ಎತ್ತಿನಹೊಳೆ, ಮೇಕೆದಾಟು ವಿಳಂಬಕ್ಕೆ ರಾಜ್ಯ ಸರ್ಕಾರ ಕಾರಣ: ದೇವೇಗೌಡ

Published : Mar 10, 2026, 08:20 AM IST
Deve Gowda

ಸಾರಾಂಶ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾಜ್ಯಸಭೆಯಲ್ಲಿ, ಎತ್ತಿನಹೊಳೆ ಮತ್ತು ಮೇಕೆದಾಟು ಯೋಜನೆಗಳ ವಿಳಂಬಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ. ಯೋಜನಾ ವೆಚ್ಚದ ಏರಿಕೆ, ಪರಿಸರ ನಿಯಮಗಳ ಉಲ್ಲಂಘನೆ, ರೈತರಿಗೆ ನೀರು ಒದಗಿಸುವಲ್ಲಿನ ವೈಫಲ್ಯವನ್ನು ಅವರು ಬಲವಾಗಿ ಖಂಡಿಸಿದ್ದಾರೆ.

ಎತ್ತಿನಹೊಳೆ, ಮೇಕೆದಾಟು ಯೋಜನೆಗಳ ವಿಳಂಬಕ್ಕೆ ರಾಜ್ಯ ಸರಕಾರವೇ ಕಾರಣ

ನವದೆಹಲಿ: ಕರ್ನಾಟಕದಲ್ಲಿ ನೀರಾವರಿ ಯೋಜನೆಗಳನ್ನು ಸಕಾಲಕ್ಕೆ ಕಾರ್ಯಗತ ಮಾಡಲಾಗದೇ ರಾಜ್ಯದ ಕಾಂಗ್ರೆಸ್ ಸರಕಾರ, ಕೇಂದ್ರ ಸರಕಾರವನ್ನು ಅನಗತ್ಯವಾಗಿ ದೂರುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ದೂರಿದ್ದಾರೆ. ರಾಜ್ಯ ಸಭೆಯಲ್ಲಿ ಸೋಮವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ದೇವೇಗೌಡ, ಎತ್ತಿನಹೊಳೆ, ಮೇಕೆದಾಟು ಯೋಜನೆಗಳ ವಿಳಂಬಕ್ಕೆ ರಾಜ್ಯ ಸರಕಾರವೇ ಕಾರಣ. ಅದನ್ನು ಮರೆಮಾಚಿಕೊಳ್ಳಲು ಕೇಂದ್ರವನ್ನು ದೂರುತ್ತಿದೆ. ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷದಿಂದಲೇ ಎತ್ತಿನಹೊಳೆ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ ಎಂದರು.

ಎತ್ತಿನಹೊಳೆ ಯೋಜನೆಯನ್ನು ಕಾರ್ಯಗತ ಮಾಡುವಲ್ಲಿ ರಾಜ್ಯ ಸರಕಾರ ಅನೇಕ ತಪ್ಪುಗಳನ್ನು ಮಾಡಿದೆ. ಪರಿಸರಕ್ಕೆ ಧಕ್ಕೆ ತಂದಿದೆ. ಅನೇಕ ಕಾನೂನು, ನಿಯಮಗಳನ್ನು ಉಲ್ಲಂಘನೆ ಮಾಡಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಆಗ ಜಗದೀಶ ಶೆಟ್ಟರ್ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಆಗ ಆ ಯೋಜನೆಯ ಅಂದಾಜು ವೆಚ್ಚ 8,000 ಕೋಟಿ. ಈಗ ಅದು 33,000 ಕೋಟಿ ಮೀರಿದೆ. ಆದರೆ, ಈವರೆಗೂ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಗೆ ತೊಟ್ಟು ನೀರು ಹೋಗಿಲ್ಲ. ಅಷ್ಟೇ ಅಲ್ಲದೆ, ಆ ಯೋಜನೆ ಕಾರ್ಯಗತ ಆಗುತ್ತಿರುವ ಹಾಸನ ಜಿಲ್ಲೆಯ ಸಕಲೇಶಪುರಕ್ಕೆ, ಹತ್ತಿರದಲ್ಲಿರುವ ಅರಸೀಕರೆಗೇ ನೀರು ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ತಿರುಪತಿಗೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ಬಕೆಟ್ ಪಾತ್ರೆಗಳಲ್ಲಿ ತುಂಬಿಕೊಂಡು ಹೋದ ಜನ

