ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮೇರು ವಿದ್ವಾಂಸ, ದೇಶದ ಸಂಗೀತ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರುವ ಪಂಡಿತ ಸವಾಯಿ ಗಂಧರ್ವರ ಸ್ಮರಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಿದೆ. ಅವರ ಹೆಸರಲ್ಲಿ ಅಂಚೆ ಚೀಟಿ ಹೊರತಂದಿದೆ.
ಹುಬ್ಬಳ್ಳಿ (ಅ.11): ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮೇರು ವಿದ್ವಾಂಸ, ದೇಶದ ಸಂಗೀತ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರುವ ಪಂಡಿತ ಸವಾಯಿ ಗಂಧರ್ವರ ಸ್ಮರಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಿದೆ. ಇಂದು ಪಂಡಿತ ಸವಾಯಿ ಗಂಧರ್ವರ ಹೆಸರಲ್ಲಿ ಹೊರತಂದ ಅಂಚೆ ಚೀಟಿಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಬಿಡುಗಡೆ ಮಾಡಿ, ಸವಾಯಿ ಗಂಧರ್ವರ ಸಂಗೀತ ಶಕ್ತಿಯನ್ನ ಅಚ್ಚಳಿಯದೆ ಉಳಿಯುವಂತೆ ಮಾಡಿದ್ರು. ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿರುವ ಸವಾಯಿ ಗಂಧರ್ವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ, ಕಾರ್ಯಕ್ರಮ ಆಗಮಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ ಅವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಸಹಭಾಗಿತ್ವದಲ್ಲಿ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಇದಕ್ಕೂ ಮೊದಲಿ ಹುಬ್ಬಳ್ಳಿಗೆ ಆಗಮಿಸಿದ ಕೇಂದ್ರ ಸಚಿವರಿಗೆ ಅದ್ದೂರಿಯಾಗಿ ಸ್ವಾಗತಿಸಿದರು. ಅಲ್ಲದೇ ಕಾರ್ಯಕ್ರಮ ಆರಂಭದ ಮುನ್ನವೇ ಸವಾಯಿ ಗಂಧರ್ವ ಮ್ಯೂಸಿಕ್ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಮಾತನಾಡಿದ ಸಚಿವ ಅಶ್ವಿನೀ ವೈಷ್ಣವ್ , ಹೇಗಿದ್ದೀರಿ ತಮಗೆಲ್ಲಾ ನಮಸ್ಕಾರ, ಸಂಗೀತದ ಮನೆಯಲ್ಲಿ ಮಾತನಾಡುತ್ತಿರುವುದು ನಮ್ಮ ಸೌಭಾಗ್ಯ ಎಂದು ಕನ್ನಡದಲ್ಲಿ ಹೇಳಿ ಮೂತು ಆರಂಭಿಸಿದರು.
ನಮ್ಮ ಸಂಸ್ಕೃತಿಯ ಪ್ರತೀಕವಾದ ವ್ಯಕ್ತಿಗಳನ್ನು ನಾವೀಗ ಗುರುತಿಸಿ ಗೌರವಿಸುತ್ತಿದ್ದೇವೆ. ದೇಶದ ಮೂವರು ಗಂಧರ್ವರಲ್ಲಿ ಧಾರವಾಡ ಜಿಲ್ಲೆಯ ಇಬ್ಬರು ಅನ್ನೋದು ಹೆಮ್ಮೆಯ ಸಂಗತಿ. ನಾನು ಕುಮಾರ ಗಂಧರ್ವ, ಭೀಮಸೇನ ಜೋಶಿಯವರ ಅಭಿಮಾನಿ. ವಾಜಪೇಯಿಯವರು ಕುಮಾರ ಗಂಧರ್ವರ ಸಂಗೀತವನ್ನು ಪ್ರೀತಿಯಿಂದ ಆಲಿಸುತ್ತಿದ್ದರು. ಸವಾಯಿ ಗಂಧರ್ವರು ಸಂಗೀತ ಕ್ಷೇತ್ರದ ಮಹಾನ್ ಸಾಧಕರು. ಭೀಮಸೇನ್ ಜೋಶಿ ಮತ್ತು ಗಂಗೂಬಾಯಿ ಹಾನಗಲ್ ಅವರಂತ ಶಿಷ್ಯರನ್ನು ದೇಶಕ್ಕೆ ನೀಡಿದವರು ಅಂತ ಗೌರವ ನುಡಿನಮನ ಸಲ್ಲಿಸಿದ್ರು.
