ಮದ್ಯ ಮಾರಾಟದಲ್ಲಿ ಏರಿಕೆ : ಬೇರೆಲ್ಲಕ್ಕಿಂತಲೂ ಚೇತರಿಕೆ!

By Kannadaprabha NewsFirst Published Sep 11, 2020, 9:47 AM IST
Highlights

ಕೊರೋನಾ ಲಾಕ್‌ ಡೌನ್‌ ಬಳಿಕ ಬೇರೆಲ್ಲಾ ಕ್ಷೇತ್ರಗಳಿಗಿಂತ ಮದ್ಯ ಮಾರಾಟ ಕ್ಷೇತ್ರದಲ್ಲಿಯೇ ಚೇತರಿಕೆ ಕಂಡು ಬಂದಿದೆ. 

ವರದಿ : ಲಿಂಗರಾಜು ಕೋರಾ

 ಬೆಂಗಳೂರು (ಸೆ.11):  ರಾಜ್ಯದಲ್ಲಿ ಬೇರೆಲ್ಲಾ ಕ್ಷೇತ್ರಗಳಿಗಿಂತ ಮದ್ಯ ಮಾರಾಟದಲ್ಲಿ ಸಾಕಷ್ಟುಚೇತರಿಕೆ ಕಂಡುಬಂದಿದೆ. ಲಾಕ್‌ಡೌನ್‌ ನಡುವೆಯೂ ಪ್ರಸಕ್ತ ಹಣಕಾಸು ವರ್ಷದ ಕಳೆದ ಮದ್ಯ ಮಾರಾಟದಿಂದ ಇದುವರೆಗೆ (ಏಪ್ರಿಲ್‌ 1ರಿಂದ ಸೆ.9) ಒಟ್ಟು 8372 ಕೋಟಿ ರು. ಅಬಕಾರಿ ಆದಾಯ ಸರ್ಕಾರದ ಬೊಕ್ಕಸಕ್ಕೆ ಹರಿದು ಬಂದಿದೆ.

ಕಳೆದ ವರ್ಷ ಇದೇ ಅವಧಿವರೆಗೆ ರಾಜ್ಯದಲ್ಲಿ ಒಟ್ಟು 9,599 ಕೋಟಿ ರು. ಆದಾಯ ಸಂಗ್ರಹವಾಗಿತ್ತು. ಈ ಆದಾಯದ ಮೊತ್ತಕ್ಕೆ ಹೋಲಿಸಿದರೆ ಈ ವರ್ಷ ಇದುವರೆಗೆ 1,225.68 ಕೋಟಿ ರು. (ಶೇ.12ರಷ್ಟು) ಆದಾಯ ಕಡಿಮೆಯಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಏಪ್ರಿಲ್‌ ತಿಂಗಳಾದ್ಯಂತ ಮದ್ಯ ಮಾರಾಟ ನಡೆಯದಿರುವುದು ಆದಾಯ ಕುಸಿತಕ್ಕೆ ಕಾರಣವಾಗಿದೆ. ಆದರೆ, ನಂತರದ ತಿಂಗಳುಗಳಲ್ಲಿ ಮದ್ಯ ಮಾರಾಟ ಸಾಕಷ್ಟುಚೇತರಿಕೆ ಕಂಡುಬಂದಿರುವುದು ಅಬಕಾರಿ ಇಲಾಖೆಯಲ್ಲಿ ವಷಾಂತ್ಯದ ವೇಳೆಗೆ ನಿರೀಕ್ಷಿತ ಆದಾಯ ಸಂಗ್ರಹದ ಗುರಿ ಮುಟ್ಟುವ ಆಶಾಭಾವನೆ ಮೂಡಿಸಿದೆ.

ರಾಜ್ಯದಲ್ಲಿ ಮನೆ ಬಾಗಿಲಿಗೆ ಬರುತ್ತಾ ಮದ್ಯ..? ...

ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಮಾ.23ರಿಂದ ಲಾಕ್‌ಡೌನ್‌ ಜಾರಿಗೊಳಿಸಿದ್ದ ಸರ್ಕಾರ 41 ದಿನಗಳ ಬಳಿಕ ಸಡಿಲಗೊಳಿಸಿ ಮೇ 4ರಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಿತ್ತು. ಇದರಿಂದ ಪ್ರಸಕ್ತ ಆರ್ಥಿಕ ವರ್ಷದ ಮೊದಲ ತಿಂಗಳು ಏಪ್ರಿಲ್‌ನಲ್ಲಿ ಯಾವುದೇ ಮದ್ಯ ಮಾರಾಟ ನಡೆದಿರಲಿಲ್ಲ. ಇದರಿಂದ ಆ ತಿಂಗಳು ಸರ್ಕಾರಕ್ಕೂ ಒಂದು ರು. ಕೂಡ ಅಬಕಾರಿ ಆದಾಯ ಸಂಗ್ರವಾಗಿರಲಿಲ್ಲ. ಆ ನಂತರ ಮೇ ಯಿಂದ ಆಗಸ್ಟ್‌ ತಿಂಗಳವರೆಗೆ ಒಟ್ಟು 7826 ಕೋಟಿ ರು. ಆದಾಯ ಹರಿದು ಬಂದಿದೆ. ಪ್ರಸಕ್ತ ಸೆಪ್ಟೆಂಬರ್‌ ಮೊದಲ ವಾರದಲ್ಲಿ 791 ಕೋಟಿ ರು.ನಷ್ಟುಆದಾಯ ಬಂದಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಲವಂತವಾಗಿ ಮದ್ಯ ಕುಡಿಸುತ್ತಿದ್ದ ಪತಿ: ಬೇಸತ್ತ ಪತ್ನಿ ಮಾಡಿದ್ದೇನು? .

ಅದರಲ್ಲೂ ಕಳೆದ ನಾಲ್ಕು ತಿಂಗಳುಗಳಿಗಿಂತ ಸೆಪ್ಟಂಬರ್‌ನಲ್ಲಿ ಹೆಚ್ಚಿನ ಆದಾಯದ ನಿರೀಕ್ಷೆ ಮಾಡಲಾಗುತ್ತಿದೆ. ಏಕೆಂದರೆ ಈ ತಿಂಗಳ ಮೊದಲ ಒಂಬತ್ತು ದಿನಗಳಲ್ಲೇ 791.54 ಕೋಟಿ ರು. ಆದಾಯ ಬಂದಿದೆ. ಕಳೆದ ಬಾರಿ ಇದೇ ದಿನಗಳಲ್ಲಿ ಕೇಲವ 467.43 ಕೋಟಿ ರು. ಆದಾಯ ಬಂದಿತ್ತು. ಹಾಗಾಗಿ ಈ ತಿಂಗಳು ಅಂದಾಜಿಗಿಂತ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿ ಇಲಾಖೆ ಇದೆ.

ಒಟ್ಟಾರೆ ಆದಾಯ ಕುಸಿತ ಭೀತಿ:

ಸರ್ಕಾರ ಕಳೆದ ವರ್ಷದ ಬಜೆಟ್‌ನಲ್ಲಿ ಅಬಕಾರಿ ಇಲಾಖೆಯಿಂದ 20,950 ಕೋಟಿ ರು. ಆದಾಯದ ನಿರೀಕ್ಷೆ ಮಾಡಿತ್ತು. ಆದರೆ, ವಷಾಂತ್ಯದ ವೇಳೆಗೆ ನಿರೀಕ್ಷೆಗೂ ಹೆಚ್ಚು 21,583 ಕೋಟಿ ರು. ಆದಾಯ ಸಂಗ್ರಹವಾಗಿತ್ತು. ಈ ಹಿನ್ನೆಲೆಯಲ್ಲಿ ಈ ವರ್ಷ 22700 ಕೋಟಿ ರು. ಆದಾಯ ನಿರೀಕ್ಷೆ ಮಾಡಿದೆ. ಆದರೆ, ಕಳೆದ ಐದು ತಿಂಗಳಲ್ಲಿ 8,372 ಕೋಟಿ ರು. ಬಂದಿದ್ದು, ವಷಾಂತ್ಯದ ವೇಳೆಗೆ ಇನ್ನೂ 14,328 ಕೋಟಿ ರು. ಆದಾಯ ಸಂಗ್ರಹವಾಗಬೇಕಿದೆ. ಮದ್ಯ ಮಾರಾಟ ತಿಂಗಳಿಂದ ತಿಂಗಳಿಗೆ ಏರಿಕೆಯಾಗುತ್ತಿರುವುದು ಒಂದೆಡೆ ಆಶಾಭಾವನೆ ಮೂಡಿಸಿರುವ ಜೊತೆಗೆ, ಲಾಕ್‌ಡೌನ್‌ ನಿಂದ ಏಪ್ರಿಲ್‌ ತಿಂಗಳಲ್ಲಿ ಆಗಿರುವ ಸಾವಿರಾರು ಕೋಟಿ ರು. ಆದಾಯ ಖೋತಾ ಸರಿದೂಗಿಸಿಕೊಂಡು ಉಳಿದ ಸುಮಾರು ಏಳು ತಿಂಗಳಲ್ಲಿ ನಿರೀಕ್ಷಿತ ಆದಾಯ ಗುರಿ ಮುಟ್ಟಲು ಸಾಧ್ಯವೇ ಎಂಬ ಸಂಶಯವೂ ಅಧಿಕಾರಿಗಳಲ್ಲಿದೆ.

