
ಬೆಂಗಳೂರು (ಜೂ.5) ರಾಜ್ಯ ಸರ್ಕಾರದ ಮೂರು ಜನವಿರೋಧಿ ನಿರ್ಧಾರಗಳನ್ನು ವಾಪಸ್ ಪಡೆಯಲು ಆಗ್ರಹಿಸಿ ಬಿಜೆಪಿ ವತಿಯಿಂದ ಸೋಮವಾರ ಮತ್ತು ಮಂಗಳವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಎಂದಿದ್ದ ಕಾಂಗ್ರೆಸ್ ಪಕ್ಷ ಈಗ ಷರತ್ತು ವಿಧಿಸಿರುವುದು, ವಿದ್ಯುತ್ ಶುಲ್ಕ ಹೆಚ್ಚಿಸಿರುವುದು ಹಾಗೂ ಹಾಲಿನ ಪ್ರೋತ್ಸಾಹ ಧನ ಕಡಮೆಗೊಳಿಸುವ ನಿರ್ಧಾರಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಈ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಕಟೀಲ್‌ಗೆ ಅಧ್ಯಕ್ಷ ಸ್ಥಾನದಿಂದ ಬಿಜೆಪಿ ನಾಶ: ಸಚಿವ ದರ್ಶನಾಪುರ್ ಆರೋಪ
ಈ ಮುಂಚೆ ಮನೆಗಳಲ್ಲಿ ಪ್ರತಿ ತಿಂಗಳು 70 ಯುನಿಟ್ ವಿದ್ಯುತ್ ಬಳಸುತ್ತಿದ್ದರೆ 80 ಯುನಿಟ್ ಬಳಸಿ. ಆದರೆ, ಯಾವುದೇ ಕಾರಣಕ್ಕೂ 80 ಯೂನಿಟ್ ಮೀರುವಂತಿಲ್ಲ ಎಂಬ ಷರತ್ತು ಅಥವಾ ನಿಬಂಧನೆಯನ್ನು ಸರ್ಕಾರ ಹಾಕಿದೆ. ಹಾಗಿದ್ದರೆ ಈ ಹಿಂದೆ 200 ಯುನಿಟ್ ಎಂದಿದ್ದೀರಲ್ಲವೇ? ಆ ಮಾತನ್ನು ನಡೆಸಿಕೊಡದೆ ಮಾತು ತಪ್ಪಿದವರು ಅಥವಾ ವಚನಭ್ರಷ್ಟತೆ ಆದಂತಲ್ಲವೇ ಎಂದು ಪ್ರಶ್ನಿಸಿದರು.
ವಿದ್ಯುತ್ ಶುಲ್ಕವನ್ನೂ ಏರಿಸಿದ್ದೀರಿ. ಒಂದು ಯುನಿಟ್‌ಗೆ 70 ಪೈಸೆ ಹೆಚ್ಚಿಸಲಾಗಿದೆ. ಅಂದರೆ 80 ಯುನಿಟ್‌ಗೆ 56 ರು. ಹೆಚ್ಚಿಸಿದಂತಾಗಿದೆ. ಹಾಗಿದ್ದರೆ ಸರ್ಕಾರ ಮಾಡಿದ್ದೇನು? ಸರ್ಕಾರ ಒಂದೆಡೆ ಉಚಿತ ಎನ್ನುತ್ತದೆ; ಅದೇ ರೀತಿಯಲ್ಲಿ ಶುಲ್ಕ ಹೆಚ್ಚಿಸಿ ಜನರಿಂದಲೇ ಮತ್ತೆ ವಸೂಲಾತಿ ಮಾಡುತ್ತಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಹೆಚ್ಚಿಸಿದ 70 ಪೈಸೆ ದರವನ್ನು ವಾಪಸ್ ಪಡೆಯಲು ಆಗ್ರಹಿಸುತ್ತೇವೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ದೌರ್ಜನ್ಯ ತಡೆಗೆ ಬಿಜೆಪಿ ಹೆಲ್ಪ್‌ಲೈನ್: ಸಂಸದ ತೇಜಸ್ವಿ ಸೂರ್ಯ
ಹಾಲು ಉತ್ಪಾದನೆಯಿಂದ ಜೀವನ ಮಾಡುವ ಲಕ್ಷಾಂತರ ಕುಟುಂಬಗಳು ರಾಜ್ಯದಲ್ಲಿವೆ. ಅವರಿಗೆ ಸಹಾಯ ಮಾಡಬೇಕೆಂಬ ದೃಷ್ಟಿಯಿಂದ ಹಾಲಿನ ಪ್ರೋತ್ಸಾಹಧನವನ್ನು ಪ್ರತಿ ಲೀಟರ್‌ಗೆ 5 ರು.ಗೆ ಬಿಜೆಪಿ ಸರ್ಕಾರ ಹೆಚ್ಚಿಸಿತ್ತು. ಅದನ್ನು 1.5 ರು. ಕಡಿಮೆ ಮಾಡಿದ್ದೀರಿ. ಇದರಿಂದ ಸರ್ಕಾರಕ್ಕೆ ಹಣ ಉಳಿತಾಯ ಆಗುತ್ತಿದೆ. ಹಾಗಿದ್ದರೆ ನೀವು ಬಡವರಿಗೆ ಏನು ಸಹಾಯ ಮಾಡಿದಂತಾಯಿತು? ಬಡವರಿಗೆ ಹೇಗೆ ನೆರವಾದಂತಾಯಿತು ಎಂದು ಕೇಳಿದರು. ಹಾಲು ಉತ್ಪಾದಕರಿಗೆ ದೊಡ್ಡ ಹೊಡೆತ ಬಿದ್ದಿದೆ. ಇದನ್ನು ಬದಲಿಸಿ ಹಿಂದಿನಂತೆ ಪ್ರೋತ್ಸಾಹಧನ ನೀಡಬೇಕು ಎಂದು ರವಿಕುಮಾರ್ ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