KSRTC ಹೆಸರಿಗಾಗಿ ಕಾನೂನು ಹೋರಾಟ

Kannadaprabha News   | Asianet News
Published : Jun 04, 2021, 07:40 AM IST
KSRTC ಹೆಸರಿಗಾಗಿ ಕಾನೂನು ಹೋರಾಟ

ಸಾರಾಂಶ

* ಕೇರಳದ ವಿರುದ್ಧ ಹೋರಾಟ: ಮೂಲಗಳು * ಟ್ರೇಡ್‌ ಮಾರ್ಕ್ ರಿಜಿಸ್ಟ್ರಿ ಆದೇಶ ಪ್ರಶ್ನಿಸಿ ಕೈಗಾರಿಕೆ ಸಚಿವಾಲಯಕ್ಕೆ ಮೇಲ್ಮನವಿ * ರಾಜ್ಯ ಗೆಲ್ಲುವ ಅವಕಾಶ ಕಡಿಮೆ  

ಬೆಂಗಳೂರು(ಜೂ.04):ಕೆಎಸ್‌ಆರ್‌ಟಿಸಿ’ ಹೆಸರಿನ ಟ್ರೇಡ್‌ ಮಾರ್ಕ್ ಕೇರಳ ಸಾರಿಗೆ ನಿಗಮಕ್ಕೆ ಸಿಕ್ಕಿರುವ ಸುದ್ದಿ ಹೊರಬಿದ್ದ ಬೆನ್ನಲ್ಲೇ ಸದರಿ ಟ್ರೇಡ್‌ ಮಾರ್ಕ್ ತನ್ನ ಬಳಿಯೇ ಉಳಿಸಿಕೊಳ್ಳಲು ಕೆಎಸ್‌ಆರ್‌ಟಿಸಿ ಕಾನೂನು ಸಮರ ನಡೆಸಲು ತೀರ್ಮಾನಿಸಿದೆ.

ಕರ್ನಾಟಕ-ಕೇರಳ ಎರಡೂ ರಾಜ್ಯಗಳ ಸಾರಿಗೆ ನಿಗಮದ ಹೆಸರು ಕೆಎಸ್‌ಆರ್‌ಟಿಸಿ ಎಂದಿದೆ. ಇದೀಗ ಕೇಂದ್ರದ ಟ್ರೇಡ್‌ ಮಾರ್ಕ್ ರಿಜಿಸ್ಟ್ರಿ ಕೇರಳ ಸಾರಿಗೆ ನಿಗಮದ ಪರ ತೀರ್ಪು ನೀಡಿದೆ. ಸುಮಾರು 48 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಕೆಎಸ್‌ಆರ್‌ಟಿಸಿ ಎಂಬ ಬ್ರ್ಯಾಂಡ್‌ ಉಳಿಸಿಕೊಳ್ಳಲು ರಾಜ್ಯ ರಸ್ತೆ ಸಾರಿಗೆ ನಿಗಮ ಕಾನೂನು ಹೋರಾಟ ಮುಂದುವರಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಮೇಲ್ಮನವಿಗೆ ಅವಕಾಶ: 

ಟ್ರೇಡ್‌ಮಾರ್ಕ್ ರಿಜಿಸ್ಟ್ರಿ ಆದೇಶ ಪ್ರಶ್ನಿಸಿ ರಾಜ್ಯ ರಸ್ತೆ ಸಾರಿಗೆ ನಿಗಮವು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಇಂಟಲೆಕ್ಚುವಲ್‌ ಪ್ರಾಪರ್ಟಿ ಅಪೀಲೇಟ್‌ ಬೋರ್ಡ್‌ (ಐಪಿಎಬಿ)ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಟ್ರೇಡ್‌ ಮಾರ್ಕ್ ರಿಜಿಸ್ಟ್ರಿ ಆದೇಶ ಹೊರಬಿದ್ದ ಮೂರು ತಿಂಗಳೊಳಗೆ ಮೇಲ್ಮನವಿ ಸಲ್ಲಿಸಬೇಕು. ಮೂರು ತಿಂಗಳ ಬಳಿಕ ಮೇಲ್ಮನವಿ ಸಲ್ಲಿಸಿದರೆ, ಅದನ್ನು ವಿಚಾರಣೆಗೆ ಮಾನ್ಯ ಮಾಡುವುದು ಅಥವಾ ಬಿಡುವುದು ಪಿಐಎಬಿ ವಿವೇಚನಕ್ಕೆ ಸೇರಿರುತ್ತದೆ. ಒಂದು ವೇಳೆ ಈ ಬೋರ್ಡ್‌, ಟ್ರೇಡ್‌ ಮಾರ್ಕ್ ರಿಜಿಸ್ಟ್ರಿಯ ಆದೇಶವನ್ನೇ ಎತ್ತಿ ಹಿಡಿದರೆ, ಸಾರಿಗೆ ನಿಗಮವು ಬಳಿಕ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶವಿದೆ.

