
ಕಲಬುರಗಿ (ಏ.17) : ‘ರಾಜ್ಯ ಸರ್ಕಾರವನ್ನು ಬೀಳಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಂ ಮುಂದಾಗಿದೆ. ನೀವು ಒಗ್ಗಟ್ಟಾಗಿದ್ದು, ನಿಮ್ಮಲ್ಲಿನ ಭಿನ್ನಾಭಿಪ್ರಾಯ ಬದಿಗೊತ್ತಿ, ಬಿಜೆಪಿಯ ಈ ಕುತಂತ್ರವನ್ನು ಎದುರಿಸಿ. ನೀವೇ ಕಿತ್ತಾಡಿಕೊಳ್ಳುತ್ತಿದ್ದರೆ ಮೋದಿ-ಶಾ ನಿಮ್ಮ ಸರ್ಕಾರವನ್ನು ಮುಗಿಸುತ್ತಾರೆ, ಹುಷಾರಾಗಿರಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.
ನಗರದ ಕೆಸಿಟಿ ಕಾಲೇಜಿನ ಆವರಣದಲ್ಲಿ ಬುಧವಾರ ನಡೆದ ಉದ್ಯೋಗ ಮೇಳದಲ್ಲಿ ಅವರು ಮಾತನಾಡಿದರು. ವೇದಿಕೆಯಲ್ಲೇ ಇದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅವರತ್ತ ಕೈಸನ್ನೆ ಮಾಡಿದ ಖರ್ಗೆ, ಬಿಜೆಪಿಯವರು ಸಮಾಜ ಒಡೆಯುವ, ಧರ್ಮಗಳನ್ನು ಒಡೆಯುವ ಕುತಂತ್ರವನ್ನು ಮಾಡುತ್ತಲೇ ಬಂದಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಮೋದಿ, ಅಮಿತ್ ಶಾ ತಂಡ ಕುತಂತ್ರ ರೂಪಿಸಬಹುದು. ನಾವೆಲ್ಲರೂ ಸೇರಿಕೊಡು ಮೋದಿ-ಅಮಿತ್ ಶಾ ಜೋಡಿಯ ಯಾವುದೇ ಕುತಂತ್ರಗಳಿಗೆ ಹೆದರದೆ ಬಿಜೆಪಿಯವರನ್ನು ಒದ್ದು ಓಡಿಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ಗಂಡ್ಸು, ಕಾಂಗ್ರೆಸ್‌ನವರಂತೆ ಹೆಂಗಸರಲ್ಲ: ಸಂಸದ ಜಿಗಜಿಣಗಿ ಕಿಡಿ
‘ರಾಜ್ಯದ ಕಾಂಗ್ರೆಸ್ ಸರ್ಕಾರ ಈಗ ಮೋದಿ ಹಾಗೂ ಶಾ ಟೀಂನ ಕಣ್ಣು ಕುಕ್ಕುತ್ತಿದೆ. ಜನರು ನಿಮಗೆ ಆಶೀರ್ವಾದ ಮಾಡಿ ಅಧಿಕಾರದಲ್ಲಿ ಕೂಡಿಸಿದ್ದಾರೆ. ನಿಮ್ಮಲ್ಲಿ ಏನೇ ಭೇದ-ಭಾವ ಇರಲಿ, ನೀವು ಒಂದಾಗಿ ಜಾಗೃತರಾಗಿರಬೇಕು. ಇಲ್ಲದಿದ್ದರೆ ಮೋದಿ- ಶಾ ನಿಮ್ಮ ಮೇಲೆ ದಾಳಿ ಮಾಡುತ್ತಾರೆ, ನಿಮ್ಮನ್ನು ಹೆದರಿಸುತ್ತಾರೆ. ಬಿಜೆಪಿಯಿಂದ ರಾಜ್ಯದ ಜನರನ್ನು ರಕ್ಷಿಸುವ ಹೊಣೆಗಾರಿಕೆ ಕಾಂಗ್ರೆಸ್‌ನ ರಾಜ್ಯ ನಾಯಕರ ಮೇಲಿದೆ’ ಎಂದು ಹೇಳಿದರು.
