
ಬೆಂಗಳೂರು : ವಿದ್ಯುತ್, ಮೆಟ್ರೋ ರೈಲು ಮತ್ತು ಬಸ್ ದರ ಹೆಚ್ಚಳದ ಬೆನ್ನಲ್ಲೇ ರಾಜ್ಯ ಬಜೆಟ್ ನಂತರ ಮತ್ತೆ ಪ್ರತಿ ಲೀಟರ್ ಹಾಲಿನ ದರವನ್ನು 5 ರು. ಹೆಚ್ಚಿಸಲು ಕೆಎಂಎಫ್ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಹಾಲಿನ ದರವನ್ನು ಆಗಸ್ಟ್ 2023 ರಲ್ಲಿ 3 ರು.ಹೆಚ್ಚಿಸಿ, ಲೀಟರ್‌ಗೆ 39 ರು.ಇದ್ದ ಬೆಲೆಯನ್ನು42 ರು.ಗೆ ಹೆಚ್ಚಿಸಲಾಯಿತು. ಜೂನ್ 2024ರಲ್ಲಿ ಪ್ರತಿ ಪ್ಯಾಕೇಟ್‌ಗೆ 50 ಮಿಲಿ ಲೀ. ಹಾಲು ಹೆಚ್ಚುವರಿಯಾಗಿ ಕೊಟ್ಟು ಮತ್ತೆ 2 ರು.ಏರಿಕೆ ಮಾಡಲಾಗಿತ್ತು. ಇದೀಗ ರಾಜ್ಯದ 16 ಹಾಲು ಒಕ್ಕೂಟಗಳಿಂದ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 5 ರು.ನಂತೆ ಏರಿಕೆ ಮಾಡಲು ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಹಾಲು ದರ ಏರಿಕೆಗೆ ಅನುಮತಿ ನೀಡುವಂತೆ ಕೆಎಂಎಫ್ ರಾಜ್ಯಸರ್ಕಾರಕ್ಕೆ ಕಳೆದ ವರ್ಷವೇ ಪ್ರಸ್ತಾವನೆ ಸಲ್ಲಿಸಿದೆ.
ಈ ಪ್ರಸ್ತಾವನೆ ಕುರಿತು ಕಳೆದ ತಿಂಗಳು ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಸಭೆ ನಡೆಸಿದ್ದಾರೆ. ರೈತರು ಜಾನುವಾರುಗಳಿಗೆ ನೀಡುತ್ತಿರುವ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಹಾಲಿನ ದರ ಲೀಟರ್‌ಗೆ 5 ರು.ಏರಿಕೆ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದು, ಸರ್ಕಾರ ಎಷ್ಟು ದರ ಏರಿಕೆಗೆ ಒಪ್ಪಿಗೆ ನೀಡುತ್ತದೆ ಎಂಬುದರ ಮೇಲೆ ತೀರ್ಮಾನ ಕೈಗೊಳ್ಳಲು ನಿರೀಕ್ಷಿಸಲಾಗುತ್ತಿದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.
ಕೆಎಂಎಫ್ ಅಡಿ ಒಟ್ಟು 16 ಹಾಲು ಒಕ್ಕೂಟಗಳಿದ್ದು, ರಾಜ್ಯದಲ್ಲಿ ಸುಮಾರು 40 ಲಕ್ಷ ಡೈರಿ ರೈತರಿದ್ದಾರೆ. ದಿನಕ್ಕೆ ಸರಾಸರಿ 85ರಿಂದ 90 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ. ಮೇವು, ಲೇಬರ್, ವಿದ್ಯುತ್ ಸೇರಿ ಇತರೆ ನಿರ್ವಹಣೆ ಖರ್ಚು ದಿನೇ ದಿನೆ ಹೆಚ್ಚುತ್ತಿದ್ದು, ಹಾಲಿನ ದರ ಏರಿಕೆ ಅನಿವಾರ್ಯ. ಇಲ್ಲದಿದ್ದರೆ ಒಕ್ಕೂಟಗಳು ರೈತ ಉತ್ಪಾದಕರಿಗೆ ಉತ್ಪಾದನೆಗೆ ತಕ್ಕಂತೆ ಹಣ ನೀಡಲು ಸಾಧ್ಯವಿಲ್ಲ. ಜೊತೆಗೆ ಒಕ್ಕೂಟಗಳು ಕೂಡ ಕೋಟ್ಯಂತರ ರು.ಗಳಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎಂಬುದು ಒಕ್ಕೂಟಗಳ ಅಭಿಪ್ರಾಯ.
ಕರ್ನಾಟಕದಲ್ಲಿ ಸಂಕ್ರಾಂತಿ ಬಳಿಕ ಹಾಲಿದ ದರ 5 ಹೆಚ್ಚಳ?
ರೈತರ ಒತ್ತಡಕ್ಕೆ ಮಣಿದು ಹಾಲಿನ ದರ ಏರಿಕೆ: ಡಿ.ಕೆ. ಶಿವಕುಮಾರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