ಮಹದಾಯಿ ಯೋಜನೆ ಜಾರಿಗೆ ಸರ್ಕಾರದ ಮಹತ್ವದ ನಿರ್ಧಾರ ಕೈಗೊಂಡಿದ್ದು. ಡಿಸೆಂಬರ್ ವೇಳೆಗೆ ಸಿಹಿ ಸುದ್ದಿ ಕೊಡುತ್ತೇವೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ, (ಆಗಸ್ಟ್.06): ಕಳೆದ ನಾಲ್ಕು ದಶಕಗಳಿಂದ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಕಿತ್ತೂರು ಕರ್ನಾಟಕ ಭಾಗದ ಜನ ಹೋರಾಟ ಮಾಡುತ್ತಿದ್ದಾರೆ. ಕಿತ್ತೂರು ಕರ್ನಾಟಕ ಭಾಗದ ಜನರ ಕುಡಿಯುವ ನೀರಿನ ಹಾಹಾಕಾರ ತಣಿಸುವ ಯೋಜನೆ ಇದು. ಕರ್ನಾಟಕ-ಗೋವಾ- ಮಹಾರಾಷ್ಟ್ರ ಮಧ್ಯೆ ಜಲವ್ಯಾಜ್ಯವಿದ್ದು ಯೋಜನೆ ಜಾರಿಗಾಗಿ ಆಗ್ರಹಿಸಿ ಕಳೆದ ನಾಲ್ಕು ದಶಕಗಳಿಂದ ಹೋರಾಟ ನಡೆಸಲಾಗುತ್ತಿದೆ. ನ್ಯಾ. ಜೆ.ಎಂ.ಪಾಂಚಾಲ್ ನೇತೃತ್ವದ ನ್ಯಾಯಮಂಡಳಿ ತನ್ನ ಅಂತಿಮ ತೀರ್ಪು ಪ್ರಕಟಿಸಿ ಮೂರು ವರ್ಷಗಳೇ ಉರಳಿವೆ. ಮೂರು ರಾಜ್ಯಗಳಿಗೆ ನೀರು ಹಂಚಿಕೆ ಮಾಡಿದೆ.
ಕರ್ನಾಟಕ ಪಾಲಿಗೆ ಮಹದಾಯಿಯಿಂದ 2.18 ಟಿಎಂಸಿ ಹಾಗೂ ಕಳಸಾದಿಂದ 1.78 ಟಿಎಂಸಿ ನೀರು ಕುಡಿಯುವ ನೀರಿಗೆ ಹಂಚಿಕೆ ಮಾಡಲಾಗಿತ್ತು. ನ್ಯಾಯಮಂಡಳಿ ತೀರ್ಪು ಪ್ರಶ್ನಿಗೆ ಗೋವಾ ಸಲ್ಲಿಸಿದ್ದ ತಕರಾರು ಅರ್ಜಿ ಸುಪ್ರೀಂ ಕೋರ್ಟ್ ತಿರಸ್ಕಾರ ಮಾಡಿತ್ತು. ಕೇಂದ್ರದ ಪರಿಸರ ಹಾಗೂ ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಯೋಜನೆಗೆ ಚಾಲನೆ ನೀಡಬಹುದು ಎಂದು ಹೇಳಿತ್ತು. ಆದರೆ ಕೇಂದ್ರದಲ್ಲಿ, ರಾಜ್ಯದಲ್ಲಿ ಹಾಗೂ ಗೋವಾದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಯೋಜನೆ ಜಾರಿಗೆ ಸಾಧ್ಯವಾಗಿರಲಿಲ್ಲ. ಇದೀಗ ರಾಜ್ಯ ಸರ್ಕಾರ ಡಿಪಿಆರ್ ಬದಲಿಸಿದೆ. ಪೈಪ್‌ಲೈನ್ ಮೂಲಕ ನೀರು ಡಂಪ್ ಮಾಡುವ ಯೋಜನೆ ಹಾಕಿಕೊಂಡು ಪರಿಷ್ಕೃತ ಡಿಪಿಆರ್ ಸಲ್ಲಿಸಿದೆ.
ಮಹದಾಯಿಗಾಗಿ ಸಿಎಂಗೆ ರಕ್ತದಲ್ಲಿ ಅನ್ನದಾತನ ಪತ್ರ
'ಡಿಸೆಂಬರ್ ವೇಳೆಗೆ ಖಂಡಿತ ಕಾಮಗಾರಿ ಆರಂಭ'
ಇನ್ನು ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, 'ನಾವು ಆದಷ್ಟು ಬೇಗ ಕೇಂದ್ರ ಸರ್ಕಾರದ CWCಯಿಂದ ಎಲ್ಲ ಕ್ಲಿಯರನ್ಸ್ ತಗೆದುಕೊಳ್ಳುತ್ತೇವೆ. ಪೂರ್ವ ಕಾರ್ಯಸಾಧ್ಯತಾ ವರದಿಗೆ ಒಪ್ಪಿಗೆ ಪಡೆದು ಕೆಲಸ ಪ್ರಾರಂಭಿಸಲು ತಯಾರಿ ಮಾಡಿಕೊಂಡಿದ್ದೇವೆ. ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಯೋಜನೆಗೆ ಕ್ಲಿಯರನ್ಸ್ ಸಿಗುವ ಭರವಸೆ ಇದೆ ಎಂದರು.
