ಕೋರ್ಟ್‌ನಿಂದ ಹೊರಗೆ ಬರುತ್ತಿದ್ದ ವೇಳೆ ಭಗವಾನ್ ಮುಖಕ್ಕೆ ಮಹಿಳಾ ಅಡ್ವಾಕೇಟ್ ಮಸಿ ಬಳಿದಿದ್ದಾರೆ.
ಬೆಂಗಳೂರು, (ಫೆ.04): ಹಿಂದು ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆನ್ನಲಾದ ಸಾಹಿತಿ ಭಗವಾನ್ ಮುಖಕ್ಕೆ ವಕೀಲೆ ಮೀರಾ ರಾಘವೇಂದ್ರ ಅವರು ಮಸಿ ಬಳಿದ ಘಟನೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.
ಹಿಂದು ಧರ್ಮಕ್ಕೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಮೀರಾ ರಾಘವೇಂದ್ರ ಖಾಸಗಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಭಗವಾನ್ರವರು ಇಂದು (ಗುರುವಾರ) ಕೋರ್ಟ್ಗೆ ಹಾಜರಾಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದಾದ ಬಳಿಕ ಭಗವಾನ್ ಅವರು ಕೋರ್ಟ್‌ನಿಂದ ಹೊರಗೆ ಬಂದಾಗ ಮೀರಾ ರಾಘವೇಂದ್ರ ಅವರು ಮುಖಕ್ಕೆ ಮಸಿ ಬಳಿದಿದ್ದಾರೆ.
‘ಮಾತನಾಡಿದ್ರೆ ವಿವಾದ ಆಗುತ್ತೆ..ಕೇಸ್ ಬೀಳುತ್ತೆ.. ಈಗಾಗ್ಲೆ ಎರಡಿದೆ'
ಹಿಂದು ಧರ್ಮ ಧರ್ಮವೇ ಅಲ್ಲ. ಹಿಂದು ಎಂಬ ಶಬ್ದ ಅವಮಾನಕರ ಎಂದು ಪ್ರೊ. ಕೆ.ಎಸ್.ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹಿಂದು ಧರ್ಮ ಎಂದರೆ ಬ್ರಾಹ್ಮಣ ಎಂದರ್ಥ. ಗ್ರಾಮೀಣ ಜನರಿಗೆ ಹಿಂದು ಎಂದರೆ ಗೊತ್ತೇ ಇಲ್ಲ. ನೀವು ಯಾವ ಧರ್ಮ ಎಂದರೆ ಒಕ್ಕಲಿಗ, ಕುರುಬ ಅಂತ ಜಾತಿಗಳ ಹೆಸರನ್ನಷ್ಟೇ ಹೇಳುತ್ತಾರೆ. ಹಿಂದು ಪದವನ್ನೇ ತೆಗೆದು ಹಾಕಬೇಕು. ನಿಮಗೆ ಮಾನ ಮರ್ಯಾದೆ ಇದ್ದರೆ ಆ ಪದ ತೆಗೆದು ಹಾಕಿ ಎಂದು ಹೇಳಿಕೆ ಕೊಟ್ಟಿದ್ದರು.