ಕರ್ನಾಟಕದ ಜನವಸತಿ ಪ್ರದೇಶಗಳಲ್ಲೀಗ ಚಿರತೆ ಚಿಂತೆ..!

By Kannadaprabha News  |  First Published Dec 3, 2022, 7:30 AM IST

ಇತ್ತೀಚೆಗೆ ಹಲವೆಡೆ ಹೆಚ್ಚಾದ ಚಿರತೆ ದಾಳಿ ಪ್ರಕರಣ, ಜನರಿಗೆ ತೀವ್ರ ಆತಂಕ, ಅರಣ್ಯ ಇಲಾಖೆಗೆ ತಲೆನೋವು, ಮೈಸೂರು, ದೊಡ್ಡಬಳ್ಳಾಪುರ, ಶಿವಮೊಗ್ಗ, ಬೆಂಗಳೂರಲ್ಲಿ ಚಿರತೆ ಪ್ರತ್ಯಕ್ಷ, ಟಿ.ನರಸೀಪುರದಲ್ಲಿ ವಿದ್ಯಾರ್ಥಿನಿ ಬಲಿ. 


ಬೆಂಗಳೂರು(ಡಿ.03): ಕಳೆದೊಂದು ವಾರದಿಂದ ರಾಜ್ಯದ ಹಲವೆಡೆ ಚಿರತೆ ಹಾವಳಿ ಹೆಚ್ಚಾಗಿದ್ದು, ಜನವಸತಿ ಪ್ರದೇಶಗಳಿಗೆ ನುಗ್ಗಿ ದಾಳಿ ನಡೆಸುತ್ತಿರುವ ಪ್ರಕರಣಗಳಿಂದಾಗಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ರಾಜಧಾನಿ ಬೆಂಗಳೂರು, ಮೈಸೂರು ಹಾಗೂ ದೊಡ್ಡಬಳ್ಳಾಪುರದಲ್ಲಿ ಶುಕ್ರವಾರ ಚಿರತೆ ಕಾಣಿಸಿಕೊಂಡು ಆತಂಕ ಮೂಡಿಸಿದರೆ, ಶಿವಮೊಗ್ಗದಲ್ಲಿ ಚಿರತೆಯೊಂದು ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ. ಬೇಟೆ ಅರಸಿ ಪದೇ ಪದೆ ಕಾಡಿನಿಂದ ನಾಡಿಗೆ ಬರುತ್ತಿರುವ ಚಿರತೆ ಹಾವಳಿಯಿಂದಾಗಿ ಕಾಡಂಚಿನ ಜನವಸತಿ ಪ್ರದೇಶಗಳ ಜನ ಹೈರಾಣಾಗುವಂತಾಗಿದೆ.

ರಾಜಧಾನಿಯಲ್ಲಿ ಆತಂಕ:

Tap to resize

Latest Videos

ಬೆಂಗಳೂರಿನ ಕೆಂಗೇರಿ ಮತ್ತು ಚಿಕ್ಕಜಾಲ ಸುತ್ತಮುತ್ತ ಜನವಸತಿ ಪ್ರದೇಶಗಳಲ್ಲಿ ಎರಡ್ಮೂರು ದಿನಗಳಿಂದ ಚಿರತೆಗಳು ಕಾಣಿಸಿಕೊಂಡು ಆತಂಕ ಮೂಡಿಸಿದ್ದು, ಅವುಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಶುಕ್ರವಾರ ದಿನವಿಡೀ ಕಾರ್ಯಾಚರಣೆ ನಡೆಸಿದೆ. ಚಿರತೆಯು ಜಿಂಕೆ ಬೇಟೆಯಾಡಿದ್ದ ಬಿಜಿಎಸ್‌ ಆಸ್ಪತ್ರೆ ಹಿಂಬದಿ ಗೇಟ್‌ ಸಮೀಪದ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಮತ್ತು ಶುಕ್ರವಾರ ದಿನವಿಡೀ ತಲಾ ನಾಲ್ಕು ಮಂದಿಯ ಮೂರು ತಂಡ ಮಾಡಿಕೊಂಡು ಕಾರ್ಯಾಚರಣೆ ಕೈಗೊಳ್ಳಲಾಯಿತು. ಆಗ ಕೇವಲ ಚಿರತೆ ಹೆಜ್ಜೆ ಗುರುತುಗಳಷ್ಟೇ ಪತ್ತೆಯಾಗಿವೆ. ಚಿರತೆ ಇನ್ನೂ ಪತ್ತೆಯಾಗದಿರುವುದು ಈ ಭಾಗದ ಜನರ ನೆಮ್ಮದಿ ಕೆಡಿಸಿದೆ.