ನಮ್ಮ ಅಧಿಕಾರಿಗಳು ಈಗಾಗಲೇ ಆ ಕೆಲಸದಲ್ಲಿ ತೊಡಗಿದ್ದಾರೆ. ನಮ್ಮ ಸರ್ಕಾರ ಈಗಾಗಲೇ ಮಹದಾಯಿ ಯೋಜನೆ, ಮೇಕೆದಾಟು ಯೋಜನೆ ಆಗಿರಬಹುದು, ತುಂಗಭದ್ರಾ, ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇವೆ. ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ತಂಡ ಹೋರಾಟ ಮಾಡ್ತಿದೆ. ಮಹದಾಯಿ ಯೋಜನಾ ವೆಚ್ಚವನ್ನು ಕಡಿಮೆ ಮಾಡಿದ್ದೇವೆ. CWC ನಿಯಮಗಳ ಪ್ರಕಾರ ಎಲ್ಲ ಕಾನೂನಾತ್ಮಕ ಮತ್ತು ತಾಂತ್ರಿಕ ಅಂಶಗಳನ್ನ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು.
ನರಗುಂದ: ಕುಂಟುತ್ತ ಎಂಟನೇ ವರ್ಷಕ್ಕೆ ಕಾಲಿಟ್ಟ ಮಹದಾಯಿ ಹೋರಾಟ..!
ಈಗಾಗಲೇ ಮಹದಾಯಿ ಗೆಜೆಟ್ ನೋಟಿಫಿಕೇಶನ್ ಆಗಿರುವುದರಿಂದ ಯಾವುದೇ ಅಡೆತಡೆ ಆಗುವುದಿಲ್ಲ ಎಂಬ ಭರವಸೆ ಇದೆ. ಹೆಚ್ಚು ಅರಣ್ಯ ಭೂಮಿ ಮುಳುಗಡೆ ಆಗದ ರೀತಿಯಲ್ಲಿ ಯೋಜನೆ ಇದೆ. ಸುಮಾರು 60 ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆ ಆಗಲಿದೆ. ಎರಡು ಲಿಫ್ಟ್ ಮಾಡುತ್ತಿದ್ದೇವೆ, ಪರಿಷ್ಕೃತ ಡಿಪಿಆರ್‌ನಲ್ಲಿ ಟನಲ್ ನಿರ್ಮಾಣ ತೆಗೆದು ಹಾಕಿದ್ದೇವೆ. ಪೈಪ್‌ಲೈನ್ ಮೂಲಕ ನೀರು ತರುವ ಪ್ರಯತ್ನ ಮಾಡುತ್ತಿದ್ದೇವೆ' ಎಂದು ತಿಳಿಸಿದ್ದಾರೆ. ಇನ್ನು ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಪಾದಯಾತ್ರೆಗೆ ಸಿದ್ಧತೆ ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಗೋವಿಂದ ಕಾರಜೋಳ, 'ಕಾಂಗ್ರೆಸ್‌ನವರು 60 ವರ್ಷದಲ್ಲಿ ಏನು ಸಾಧನೆ ಮಾಡಿದ್ದಾರೆ ಅಂತಾ ಹೇಳಲಿ ಸಾಕು' ಎಂದು ಆಕ್ರೋಶ ಹೊರ ಹಾಕಿದರು.
ಡಿಸೆಂಬರ್ ಒಳಗಾಗಿ ಮಹದಾಯಿ ಯೋಜನೆ ಕಾಮಗಾರಿ ಆರಂಭವಾಗುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, 'ಖಂಡಿತವಾಗಿ ಕಾಮಗಾರಿ ಆರಂಭ ಆಗುತ್ತದೆ. ಮಹದಾಯಿ ಯೋಜನೆಯಲ್ಲಿ ನಮಗೆ ಕುಡಿಯುವ ನೀರಿಗಾಗಿ 3.9 ಟಿಎಂಸಿ ಹಂಚಿಕೆ ಆಗಿದೆ. ಇದು ಕುಡಿಯುವ ನೀರಿಗಾಗಿ ಇರುವ ಯೋಜನೆ. ರಾಜ್ಯದಲ್ಲಿ ಒಂದು ಮಹದಾಯಿ ಇನ್ನೊಂದು ಮೇಕೆದಾಟು ಯೋಜನೆ ಇರುವುದು ಕುಡಿಯುವ ನೀರಿನ ಯೋಜನೆ ಹೊರತು ಕೃಷಿಗಾಗಿ ಅಲ್ಲಾ' ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಪಾದಯಾತ್ರೆ
ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮೇಕೇದಾಟು ಪಾದಯಾತ್ರೆ ಮಾಡಿದ ಬಳಿಕ ರಾಜ್ಯ ಕಾಂಗ್ರೆಸ್ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸಲು ಉದ್ದೇಶಿಸಿದೆ. ವರ್ಷಾಂತ್ಯದಲ್ಲಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿಯಿಂದ ಬಾಗಲಕೋಟೆ ಜಿಲ್ಲೆ ಬಾದಾಮಿವರೆಗೆ ಪಾದಯಾತ್ರೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.
