Waqf Bill 2025; ಕೇಂದ್ರದ ವಿರುದ್ಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ!

ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರದ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ರಾಜ್ಯ ಸರ್ಕಾರಗಳ ಹಕ್ಕುಗಳ ಮೇಲೆ ಒತ್ತಡ ಹೇರುವ ಸರ್ವಾಧಿಕಾರಿ ಧೋರಣೆ ಎಂದು ಟೀಕಿಸಿದ್ದಾರೆ.


ಬೆಂಗಳೂರು (ಏ.3): ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ ಅಂಗೀಕಾರಗೊಂಡಿರುವ ವಿಚಾರವು ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಈ ನಡೆಯು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹದ್ದು ಎಂದು ಆರೋಪಿಸಿರುವ ಅವರು, ಈ ಮಸೂದೆಯು ರಾಜ್ಯ ಸರ್ಕಾರಗಳ ಹಕ್ಕುಗಳ ಮೇಲೆ ಒತ್ತಡ ಹೇರುವ ಸರ್ವಾಧಿಕಾರಿ ಧೋರಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಟೀಕಿಸಿದ್ದಾರೆ.

ಕೇಂದ್ರ ಸರ್ಕಾರದ ಹಸ್ತಕ್ಷೇಪ ಸರಿಯಲ್ಲ

Latest Videos

ಒಂದು ಧರ್ಮದ ಸಂಸ್ಥೆಗಳಲ್ಲಿ ಕೇಂದ್ರ ಸರ್ಕಾರ ನಿಯಂತ್ರಣ ಮಾಡಲು ಹೊರಟಿರುವುದು ಸರಿಯಲ್ಲ. ನಮ್ಮ ರಾಜ್ಯದಲ್ಲಿ ಮುಜರಾಯಿ ಧರ್ಮದತ್ತಿ ಇಲಾಖೆ ಇದೆ. ಇದನ್ನು ಕೂಡ ಕೇಂದ್ರ ಸರ್ಕಾರ ತೆಗೆದುಕೊಳ್ಳಲಿ, ವಕ್ಫ್ ಮಾತ್ರ ಯಾಕೆ? ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರ್ಕಾರವು ಮುಜರಾಯಿ ಇಲಾಖೆಯನ್ನು ತನ್ನ ವಶಕ್ಕೆ ತೆಗೆದುಕೊಂಡು ನಿಯಂತ್ರಣ ಮಾಡಬೇಕು ಎಂದು ಸವಾಲು ಹಾಕಿದರಲ್ಲದೇ ಕ್ರೈಸ್ತ ಧರ್ಮದ ಸಂಸ್ಥೆಗಳನ್ನೂ ಕೇಂದ್ರವೇ ತೆಗೆದುಕೊಂಡು ನಿರ್ಧಾರ ಮಾಡಲಿ ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ವಕ್ಫ್ ಮಸೂದೆಗೆ ಸಾಕಷ್ಟು ವಿರೋಧ ಇತ್ತು, ಅದೇ ಕಾರಣಕ್ಕೆ ರಾತ್ರೋರಾತ್ರಿ ಪಾಸ್ ಆಗಿದೆ: ಗೃಹ ಸಚಿವ ಪರಮೇಶ್ವರ್

