಹಾರ, ಸ್ಪೂನ್‌, ತಟ್ಟೆ ಹಾಗೂ ಕಪ್‌ ಇನ್ನಿತರ ವಸ್ತುಗಳನ್ನು ಪಡೆಯಲು ಅವಕಾಶವಿಲ್ಲ.
 


ಬೆಂಗಳೂರು (ಜು.26): ಮನೆಯಿಂದ ಊಟ, ಹಾಸಿಗೆ ಮತ್ತು ಬಟ್ಟೆ ತರಿಸಿಕೊಳ್ಳಲು ತನಗೆ ಅನುಮತಿ ನೀಡಲು ಜೈಲು ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ 24ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ಈ ಕುರಿತು ದರ್ಶನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಧೀಶ ವಿಶ್ವನಾಥ್ ಸಿ. ಗೌಡರ್ ಅವರು ಗುರುವಾರ ಪ್ರಕಟಿಸಿದರು.

ಕರ್ನಾಟಕ ಕಾರಾಗೃಹಗಳು ಮತ್ತು ತಿದ್ದುಪಡಿ ಸೇವೆಗಳ ಕೈಪಿಡಿ ಅಧಿನಿಯಮ 728ರ ಪ್ರಕಾರ, ಕೊಲೆ ಆರೋಪ ಎದುರಿಸುತ್ತಿರುವ ವಿಚಾರಣಾಧೀನ ಕೈದಿಗಳಿಗೆ ಸ್ವಂತ ಖರ್ಚಿನಲ್ಲಿ ಬಟ್ಟೆ, ಹಾಸಿಗೆ, ಚಪ್ಪಲಿ, ಆಹಾರ, ಸ್ಪೂನ್‌, ತಟ್ಟೆ ಹಾಗೂ ಕಪ್‌ ಇನ್ನಿತರ ವಸ್ತುಗಳನ್ನು ಪಡೆಯಲು ಅವಕಾಶವಿಲ್ಲ. ಅದರಂತೆ ಕೊಲೆ ಆರೋಪ ಎದುರಿಸುತ್ತಿರುವ ದರ್ಶನ್‌ ಸಹ ಮನೆಯಿಂದ ಊಟ, ಬಟ್ಟೆ ಹಾಗೂ ಹಾಸಿಗೆ ಸೌಲಭ್ಯ ಪಡೆಯಲು ಅರ್ಹರಾಗಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

Latest Videos

undefined

ತಮ್ಮ ಮಗನಿಗೆ ಶಾಲೆಯಲ್ಲಿ ಸೀಟು ಕೇಳಲು ವಿಜಯಲಕ್ಷ್ಮಿ ದರ್ಶನ್ ಭೇಟಿ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ

ವಿಚಾರಣೆ ವೇಳೆ ದರ್ಶನ್ ಪರ ವಕೀಲರು, ದರ್ಶನ್‌ ಗೆ ಜೈಲಿನ ಊಟ ಜೀರ್ಣವಾಗುತ್ತಿಲ್ಲ. ಜ್ವರ ಹಾಗೂ ಅತಿಸಾರ ಭೇದಿಯಿಂದ ಅವರ ದೇಹದ ತೂಕ ಇಳಿದಿದೆ. ಹಾಗಾಗಿ ಮನೆಯಿಂದ ಊಟ, ಹಾಸಿಗೆ ಮತ್ತು ಬಟ್ಟೆ ತರಿಸಿಕೊಳ್ಳಲು ಅನುಮತಿ ನೀಡುವಂತೆ ಕೋರಿದ್ದರು. ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿರುವ ಜೈಲಿನ ವೈದ್ಯಾಧಿಕಾರಿಯವರು, ದರ್ಶನ್‌ ಬೆನ್ನಿನ ಕೆಳಭಾಗ, ಕಾಲು-ಕೈಗಳಲ್ಲಿ ನೋವು ಕಾಣಿಸಿಕೊಂಡಿದೆ. ಜ್ವರದಿಂದ ಅವರು ಬಳಲಿದ್ದಾರೆ. ಆದ ಕಾರಣ ವಿಶ್ರಾಂತಿ ಪಡೆಯಬೇಕು ಹಾಗೂ ಪೌಷ್ಟಿಕಾಂಶವುಳ್ಳ ಸೇವಿಸಬೇಕು ಎಂದು ಶಿಫಾರಸು ಮಾಡಿದ್ದರು.

