
ಬೆಂಗಳೂರು (ಜೂ.5) : ಲೋಕಸಭಾ ಚುನಾವಣೆಗೆ ಹೆಚ್ಚೂ ಕಡಮೆ ಒಂದು ವರ್ಷ ಬಾಕಿ ಇರುವಾಗಲೇ ಬಿಜೆಪಿ ಪಾಳೆಯದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತಿದೆ.
ಹಾಲಿ ಕ್ಷೇತ್ರದ ಸದಸ್ಯರಾಗಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ(DV Sadanandagowda) ಅವರಿಗೆ ಮುಂದಿನ ಬಾರಿ ಟಿಕೆಟ್ ನೀಡುವುದಿಲ್ಲ ಎಂಬ ವದಂತಿ ದಟ್ಟವಾಗಿ ಹಬ್ಬಿರುವ ಬೆನ್ನಲ್ಲೇ ಇತರ ಕ್ಷೇತ್ರಗಳ ಹಲವು ಬಿಜೆಪಿ ಸಂಸದರು ಹಾಗೂ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಮಾಜಿ ಸಚಿವರೂ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿ ಈಗಿನಿಂದಲೇ ತೆರೆಮರೆಯ ಲಾಬಿ ಆರಂಭಿಸಿದ್ದಾರೆ.
ಸದ್ಯದ ಮಾಹಿತಿ ಅನುಸಾರ ಒಬ್ಬ ಕೇಂದ್ರದ ಸಚಿವರೂ ಸೇರಿದಂತೆ ಮೂವರು ಹಾಲಿ ಲೋಕಸಭಾ ಸದಸ್ಯರು ಹಾಗೂ ರಾಜ್ಯದ ಒಬ್ಬ ಮಾಜಿ ಸಚಿವರು ಈ ಕ್ಷೇತ್ರದ ಮೇಲೆ ಕಣ್ಣು ಹಾಕಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಗೆ ಅನುಕೂಲಕರ ವಾತಾವರಣವಿದೆ ಎಂಬುದು ಇದಕ್ಕೆ ಪ್ರಮುಖ ಕಾರಣ. ಸ್ವಾರಸ್ಯಕರ ಸಂಗತಿ ಎಂದರೆ ಪ್ರಯತ್ನ ಮಾಡುತ್ತಿರುವ ಮುಖಂಡರೆಲ್ಲರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರು.
ಮೋದಿ ವಿರುದ್ಧ ಕಾಂಗ್ರೆಸ್ ನಿಗೂಢ ಖೆಡ್ಡಾ..?! : 50 ವರ್ಷದ ಹಿಂದೆ ಕೈ ಬತ್ತಳಿಕೆಯಲ್ಲಿತ್ತಂತೆ ಆ ಅಸ್ತ್ರ..!
ಕಳೆದ 2004ರಿಂದ ಈ ಲೋಕಸಭಾ ಕ್ಷೇತ್ರ ಬಿಜೆಪಿ ವಶದಲ್ಲಿದೆ. ಅದುವರೆಗೆ ಕಾಂಗ್ರೆಸ್ ಕೋಟೆಯಾಗಿದ್ದ ಈ ಕ್ಷೇತ್ರವನ್ನು ಬಿಜೆಪಿಯಿಂದ 2004ರಲ್ಲಿ ಎಚ್.ಟಿ.ಸಾಂಗ್ಲಿಯಾನ ಅಚ್ಚರಿಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದರು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅವರು ಬಿಜೆಪಿ ತೊರೆದಿದ್ದರಿಂದ 2009ರ ಚುನಾವಣೆಯಲ್ಲಿ ಡಿ.ಬಿ.ಚಂದ್ರೇಗೌಡ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಭೇರಿ ಬಾರಿಸಿದರು. ನಂತರ 2014ರಲ್ಲಿ ಚಂದ್ರೇಗೌಡರಿಗೆ ವಯಸ್ಸಿನ ಕಾರಣಕ್ಕೆ ಟಿಕೆಟ್ ನಿರಾಕರಿಸಿ ಮಾಜಿ ಮುಖ್ಯಮಂತ್ರಿ ಸದಾನಂದಗೌಡರನ್ನು ಕಣಕ್ಕಿಳಿಸಲಾಯಿತು. ಅವರು ಕೂಡ ಸುಲಭವಾಗಿ ಗೆಲುವು ಸಾಧಿಸಿದ್ದಲ್ಲದೆ, 2019ರಲ್ಲೂ ಬಿಜೆಪಿ ಬಾವುಟ ಹಾರಿಸುವಲ್ಲಿ ಯಶಸ್ವಿಯಾದರು.
