ಲೋಕಾಯುಕ್ತದಲ್ಲಿ ವರ್ಗಾವಣೆ, ಅನ್ಯರ ಒತ್ತಡ, ಅಮಾನತುಗಳ ಭಯವಿಲ್ಲದೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಅವಕಾಶವಿದೆ. ಆದರೆ ಲೋಕಾಯುಕ್ತದ ಆಶಯಗಳಿಗೆ ಬದ್ಧರಾಗಿದ್ದು ಭ್ರಷ್ಟಾಚಾರದ ವಿರುದ್ಧ ಸೈನಿಕರಂತೆ ಕೆಲಸ ಮಾಡಬೇಕು: ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್
ಬೆಂಗಳೂರು(ಡಿ.03): ಪ್ರತಿ ಜಿಲ್ಲೆಯಲ್ಲಿಯೂ ಅತ್ಯಂತ ಭ್ರಷ್ಟರಾಗಿರುವ ಅಧಿಕಾರಿಗಳ ಪಟ್ಟಿ ಮಾಡಿ. ಅವರ ಆಸ್ತಿ ವಿವರಗಳನ್ನು ಸಂಗ್ರಹಿಸಿ. ಅವರ ಆಸ್ತಿ ಸಂಪಾದನೆಯ ಮಾರ್ಗವನ್ನು ಪತ್ತೆ ಹಚ್ಚಿ. ಲೋಕಾಯುಕ್ತರಿಂದ ಅನುಮತಿ ಪಡೆದು, ನ್ಯಾಯಾಲಯದ ವಾರಂಟ್‌ನೊಂದಿಗೆ ಅವರ ಮೇಲೆ ದಾಳಿ ನಡೆಸಿ, ಸೂಕ್ತ ತನಿಖೆ ಕೈಗೊಂಡು ಭ್ರಷ್ಟರಿಗೆ ಶಿಕ್ಷೆ ಆಗುವ ಹಾಗೆ ನೋಡಿಕೊಳ್ಳಿ ಎಂದು ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಖಡಕ್ ಸೂಚನೆ ನೀಡಿದ್ದಾರೆ.
ಲೋಕಾಯುಕ್ತ ಕಚೇರಿಯಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಭ್ರಷ್ಟಾಚಾರ ಪ್ರತಿಬಂಧ ಅಧಿನಿಯಮ ಮತ್ತು ಕರ್ನಾಟಕ ಲೋಕಾಯುಕ್ತ ಕಾಯ್ದೆ ಕುರಿತು ಅರಿವು ಮೂಡಿಸುವ ಎರಡು ದಿನಗಳ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಸಾಕ್ಷ್ಯನಾಶ ಭೀತಿಯಿಂದ ಎಫ್‌ಐಆರ್ ಅಪ್‌ಲೋಡ್ ತಡ: ಲೋಕಾಯುಕ್ತ
ಲೋಕಾಯುಕ್ತದಲ್ಲಿ ವರ್ಗಾವಣೆ, ಅನ್ಯರ ಒತ್ತಡ, ಅಮಾನತುಗಳ ಭಯವಿಲ್ಲದೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಅವಕಾಶವಿದೆ. ಆದರೆ ಲೋಕಾಯುಕ್ತದ ಆಶಯಗಳಿಗೆ ಬದ್ಧರಾಗಿದ್ದು ಭ್ರಷ್ಟಾಚಾರದ ವಿರುದ್ಧ ಸೈನಿಕರಂತೆ ಕೆಲಸ ಮಾಡಬೇಕು. ನಾನು ಯಾವುದೇ ಉತ್ತಮ ಸಿಬ್ಬಂದಿಯನ್ನು ಬಿಟ್ಟು ಹಾಕಲಾರೆ. ಒಂದು ವೇಳೆ ಕೆಲಸದಿಂದ ವಿಮುಖಗೊಂಡರೆ ಅವರನ್ನು ತಕ್ಷಣವೇ ಲೋಕಾಯುಕ್ತದ ಕರ್ತವ್ಯದಿಂದ ಬಿಡುಗಡೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಅಧೀರರಾಗಬೇಡಿ:
ನಾವು ನಮ್ಮ ಮಿತಿಯಲ್ಲಿ ಕೆಲಸ ಮಾಡಿದರೆ ಅದಕ್ಕೆ ತಕ್ಕಂತೆ ಬದಲಾವಣೆಗಳು ಆಗುತ್ತವೆ. ಲೋಕಾಯುಕ್ತಕ್ಕೆ ಬಲ ಇಲ್ಲ ಎಂದು ಅಧೀರರಾಗುವ ಅಗತ್ಯವಿಲ್ಲ. ಉತ್ತಮ ರೀತಿಯಲ್ಲಿ ಪ್ರಕರಣದ ತನಿಖೆ ಮಾಡುವುದು ನಮ್ಮ ಶಕ್ತಿಯಾಗಿದ್ದು, ಎಲ್ಲ ಶಿಷ್ಟಾಚಾರಗಳಿಗೆ ಒಳಪಟ್ಟು ನಿಷ್ಠೆಯಿಂದ ತನಿಖೆ ನಡೆಸಿ. ನಮ್ಮಲ್ಲಿನ ಶಿಕ್ಷೆಯ ಪ್ರಮಾಣ ಶೇ.25 ಇದೆ. ಕೇಂದ್ರೀಯ ತನಿಖಾ ಸಂಸ್ಥೆಯ ಶಿಕ್ಷೆಯ ಪ್ರಮಾಣ ಶೇ.68 ಇದೆ. ನಮ್ಮ ಶಿಕ್ಷೆಯ ಪ್ರಮಾಣವನ್ನು ಶೇ.85ಕ್ಕಿಂತ ಹೆಚ್ಚು ಮಾಡಬೇಕು ಎಂಬುದು ನನ್ನ ಆಶಯವಾಗಿದೆ ಎಂದು ನ್ಯಾ.ಬಿ.ಎಸ್. ಪಾಟೀಲ್ ಹೇಳಿದರು.
ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಗದಗದ ರೈತನೊಬ್ಬ 415 ಕಿಮೀ ಸಂಚರಿಸಿ ಬೆಂಗಳೂರಿಗೆ ಬಂದು 205 ಕೆ.ಜಿ. ಈರುಳ್ಳಿಯನ್ನು ಕೇವಲ 8.36 ರು.ಗಳಿಗೆ ಮಾರಾಟ ಮಾಡಿರುವ ಸುದ್ದಿ ಪ್ರಕಟಗೊಂಡಿತ್ತು. ಎಪಿಎಂಸಿಯಲ್ಲಿನ ವ್ಯಾಪಕ ಭ್ರಷ್ಟಾಚಾರದ ದ್ಯೋತಕವಿದು. ಈ ಪ್ರಕರಣ ಸೇರಿದಂತೆ ರಾಜ್ಯಾದ್ಯಂತ ಎಪಿಎಂಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಆಳವಾದ ತನಿಖೆ ನಡೆಸುತ್ತೇನೆ. ಇಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಲೋಕಾಯುಕ್ತರು ಹೇಳಿದರು.