ಕರ್ನಾಟಕ KSRTC ಬ್ರಾಂಡ್‌ ಕೇರಳ ಪಾಲು: ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರತಿಕ್ರಿಯೆ

ಕೈತಪ್ಪಿದರೆ ಹೊಸ ಬ್ರ್ಯಾಂಡ್‌ ಅನಿವಾರ್ಯ: 

ಮೇಲ್ಮನವಿಗೂ ಕೇರಳ ಪರವೇ ತೀರ್ಪು ಬಂದರೆ, ರಾಜ್ಯ ರಸ್ತೆ ಸಾರಿಗೆ ನಿಗಮವು ‘ಕೆಎಸ್‌ಆರ್‌ಟಿಸಿ’ ಪದನಾಮದ ಬದಲಾಗಿ ಹೊಸ ಪದನಾಮ ನೀಡಬೇಕು. ಅಂತೆಯೆ ನಿಗಮದ ಎಲ್ಲ ಬಸ್‌ಗಳು, ನಿಲ್ದಾಣಗಳು, ಕಾರ್ಯಾಗಾರ, ಡಿಪೋಗಳು, ವಿಭಾಗೀಯ ಕಚೇರಿಗಳು, ನಿಗಮದ ಜಾಲತಾಣ, ದಾಖಲೆಗಳು ಸೇರಿದಂತೆ ಎಲ್ಲೆಲ್ಲಿ ಕೆಎಸ್‌ಆರ್‌ಟಿಸಿ ಟ್ರೇಡ್‌ ಮಾರ್ಕ್ ಇದೆಯೋ ಅದನ್ನು ಬದಲಿಸಿ ಹೊಸ ಟ್ರೇಡ್‌ಮಾರ್ಕ್ ನೀಡಬೇಕು. ಆಗ ಹೊಸ ಟ್ರೇಡ್‌ ಮಾರ್ಕನ್ನು ಬ್ರ್ಯಾಂಡ್‌ ಆಗಿ ರೂಪಿಸುವುದು ಅನಿವಾರ್ಯವಾಗಲಿದೆ. ಇದಕ್ಕೆ ನಿಗಮವು ಹಣ ವಿನಿಯೋಗಿಸಬೇಕಾಗುತ್ತದೆ.

ರಾಜ್ಯ ಗೆಲ್ಲುವ ಅವಕಾಶ ಕಡಿಮೆ

ಒಂದು ವೇಳೆ ಟ್ರೇಡ್‌ಮಾರ್ಕ್ ತೀರ್ಪು ಕೇರಳ ಪರವೇ ಆಗಿದ್ದಲ್ಲಿ ಮೆಲ್ಮನವಿಯಲ್ಲೂ ರಾಜ್ಯಕ್ಕೆ ನ್ಯಾಯ ಸಿಗುವುದು ಕಷ್ಟಎನ್ನಲಾಗುತ್ತಿದೆ. ಏಕೆಂದರೆ, ಕೇರಳ ರಾಜ್ಯದಲ್ಲಿ 1968ರಿಂದ ಕೆಎಸ್‌ಆರ್‌ಟಿಸಿ ಪದನಾಮ ಬಳಕೆಯಲ್ಲಿದೆ. ಕರ್ನಾಟಕದಲ್ಲಿ 1973ರಿಂದ ಕೆಎಸ್‌ಆರ್‌ಟಿಸಿ ಹೆಸರು ಬಂದಿದೆ. ಕೇರಳವು ಕರ್ನಾಟಕ್ಕಿಂತ ಮೊದಲೇ ಬಳಕೆ ಮಾಡುತ್ತಿರುವುದಾಗಿ ಹೇಳುತ್ತಿರುವುದರಿಂದ ಮೇಲ್ಮನವಿಯಲ್ಲಿ ಕೇರಳಕ್ಕೆ ಜಯ ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಟ್ರೇಡ್‌ ಮಾರ್ಕ್ ಪ್ರಕರಣ ಕೇರಳ ಪರವಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಅಧಿಕೃತ ಆದೇಶ ಇನ್ನೂ ನಮ್ಮ ಕೈಸೇರಿಲ್ಲ. ಒಂದು ವೇಳೆ ಕೇರಳ ಪರವೇ ತೀರ್ಪು ಬಂದಿದ್ದಲ್ಲಿ ಅದರ ವಿರುದ್ಧ ಕಾನೂನು ಹೋರಾಟ ಮುಂದುವರಿಸಲಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ತಿಳಿಸಿದ್ದಾರೆ.  
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!