ಒಂದೇ ಕೇಸಲ್ಲಿ 4 MLC ಕೊಟ್ಟು ವಿಮಾ ಕಂಪನಿಗೆ ವಂಚಿಸಲು ಯತ್ನ: ವೈದ್ಯರ ವಿರುದ್ಧ ತನಿಖೆಗೆ ತಡೆಕೋರಲು ನಿರಾಕರಿಸಿದ ಹೈಕೋರ್ಟ್‌

Published : Mar 10, 2026, 09:03 AM IST
Karnataka highcourt

ಸಾರಾಂಶ

ಒಂದೇ ಅಪಘಾತಕ್ಕೆ ನಾಲ್ಕು ಕಾನೂನುಬದ್ದ ವೈದ್ಯಕೀಯ ಪರೀಕ್ಷಾ ಪ್ರಮಾಣ ಪತ್ರ (ಎಂಎಲ್‌ಸಿ) ನೀಡಿದ ಆರೋಪದ ಮೇಲೆ ವೈದ್ಯರೊಬ್ಬರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಹಾಸನದ 'ಜನಪ್ರಿಯ' ಆಸ್ಪತ್ರೆಯ ವೈದ್ಯ ಡಾ.ಅಬ್ದುಲ್ ಬಶೀರ್ ಅವರ ವಿರುದ್ಧ ಈ ಆರೋಪ ಕೇಳಿ ಬಂದಿದೆ.

ಒಂದೇ ಅಪಘಾತಕ್ಕೆ ನಾಲ್ಕು ಕಾನೂನುಬದ್ದ ವೈದ್ಯಕೀಯ ಪರೀಕ್ಷಾ ಪ್ರಮಾಣ ಪತ್ರ

ಬೆಂಗಳೂರು: ಒಂದೇ ಅಪಘಾತಕ್ಕೆ ನಾಲ್ಕು ಕಾನೂನುಬದ್ದ ವೈದ್ಯಕೀಯ ಪರೀಕ್ಷಾ ಪ್ರಮಾಣ ಪತ್ರ (ಮೆಡಿ ಕೋ ಲೀಗಲ್ ಕೇಸ್ ಎಂಎಲ್‌ಸಿ) ನೀಡಿದ ವೈದ್ಯನ ಕೆಲಸಕ್ಕೆ ದಿಗ್ಬ್ರಮೆ ಪಟ್ಟ ಹೈಕೋರ್ಟ್, ವೈದ್ಯನ ವಿರುದ್ಧದ ಎಫ್‌ಐಆರ್‌ಗೆ ತಡೆ ನೀಡಲು ನಿರಾಕರಿಸಿ ತನಿಖೆ ಮುಂದುವರಿಯಲಿ ಎಂದು ಕಟು ನಿರ್ದೇಶನ ನೀಡಿದೆ.

ಸುಳ್ಳು ಎಂಎಲ್‌ಸಿ ನೀಡಿದ ಆರೋಪದ ಮೇಲೆ ಸಕಲೇಶಪುರ ಗ್ರಾಮೀಣ ಠಾಣಾ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದು ಪಡಿಸುವಂತೆ ಕೋರಿ ಹಾಸನದ 'ಜನಪ್ರಿಯ' ಆಸ್ಪತ್ರೆ ವೈದ್ಯ ಡಾ.ಅಬ್ದುಲ್ ಬಶೀರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಒಂದೇ ಅಪಘಾತಕ್ಕೆ 4 ಎಂಎಲ್‌ಸಿ ನೀಡಬಹುದೇ? ಜನಪ್ರಿಯ ಆಸ್ಪತ್ರೆ ವೈದ್ಯ ಇದಕ್ಕೆ ಜನಪ್ರಿಯರೇ? ಇಂಥ ವೈದ್ಯರಿಂದಲೇ ವಂಚನೆ ನಡೆಯವುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾನೂನು ಕ್ರಮ ಎದುರಿಸಲಿ ಎಂದ ಹೈಕೋರ್ಟ್

