Uttara Kannada: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಇನ್ನೂ ಸಲ್ಲಿಕೆಯಾಗಿಲ್ಲ ಪ್ರಸ್ತಾವನೆ!

By Govindaraj S  |  First Published Dec 3, 2022, 1:00 AM IST

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಹೋರಾಟಗಳು ನಡೆದಿತ್ತು. ಟ್ವಿಟ್ಟರ್ ಅಭಿಯಾನ, ಪ್ರತಿಭಟನೆಗಳು ತೀವ್ರಗೊಂಡ ಕಾರಣ ಸರ್ಕಾರ ಕೂಡಾ ಮಣಿದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು.


ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಡಿ.03): ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಹೋರಾಟಗಳು ನಡೆದಿತ್ತು. ಟ್ವಿಟ್ಟರ್ ಅಭಿಯಾನ, ಪ್ರತಿಭಟನೆಗಳು ತೀವ್ರಗೊಂಡ ಕಾರಣ ಸರ್ಕಾರ ಕೂಡಾ ಮಣಿದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು. ಅಲ್ಲದೇ, ಆರೋಗ್ಯ ಸಚಿವರೇ ಖುದ್ದಾಗಿ ಜಿಲ್ಲೆಗೆ ಭೇಟಿ ನೀಡಿ ಜಾಗದ ಪರಿಶೀಲನೆ ಕೂಡಾ ನಡೆಸಿದ್ದರು. ಆದರೆ, ಇದೀಗ ಸೂಪರ್ ಸ್ಪೆಷಾಲಿಟಿ ಅಗತ್ಯತೆ ಬಗ್ಗೆ ಸರ್ಕಾರಕ್ಕೆ ಆರೋಗ್ಯ ಅಧಿಕಾರಿಗಳಿಂದ ಪ್ರಸ್ತಾವನೆಯೇ ಸಲ್ಲಿಕೆಯಾಗದಿರುವ ವಿಚಾರ ಬೆಳಕಿಗೆ ಬಂದಿದೆ.‌ ಇದರಿಂದಾಗಿ‌‌‌ ಇಷ್ಟು ದಿನಗಳ ಕಾಲ‌ ಸರಕಾರ ಹಾಗೂ ಜನಪ್ರತಿನಿಧಿಗಳು ಪೊಳ್ಳು ಭರವಸೆ ನೀಡಿದ್ದೇ ಎಂಬ ಪ್ರಶ್ನೆಯನ್ನು ಜನರು‌ ಮುಂದಿಟ್ಟಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ. 

Latest Videos

undefined

ಹೌದು! ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಅದರಲ್ಲಿಯೂ ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಹೆಚ್ಚಾದ ಅಪಘಾತ, ಆಂಬುಲೆನ್ಸ್ ತೊಂದರೆ ಸೇರಿದಂತೆ  ಇನ್ನಿತರ ಕಾರಣಗಳಿಂದ ಜಿಲ್ಲೆಯ ಜನರು ತೀವ್ರ ತರವಾಗಿ ಭಿನ್ನ ವಿಭಿನ್ನವಾಗಿ ಹೋರಾಟ ನಡೆಸಿದ್ದರು. ಅಲ್ಲದೇ, ಪ್ರಧಾನಿ ಹಾಗೂ ಮುಖ್ಯಮಂತ್ರಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಟ್ವಿಟ್ಟರ್ ಅಭಿಯಾನ ನಡೆಸಲಾಗಿತ್ತು. ಈ ಅಭಿಯಾನ ಟ್ರೆಂಡ್ ಆದ ಹಿನ್ನೆಲೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿಗಳು ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ವರದಿ ತರಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. 

Ticket Fight: ಬಿಜೆಪಿ ಪಾರುಪಾತ್ಯಕ್ಕೆ ಬ್ರೇಕ್‌ ಹಾಕುತ್ತಾ ಕಾಂಗ್ರೆಸ್‌?