ಅಧಿಕಾರಿಗಳಿಗೆ ಶಾಸ್ತಿ ಮಾಡಿ:
ಬೀಜ ಕೇಂದ್ರಗಳು, ಆಸ್ಪತ್ರೆ, ಉಪ ನೋಂದಾಣಿ ಅಧಿಕಾರಿಗಳ ಕಚೇರಿಗಳ ಮೇಲೆ ನಿಗಾ ಇಡಬೇಕು. ಖಾತಾ ಬದಲಾವಣೆಗೆ ಹತ್ತು ಸಲ ಬನ್ನಿ ಎನ್ನುವ ಅಧಿಕಾರಿಗಳಿಗೆ ತಕ್ತ ಶಾಸ್ತಿ ಮಾಡಿ. ಪ್ರಕರಣ ದಾಖಲಿಸಿ ಪಾಠ ಕಲಿಸಿ. ನಾನು ನಿಮ್ಮೆಲ್ಲರ ಕೆಲಸದ ಮೇಲೆ ಗಮನವಿಟ್ಟಿದ್ದು, ಪ್ರತಿ ತಿಂಗಳ ಮತ್ತು ದ್ವೈಮಾಸಿಕ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ಹೆಚ್ಚಾದರೆ ಅದಕ್ಕೆ ನೀವೇ ಹೊಣೆ ಆಗುತ್ತಿರಿ ಎಂದು ಲೋಕಾಯುಕ್ತರು ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಬೆಳಗಾವಿ: ಲೋಕಾಯುಕ್ತ ದಾಳಿ, ಲಂಚ ಸಮೇತ ಸಿಕ್ಕಿಬಿದ್ದ ಕಿತ್ತೂರು ತಹಶಿಲ್ದಾರ್
ಪ್ರಕರಣ ದುಪ್ಪಟ್ಟು ಹೆಚ್ಚಳ:
ಈ ಮೊದಲು ಪ್ರತಿ ತಿಂಗಳು ಮುನ್ನೂರು-ನಾಲ್ನೂರು ಪ್ರಕರಣಗಳು ದಾಖಲಾಗುತ್ತಿದ್ದರೆ ಕಳೆದ ತಿಂಗಳಲ್ಲಿ 844 ಪ್ರಕರಣ ದಾಖಲಾಗಿದೆ. ಇದು ಲೋಕಾಯುಕ್ತದ ಮೇಲಿನ ಜನರ ಹೆಚ್ಚುತ್ತಿರುವ ನಿರೀಕ್ಷೆ ಮತ್ತು ಭರವಸೆಯ ಸಂಕೇತ. ನಮ್ಮಲ್ಲಿ ಸಿಬ್ಬಂದಿ ಕೊರತೆಯಿದೆ. ಆದರೆ ಹೆಚ್ಚು ಸಮಯ ಕೆಲಸ ಮಾಡುವ ಮೂಲಕ ಜನರಿಗೆ ನ್ಯಾಯ ದೊರಕಿಸಲು ಪ್ರಯತ್ನಿಸೋಣ. ನಾನು ರಾತ್ರಿ 9 ಗಂಟೆ ತನಕ ಕರ್ತವ್ಯ ನಿರ್ವಹಿಸಲು ಸಿದ್ಧನಿದ್ದೇನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣಿಂದ್ರ, ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ರಿಜಿಸ್ಟ್ರಾರ್ ಉಷಾರಾಣಿ ಉಪಸ್ಥಿತರಿದ್ದರು.
ಭ್ರಷ್ಟರ ಆಸ್ತಿ ಗಳಿಕೆ ಮಾರ್ಗ ಪತ್ತೆ ಹಚ್ಚಿ
ಜಿಲ್ಲೆಗಳಲ್ಲಿರುವ ಭ್ರಷ್ಟ ಅಧಿಕಾರಿಗಳ ಆಸ್ತಿ ವಿವರ ಸಂಗ್ರಹಿಸಿ. ಅವರ ‘ಸಂಪಾದನೆಯ’ ಮಾರ್ಗ ಪತ್ತೆಹಚ್ಚಿ. ಲೋಕಾಯುಕ್ತರಿಂದ ಅನುಮತಿ ಪಡೆದು ಅವರ ಮೇಲೆ ದಾಳಿ ನಡೆಸಿ ಶಿಕ್ಷೆಯಾಗುವಂತೆ ನೋಡಿಕೊಳ್ಳಿ ಅಂತ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ತಿಳಿಸಿದ್ದಾರೆ.