ಸವಾಯಿ ಗಂಧರ್ವ ಸಾಧನೆ ಸ್ಮರಿಸಿದ ಕೇಂದ್ರ ಸಚಿವ ಜೋಶಿ..!
ಇನ್ನು ಕಾರ್ಯಕ್ರಮದಲ್ಲಿ ಮತ್ತೋರ್ವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಾಗಿಯಾಗಿ ಮಾತನಾಡಿದ್ರು. ಪಂಡಿತ ಸವಾಯಿ ಗಂಧರ್ವರು ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಮಾತ್ರವಲ್ಲದೆ ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆಯನ್ನು ಸವಾಯಿ ನೀಡಿದ್ದಾರೆ. ಸವಾಯಿ ಗಂಧರ್ವರು ಹಿಂದುಸ್ತಾನಿ ಸಂಗೀತದ ಕಂಪನ್ನು ಹರಿಡಿಸುವಲ್ಲಿ ಬಹಳಷ್ಟು ಪರಿಶ್ರಮ ಪಟ್ಟವರು. ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ ಅವರನ್ನು ಸಂಗೀತಕ್ಕಾಗಿ ಸಿದ್ದಪಡಿಸಿದವರು.
ಸಂಗೀತಕ್ಕೆ ಭದ್ರ ಬುನಾದಿಯನ್ನು ಹಾಕಿದವರು. ಕೆಲವು ವ್ಯಕ್ತಿಗಳು ಸಾಧನೆಯ ಮೂಲಕ ತಾವು ಹುಟ್ಟಿ ಬೆಳೆದ ಸ್ಥಳಗಳ ಹೆಸರನ್ನು ಪ್ರಸಿದ್ಧಿಗೆ ತರುತ್ತಾರೆ. ಸಂಗೀತ ತಪಸ್ವಿ ಸವಾಯಿ ಗಂಧರ್ವ ಅವರು ಅಂತಹವರಲ್ಲಿ ಒಬ್ಬರು. ಸಂಗೀತ ಕ್ಷೇತ್ರದಲ್ಲಿ ಧಾರವಾಡ ಜಿಲ್ಲೆಯ ಕೊಡುಗೆ ದೊಡ್ಡದಿದೆ. ಎಂಟು ಜನ ಜ್ಞಾನಪೀಠ ಪುರಸ್ಕೃತದಲ್ಲಿ ಐವರು ಧಾರವಾಡದವರು ಅನ್ನೋದು ನಮ್ಮ ಹೆಮ್ಮೆ ಸಂಗೀತ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರಕ್ಕೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರ ಇಂದು ಸವಾಯಿ ಗಂಧರ್ವರ ಸ್ಮರಣಾರ್ಥ ಅಂಚೇಚೀಟಿ ಬಿಡುಗಡೆ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಅಂತ ಪ್ರಲ್ಹಾದ್ ಜೋಶಿ ಹೇಳಿದ್ರು. ಒಟ್ಟಿನಲ್ಲಿ ಧಾರವಾಡ ಜಿಲ್ಲೆಯ ಹೆಮ್ಮೆಯ ಪ್ರತೀಕವಾಗಿ ಬಿಂಬಿತವಾಗಿರುವ ಸವಾಯಿ ಗಂಧರ್ವರಿಗೆ ಕೇಂದ್ರ ಸರ್ಕಾರ ಮಹತ್ವದ ಗೌರವವನ್ನು ನೀಡಿರುವುದು ನಿಜಕ್ಕೂ ವಿಶೇಷವಾಗಿದೆ.