ಆದರೆ‌, ಇದಾಗಿ ಸಾಕಷ್ಟು ಸಮಯ ಕಳೆದಿದ್ದರೂ ಈವರೆಗೂ ಆರೋಗ್ಯ ಅಧಿಕಾರಿಗಳ ವರದಿ ಮುಖ್ಯಮಂತ್ರಿ ಸಚಿವಾಲಯವನ್ನು ತಲುಪದಿರುವುದು ಬಯಲಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾದ ವರದಿಯ ಪ್ರತಿ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯೊಂದಕ್ಕೆ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಆರೋಗ್ಯಾಧಿಕಾರಿಗಳಿಂದ ಯಾವುದೇ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ ಎಂದು ಉತ್ತರಿಸಿದೆ. ಈ ವಿಷಯ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ಜನರ ಆಕ್ರೋಶದಿಂದ ತಪ್ಪಿಸಿಕೊಳ್ಳಲು ಆಸ್ಪತ್ರೆ ನಿರ್ಮಿಸುವ ಭರವಸೆ ನೀಡಿತ್ತಾದರೂ, ಪೂರಕ ಪ್ರಸ್ತಾವನೆ ಸಲ್ಲಿಸದ ಕಾರಣ ಹೋರಾಟಗಾರರ ಕಣ್ಣು ಕೆಂಪಾಗಿಸಿದೆ. 

ಇನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿ ಹಿಂಪಡೆಯುವಂತೆ ಅರ್ಜಿದಾರರಿಗೆ ಒತ್ತಡ ಕೂಡಾ ಹೇರಲಾಗಿದ್ದು, ಅವಧಿ ಮುಗಿದರೂ ಮಾಹಿತಿ ನೀಡಿರಲಿಲ್ಲ. ಇದೀಗ ಹಳೆಯ ದಿನಾಂಕದೊಂದಿಗೆ ಇಮೇಲ್ ಮೂಲಕ ವರದಿ ಸಲ್ಲಿಕೆಯಾಗಿಲ್ಲ ಎಂಬ ಉತ್ತರ ನೀಡಲಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಸರ್ಕಾರ ಜನರಿಗೆ ಮಂಕು ಬೂದಿ ಎರಚುವ ಕೆಲಸ ಮಾಡುತ್ತಿದೆ. ಜನರ ಹೋರಾಟದ ದಿಕ್ಕು ತಪ್ಪಿಸುವ ಉದ್ದೇಶದಿಂದ ಇಂತಹ ಹುನ್ನಾರ ನಡೆಸಲಾಗಿದೆ. ಇದು ಮುಂದುವರಿದಲ್ಲಿ ಜನರು ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ. 

ಕಾರವಾರದಲ್ಲಿ ವಿಶೇಷ ಈ ದಿಂಡಿ ಜಾತ್ರೆ: ಗಮನ ಸೆಳೆದ ದೈವ ನರ್ತಕ, ಪಂಜುರ್ಲಿ

ಈ ಬಗ್ಗೆ ಶಾಸಕಿ ರೂಪಾಲಿ ನಾಯ್ಕ್ ಅವರ ಬಳಿ ಕೇಳಿದ್ರೆ, ಪ್ರಸ್ತುತ ಗುರುತು ಮಾಡಿದ ಜಾಗ ಅರಣ್ಯ ಇಲಾಖೆ ಹೆಸರಿನಲ್ಲಿರುವ ಕಾರಣ ಅದನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ತಡವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಳಿಯೂ ಚರ್ಚೆ ನಡೆಸಿದ್ದು, ಆಸ್ಪತ್ರೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಕೂಡಾ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಜನರ ಹೋರಾಟವನ್ನು ತಣ್ಣಗಾಗಿಸಿದ್ದ ಸರ್ಕಾರದ ಅಧಿಕಾರಿಗಳಿಂದ ಇನ್ನೂ ಕೂಡಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸದಿರೋದು ತೀವ್ರ ಟೀಕೆಗೊಳಗಾಗಿದೆ. ಜನರು ಇದೀಗ ಆಸ್ಪತ್ರೆಗಾಗಿ ಎರಡನೇಯ ಹಂತದ ಹೋರಾಟಕ್ಕೆ ಮುಂದಾಗುತ್ತಿದ್ದು, ಅದಕ್ಕೂ ಮುನ್ನ ಸರ್ಕಾರ ಆಸ್ಪತ್ರೆಗೆ ಅಡಿಗಲ್ಲು ಹಾಕುತ್ತದೆಯೇ ಎಂದು ಕಾದುನೋಡಬೇಕಷ್ಟೇ.

click me!