Mysuru: ಯುವತಿ ಬಲಿ ಬೆನ್ನಲ್ಲೇ ಚಿರತೆಯನ್ನು ಕಂಡಲ್ಲಿ ಗುಂಡಿಕ್ಕಲು ಹತ್ತು ತಂಡ ರಚಿಸಿದ ಅರಣ್ಯ ಇಲಾಖೆ

ಮೈಸೂರಲ್ಲಿ ಹೆಚ್ಚಾದ ಹಾವಳಿ:

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಎಸ್‌.ಕೆಬ್ಬೆಹುಂಡಿಯಲ್ಲಿ ಚಿರತೆ ದಾಳಿಗೆ ಗುರುವಾರವಷ್ಟೇ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದು, ಇದರ ಬೆನ್ನಲ್ಲೇ ಇದೀಗ ಪಿರಿಯಾಪಟ್ಟಣ ತಾಲೂಕಿನ ಹಬಟೂರಿನಲ್ಲಿ ಚಿರತೆಯೊಂದು ದಾಳಿ ನಡೆಸಿ ಹಸು ಕೊಂದಿದೆ.

ಟಿ.ನರಸೀಪುರ ತಾಲೂಕಿನ ಎಂ.ಎಲ್‌.ಹುಂಡಿಯಲ್ಲಿ ಅಕ್ಟೋಬರ್‌ ತಿಂಗಳಲ್ಲೂ ಚಿರತೆ ದಾಳಿಗೆ ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದು, ಇದೀಗ ತಾಲೂಕಿನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಅಸುನೀಗುತ್ತಿದ್ದಂತೆ ಸಾರ್ವಜನಿಕರಲ್ಲಿ ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ನರಬಲಿಪಡೆದ ಚಿರತೆಯನ್ನು ಗುಂಡಿಕ್ಕಿ ಕೊಲ್ಲಲೂ ಅರಣ್ಯ ಇಲಾಖೆ ಆದೇಶಿದೆ.

ಇನ್ನು ಜಿಲ್ಲೆಯ ವರುಣ ಕ್ಷೇತ್ರಕ್ಕೆ ಸೇರಿರುವ ಸುತ್ತೂರು, ಜಿ.ಮಾರಳ್ಳಿ, ಬಿಳುಗಲಿ ಮತ್ತಿತರ ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ಚಿರತೆಗಳು ಕಾಡಿನಿಂದ ಆಗಾಗ ಜನವಸತಿ ಪ್ರದೇಶಗಳಿಗೆ ಬಂದು ಜಾನುವಾರು, ನಾಯಿಗಳ ಮೇಲೆ ದಾಳಿ ನಡೆಸಿದ ಘಟನೆಗಳು ವರದಿಯಾಗುತ್ತಿವೆ. ತಡರಾತ್ರಿ ಚಿರತೆಗಳು ಜನವಸತಿ ಪ್ರದೇಶಗಳಲ್ಲಿ ಚಿರತೆಗಳು ಓಡಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಾತ್ರಿ ವೇಳೆ ಮನೆಯಿಂದ ಹೊರಬರಲೇ ಹೆದರುವಂತಾಗಿದೆ.

