ವಿಧಾನಸೌಧ ಆಧುನಿಕ ಅನುಭವ ಮಂಟಪವಾಗಲಿ: ಸಿಎಂ ಬೊಮ್ಮಾಯಿ

By Kannadaprabha NewsFirst Published Mar 27, 2023, 11:47 AM IST
Highlights

ರಾಜ್ಯ ಏಕೀಕರಣಗೊಂಡ ಮೊದಲ ಹತ್ತು ವರ್ಷಗಳಲ್ಲಿಯೇ ವಿಧಾನಸೌಧದ ಮುಂಭಾಗದಲ್ಲಿ ಬಸವಣ್ಣ ಹಾಗೂ ಕೆಂಪೇಗೌಡರ ಪ್ರತಿಮೆಗಳ ಸ್ಥಾಪನೆಯಾಗಬೇಕಿತ್ತು. ಆದರೆ ಇಷ್ಟುದಿನ ತೆಗೆದುಕೊಂಡಿದ್ದಕ್ಕೆ ಯಾರನ್ನೂ ದೂಷಿಸಲ್ಲ.

ಬೆಂಗಳೂರು (ಮಾ.27): ರಾಜ್ಯ ಏಕೀಕರಣಗೊಂಡ ಮೊದಲ ಹತ್ತು ವರ್ಷಗಳಲ್ಲಿಯೇ ವಿಧಾನಸೌಧದ ಮುಂಭಾಗದಲ್ಲಿ ಬಸವಣ್ಣ ಹಾಗೂ ಕೆಂಪೇಗೌಡರ ಪ್ರತಿಮೆಗಳ ಸ್ಥಾಪನೆಯಾಗಬೇಕಿತ್ತು. ಆದರೆ ಇಷ್ಟು ದಿನ ತೆಗೆದುಕೊಂಡಿದ್ದಕ್ಕೆ ಯಾರನ್ನೂ ದೂಷಿಸಲ್ಲ. ನಮ್ಮ ನಮ್ಮ ಆತ್ಮಸಾಕ್ಷಿಗಳಿಗೆ ಬಿಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಾವು ಕೇವಲ 75 ದಿನಗಳಲ್ಲಿ ಈ ಪ್ರತಿಮೆಗಳನ್ನು ನಿರ್ಮಾಣ ಮಾಡಿದ್ದೇವೆ. ವಿಧಾನಸೌಧ ಆಧುನಿಕ ಅನುಭವ ಮಂಟಪ. 12ನೇ ಶತಮಾನದ ಅನುಭವ ಮಂಟಪದ ತತ್ವ ಆದರ್ಶ, ವೈಚಾರಿಕತೆಗಳು ಇಲ್ಲಿ ಇನ್ನಷ್ಟು ಸಾಕಾರಗೊಳ್ಳಲಿ. 

ಈ ಪ್ರತಿಮೆಗಳು ಹೈಕೋರ್ಟ್‌ ಎದುರಿಗೆ ನಿಂತಿವೆ. ಅಲ್ಲಿಯೂ ಅವರ ತತ್ವ ಆದರ್ಶ, ವಿಚಾರಗಳು ನಿರಂತರವಾಗಿ ಸಾಗಲಿ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ದೂರದೃಷ್ಟಿಯ ಬುನಾದಿ ಹಾಕಿದ ನಾಡಪ್ರಭು ಕೆಂಪೇಗೌಡರ ಆದರ್ಶಗಳು ಸದಾ ಕಾಲ ನಮಗೆ ಸ್ಫೂರ್ತಿಯಾಗಲಿವೆ ಎಂದರು. ಈ ಪ್ರತಿಮೆಗಳನ್ನು ನಿರ್ಮಿಸುವ ಉಸ್ತುವಾರಿ ಹೊತ್ತಿದ್ದ ಸಚಿವ ಆರ್‌.ಅಶೋಕ್‌, ಪ್ರತಿಮೆಗಳನ್ನು ನಿರ್ಮಿಸಿದ ಜಾಹ್ನವಿ ಕಲಾ ಸಂಸ್ಥೆ ಹಾಗೂ ಸಿವಿಲ್ ಕಾಮಗಾರಿ ಪೂರ್ಣಗೊಳಿಸಿದ ತಂಡಗಳನ್ನು ಅಭಿನಂದಿಸಿದರು.

