
ಬೆಂಗಳೂರು (ಡಿ. 21): ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ (Krantiveera Sangolli Rayanna) ಪುತ್ಥಳಿ ಭಗ್ನಗೊಳಿಸಿದ ಎಂಇಎಸ್ (MES) ಕಿಡಿಗೇಡಿಗಳನ್ನು ಬಂಧಿಸಿ, ಬೆಳಗಾವಿಯ ಅದೇ ಸ್ಥಳದಲ್ಲಿ ಹೊಸದಾಗಿ ಪುತ್ಥಳಿ ಪುನರಸ್ಥಾಪಿಸುವಂತೆ ಆಗ್ರಹಿಸಿ ಕರ್ನಾಕಟ ರಾಜ್ಯ ಕುರುಬರ ಸಂಘದ ನೇತೃತ್ವದಲ್ಲಿ ಮೆಜೆಸ್ಟಿಕ್‌ನ ರಾಯಣ್ಣ ವೃತ್ತದಲ್ಲಿ (Majestic) ಸೋಮವಾರ ಪ್ರತಿಭಟನೆ ನಡೆಸಲಾಯಿತು. ರಾಯಣ್ಣನ ವಿಚಾರದಲ್ಲಿ ರಾಜ್ಯ ಸರ್ಕಾರ ಮತ ಬ್ಯಾಂಕ್ ರಾಜಕಾರಣ ಮರೆತು ಎಂಇಎಸ್ ಕಿಡಿಗೇಡಿಗಳಿಗೆ ತಕ್ಕಪಾಠ ಕಲಿಸುವ ಮೂಲಕ ದಿಟ್ಟತನ ಪ್ರದರ್ಶಿಸುವಂತೆ ಸಂಘದ ಆಗ್ರಹಿಸಿದರು. ಎಂಇಎಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕುವ ಜತೆಗೆ ಶಕ್ತಿ ಪ್ರದರ್ಶಿಸಿದರು.
ಈ ವೇಳೆ ಸಂಘದ ನಿರ್ದೇಶಕ ರಾಮಚಂದ್ರಪ್ಪ ಮಾತನಾಡಿ, ಸಮಾಜದ ಏಳಿಗಾಗಿ ಹೋರಾಡಿದ ಕೆಚ್ಚೆದೆಯ ಸ್ವಾತಂತ್ರ್ಯ ಸೇನಾನಿ ರಾಯಣ್ಣನ ಪ್ರತಿಮೆ ವಿರೂಪಗೊಳಿಸಿದರೂ ಸರ್ಕಾರ ಈವರೆಗೆ ತಪ್ಪಿತಸ್ಥರನ್ನು ಬಂಧಿಸದೇ ಮೀನಮೇಷ ಎಣಿಸುತ್ತಿದೆ. ಹೋರಾಟಗಾರರು, ನಾಡು ನುಡಿ ವಿಚಾರದಲ್ಲಿ ಸರ್ಕಾರ ರಾಜಕೀಯ ಹಿತಾಸಕ್ತಿ ಬದಿಗಿರಿಸಿ ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಭಗ್ನಗೊಂಡ ಸ್ಥಳದಲ್ಲೇ ಹೊಸದಾಗಿ ರಾಯಣ್ಣನ ಪ್ರತಿಮೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ರಾಯಣ್ಣನ ಅಭಿಮಾನಿಗಳ ಭಾವನೆಗೆ ಧಕ್ಕೆ
ಎಂಇಎಸ್ ಪುಂಡರನ್ನು ಶಿಕ್ಷಿಸುವವರೆಗೂ ರಾಜ್ಯ ಕುರುಬರ ಸಂಘ ಹೋರಾಟ ಮುಂದುವರಿಸಲಿದೆ. ಬೆಳಗಾವಿ ಶಾಂತವಾಗಿಲ್ಲ, ಅಲ್ಲಿ ಎಲ್ಲ ಕನ್ನಡಪರ ಹಾಗೂ ರಾಯಣ್ಣನ ಅಭಿಮಾನಿ ಸಂಘಟನೆಗಳು ಹೋರಾಟ ಮಾಡುತ್ತಿವೆ. ಸ್ವಾತಂತ್ರ್ಯ ಸೇನಾನಿ ವಿಚಾರದಲ್ಲಿ ಕನ್ನಡಿಗರಿಗೆ ಸರ್ಕಾರ ನ್ಯಾಯಕೊಡಿಸಬೇಕು ಎಂದರು.
