ಹಾಲು ದರ ಕಡಿತ ಮಾಡದಂತೆ ಕೆಎಂಎಫ್‌ಗೆ ಸಿಎಂ ಸಿದ್ದರಾಮಯ್ಯ ತಾಕೀತು

By Kannadaprabha NewsFirst Published Jun 5, 2023, 3:40 AM IST
Highlights

ರೈತರಿಂದ ಖರೀದಿಸುವ ಹಾಲಿಗೆ ನಿಗದಿಪಡಿಸಿರುವ ದರ ಕಡಿತ ಮಾಡಿದ್ದ ಹಾಲು ಒಕ್ಕೂಟಗಳ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದರ ಕಡಿಮೆ ಮಾಡದಂತೆ ಕೆಎಂಎಫ್‌ಗೆ ತಾಕೀತು ಮಾಡಿದ್ದಾರೆ. 

ಬೆಂಗಳೂರು (ಜೂ.05): ರೈತರಿಂದ ಖರೀದಿಸುವ ಹಾಲಿಗೆ ನಿಗದಿಪಡಿಸಿರುವ ದರ ಕಡಿತ ಮಾಡಿದ್ದ ಹಾಲು ಒಕ್ಕೂಟಗಳ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದರ ಕಡಿಮೆ ಮಾಡದಂತೆ ಕೆಎಂಎಫ್‌ಗೆ ತಾಕೀತು ಮಾಡಿದ್ದಾರೆ. ಹಾಲು ಉತ್ಪಾದನೆ ಹೆಚ್ಚಳ ಕಾರಣ ನೀಡಿ ಬಮೂಲ್‌ ರೈತರಿಗೆ ನೀಡುವ ಹಾಲಿನ ದರ ಕಡಿತ ಮಾಡಿತ್ತು. ಇದಕ್ಕೂ ಮೊದಲು ಮೇ 26ರಂದು ನಡೆದ ಮಂಡಳಿ ಸಭೆಯಲ್ಲಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್ಮುಲ್‌) ಕೂಡ ಪ್ರತಿ ಲೀಟರ್‌ಗೆ ಒಂದು ರು. ಕಡಿತ ಮಾಡಿ ಆದೇಶ ಹೊರಡಿಸಿತ್ತು. ಕಾಂಗ್ರೆಸ್‌ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರತಿ ಲೀಟರ್‌ಗೆ ರೈತರಿಗೆ ನೀಡುವ ಪ್ರೋತ್ಸಾಹ ಧನವನ್ನು ಐದು ರು.ಗಳಿಂದ ಏಳು ರು.ಗಳಿಗೆ ಹೆಚ್ಚಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದಿದೆ. 

ಇದೀಗ ಹಾಲು ಒಕ್ಕೂಟಗಳು ಏಕಾಏಕಿ ದರ ಕಡಿಮೆ ಮಾಡಿದ್ದರಿಂದ ಸರ್ಕಾರಕ್ಕೆ ಮುಜುಗರ ಉಂಟಾಗುವ ಸನ್ನಿವೇಶ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಸಿದ್ದರಾಮಯ್ಯ ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್‌) ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿ, ರೈತರಿಂದ ಖರೀದಿಸುವ ಹಾಲಿಗೆ ನಿಗದಿಪಡಿಸಿರುವ ದರದಲ್ಲಿ ಯಾವುದೇ ಕಡಿತ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಏಕಾಏಕಿ ದರ ಕಡಿತ ಮಾಡುವಂತಿಲ್ಲ. ಈ ಕುರಿತು ಸರ್ಕಾರದ ಜೊತೆ ಚರ್ಚಿಸಬೇಕು. ದರ ಕಡಿತ ಮಾಡಿದರೆ ರೈತರಿಗೆ ತೊಂದರೆಯಾಗುತ್ತದೆ. ಈ ಅಂಶವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ತರಾಟೆಗೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ.