ಮೀಸಲಾತಿ ವಿಚಾರದಲ್ಲಿ ನಾನು ಸ್ವಾಮೀಜಿಗಳಿಗೆ ಒತ್ತಡ ಹಾಕಿಲ್ಲ: ಸಿಎಂ ಬೊಮ್ಮಾಯಿ

ವರ್ಷಗಳ ಕನಸು ಸಾಕಾರ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಬಸವೇಶ್ವರ ಹಾಗೂ ಕೆಂಪೇಗೌಡರ ಪ್ರತಿಮೆಗಳನ್ನು ವಿಧಾನಸೌಧದ ಎದುರು ಸ್ಥಾಪಿಸಬೇಕೆಂಬುದು ನನ್ನ ಬಹಳವರ್ಷಗಳ ಕನಸಾಗಿತ್ತು. ಅದು ಇಂದು ನನಸಾಗಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. 12ನೇ ಶತಮಾನದಲ್ಲಿಯೇ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣನವರು ಜನಿಸಿದ ಈ ನಾಡಿನಲ್ಲಿ ಜನಿಸಿರುವ ನಾವೆಲ್ಲ ಪುಣ್ಯವಂತರು. ಬೆಂಗಳೂರು ಕಟ್ಟಿದ ಕೆಂಪೇಗೌಡರು ಹಲವಾರು ಕೆರೆ, ಕಟ್ಟೆಗಳನ್ನು ನಿರ್ಮಿಸಿ ದೂರದೃಷ್ಟಿಯ ಮೂಲಕ ಬೆಂಗಳೂರು ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದರು. ಈ ಮಹಾನ್‌ ನಾಯಕರ ತತ್ವ, ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಪಾಲಿಸಬೇಕು ಎಂದರು.

ಇದೊಂದು ಐತಿಹಾಸಿಕ ದಿನ: ವಿಧಾನಸೌಧದ ಮುಂಭಾಗ ಬಸವೇಶ್ವರ ಮತ್ತು ಕೆಂಪೇಗೌಡರ ಪ್ರತಿಮೆಗಳನ್ನು ಸ್ಥಾಪಿಸಬೇಕೆಂಬುದು 2010ರಿಂದಲೇ ನನ್ನ ಕನಸಾಗಿತ್ತು. ಅದು ಈಗ ಈಡೇರಿದೆ. ಇಡೀ ನಾಡಿಗೆ ಇದೊಂದು ಐತಿಹಾಸಿಕ ದಿನ ಎಂದು ಪುತ್ಥಳಿಗಳ ಸ್ಥಾಪನಾ ಉಸ್ತುವಾರಿ ಸಮಿತಿ ಅಧ್ಯಕ್ಷರೂ ಆದ ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು. ಬಸವೇಶ್ವರರು ಮತ್ತು ಕೆಂಪೇಗೌಡರು ನಾಡಿನ ಮಹಾಪುರುಷರು, ಅಪ್ಪಟ ಕನ್ನಡಿಗರು. ಈ ರಾಜ್ಯದಲ್ಲಿ ಆಡಳಿತ ನಡೆಸಿದ ಅನೇಕ ಮಂದಿ ಅವರ ಹೆಸರಲ್ಲಿ ಮತ ರಾಜಕೀಯ ನಡೆಸಿದರು. 

