ರಾಜ್ಯದ 130 ತಾಲೂಕು ನೆರೆಪೀಡಿತ ಎಂದು ಘೋಷಣೆ

By Kannadaprabha NewsFirst Published Sep 11, 2020, 9:25 AM IST
Highlights

ಆಗಸ್ಟ್‌ ತಿಂಗಳಲ್ಲಿ ಸುರಿದ ಮಹಾಮಳೆಗೆ ಸಿಲುಕಿದ್ದ 23 ಜಿಲ್ಲೆಗಳ 130 ತಾಲೂಕುಗಳನ್ನು ಅತಿವೃಷ್ಟಿಹಾಗೂ ಪ್ರವಾಹ ಪೀಡಿತ ತಾಲೂಕುಗಳನ್ನಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. 

ಬೆಂಗಳೂರು (ಸೆ.11):  ರಾಜ್ಯದಲ್ಲಿ ಆಗಸ್ಟ್‌ ತಿಂಗಳಲ್ಲಿ ಸುರಿದ ಮಹಾಮಳೆಗೆ ಸಿಲುಕಿದ್ದ 23 ಜಿಲ್ಲೆಗಳ 130 ತಾಲೂಕುಗಳನ್ನು ಅತಿವೃಷ್ಟಿಹಾಗೂ ಪ್ರವಾಹ ಪೀಡಿತ ತಾಲೂಕುಗಳನ್ನಾಗಿ ಘೋಷಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಆಗಸ್ಟ್‌ ತಿಂಗಳಲ್ಲಿ ರಾಜ್ಯದಲ್ಲಿ ಸುರಿದ ಮಹಾಮಳೆ ಹಾಗೂ ಮಹಾರಾಷ್ಟ್ರದಲ್ಲಿನ ಕೃಷ್ಣಾ ಕಣಿವೆ ಜಲಾಶಯಗಳು ತುಂಬಿ ಹರಿದಿದ್ದರಿಂದ ಉಂಟಾದ ಪ್ರವಾಹ ಪರಿಸ್ಥಿತಿ ಹಾಗೂ ಇದೇ ಅವಧಿಯಲ್ಲಿ ರಾಜ್ಯದ ಕರಾವಳಿ, ಮಲೆನಾಡಿನ ಜಿಲ್ಲೆಗಳಲ್ಲಿ ಉಂಟಾದ ಪ್ರವಾಹಕ್ಕೆ ಸಿಲುಕಿ 130 ತಾಲೂಕುಗಳಲ್ಲಿ ನೆರೆ ಹಾನಿ ಉಂಟಾಗಿದೆ. ಜೀವ ಹಾನಿ, ಮನೆ, ಬೆಳೆ ಹಾಗೂ ಸಾರ್ವಜನಿಕ ಮೂಲಸೌಕರ್ಯಗಳಿಗೆ ತೀವ್ರ ಹಾನಿಯಾಗಿದೆ.

ನಿಯಮ ಮೀರಿ ಹೆಚ್ಚು ನೆರವಿಗೆ ಕೇಂದ್ರಕ್ಕೆ ರಾಜ್ಯ ಮನವಿ ...

ಹೀಗಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಪ್ರಸಕ್ತ ಸಾಲಿನ ಮುಂಗಾರು ಋುತುವಿನಲ್ಲಿ 23 ಜಿಲ್ಲೆಗಳ 130 ತಾಲೂಕುಗಳನ್ನು ಅತಿವೃಷ್ಟಿಪೀಡಿತ ಎಂದು ಘೋಷಿಸಿದೆ. ಈ ತಾಲೂಕುಗಳಲ್ಲಿ ಎಸ್‌ಡಿಆರ್‌ಎಫ್‌ ಹಾಗೂ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಹಾಗೂ ಸರ್ಕಾರ ಹೊರಡಿಸುವ ಆದೇಶಗಳ ಅನ್ವಯ ಪರಿಹಾರ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಕಂದಾಯ ಇಲಾಖೆ ಸೂಚನೆ ನೀಡಿದೆ.

23 ಜಿಲ್ಲೆ, 130 ತಾಲೂಕುಗಳು :  ದಾವಣಗೆರೆ ಜಿಲ್ಲೆಯ 3 ತಾಲೂಕು, ಚಾಮರಾಜನಗರದ 1, ಮಂಡ್ಯದ 3, ಬಳ್ಳಾರಿಯ 6, ಕೊಪ್ಪಳದ 3, ರಾಯಚೂರಿನ 5, ಕಲಬುರಗಿಯ 9, ಯಾದಗಿರಿಯ 5, ಬೀದರ್‌ನ 4, ಬೆಳಗಾವಿಯ 13, ಬಾಗಲಕೋಟೆಯ 9, ವಿಜಯಪುರ 4, ಗದಗ 4, ಹಾವೇರಿ 6, ಧಾರವಾಡ 7, ಶಿವಮೊಗ್ಗ 7, ಹಾಸನ 5, ಚಿಕ್ಕಮಗಳೂರು 6, ಕೊಡಗು 3, ದಕ್ಷಿಣ ಕನ್ನಡ 6, ಉಡುಪಿಯ 7 ತಾಲೂಕಗಳನ್ನು ನೆರೆಪೀಡಿತ ತಾಲೂಕುಗಳಾಗಿ ಘೋಷಿಸಲಾಗಿದೆ.

click me!