
ಕೊಪ್ಪಳ (ಜುಲೈ.29) ತುಂಗಭದ್ರಾ ಜಲಾಶಯದಿಂದ 1.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಗಂಗಾವತಿ ತಾಲೂಕಿನ ಕಡೆಬಾಗಿಲದ ಬೇಲಿ ಬಳಿಯ ತುಂಗಭದ್ರಾ ನದಿಯಲ್ಲಿ ಪ್ರವಾಹದ ಸನ್ನಿವೇಶ ನಿರ್ಮಾಣವಾಗಿದೆ. ಈ ಸ್ಥಿತಿಯಲ್ಲೂ ಕೆಲವು ನಾಡದೋಣಿ ಚಾಲಕರು ಹಣದ ಆಸೆಗೆ ಬಿದ್ದು, ಪ್ರವಾಸಿಗರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಆತಂಕಕಾರಿ ಘಟನೆ ನಡೆದಿದೆ.
ಜಿಲ್ಲಾಡಳಿತವು ನದಿಪಾತ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಿದ್ದರೂ, ಈ ಆದೇಶವನ್ನು ಕೆಲವರು ಗಾಳಿಗೆ ತೂರಿದ್ದಾರೆ. ಈ ಮಧ್ಯೆ, ತುಂಗಭದ್ರಾ ಡ್ಯಾಮ್‌ನಿಂದ 1 ಲಕ್ಷ ಕ್ಯೂಸೆಕ್‌ಗಿಂತಲೂ ಹೆಚ್ಚು ನೀರು ಬಿಡುಗಡೆಯಾಗಿರುವ ಕಾರಣ ಕಂಪ್ಲಿ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಕಂಪ್ಲಿ-ಗಂಗಾವತಿ ನಡುವಿನ ನೇರ ಸಂಪರ್ಕ ಸ್ಥಗಿತಗೊಂಡಿದೆ. ಸೇತುವೆಯ ಮೇಲ್ಭಾಗದವರೆಗೂ ನೀರು ತಲುಪಿರುವುದರಿಂದ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
40 ವರ್ಷಗಳ ಹಿಂದೆ ನಿರ್ಮಾಣವಾದ ಈ ಸೇತುವೆ ಪ್ರತಿ ಬಾರಿಯೂ ಜಲಾಶಯದಿಂದ ನೀರು ಬಿಡುಗಡೆಯಾದಾಗ ಮುಳುಗಡೆಯಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ದುರ್ಬಲವಾಗುತ್ತಿದೆ. ಈ ಸೇತುವೆಯನ್ನು ಮರುನಿರ್ಮಾಣ ಮಾಡಬೇಕೆಂಬ ಒತ್ತಾಯ ಸ್ಥಳೀಯರಿಂದ ಕೇಳಿಬಂದಿದೆ.
ಜಿಲ್ಲಾಡಳಿತದ ಎಚ್ಚರಿಕೆಯನ್ನು ಗಾಳಿಗೆ ತೂರುತ್ತಿರುವ ನಾಡದೋಣಿ ಚಾಲಕರು, ಪ್ರವಾಹದ ನಡುವೆಯೂ ತೆಪ್ಪದ ಮೇಲೆ ಪ್ರವಾಸಿಗರನ್ನು ಕರೆದೊಯ್ಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರವಾಸಿಗರ ಜೀವಕ್ಕೆ ಯಾರು ಹೊಣೆ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