ಈ ಅಂಶಗಳನ್ನು ತನ್ನ ಆದೇಶದಲ್ಲಿ ಉಲ್ಲೇಖಿಸಿರುವ ನ್ಯಾಯಪೀಠವು ಅತಿಸಾರ ಭೇದಿ ಮತ್ತು ಅಜೀರ್ಣ ಸಮಸ್ಯೆ ಪರಿಹಾರಕ್ಕಾಗಿ ಪೌಷ್ಟಿಕಾಂಶವುಳ್ಳ ಆಹಾರ ಸೇವನೆ ಮಾಡಬೇಕು ಎಂದು ವೈದ್ಯಾಧಿಕಾರಿ ಹೇಳಿದ್ದಾರೆ. ಆದರೆ, ನಿರ್ದಿಷ್ಟವಾಗಿ ಯಾವ ಆಹಾರ ಸೇವಿಸಬೇಕು ಎಂದು ಶಿಫಾರಸು ಮಾಡಿಲ್ಲ. ಜೈಲಿನಲ್ಲಿ ಒದಗಿಸುತ್ತಿರುವ ಆಹಾರದ ಪಟ್ಟಿ ಗಮನಿಸಿದರೆ ಅಲ್ಲಿ ಕೈದಿಗಳಿಗೆ ಪೌಷ್ಟಿಕಾಂಶದ ಆಹಾರವನ್ನೇ ನೀಡಲಾಗುತ್ತಿದೆ. ಹೀಗಾಗಿ ದರ್ಶನ್‌ಗೆ ಜೈಲಿನಲ್ಲಿ ಪೂರೈಸುತ್ತಿರುವ ಪೌಷ್ಟಿಕಾಂಶದ ಆಹಾರ ಸೇವನೆ ಮಾಡಿದರೆ ಸಾಕು ಎಂದು ಅಭಿಪ್ರಾಯಪಟ್ಟಿದೆ.

ಕೊಲೆ ಆರೋಪಿಗೆ ಬಿರಿಯಾನಿ ಕೊಡಲಾಗದು: ವಿಚಾರಣೆ ಸಂದರ್ಭದಲ್ಲಿ ದರ್ಶನ್‌ ಅರ್ಜಿಗೆ ಆಕ್ಷೇಪಿಸಿದ್ದ ಪ್ರಾಸಿಕ್ಯೂಷನ್‌ ಪರ ಎಸ್‌ಪಿಪಿ ಪಿ.ಪ್ರಸನ್ನ ಕುಮಾರ್‌, ಜೈಲು ಆಹಾರದಿಂದ ದರ್ಶನ್‌ಗೆ ಯಾವುದೇ ತೊಂದರೆ ಇಲ್ಲ. ಜ್ವರ ಇದ್ದರೆ ಜೈಲಿನ ವೈದ್ಯಾಧಿಕಾರಿಯ ಸಲಹೆ ಮೇರೆಗೆ ಪಡೆಯಬಹುದು. ಜೈಲು ವೈದ್ಯಕೀಯ ವರದಿಯಲ್ಲಿ ವಿಶ್ರಾಂತಿ ಹೇಳಿದ್ದಾರೆ. ಅದರ ಪ್ರಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ, ವಿಶ್ರಾಂತಿ ತೆಗೆದುಕೊಳ್ಳಬಹುದು. ಆಸ್ಪತ್ರೆಯ ಆಹಾರ ಹಾಗೂ ಮೊಟ್ಟೆ ಪಡೆಯಬಹುದು. ಕೊಲೆ ಆರೋಪಿಗೆ ಬಿರಿಯಾನಿ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ, ಆತನಿಗೆ ಹೊರಗಿನ ಆಹಾರ ಹಾಗೂ ಹಾಸಿಗೆಗೆ ಅನುಮತಿ ನೀಡಬಾರದು ಎಂದು ವಾದಿಸಿದ್ದರು.

ಜೈಲಿನಲ್ಲಿ ದರ್ಶನ್ ಹಾಗೂ ವಿನೋದ್ ರಾಜ್ ಭೇಟಿ: ಬಾಚಿ ಅಪ್ಪಿಕೊಂಡು ಪರಸ್ಪರ ಕಣ್ಣೀರಿಟ್ಟರು!

ಕೋರ್ಟ್‌ ಹೇಳಿದ್ದೇನು?: ಕರ್ನಾಟಕ ಕಾರಾಗೃಹಗಳು ಮತ್ತು ತಿದ್ದುಪಡಿ ಸೇವೆಗಳ ಕೈಪಿಡಿ ಅಧಿನಿಯಮ 728ರ ಪ್ರಕಾರ, ಕೊಲೆ ಆರೋಪ ಎದುರಿಸುತ್ತಿರುವ ವಿಚಾರಣಾಧೀನ ಕೈದಿಗಳಿಗೆ ಸ್ವಂತ ಖರ್ಚಿನಲ್ಲಿ ಬಟ್ಟೆ, ಹಾಸಿಗೆ, ಚಪ್ಪಲಿ, ಆಹಾರ, ಸ್ಪೂನ್‌, ತಟ್ಟೆ ಹಾಗೂ ಕಪ್‌ ಇನ್ನಿತರ ವಸ್ತುಗಳನ್ನು ಪಡೆಯಲು ಅವಕಾಶವಿಲ್ಲ.

click me!