ಇದನ್ನೂ ಓದಿ: Lyricist Kaviraj: ಎಂಇಎಸ್ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ
ಸಂಘದ ಅಧ್ಯಕ್ಷ ವೆಂಕಟೇಶ್ ಮೂರ್ತಿ ಮಾತನಾಡಿ, ಪ್ರತಿಮೆ ಭಗ್ನ ಮಾಡುವ ಮೂಲಕ ರಾಯಣ್ಣನ ಅಭಿಮಾನಿಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಇಂತಹ ಸಂದರ್ಭದಲ್ಲಿ ಕಠಿಣ ಕ್ರಮ ಕೈಗೊಂಡು ನಮ್ಮ ಭಾವನೆಗಳಿಗೆ ನ್ಯಾಯ ಕೊಡದಿರುವ ಸರ್ಕಾರ ನಡೆ ಖಂಡನೀಯ. ಸದ್ಯ ಸಾಂಕೇತಿಕ ಧರಣಿ ಮಾಡಿದ್ದು, ನ್ಯಾಯ ಸಿಗದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ. ಕನ್ನಡಿಗರು ಭಾಷಾ, ಗಡಿ ವಿಚಾರದಲ್ಲಿ ಪ್ರಚೋದನೆ ರೀತಿ ವರ್ತಿಸಿಲ್ಲ. ಇದೆಲ್ಲವನ್ನು ಮನಗಂಡು ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಎಂಇಎಸ್ ಪುಂಡರಿಗೆ ಬಿಸಿ ಮುಟ್ಟಿಸಬೇಕು ಎಂದು ಹೇಳಿದರು.ರಾಯಣ್ಣನ ಅಭಿಮಾನಿ ಐಟಿಐ ನಾಗರಾಜ್, ಜೆ.ಹುಚ್ಚಪ್ಪ ಹಾಗೂ ಸಂಘದ ಇತರ ಪದಾಧಿಕಾರಿಗಳು, ಅಭಿಮಾನಿಗಳು ಪಾಲ್ಗೊಂಡಿದ್ದರು.
ಕನಕ ಗುರುಪೀಠದ ಸ್ವಾಮೀಜಿ ಬೆಂಬಲ
ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಕಲಬುರಗಿ ಕನಕ ಗುರುಪೀಠದ ಸಿದ್ಧರಾಮನಂದಪುರಿ ಸ್ವಾಮೀಜಿ ಆಗಮಿಸಿ, ಹೋರಾಟಕ್ಕೆ ಬೆಂಬಲ ಸೂಚಿಸಿದರು. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದ ಕಿಡಿಗೇಡಿಗಳಿಗೆ ತಕ್ಕಶಾಸ್ತಿ ಮಾಡಲು ರಾಯಣ್ಣನ ಅಭಿಮಾನಿಗಳು ಅನುಮತಿ ಕೇಳುತ್ತಿದ್ದಾರೆ. ಕನ್ನಡಿಗರೇ ಬುದ್ಧಿ ಕಲಿಸುವ ಮೊದಲು ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಎಂಇಎಸ್ ಪುಂಡಾಟಕ್ಕೆ ಕಡಿವಾಣ ಹಾಕಬೇಕು. ತಪ್ಪಿತಸ್ಥರಿಗೆ ಕಾನೂನು ಕೈಗೊಳ್ಳಬೇಕು ಎಂದರು.
ಪುಂಡರ ಮೇಲೆ ಗೂಂಡಾ ಕಾಯ್ದೆ, ದೇಶದ್ರೋಹ ಕೇಸ್: ಸಿಎಂ
ಸ್ವಾತಂತ್ರ್ಯ ಹೋರಾಟಗಾರರು , ಸಮಾಜ ಸುಧಾರಕರ ಪ್ರತಿಮೆಗಳನ್ನು ಧ್ವಂಸಗೊಳಿಸುವ ಮತ್ತು ವಿರೂಪಗೊಳಿಸುವಂತಹವರ ವಿರುದ್ಧ ದೇಶದ್ರೋಹ ಮೊಕದ್ದಮೆ (Treason) ದಾಖಲು ಮಾಡುವುದಾಗಿ ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಇದೇ ವೇಳೆ, ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಹಾಗೂ ಶಿವಾಜಿ ಪ್ರತಿಮೆಗೆ (Chhatrapati Shivaji Maharaj) ಮಸಿ ಬಳಿದವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸೂಚಿಸಿದೆ. ಇದೇ ವೇಳೆ, ಎಂಇಎಸ್ (MES) ನಿಷೇಧ ಕುರಿತು ಕಾನೂನಾತ್ಮಕವಾಗಿ ಪರಿಶೀಲನೆ ನಡೆಸಲಾಗುವುದು. ನಿರ್ಬಂಧ ವಿಧಿಸಲು ಸಾಧ್ಯವಾಗದಿದ್ದರೆ ಸಂಪೂರ್ಣ ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದೆ.
ಇದನ್ನೂ ಓದಿ: Shivaji statue vandalism ಕುಡಿದ ಅಮಲಿನಲ್ಲಿ ಉಕ್ಕಿಬಂತು ರೋಷ, ಮತ್ತೊಂದು ಶಿವಾಜಿ ಪ್ರತಿಮೆ ಧ್ವಂಸ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