ಅದೇ ಜಿಲ್ಲೆಗಳಿಗೆ ಬೆಂಗಳೂರಿನ ಕೊಳಚೆ ನೀರನ್ನು ಮೂರು ಹಂತಗಳಲ್ಲಿ ಶುದ್ದೀಕರಿಸದೆ, ಮಲೀನ ನೀರನ್ನು ಹರಿಸಲಾಗುತ್ತಿದೆ. ಆ ನೀರು ಮಾನವ ಬಳಕೆಗೆ ಯೋಗ್ಯವಲ್ಲದ್ದು. ಇದರ ಪರಿಣಾಮವಾಗಿ ಆ ಭಾಗದಲ್ಲಿ ಬೆಳೆಯುತ್ತಿರುವ ಬೆಳೆಗಳು ಹಾಗೂ ತರಕಾರಿಗಳು ವಿಷಕಾರಿಯಾಗುತ್ತಿವೆ. ಜನರ ಜೀವದ ಜೊತೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ. ಈ ಜಿಲ್ಲೆಗಳು ಎದುರಿಸುತ್ತಿರುವ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಅರಣ್ಯ, ಪರಿಸರ ಜೀವಿಶಾಸ್ತ್ರಖಾತೆ ಮಂತ್ರಿಗಳಾದ ಭೂಪೇಂದ್ರ ಯಾದವ್ ಮಧ್ಯ ಪ್ರವೇಶಿಸಬೇಕು. ಇಲ್ಲವಾದರೆ ಈ ಜಿಲ್ಲೆಯ ಜನರು ವಿಪರೀತ ಬೆಲೆ ತೆರಲಿದ್ದಾರೆ ಎಂದು ದೂರಿದರು.

ಮೇಕೆದಾಟು ಯೋಜನೆಗೂ ರಾಜ್ಯ ಸರಕಾರವೇ ಅಡ್ಡಿಯಾಗಿದೆ. ಈ ಯೋಜನೆ ಕಾರ್ಯಗತವಾಗುವ ಪ್ರಸ್ತಾವಿತ ಜಾಗ ನನಗೆ ಗೊತ್ತು. ಒಂದು ಕಡೆ ಆನೆ ಕಾರಿಡಾರ್, ಮತ್ತೊಂದೆಡೆ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ಇದೆ. ಪ್ರತಿದಿನವೂ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷದಿಂದ ಅಮಾಯಕರು ಬಲಿ ಆಗುತ್ತಿದ್ದಾರೆ. ಇದನ್ನು ತಡೆಯಲು ರಾಜ್ಯ ಸರಕಾರಕ್ಕೆ ಆಗಿಲ್ಲ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ:  ಇರಾನ್ ಇಸ್ರೇಲ್ ಯುದ್ಧದಿಂದ ಷೇರುಪೇಟೆ ಮಹಾಪತನ: 10 ದಿನದಲ್ಲಿ 31 ಲಕ್ಷ ಕೋಟಿ ಸಂಪತ್ತು ನಾಶ

ಪ್ರತಿ ದಿನವೂ ಮಾನವ-ವನ್ಯಜೀವಿ ಸಂಘರ್ಷ ನಡೆಯುತ್ತಿದೆ. ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ತರೀಕೆರೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆನೆಗಳು ಬೆಳೆಗಳನ್ನು ನಾಶ ಮಾಡುತ್ತಿವೆ. ತೋಟಗಳಲ್ಲಿ ದುಡಿಮೆ ಮಾಡುವ ರೈತರನ್ನು ಕೊಲ್ಲುತ್ತಿವೆ. ಇದನ್ನು ತಪ್ಪಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿಲ್ಲ ಎಂದು ಅವರು ದೂರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೊಲೀಸರು ಶಾಸಕರ ಕರೆ ಸ್ವೀಕರಿಸುವುದು ಕಡ್ಡಾಯ
Karnataka News Live: ಎತ್ತಿನಹೊಳೆ, ಮೇಕೆದಾಟು ವಿಳಂಬಕ್ಕೆ ರಾಜ್ಯ ಸರ್ಕಾರ ಕಾರಣ - ದೇವೇಗೌಡ