ಆದರೀಗ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, 'ಕೇಂದ್ರ, ರಾಜ್ಯದಲ್ಲಿ ಎರಡೂ ಕಡೆ ಅವರದ್ದೇ ಸರ್ಕಾರ ಇದೆ. ಹಿಂದೆ ಯಡಿಯೂರಪ್ಪ ಸರ್ಕಾರದಲ್ಲೂ ಸಿಹಿ ಸುದ್ದಿ ಕೊಡ್ತಿವಿ ಅಂತಾ ಹೇಳಿದ್ರು. ಈಗ ಮತ್ತೆ ಸಿಹಿ ಸುದ್ದಿ ಕೊಡ್ತೀವಿ ಅಂತಾ ಹೇಳಿದ್ದಾರೆ. ಮಹದಾಯಿ ಯೋಜನೆ ಶೀಘ್ರ ಜಾರಿ ಮಾಡಬೇಕು. ದೊಡ್ಡ ಮೊತ್ತ ಖರ್ಚು ಆಗುವ ಯೋಜನೆ ಏನು ಅಲ್ಲ.ಬರೀ ಮಹದಾಯಿ ನೀರು ಡೈವರ್ಶನ್ ಮಾಡಬೇಕಿದೆ. ಈಗಾಗಲೇ ಶೇಕಡಾ50 ರಷ್ಟು ಕೆಲಸ ಆಗಿದೆ. ಮಹದಾಯಿ ನೀರು ಹಂಚಿಕೆ ಕೂಡಾ ಆಗಿದೆ. ಆದ್ರೆ ಏಕೆ ವಿಳಂಬ ಮಾಡ್ತಿದ್ದಾರೆ ಗೊತ್ತಾಗ್ತಿಲ್ಲ. ಸರ್ಕಾರದ ಗಮನ ಸೆಳೆಯಲು ಕಾಂಗ್ರೆಸ್ ಪಾದಯಾತ್ರೆ ಮಾಡಲಿದೆ. ಮಳೆಗಾಲ ಇರುವುದರಿಂದ ಪಾದಯಾತ್ರೆ ಮುಂದೂಡಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ ನಡೆಯಲಿದೆ ಎಂದಿದ್ದಾರೆ.
ಯೋಜನೆ ಜಾರಿ ಸಂಬಂಧ ಕಳೆಸ ಹಲವು ವರ್ಷಗಳಿಂದ ಕಾಂಗ್ರೆಸ್ ಬಿಜೆಪಿ ನಾಯಕರ ಮಧ್ಯೆ ವಾಗ್ಯುದ್ಧ ನಡೆಯುತ್ತಲೇ ಇದೆ. ಪ್ರತಿ ಬಾರಿ ಚುನಾವಣೆ ಎದುರಾದಾಗ ಸದ್ಯದಲ್ಲೇ ಸಿಹಿ ಕೊಡ್ತೀವಿ ಎನ್ನುವ ಸರ್ಕಾರ ಯೋಜನೆ ಜಾರಿಗೆ ಹೊಸ ಪ್ಲ್ಯಾನ್ ಮಾಡಿಕೊಂಡಿದೆ. ಇನ್ನಾದರೂ ನಾಲ್ಕು ದಶಕಗಳ ಹೋರಾಟಕ್ಕೆ ಜಯ ಸಿಗುತ್ತಾ.. ರಾಜ್ಯಕ್ಕೆ ಸಿಗಬೇಕಾದ ಮಹದಾಯಿ ನದಿ ನೀರಿನ ಪಾಲು ಸಿಗುತ್ತಾ ಕಾದು ನೋಡಬೇಕು. ಒಟ್ಟಿನಲ್ಲಿ ಮಹದಾಯಿ ವಿಷಯ ಕೇವಲ ಚುನಾವಣಾ ವಿಚಾರ ಆಗದಿರಲಿ ಎಂಬುದು ಸಾರ್ವಜನಿಕರ ಆಶಯ.