ರಾಜ್ಯದ ಅಧಿಕಾರಕ್ಕೆ ಧಕ್ಕೆ

ವಕ್ಫ್ ಭೂಮಿ ವಿಚಾರವು ರಾಜ್ಯಕ್ಕೆ ಸಂಬಂಧಿಸಿದ್ದು ಎಂದು ಒತ್ತಿ ಹೇಳಿರುವ ಸಚಿವರು, ಭೂಮಿಗಳ ಮೇಲೆ ಕೇಂದ್ರ ಸರ್ಕಾರಕ್ಕೆ ಯಾವ ಕಂಟ್ರೋಲ್ ಇದೆ? ಇದು ಕಂದಾಯ ಇಲಾಖೆಯ ರಾಜ್ಯದ ವಿಚಾರ. ಕೇಂದ್ರ ಸರ್ಕಾರದ ಆಸ್ತಿ ಬಿಟ್ಟು ಮಿಕ್ಕಿದ್ದೆಲ್ಲ ರಾಜ್ಯ ಸರ್ಕಾರದ ಕಂಟ್ರೋಲ್ ಇರುವ ಆಸ್ತಿ. ಅದರ ಮೇಲೆ ನಾವು ತೀರ್ಮಾನ ಮಾಡ್ತೀವಿ ಅಂತ ಹೇಳೋದಕ್ಕೆ ಕೇಂದ್ರ ಸರ್ಕಾರಕ್ಕೆ ಯಾವ ಹಕ್ಕಿದೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ವಿಚಾರವಾಗಿದ್ದು, ಧಾರ್ಮಿಕ ಸಂಸ್ಥೆಗಳು ರಾಜ್ಯ ಸರ್ಕಾರದ ವಿಷಯ ಎಂದು ಸ್ಪಷ್ಟಪಡಿಸಿದ್ದಾರೆ.

ಏಕರೂಪತೆಯ ಕೊರತೆ

ತಮಿಳುನಾಡಲ್ಲಿ ಒಂದು ಕಾನೂನು, ಕೇರಳದಲ್ಲಿ ಒಂದು, ನಮ್ಮಲ್ಲಿ ಮತ್ತು ತೆಲಂಗಾಣದಲ್ಲಿ ಒಂದು ಕಾನೂನು ಇದೆ. ತಿರುಪತಿ ಟಿಟಿಡಿ ಬೋರ್ಡ್‌ನಂತಹ ಸಂಸ್ಥೆಯನ್ನು ಸರ್ಕಾರ ವಶಕ್ಕೆ ತೆಗೆದುಕೊಳ್ಳಲಿ, ಶಬರಿಮಲೆಯನ್ನೂ ವಶಕ್ಕೆ ತೆಗೆದುಕೊಳ್ಳಲಿ. ಯಾರು ಬೇಡ ಎಂದು ಹೇಳುತ್ತಾರೆ? ಎಲ್ಲರಿಗೂ ಒಂದೇ ರೂಲ್ ಮಾಡಲಿ ಕೇಂದ್ರ ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಈ ನಡೆ ತಪ್ಪು ಎಂದು ಆರೋಪಿಸಿದ ಸಚಿವರು, ಇದು ಕೇಂದ್ರದ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

ಧಾರ್ಮಿಕ ಸಂಸ್ಥೆಗಳಲ್ಲಿ ಹಸ್ತಕ್ಷೇಪ

ವಕ್ಫ್‌ಗೆ ಬೇರೆಯವರನ್ನು ಸೇರಿಸಬೇಕು ಎಂದು ಹೇಳ್ತೀರಾ ಹಾಗಾದ್ರೆ ಹಿಂದೂ ಧರ್ಮ ಸಂಸ್ಥೆಗಳಲ್ಲಿ ಹಿಂದೂಯೇತರರನ್ನು ನೇಮಕ ಮಾಡ್ತೀರಾ? ಎಂದು ಪ್ರಶ್ನಿಸಿರುವ ಸಚಿವರು, ಈ ಕಾನೂನು ಖಂಡಿತವಾಗಿ ಕೋರ್ಟ್‌ ಮೆಟ್ಟಿಲೇರುತ್ತದೆ ಎಂದರು. ಕೋರ್ಟ್ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮುಸಲ್ಮಾನರಿಗೆ ಸೇರಿದೆ ಎಂದು ಏನು ಬೇಕಾದರೂ ಮಾಡುತ್ತೇವೆ ಎಂಬ ಅಹಂಕಾರದಲ್ಲಿ ಕೇಂದ್ರ ಸರ್ಕಾರ ವರ್ತಿಸುತ್ತಿದೆ. ಆ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಾವು ಇಷ್ಟ ಬಂದ ಹಾಗೆ ಮಾಡುತ್ತೇವೆ ಎಂದರೆ ಆಗಲ್ಲ ಎಂದು ಎಚ್ಚರಿಸಿದ್ದಾರೆ.