ಐಎಂಎಲ್‌ ಶೇ.18, ಬಿಯರ್‌ ಶೇ.47 ಮಾರಾಟ ಕುಸಿತ

ಅಬಕಾರಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಈ ವರ್ಷ ಏಪ್ರಿಲ್‌ನಿಂದ ಸೆ.9ರವರೆಗೆ 213.86 ಲಕ್ಷ ಕೇಸ್‌ ದೇಸಿ ಮದ್ಯ(ಐಎಂಎಲ್‌), 69.36 ಲಕ್ಷ ಕೇಸ್‌ ಬಿಯರ್‌ ಮಾರಾಟ ನಡೆದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 262.79 ಲಕ್ಷ ಕೇಸ್‌ ಐಎಂಎಲ್‌, 132.83 ಲಕ್ಷ ಕೇಸ್‌ ಬಿಯರ್‌ ಮಾರಾಟವಾಗಿತ್ತು. ಹಾಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಐಎಂಎಲ್‌ ಮಾರಾಟ ಶೇ.18.62ರಷ್ಟು, ಬಿಯರ್‌ ಮಾರಾಟದಲ್ಲಿ ಶೇ.47.78ರಷ್ಟುಕುಸಿತವಾಗಿದೆ.

ಪ್ರತಿ ತಿಂಗಳ ವಹಿವಾಟು ನೋಡುವುದಾದರೆ ಏಪ್ರಿಲ್‌ನಲ್ಲಿ ಶೂನ್ಯ, ಮೇನಲ್ಲಿ 1387.20 ಕೋಟಿ ರು., ಜೂನ್‌ನಲ್ಲಿ 2495.56 ಕೋಟಿ ರು. , ಜುಲೈನಲ್ಲಿ 1904.73 ಕೋಟಿ ರು., ಆಗಸ್ಟ್‌ನಲ್ಲಿ 1,828 ಕೋಟಿ ರು. ಆದಾಯ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮೇನಲ್ಲಿ ಶೇ.32.42ರಷ್ಟುಕಡಿಮೆ, ಜೂನ್‌ನಲ್ಲಿ ಶೇ.2.28ರಷ್ಟುಹೆಚ್ಚು, ಜುಲೈನಲ್ಲಿ ಏ.12.91ರಷ್ಟುಹೆಚ್ಚು, ಆಗಸ್ಟ್‌ನಲ್ಲಿ ಶೇ.8.57 ರಷ್ಟುಹೆಚ್ಚು ಆದಾಯ ಬಂದಿದೆ. ಇನ್ನು, ಸೆಪ್ಟಂಬರ್‌ನಲ್ಲಿ ತಿಂಗಳ ಮೊದಲ ಒಂಬತ್ತು ದಿನಗಳಲ್ಲಿ 14.98 ಲಕ್ಷ ಲೀಟರ್‌ ಐಎಂಎಲ್‌, 6.36 ಲಕ್ಷ ಬಿಯರ್‌ ಮಾರಾಟವಾಗಿದ್ದು, 791.54 ಕೋಟಿ ರು. ಆದಾಯ ಬಂದಿದೆ.

click me!