ಕಾಡು ಪ್ರಾಣಿಗಳ ದಾಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಿ: ಎಚ್‌.ಡಿ.ಕುಮಾರಸ್ವಾಮಿ

ಒಡಿಶಾದಲ್ಲಿ ಸಿಲುಕಿದ ಕನ್ನಡಿಗರಿಗೆ ಸಿಎಂ ಧೈರ್ಯ: ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸಚಿವ ಸಂತೋಷ್‌ ಲಾಡ್‌ ಅವರನ್ನು ನಿಯೋಜಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಒಡಿಶಾದಲ್ಲಿ ಸಿಲುಕಿರುವ ಕನ್ನಡಿಗರನ್ನು ಮಾತನಾಡಿ ಧೈರ್ಯ ತುಂಬಿದರು. ಒಡಿಶಾದಲ್ಲಿನ ಕನ್ನಡಿಗರ ಜತೆಗೆ ದೂರವಾಣಿ ಮೂಲಕ ಮಾತನಾಡಿದ ಅವರು, ‘ನಿಮಗೆ ಯಾವುದೇ ಸಮಸ್ಯೆಯಾದರೂ ಸಚವರು ಹಾಗೂ ಅಧಿಕಾರಿಗಳಿಗೆ ಕರೆ ಮಾಡಿ. ಯಾರಾದರೂ ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿದ್ದರೆ ಕೂಡಲೇ ಮಾಹಿತಿ ನೀಡಿ. 

ನಿಮ್ಮ ನೆರವಿಗೆ ಸರ್ಕಾರದ ಪ್ರತಿನಿಧಿಗಳು ಈಗಾಗಲೇ ಅಲ್ಲಿಗೆ ಬಂದಿದ್ದಾರೆ. ಏನೇ ಸಮಸ್ಯೆಯಿದ್ದರೂ ಹಂಚಿಕೊಂಡು ಸುರಕ್ಷಿತವಾಗಿ ಬನ್ನಿ’ ಎಂದು ಧೈರ್ಯ ತುಂಬಿದರು. ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ದುರಂತದ ಹಿನ್ನೆಲೆಯಲ್ಲಿ ಕನ್ನಡಿಗರ ರಕ್ಷಣೆಗಾಗಿ ಸಚಿವ ಸಂತೋಷ್‌ ಲಾಡ್‌ ಅವರನ್ನು ಘಟನಾ ಸ್ಥಳಕ್ಕೆ ನಿಯೋಜಿಸಲಾಗಿದೆ. ರೈಲು ದುರಂತದಲ್ಲಿ ಸುಮಾರು 300 ಜನರು ಮರಣ ಅಸುನೀಗಿರುವುದು ದುರದೃಷ್ಟಕರ. ಅಪಘಾತದ ಸುದ್ದಿಯಿಂದ ಅತೀವ ನೋವಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ. 

ಕರ್ನಾಟಕವನ್ನು ಕಾಂಗ್ರೆಸ್‌ ಭಿಕ್ಷಾ ರಾಜ್ಯವನ್ನಾಗಿ ಮಾಡುತ್ತಿದೆ: ಸಂಸದ ಪ್ರತಾಪ್‌ ಸಿಂಹ

ಜತೆಗೆ ರೈಲ್ವೆ ಇಲಾಖೆಯವರು ಅಪಘಾತದ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು. ಅಪಘಾತದಲ್ಲಿ ಕನ್ನಡಿಗರ ಸಾವು ನೋವು ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಘಟನೆಯ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಪ್ರಾಥಮಿಕ ಮಾಹಿತಿ ಪಡೆದುಕೊಂಡು, ಕನ್ನಡಿಗರ ರಕ್ಷಣೆ ಹಾಗೂ ಅಗತ್ಯ ನೆರವು ಒದಗಿಸಲು ಸಚಿವರು ತೆರಳಿದ್ದಾರೆ. ಕನ್ನಡಿಗರಿಗೆ ಅಗತ್ಯವಿರುವ ಎಲ್ಲಾ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

click me!