ವೈದ್ಯನ ಪರ ವಕೀಲರು ಪ್ರಕರಣಕ್ಕೆ ತಡೆಯಾಜ್ಞೆ ನೀಡಲು ಕೋರಿದರೂ ಒಪ್ಪದ ನ್ಯಾಯಮೂರ್ತಿಗಳು, ಕಾನೂನು ಕ್ರಮ ವೈದ್ಯರು ಎದುರಿಸಲಿ. ತನಿಖೆ ಮುಂದುವರಿಯಲಿ. ಮುಂದಿನ ವಿಚಾರಣೆ ವೇಳೆ ಪೊಲೀಸರು (ಸರ್ಕಾರ) ಪ್ರಕರಣದ ತನಿಖಾ ದಾಖಲೆಗಳನ್ನು ಒದಗಿಸಲಿ ಎಂದು ನಿರ್ದೇಶಿಸಿತು. ಜೊತೆಗೆ, ಅರ್ಜಿಗೆ ಉತ್ತರಿಸುವಂತೆ ಸೂಚಿಸಿ ಸಕಲೇಶಪುರ ಗ್ರಾಮೀಣಾ ಠಾಣಾ ಪೊಲೀಸರು ಮತ್ತು ದೂರುದಾರ ಬಜಾಜ್ ವಿಮಾ ಕಂಪನಿಗೆ ನೋಟಿಸ್ ನೀಡಿ ವಿಚಾರಣೆಯನ್ನು ಮಾ.18ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: 2025ರ ಡಿ.23ರಂದು ಬಜಾಜ್ ವಿಮಾ ಕಂಪನಿಯ ಪ್ರತಿನಿಧಿ ಪ್ರತೀಕ್ ಸಕಲೇಶಪುರದ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು. 2024ರ ಜ.27 ರಂದು ಸಂಜೆ 6.10ಕ್ಕೆ ಕಾರ್ಮಿಕ ಅಬ್ದುಲ್ ರೆಹಮಾನ್‌ಗೆ ಕೆಎ 46 ಕ್ಯೂ 1588 ನಂಬರಿನ ಬೈಕ್ ಡಿಕ್ಕಿ ಹೊಡೆದಿದೆ. ಇದರಿಂದ ಎಡತೊಡೆಯ ಮೂಳೆ ಮುರಿದಿದೆ. ಸಕಲೇಶಪುರ ಗ್ರಾಮೀಣಾ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಈ ಕುರಿತು ಕಂಪನಿಯು 2025ರ ಜೂ. 23ರಂದು ವಿಚಾರಣೆ ನಡೆಸಿತ್ತು.

ಅಬ್ದುಲ್ ರೆಹಮಾನ್ ರಸ್ತೆ ಅಪಘಾತ ವಾದ ದಿನದಂದೇ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಎಂಎಲ್‌ಸಿ ಪಡೆದುಕೊಂಡಿದ್ದಾನೆ. ಅದರಲ್ಲಿ 15 ಅಡಿ ಎತ್ತರದಿಂದ ಸ್ವಯಂ ಬಿದ್ದಿದಾನೆ ಎಂದು ನಮೂದಾಗಿದೆ. ಆದರೆ, ಅಬ್ದುಲ್ ರೆಹಮಾನ್ ವಿಮಾ ಕ್ಷೇಮು ಪಡೆಯಲು ಹಾಸನದ ಜನಪ್ರಿಯ ಆಸ್ಪತ್ರೆಯ ಸಹಕಾರದಿಂದ ರಸ್ತೆ ಅಪಘಾತ ಪ್ರಕರಣವೆಂದು ಆಸ್ಪತ್ರೆಯ ಇಂಟಿಮೇಷನ್ ದಾಖಲಾತಿಯನ್ನು ಮರು ಸೃಷ್ಟಿಸಿದ್ದಾನೆ. ಆ ಮೂಲಕ ಬಜಾಜ್ ವಿಮಾಕಂಪನಿಗೆ ವಂಚಿಸಲು ಪ್ರಯತ್ನಿಸಿದ್ದಾನೆ. ಆದ ಕಾರಣ ಅಬ್ದುಲ್ ಜನಪ್ರಿಯ ಆಸ್ಪತ್ರೆಯ ಡಾ.ಅಬ್ದುಲ್ ಬಶೀರ್ ಮತ್ತು ಬೈಕಿನ ಮಾಲೀಕನ (ಕೆಎ46ಕ್ಯೂ.1588) ವಿರುದ್ದಕ್ರಮ ಜರುಗಿಸಬೇಕು ಎಂದು ವಿಮಾ ಕಂಪನಿ ಪ್ರತಿನಿಧಿ ದೂರಿದ್ದರು.