ಆದರೆ, ಅವರ ಪ್ರತಿಮೆಗಳನ್ನು ನಿರ್ಮಾಣ ಮಾಡುವ ಕೆಲಸ ಮಾಡಲಿಲ್ಲ ಏಕೆ? ಆದರೆ ನಮ್ಮ ಸರ್ಕಾರ ಹಾಗೆ ಮಾಡಲಿಲ್ಲ. ತೀರ್ಮಾನ ಆದ ಒಂದೇ ತಿಂಗಳಲ್ಲಿ ನಿರ್ಮಾಣ ಮಾಡಿ ಅನಾವರಣ ಮಾಡಿದ್ದೇವೆ. ನಮ್ಮ ‘ಕಾಮನ್‌ ಮ್ಯಾನ್‌’ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಹಾಪುರುಷರ ಪ್ರತಿಮೆಗಳ ಸ್ಥಾಪನೆಗೆ ಅಗತ್ಯ ಸಹಕಾರ ನೀಡಿದರು. ಇದಕ್ಕಾಗಿ ಅವರಿಗೆ ಹಾಗೂ ಸಹಕಾರ, ಪ್ರೀತಿ ತೋರಿದ ಬೆಂಗಳೂರಿನ ನಾಗರಿಕರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.

ದಯವೇ ಧರ್ಮದ ಮೂಲವಯ್ಯ ಎಂದು ಸಾರಿದವರು ಬಸವೇಶ್ವರರು. ಆ ದಯೆ ಮತ್ತು ಧರ್ಮ ಎರಡನ್ನೂ ಮೈಗೂಡಿಸಿಕೊಂಡು ನಾಡು ಕಟ್ಟಿದವರು ಕೆಂಪೇಗೌಡರು. ಇಂತಹ ಇಬ್ಬರೂ ಮಹಾಪುರುಷರ ಪ್ರತಿಮೆಗಳನ್ನು ವಿಧಾನಸೌಧದ ಮುಂದೆ ಸ್ಥಾಪಿಸಬೇಕೆಂದು ಮನವಿ ಮಾಡಿದಾಗ ಒಪ್ಪಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಟ್ಟಮಾತಿನಂತೆ ನಡೆದುಕೊಂಡಿದ್ದಾರೆ.
- ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ

ಮೀಸಲಾತಿ ಒಪ್ಪುವಂತೆ ಶ್ರೀಗಳಿಗೆ ಸರ್ಕಾರದ ಬೆದರಿಕೆ: ಡಿ.ಕೆ.ಶಿವಕುಮಾರ್‌

ಯಾವುದೇ ಸರ್ಕಾರದಲ್ಲಿ ಆದ ಭೂಮಿ ಪೂಜೆಯ ಯೋಜನೆ ಅದೇ ಸರ್ಕಾರದಲ್ಲಿ ಪೂರ್ಣಗೊಳ್ಳುವುದು ಕಷ್ಟ. ಆದರೆ, ಬಸವರಾಜ ಬೊಮ್ಮಾಯಿ ಅವರು ಬಸವೇಶ್ವರರು ಮತ್ತು ಕೆಂಪೇಗೌಡರ ಪ್ರತಿಮೆಗಳ ನಿರ್ಮಾಣಕ್ಕೆ ಅವರೇ ಭೂಮಿಪೂಜೆ ಮಾಡಿ ಅನಾವರಣ ಮಾಡಿಸಿದ್ದಾರೆ. ಯಡಿಯೂರಪ್ಪ ಅವರು ಈ ಕಾರ್ಯಕ್ಕೆ ಚಾಲನೆ ಕೊಟ್ಟವರು. ಕಾಯಕ ಮಾಡಿ ಬಂದಿದ್ದನ್ನು ದಾಸೋಹ ಮಾಡಿದರೆ ಅದು ಬದುಕಿನ ಶ್ರೇಷ್ಠತೆ ಎಂದು ಹೇಳಿದ್ದಾರೆ. ಈ ಅರಿವು ವಿಧಾನಸೌಧದ ಒಳಗಿರುವ ಎಲ್ಲರಲ್ಲೂ ಮೂಡಲಿ.
- ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ

click me!