ಲೋಕಸಭೆಯಲ್ಲಿ ವಕ್ಫ್ ಮಸೂದೆ ಅಂಗೀಕಾರದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ವಿಧಾನಸಭೆಯಲ್ಲಿ ಶಾಸಕರ ಅಮಾನತು, ಸಿದ್ದಗಂಗಾ ಮಠ ಭೇಟಿ, ರಾಜಣ್ಣ ಪ್ರಕರಣ, ರಾಹುಲ್ ಗಾಂಧಿ ಭೇಟಿ, 40% ಕಮಿಷನ್ ವರದಿ, ಬೆಲೆ ಏರಿಕೆ ವಿರುದ್ಧ ಬಿಜೆಪಿ ಹೋರಾಟದ ಬಗ್ಗೆಯೂ ಮಾತನಾಡಿದ್ದಾರೆ.
ಬೆಂಗಳೂರು (ಏ.3): ಲೋಕಸಭೆಯಲ್ಲಿ ವಕ್ಫ್ ಮಸೂದೆಯ ಅಂಗೀಕಾರವು ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ರಾಜ್ಯ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದು, ಈ ಮಸೂದೆಗೆ ಸಾಕಷ್ಟು ವಿರೋಧ ವ್ಯಕ್ತವಾದರೂ, 288 ಜನ ಸದಸ್ಯರು ಇದರ ಪರವಾಗಿ ಮತ ಚಲಾಯಿಸಿದ್ದಾರೆ. ಈ ಕಾರಣದಿಂದಾಗಿ, ರಾತ್ರಿ ಒಂದು ಗಂಟೆಗೆ ಮಸೂದೆಯು ಅಂಗೀಕಾರಗೊಂಡಿದೆ. ಆದರೆ, ಈ ನಿರ್ಧಾರಕ್ಕೆ ಬಹಳಷ್ಟು ಜನರಿಂದ ವಿರೋಧವಿದ್ದು, ಮುಖ್ಯವಾಗಿ ಮುಸಲ್ಮಾನರು ಮತ್ತು ಇತರರು ಇದನ್ನು ರಾಜಕೀಯವಾಗಿ ಉಪಯೋಗಿಸುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ ಎಂದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ಬಿಲ್ ಪಾಸ್ ಆಗಿದೆ. ಆದ್ರೆ ಮುಂದೆ ಏನಾಗುತ್ತದೆ ಎಂಬುದನ್ನು ನೋಡೋಣ ಎಂದು ಪರಮೇಶ್ವರ್ ಹೇಳಿದರು
ವಿಧಾನಸಭೆಯಲ್ಲಿ ಶಾಸಕರ ಅಮಾನತು:
ವಿಧಾನಸಭೆಯಿಂದ ಶಾಸಕರ ಅಮಾನತು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಇದು ಸಭಾಧ್ಯಕ್ಷರಿಗೆ ಬಿಟ್ಟಿರುವ ವಿಷಯವಾಗಿದ್ದು, ಸರ್ಕಾರದ ಪಾತ್ರ ಇದರಲ್ಲಿ ಇಲ್ಲ ಎಂದಿದ್ದಾರೆ. ಸ್ಪೀಕರ್ ಆಯ್ಕೆಯಲ್ಲಿ ಎಲ್ಲರೂ ಒಮ್ಮತದಿಂದ ಭಾಗಿಯಾಗಿದ್ದು, ಬಿಜೆಪಿಯವರು ಸಹ ಇದನ್ನು ಬೆಂಬಲಿಸಿದ್ದರು. ಆದರೆ, ಸಭಾಧ್ಯಕ್ಷರ ಪೀಠದ ಬಳಿ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಸ್ಪೀಕರ್ ಎಷ್ಟೇ ಪರಿಪರಿಯಾಗಿ ಕೇಳಿಕೊಂಡರೂ, ಬಿಜೆಪಿಯವರು ಅವರ ಮಾತಿಗೆ ಗೌರವ ಕೊಡದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Waqf Bill 2025:ಸಂಸತ್ತಿನಲ್ಲಿ ವಕ್ಫ್ ಮಸೂದೆಯ ಪ್ರತಿ ಹರಿದು ಓವೈಸಿ ಆಕ್ರೋಶ, ವಿಡಿಯೋ ಇಲ್ಲಿದೆ
ಸಿದ್ದಗಂಗಾ ಮಠ ಮತ್ತು ಕರ್ನಾಟಕ ಭವನ ಉದ್ಘಾಟನೆಗೆ ಗೈರು:
ಕರ್ನಾಟಕ ಭವನದ ಉದ್ಘಾಟನೆಗೆ ತೆರಳದ ಬಗ್ಗೆ ಮಾತನಾಡಿದ ಸಚಿವರು, ಡಿಸಿಎಂ ಆಗಿದ್ದಾಗ ನಾನೇ ಫೌಂಡೇಶನ್ ಹಾಕಿದ್ದೆ. ಆದರೆ, ಯಾವ ಕಾರಣಕ್ಕೆ ನನ್ನನ್ನು ಆಹ್ವಾನಿಸಲಿಲ್ಲ ಎಂಬುದು ಗೊತ್ತಿಲ್ಲ. ಆಹ್ವಾನ ಇಲ್ಲದ ಕಾರಣ ದೆಹಲಿಗೆ ಹೋಗಲಿಲ್ಲ. ಎಲ್ಲ ಮಂತ್ರಿಗಳು ಇದ್ದಾರೆ, ನಾನು ಹೋಗುವ ಅಗತ್ಯವಿಲ್ಲ ಎಂದು ತೀರ್ಮಾನಿಸಿದೆ. ಇನ್ನು ಸಿದ್ದಗಂಗಾ ಮಠಕ್ಕೆ ಭೇಟಿ ವಿಚಾರದಲ್ಲಿ ನಮ್ಮ ತಂದೆಯವರಿಗೆ ಸ್ವಾಮೀಜಿಯವರೊಂದಿಗೆ ಆತ್ಮೀಯ ಸಂಬಂಧವಿತ್ತು. ಬೇರೆ ಕೆಲಸದಿಂದ ಹೋಗಲಾಗಲಿಲ್ಲ. ಆದರೆ, ತಿಳಿದ ಕೂಡಲೇ ಮಠಕ್ಕೆ ಭೇಟಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ರಾಜಣ್ಣ ಮತ್ತು ರಾಜೇಂದ್ರ ಪ್ರಕರಣ:
ರಾಜಣ್ಣ ಮತ್ತು ರಾಜೇಂದ್ರ ಪ್ರಕರಣದಲ್ಲಿ ಯೂ-ಟರ್ನ್ ವಿಚಾರದ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ತನಿಖೆ ನಡೆಯುತ್ತಿದೆ. ಮಧ್ಯದಲ್ಲಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ತನಿಖೆಯ ಒಳಗಿನ ಮಾಹಿತಿ ನಮಗೆ ಗೊತ್ತಿಲ್ಲ. ರಾಜಣ್ಣ ಅವರು ಸದನದಲ್ಲಿ ಇರುವ ರೀತಿ ಬೀದಿಯಲ್ಲಿ ಇರುವುದು ಕಷ್ಟ ಎಂದು ಸೂಚ್ಯವಾಗಿ ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಭೇಟಿ:
ರಾಜ್ಯದ ಸಚಿವರು ಮತ್ತು ಶಾಸಕರು ರಾಹುಲ್ ಗಾಂಧಿಯವರನ್ನು ಭೇಟಿಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಅವರು ಬೇರೆ ವಿಚಾರಕ್ಕಾಗಿ ಹೋಗಿದ್ದಾರೆ. ರಾಜ್ಯ ರಾಜಕಾರಣದ ಬಗ್ಗೆ ಯಾವುದೇ ಚರ್ಚೆ ಆಗುವುದಿಲ್ಲ. ಇದು ಕೇವಲ ಸೃಷ್ಟಿ ಮಾತ್ರ ಎಂದು ಸ್ಪಷ್ಟಪಡಿಸಿದರು.
40% ಕಮಿಷನ್ ವರದಿ:
ನಾಗಮೋಹನ್ ದಾಸ್ ಅವರ 40% ಕಮಿಷನ್‌ಗೆ ಸಾಕ್ಷಿಗಳಿಲ್ಲ ಎಂಬ ವರದಿಗೆ ಪ್ರತಿಕ್ರಿಯಿಸಿ, ಅವರು ತಮಗೆ ಸಿಕ್ಕ ಸಾಕ್ಷಿಗಳ ಆಧಾರದಲ್ಲಿ ವರದಿ ಮಾಡಿದ್ದಾರೆ. ಚುನಾವಣೆಯಲ್ಲಿ ನಾವು ಇದನ್ನು ಪ್ರಮುಖವಾಗಿ ಎತ್ತಿದ್ದೆವು. ಹೆಚ್ಚಿನ ಸಾಕ್ಷಿ ಸಿಕ್ಕರೆ ಅಂತಿಮ ವರದಿ ಸಲ್ಲಿಸಬಹುದು. ಇದು ಕೇವಲ ಮಧ್ಯಂತರ ವರದಿ ಎಂದರು. ಇದೇ ವೇಳೆ ಮುಡಾ ಪ್ರಕರಣದಲ್ಲಿ ಇಡಿ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, 'ಕೋರ್ಟ್ ಅನುಮತಿ ಕೊಟ್ಟಿದ್ದರೆ ತನಿಖೆ ಮಾಡುತ್ತಾರೆ. ತನಿಖೆ ಮಾಡಲೇಬೇಕು' ಎಂದರು.
ಇದನ್ನೂ ಓದಿ: Waqf Amendment Bill passed: ಮೋದಿ ಸರ್ಕಾರದ ಬ್ರಹ್ಮಾಸ್ತ್ರ, ಒಂದೇ ಏಟಿಗೆ ಹಲವು ಗುರಿಗಳು ಫಿನಿಶ್!
ಬೆಲೆ ಏರಿಕೆ ವಿರುದ್ಧ ಬಿಜೆಪಿ ಹೋರಾಟ:
ದರ ಏರಿಕೆ ವಿರುದ್ಧ ಬಿಜೆಪಿಯ ಅಹೋರಾತ್ರಿ ಹೋರಾಟಕ್ಕೆ ಪ್ರತಿಕ್ರಿಯಿಸಿ, 'ಬೆಲೆ ಏರಿಕೆ ಕೇಂದ್ರ ಸರ್ಕಾರದ ನೀತಿಗಳಿಂದ ಆಗುತ್ತದೆ. ತೆರಿಗೆ ವಿಚಾರದಲ್ಲಿ ಕೇಂದ್ರವೇ ಹೆಚ್ಚು ನಿಯಂತ್ರಣ ಹೊಂದಿದೆ. ರಾಜ್ಯ ಸರ್ಕಾರಗಳು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ತೆರಿಗೆ ಏರಿಕೆ ಮಾಡುತ್ತವೆ. ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗೆ 2 ರೂ. ಏರಿಕೆ ಸ್ವಾಭಾವಿಕ. ಕೇಂದ್ರವು ತೆರಿಗೆ ನಿಯಂತ್ರಿಸಿದರೆ ರಾಜ್ಯಗಳಿಗೆ ಅನುಕೂಲವಾಗುತ್ತದೆ' ಎಂದು ಸಮರ್ಥಿಸಿಕೊಂಡರು.