Shivamogga: ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಬೋನಿಗೆ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ನಂದಿಬೆಟ್ಟದ ತಪ್ಪಲಿನ ಚನ್ನಾಪುರ ಗ್ರಾಮದ ಜನರೂ ಚಿರತೆ ದಾಳಿಗೆ ಕಂಗೆಟ್ಟಿದ್ದು, ಗುರುವಾರ ರಾತ್ರಿ ಚಿರತೆ ದಾಳಿಗೆ ಕರುವೊಂದು ಬಲಿಯಾಗಿದೆ. ಈ ಭಾಗದಲ್ಲಿ ಈ ವರ್ಷ ಮೂರು ಚಿರತೆಗಳನ್ನು ಸೆರೆಹಿಡಿಯಲಾಗಿದೆಯಾದರೂ ಅನೇಕ ಕಡೆ ಆಗಾಗ್ಗೆ ಚಿರತೆಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸುತ್ತಲೇ ಇವೆ.

ಶಿವಮೊಗ್ಗದಲ್ಲಿ ಬೋನಿಗೆ ಬಿದ್ದ ಚಿರತೆ

ಶಿವಮೊಗ್ಗ: ತಾಲೂಕಿನ ಹರಮಘಟ್ಟಗ್ರಾಮದಲ್ಲಿ 15 ದಿನಗಳ ಹಿಂದೆ 3 ಹಸುಗಳನ್ನು ಭೇಟೆಯಾಡಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಗಂಡು ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಶುಕ್ರವಾರ ಬೆಳಗ್ಗೆ ಬಿದ್ದಿದೆ. ಚಿರತೆ ಹಾವಳಿಯಿಂದ ಗ್ರಾಮಸ್ಥರಲ್ಲಿ ಭಯಭೀತಿ ಉಂಟುಮಾಡಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಗ್ರಾಮದಲ್ಲಿ ಬೋನ್‌ ಇಟ್ಟಿದ್ದರು.

ಹಲವು ಊರುಗಳಲ್ಲಿ ಚಿರತೆ ಭೀತಿ

1. ಬೆಂಗಳೂರಿನ ಕೆಂಗೇರಿ ಮತ್ತು ಚಿಕ್ಕಜಾಲ ಸುತ್ತಮುತ್ತ ಚಿರತೆಗಳ ಓಡಾಟ
2. ಮೈಸೂರಿನ ಟಿ.ನರಸೀಪುರದಲ್ಲಿ ಚಿರತೆ ದಾಳಿಗೆ ವಿದ್ಯಾರ್ಥಿನಿಯ ಸಾವು
3. ಪಿರಿಯಾಪಟ್ಟಣ ತಾಲೂಕಿನ ಹಬಟೂರಿನಲ್ಲಿ ಚಿರತೆ ದಾಳಿಗೆ ಹಸು ಬಲಿ
4. ಕಳೆದ ತಿಂಗಳು ಟಿ.ನರಸೀಪುರ ತಾಲೂಕಲ್ಲಿ ಚಿರತೆ ದಾಳಿಗೆ ವಿದ್ಯಾರ್ಥಿ ಬಲಿ
5. ಮೈಸೂರಿನ ವರುಣ ಕ್ಷೇತ್ರದ ಹಳ್ಳಿಗಳಲ್ಲಿ ಒಂದು ವಾರದಿಂದ ಚಿರತೆ ಸಂಚಾರ
6. ಶಿವಮೊಗ್ಗದ ಹರಮಘಟ್ಟಗ್ರಾಮದಲ್ಲಿ 3 ಹಸು ಕೊಂದಿದ್ದ ಚಿರತೆ ಬೋನಿಗೆ
7. ಬೆಂ.ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಚಿರತೆ ದಾಳಿಗೆ ಹಸು ಸಾವು
8. ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ನಲ್ಲಿ 15 ದಿನ ಹುಡುಕಿದರೂ ಸಿಗದೆ ಚಿರತೆ ಪಾರು
 

click me!