ತಾವು ಯುಪಿಎ ಸರ್ಕಾರದಲ್ಲಿ ಕಾರ್ಮಿಕ, ರೈಲ್ವೆ ಸಚಿವರಾಗಿದ್ದಾಗ ಮಾಡಿದ ಸಾಧನೆಯನ್ನು ಮೆಲುಕು ಹಾಕಿದ ಖರ್ಗೆ, ಕೌಶಲ್ಯ, ಉದ್ಯೋಗ ತರಬೇತಿಗೆ ಒತ್ತು ಕೊಟ್ಟಿದ್ದನ್ನು ಸ್ಮರಿಸಿದರು. ನನ್ನ ಅವಧಿಯಲ್ಲಿ ದೇಶಾದ್ಯಂತ 28 ರೈಲು ಸಂಚಾರ ಆರಂಭಿಸಿದೆ. ಇವರಿಗೆ ಒಂದು ರೈಲು ಓಡಿಸಲು ಆಗುತ್ತಿಲ್ಲ. ಕಾರ್ಮಿಕರಿಗೆ ಸವಲತ್ತು ಕೊಟ್ಟೆ, ಯಾರೂ ಬೇಡಿಕೆ ಇಡದಿದ್ದರೂ ಜನೋಪಯೋಗಿಯಾಗಿರುವ ಹಲವು ಯೋಜನೆ ತಂದೆ. ನಾನು 1 ವರ್ಷದಲ್ಲಿ ಮಾಡಿದ ಸಾಧನೆಯನ್ನು ಮೋದಿಯಿಂದ 10 ವರ್ಷದಲ್ಲಿಯೂ ಮಾಡಲು ಸಾಧ್ಯವಾಗಿಲ್ಲ. ಆಹಾರ ಭದ್ರತೆ, ಉದ್ಯೋಗ ಖಾತ್ರಿ, ಕೌಶಲ್ಯಾಭಿವೃದ್ಧಿ ಸೇರಿದಂತೆ ಹಲವು ಜನ ಕಲ್ಯಾಣ ಯೋಜನೆಗಳೆಲ್ಲವೂ ಯುಪಿಎ ಸರ್ಕಾರದ ಕೊಡುಗೆ ಎಂದರು.ಕಲಬುರಗಿ ವಿಮಾನ ನಿಲ್ದಾಣಕ್ಕೆ ಶ್ರೀನಿವಾಸ ಸರಡಗಿ ಗ್ರಾಮದ ಜನರು ಭೂಮಿ ಕೊಟ್ಟು ತ್ಯಾಗಿಗಳಾದರು. ರಾಜ್ಯ ಸರ್ಕಾರ ಹಣ ನೀಡಿತು. ಈಗ ನೋಡಿದರೆ ಇಲ್ಲಿ ವಿಮಾನಗಳೇ ಬರುತ್ತಿಲ್ಲ. ಇಲ್ಲಿ ನಿರಂತರ ವಿಮಾನ ಸೇವೆ ಒದಗಿಸಲು ಮೋದಿ ಮನಸ್ಸು ಮಾಡುತ್ತಿಲ್ಲ ಎಂದು ದೂರಿದರು.
ಇದನ್ನೂ ಓದಿ: ವಕ್ಫ್ ಕಾಯ್ದೆ ವಿರುದ್ಧ ಹೋರಾಟ ಮುಂದುವರಿಯುತ್ತೆ; ಎಂಎಲ್ಸಿ ಸಲೀಂ ಅಹ್ಮದ್
ಹೈ-ಕ ಭಾಗಕ್ಕೆ ಆರ್ಟಿಕಲ್ 371 (1)ನ್ನು ಜಾರಿಗೆ ತರುವುದಕ್ಕೆ ಅಂದಿನ ಗೃಹ ಸಚಿವ ಎಲ್.ಕೆ.ಆಡ್ವಾಣಿ ವಿರೋಧಿಸಿದ್ದರು. ಆದರೆ, ಯುಪಿಎ ಸರ್ಕಾರದಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಬಹುಮತ ಇಲ್ಲದಿದ್ದರೂ ಇತರ ಸಂಸದರೊಂದಿಗೆ ಮಾತುಕತೆ ನಡೆಸಿ, ಆರ್ಟಿಕಲ್ 371(1)ನ್ನು ಜಾರಿಗೆ ತಂದೆವು. ಕಾಂಗ್ರೆಸ್, ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಜನರೊಂದಿಗೆ ಸದಾ ಇರಲಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