ಹೀಗೆ ಕಳೆದ ನಾಲ್ಕು ಅವಧಿಯಿಂದ ಬಿಜೆಪಿ ಇಲ್ಲಿ ಗೆಲುವು ಸಾಧಿಸುತ್ತಲೇ ಬಂದಿರುವುದರಿಂದ ಮುಂಬರುವ ಚುನಾವಣೆಯಲ್ಲೂ ಸುಲಭವಾಗಿ ಗೆಲ್ಲಬೇಕು ಎಂಬ ಎಣಿಕೆಯಲ್ಲಿರುವ ಪಕ್ಷದ ಹಲವು ಮುಖಂಡರು ಸಹಜವಾಗಿಯೇ ಈ ಕ್ಷೇತ್ರದಿಂದ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ. ಈವರೆಗೆ ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಬಿಜೆಪಿ ಪಾಳೆಯದಲ್ಲಿ ಗಂಭೀರ ಸಿದ್ಧತೆ ಆರಂಭವಾಗಿಲ್ಲ. ಆದರೆ, ಕ್ಷೇತ್ರಗಳ ಲೆಕ್ಕಾಚಾರ ಸದ್ದಿಲ್ಲದೇ ನಡೆದಿದೆ. ಆದರೆ, ಅಂತಿಮವಾಗಿ ಪಕ್ಷ ಈ ಕ್ಷೇತ್ರದಿಂದ ಯಾರಿಗೆ ಟಿಕೆಟ್ ನೀಡುತ್ತದೆ ಎಂಬುದು ಸ್ಪಷ್ಟವಾಗುವುದಕ್ಕೆ ಇನ್ನೂ ಕೆಲಕಾಲ ಕಾಯಬೇಕಾಗುತ್ತದೆ.
Lok Sabha Elections 2024: 12ಕ್ಕೂ ಹೆಚ್ಚು ಬಿಜೆಪಿ ಸಂಸದರಿಗೆ ಲೋಕಸಭೆ ಚುನಾವಣೆ ಟಿಕೆಟಿಲ್ಲ?
ಡಿವಿಎಸ್ ಕ್ಷೇತ್ರದ ಟಿಕೆಟ್‌ಗೆ ಪೈಪೋಟಿ
- 3 ಹಾಲಿ ಸಂಸದರು, ಓರ್ವ ಮಾಜಿ ಸಚಿವರಿಂದ ಭರ್ಜರಿ ಲಾಬಿ
ಟಾಪ್- ಟವೆಲ್
- ನಾಲ್ವರೂ ಒಕ್ಕಲಿಗರು
ಈ ಕ್ಷೇತ್ರದಲ್ಲಿ ಜಯ ಸುಲಭ ಎಂಬ ಲೆಕ್ಕಾಚಾರ
- ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ 2004ರಿಂದ ಬಿಜೆಪಿ ಹಿಡಿತದಲ್ಲಿದೆ
- 2014, 2019ರ ಚುನಾವಣೆಯಲ್ಲಿ ಡಿ.ವಿ.ಸದಾನಂದಗೌಡ ಇಲ್ಲಿ ಗೆದ್ದಿದ್ದಾರೆ
- ಈ ಬಾರಿ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ವದಂತಿ ದಟ್ಟವಾಗಿ ಹಬ್ಬಿದೆ
- ಹೀಗಾಗಿ ಈ ಕ್ಷೇತ್ರದ ಟಿಕೆಟ್ ಪಡೆಯಲು ನಾಲ್ಕು ಪ್ರಮುಖರಿಂದ ಪೈಪೋಟಿ
- ವಿಧಾನಸಭೆ ಚುನಾವಣೆ ಪರಾಜಿತರಾದ ಓರ್ವ ಮಾಜಿ ಸಚಿವರಿಂದಲೂ ಲಾಬಿ
- ಬಿಜೆಪಿಯ ಹಾಲಿ ಮೂವರು ಸಂಸದರಿಂದಲೂ ಟಿಕೆಟ್ ಪಡೆಯುವ ಯತ್ನ
- ಲೋಕಸಭೆ ಚುನಾವಣೆ ಸಿದ್ಧತೆ ಆರಂಭಕ್ಕೂ ಮುನ್ನವೇ ಕ್ಷೇತ್ರಕ್ಕಾಗಿ ಫೈಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