ಇದನ್ನೂ ಓದಿ: ಎತ್ತಿನಹೊಳೆ, ಮೇಕೆದಾಟು ವಿಳಂಬಕ್ಕೆ ರಾಜ್ಯ ಸರ್ಕಾರ ಕಾರಣ: ದೇವೇಗೌಡ

ಪೊಲೀಸರು ದಾಖಲಿಸಿದ್ದ ಎಫ್ಐಆರ್ ರದ್ದು ಕೋರಿ ಎರಡನೇ ಆರೋಪಿಯಾದ ಡಾ.ಅಬ್ದುಲ್ ಬಶೀರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಡಾ. ಅಬ್ದುಲ್ ಬಸೀರ್ ಪರ ವಕೀಲರು, ಸ್ವಾಮಿ ಅರ್ಜಿದಾರರು ವೈದ್ಯರಾಗಿದ್ದಾರೆ. ವಿಮಾ ಕಂಪನಿ ದೂರು ದಾಖಲಿಸಿದೆ ಎಂದರು.

ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ಅದು ಸರಿ. ಯಾರಾದರೂ ಒಂದು ಅಪಘಾತಕ್ಕೆ 4 ಎಂಎಲ್‌ಸಿ ಕೊಡುತ್ತಾರೆಯೇ? ಅದನ್ನು ನೀವೇ ಕೊಟ್ಟಿದ್ದೇ? ಬಂದವರಿಗೆಲ್ಲ ಒಂದೊಂದು ಎಂಎಲ್‌ಸಿ ಕೊಟ್ಟು ಕಳುಹಿಸುತ್ತೀರಾ? ಎಂದು ಖಾರವಾಗಿ ಪ್ರಶ್ನಿಸಿದರು.

ಅರ್ಜಿದಾರರ ಪರ ವಕೀಲರು, ಇಲ್ಲ ಸ್ವಾಮಿ. ಅಬ್ದುಲ್ ರೆಹಮಾನ್ ಚಿತ್ರದುರ್ಗದಲ್ಲಿ ಅಪಘಾತ ನಡೆದಿದೆ ಎಂದು ಹೇಳಿ ಬಂದಿದ್ದರು. ಗಾಯಗೊಂಡು ಬಂದವರಿಗೆ ಚಿಕಿತ್ಸೆ ನೀಡುವುದು ಅರ್ಜಿದಾರರ ಕರ್ತವ್ಯ, ವೈದ್ಯನಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಚಿತ್ರದುರ್ಗದಲ್ಲಿ ಎಲ್ಲೋ ಅಪಘಾತ ನಡೆದಿದೆ ಎಂದು ಬಂದರೆ ಸತ್ಯಾಂಶ ಹೇಗೆ ತಿಳಿಯುತ್ತದೆ. ಇದು ಎರಡನೇ ಎಂಎಲ್‌ಸಿ ಎಂದರು.

ಇದನ್ನೂ ಓದಿ: ತಿರುಪತಿಗೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ಬಕೆಟ್ ಪಾತ್ರೆಗಳಲ್ಲಿ ತುಂಬಿಕೊಂಡು ಹೋದ ಜನ

ಜನಪ್ರಿಯ ಆಸ್ಪತ್ರೆ ಎಲ್ಲಿದೆ? ಇಂಥ ಕೆಲಸಕ್ಕೆ ಒಂದೇ ಅಪಘಾತಕ್ಕೆ ಎರಡು ಎಂಎಲ್‌ಸಿ ಹೇಗೆ ಕೊಡುತ್ತೀರಾ? ಅರ್ಜಿದಾರರು ಜನಪ್ರಿಯರೇ? ಇಂಥ ವೈದ್ಯರಿಂದಲೇ ವಂಚನೆ ಆಗುತ್ತಿರುವುದು, ಕಾನೂನು ಕ್ರಮ ಎದುರಿಸಬೇಕು. ಬೇರೆ ದಾರಿಯೇ ಇಲ್ಲ. ಈಗ ನಾನು ತನಿಖೆಗೆ ತಡೆಯಾಜ್ಞೆ ನೀಡಿದರೆ, ಅರ್ಜಿದಾರರು ಮೂರನೇ ಎಂಎಲ್‌ಸಿ ನೀಡುತ್ತಾರೆ. ಹೀಗಾಗಿ ದಯೆ ತೋರಿಸಲಾಗದು ತನಿಖೆ ಮುಂದುವರಿಯಲಿ ಎಂದು ಕಟುವಾಗಿ ನುಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎತ್ತಿನಹೊಳೆ, ಮೇಕೆದಾಟು ವಿಳಂಬಕ್ಕೆ ರಾಜ್ಯ ಸರ್ಕಾರ ಕಾರಣ: ದೇವೇಗೌಡ
ಪೊಲೀಸರು ಶಾಸಕರ ಕರೆ ಸ್ವೀಕರಿಸುವುದು ಕಡ್ಡಾಯ