
ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್) ಅಧ್ಯಕ್ಷ ಸ್ಥಾನದ ಚುನಾವಣೆ ಮಾರ್ಚ್ ಅಂತ್ಯದೊಳಗೆ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಸಹಕಾರ ಚುನಾವಣಾ ಆಯೋಗ ಮಾರ್ಚ್ 6ರಂದೇ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ನಿರ್ಧರಿಸಿತ್ತು. ಆದರೆ, ಅಂದು ರಾಜ್ಯ ಸರ್ಕಾರದ ಬಜೆಟ್ ಅಧಿವೇಶನ ಆರಂಭಗೊಂಡಿತ್ತು. ರಾಜ್ಯದ 16 ಒಕ್ಕೂಟಗಳ ಪೈಕಿ ಐದು ಒಕ್ಕೂಟಗಳ ಅಧ್ಯಕ್ಷರು ಶಾಸಕರಾಗಿದ್ದಾರೆ. ಅವರೆಲ್ಲರೂ ಅಧಿವೇಶನಕ್ಕೆ ಹಾಜರಾಗಬೇಕಿದ್ದರಿಂದ ತಾತ್ಕಾಲಿಕವಾಗಿ ಚುನಾವಣೆಯನ್ನು ಮುಂದೂಡಲಾಗಿತ್ತು. ಆದರೆ, ಅಧಿವೇಶನ ಮುಗಿಯುವುದರೊಳಗೆ ಚುನಾವಣೆ ನಡೆಸಬೇಕೆಂಬ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.
ಪ್ರಸ್ತುತ ಬಮೂಲ್ ಅಧ್ಯಕ್ಷರಾಗಿರುವ ಮಾಜಿ ಸಂಸದ ಡಿ.ಕೆ.ಸುರೇಶ್, ಮಾಲೂರಿನ ಶಾಸಕ ಕೆ.ವೈ.ನಂಜೇಗೌಡ ಮತ್ತು ಕೊಪ್ಪಳದ ಶಾಸಕ ರಾಘವೇಂದ್ರ ಬಸವರಾಜ ಹಿಟ್ನಾಳ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಹಾಸನ, ಕೋಲಾರ, ತುಮಕೂರು, ಬೆಳಗಾವಿ, ಬಳ್ಳಾರಿ, ದಕ್ಷಿಣ ಕನ್ನಡ, ಶಿವಮೊಗ್ಗ, ಮೈಸೂರು, ವಿಜಯಪುರ, ಹಾಸನ, ಮಂಡ್ಯ, ಕೋಲಾರ ಸೇರಿದಂತೆ ಒಟ್ಟು 16 ಹಾಲುಒಕ್ಕೂಟಗಳ ಕೆಎಂಎಫ್ ಪ್ರತಿನಿಧಿಗಳು, ಸರ್ಕಾರದ ಪ್ರತಿನಿಧಿ, ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ಪ್ರತಿನಿಧಿ, ಸಹಕಾರ ಇಲಾಖೆ ನಿಬಂಧಕರು, ಪಶು ಸಂಗೋಪನೆ ಇಲಾಖೆಯ ನಿರ್ದೇಶಕರು, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಮತ ಚಲಾಯಿಸಲಿದ್ದಾರೆ.
ಕೆಎಂಎಫ್‌ನ ಹಿಂದಿನ ಆಡಳಿತ ಮಂಡಳಿಯ ಅವಧಿ 2024 ರ ಜುಲೈ 7ಕ್ಕೆ ಮುಕ್ತಾಯ ಗೊಂಡಿತ್ತು. ಆದರೆ, ಹಾಲು ಒಕ್ಕೂಟಗಳ ನಿರ್ದೇಶಕರ ಆಯ್ಕೆ ಆಗದ ಹಿನ್ನೆಲೆಯಲ್ಲಿ ಕೋರ್ಟ್ ಅನುಮತಿ ಮೇರೆಗೆ ಅಂದಿನ ಅಧ್ಯಕ್ಷರಾಗಿದ್ದ ಭೀಮಾ ನಾಯ್ಕ, 2025ರ ಜನವರಿವರೆಗೆ ಅಧ್ಯಕ್ಷರಾಗಿ ಮುಂದುವರಿ ದಿದ್ದರು. ಪ್ರಸ್ತುತ ಸಹಕಾರ ಸಂಘಗಳ ನಿಬಂಧಕ ಟಿ.ಎಚ್.ಎಂ.ಕುಮಾರ್ ಅವರು ಕೆಎಂಎಫ್ ಆಡಳಿತಾಧಿಕಾರಿಯಾಗಿದ್ದಾರೆ.
ಒಮ್ಮತದ ಕೊರತೆ: ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಜನವರಿ 29ರಂದೇ ಚುನಾವಣೆ ನಡೆಯಬೇಕಿತ್ತು. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಾಗ ಕಾಂಗ್ರೆಸ್ ಬೆಂಬಲಿತರ ನಡುವೆ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ಚರ್ಚೆಯಲ್ಲಿ ಒಮ್ಮತ ಮೂಡದೆ, ಇಡೀ ಚುನಾವಣೆಯನ್ನೇ ಮುಂದೂಡಲಾಗಿತ್ತು. ಅದೇ ರೀತಿ, ಕೆಎಂಎಫ್ ಚುನಾವಣೆಯನ್ನೂ ಸಹ ಮುಂದೂಡಲಾಗಿದೆ ಎಂಬ ಆರೋಪಗಳಿವೆ ಎನ್ನುತ್ತಾರೆ ಹಾಲು ಒಕ್ಕೂಟಗಳ ಕೆಲ ಪ್ರತಿನಿಧಿಗಳು.
ಇದನ್ನೂ ಓದಿ: ಮಗುವಿಗೆ ಜನ್ಮ ನೀಡಿ ಬಾಣಂತಿ ಸಾವು: ಐಸಿಯುಗೆ ದಾಖಲಿಸುವುದಾಗಿ ಶವಗಾರಕ್ಕೆ ಶಿಫ್ಟ್ ಮಾಡಿದ ಆರೋಪ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