ಕಾನೂನು ಬಾಹಿರ ನಿರ್ಧಾರ

"ಸಮಾಜ ಮಾತ್ರವಲ್ಲ, ಕಾನೂನುಗಳಿವೆ. ಅನೇಕ ರಾಜ್ಯಗಳು ಈ ಬಗ್ಗೆ ನಿರ್ಣಯ ಮಾಡಿವೆ. ನಾವು ಕೂಡ ನಿರ್ಣಯ ಮಾಡಿದ್ದೇವೆ. ಈ ಕಾನೂನು ಬಾಹಿರ ನಿರ್ಧಾರವನ್ನು ಖಂಡಿತವಾಗಿಯೂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ ಎಂದರು. ಇದೇ ವೇಳೆ ನಾಗಮೋಹನ್ ದಾಸ್ ವರದಿ ವಿಚಾರ 40% ಕಮಿಷನ್ ಆರೋಪದ ಬಗ್ಗೆ ನಾಗಮೋಹನ್ ದಾಸ್ ವಿಚಾರಣಾ ಆಯೋಗದ ವರದಿಯನ್ನು ಪ್ರಸ್ತಾಪಿಸಿರುವ ಸಚಿವರು, ಆರೋಪಗಳು ಸಾಬೀತಾಗುವುದು ಒಂದು ಕಡೆ. ಅವತ್ತಿನ ಸಂದರ್ಭದಲ್ಲಿ ಬಹಿರಂಗವಾಗಿ ಅನೇಕ ಪ್ರಕರಣಗಳು ನಡೆದವು. ಗುತ್ತಿಗೆದಾರರು ಸೂಸೈಡ್ ಮಾಡಿಕೊಂಡರು. ಈ ವಿಷಯದ ಬಗ್ಗೆ ಅನೇಕ ಜನ ಪ್ರಸ್ತಾಪ ಮಾಡಿದ್ದರು. ಆ ವಿಚಾರ ಆಧಾರದ ಮೇಲೆ ನಾವು ಮಾತನಾಡಿದ್ದು. ಈಗ ನಾಗಮೋಹನ್ ದಾಸ್ ಸಮಿತಿ ಮುಂದೆ ಯಾವುದು ದಾಖಲೆ ಇದೆ, ಏನು ಮಾಹಿತಿ ಬಂದಿದೆ ನೋಡಬೇಕು ಎಂದರು.

ಕಾನೂನಿನ ಪ್ರಕಾರ, ನ್ಯಾಯಾಲಯದ ಪ್ರಕಾರ ಪುರಾವೆಗಳು ಸಿಗದೇ ಇದ್ದರೆ ಏನು ಮಾಡೋದಕ್ಕೆ ಆಗಲ್ಲ. ಅದರ ಅರ್ಥ ಅದು ನಡೆದಿಲ್ಲ ಅಂತ ಅಲ್ಲ, ಆದರೆ ಅದಕ್ಕೆ ದಾಖಲೆ ಬೇಕು. ಪೂರ್ತಿ ವರದಿಯನ್ನು ನಾನು ಓದಿಲ್ಲ, ಓದಿದ ಬಳಿಕ ನಂತರ ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Waqf Bill 2025:ಸಂಸತ್ತಿನಲ್ಲಿ ವಕ್ಫ್ ಮಸೂದೆಯ ಪ್ರತಿ ಹರಿದು ಓವೈಸಿ ಆಕ್ರೋಶ, ವಿಡಿಯೋ ಇಲ್ಲಿದೆ

ಒಟ್ಟಿನಲ್ಲಿ ವಕ್ಫ್ ಮಸೂದೆಯ ಅಂಗೀಕಾರವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಅಧಿಕಾರದ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ. ಸಚಿವ ದಿನೇಶ್ ಗುಂಡೂರಾವ್ ಅವರ ಈ ಹೇಳಿಕೆಯು ರಾಜ್ಯದ ಹಕ್ಕುಗಳ ರಕ್ಷಣೆಗಾಗಿ ತೀವ್ರ ಹೋರಾಟದ ಸೂಚನೆ ನೀಡಿದ್ದು, ಈ ವಿಚಾರವು ಕಾನೂನು ಮತ್ತು ರಾಜಕೀಯ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಗಮನಾರ್ಹ ಚರ್ಚೆಗೆ ಕಾರಣವಾಗಲಿದೆ.

click me!