ಮಂಡ್ಯದ ಕೆರಗೋಡು ಪಟ್ಟಣದಲ್ಲಿ ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು 'ಹಿಂದೂ ಧರ್ಮದ ಹನುಮಾನ್ ಧ್ವಜ'ವನ್ನು ಹಾರಿಸಿದ್ದರಿಂದ ಅದನ್ನು ಕೆಳಗಿಳಿಸಲಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಮಂಡ್ಯ (ಜ.28): ಮಂಡ್ಯ ಜಿಲ್ಲೆಯ ಕೆರಗೋಡು ಪಟ್ಟಣದ ರಂಗಮಂದಿರ ಮುಂಭಾಗದಲ್ಲಿ ರಾಷ್ಟ್ರಧ್ವಜ/ ಕರ್ನಾಟಕ ಧ್ವಜ ಹಾರಿಸುವುದಾಗಿ ಕೆರಗೋಡಿನ ಶ್ರೀ ಗೌರಿಶಂಕರ ಸೇವಾಟ್ರಸ್ಟ್ ಗ್ರಾಮ ಪಂಚಾಯಿತಿಯಿಂದ ಅನುಮತಿಯನ್ನು ಪಡೆದುಕೊಂಡಿತ್ತು. ಆದರೆ, ಗ್ರಾಮ ಪಂಚಾಯಿತಿ ಅನುಮತಿ ಮೀರಿ ಹಿಂದೂ ಧರ್ಮದ ಧಾರ್ಮಿಕ ಹನುಮಾನ್ ಧ್ವಜವನ್ನು ಹಾರಿಸಲಾಗಿದ್ದು, ಅದನ್ನು ತೆರವು ಮಾಡಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧ್ವಜ ಹಾರಿಸುವ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ. ಆದರೆ ಇದಕ್ಕೆ ಯಾರು ರಾಜಕಾರಣ ಬೆರಸುತ್ತಿದ್ದಾರೋ ಗೊತ್ತಿಲ್ಲ. ಅಲ್ಲಿ ಯಾರು ಮಧ್ಯ ಪ್ರವೇಶ ಮಾಡಿದ್ದಾರೋ ಗೊತ್ತಿಲ್ಲ. ಪಂಚಾಯ್ತಿ ವ್ಯಾಪ್ತಿಯಲ್ಲಿ ರಾಷ್ಟ್ರ ಧ್ವಜ ಹಾರಿಸಬಹುದು. ಅದನ್ನ ಹೊರತು ಪಡಿಸಿ ಸರ್ಕಾರಿ ಜಾಗದಲ್ಲಿ ಬೇರೆ ಧ್ವಜವನ್ನ ಹಾರಿಸುವಂತಿಲ್ಲ. ತ್ರಿವರ್ಣ ಧ್ವಜಕ್ಕೆ ಅನುಮತಿ ಪಡೆದು ಬೇರೆ ಧ್ವಜ ಹಾರಿಸೋದು ತಪ್ಪು. ನಾಳೆ ಬೆಳಿಗ್ಗೆ ಡಿಸಿ ಕಚೇರಿ ಮುಂದೆ ಹಾರಿಸ್ತೀನಿ ಅಂತಾರೆ. ಆಗ ಅವಕಾಶ ಕೊಡಲು ಆಗುತ್ತಾ.? ಇದು ಒಂದು ಕಡೆ ಅವಕಾಶ ಕೊಟ್ರೆ ಎಲ್ಲಾ ಕಡೆ ಕೇಳ್ತಾರೆ ಎಂದು ಕಿಡಿಕಾರಿದರು.
ಮಂಡ್ಯ: ರಾತ್ರೋ ರಾತ್ರಿ ಹನುಮ ಧ್ವಜ ತೆರವಿಗೆ ಅಧಿಕಾರಿಗಳ ಯತ್ನ, ಕೆರಗೋಡದಲ್ಲಿ ಉದ್ವಿಘ್ನ ಪರಿಸ್ಥಿತಿ..!
ಸ್ಥಳೀಯ ಯುವಕರು ಒಳ್ಳೆಯವರೇ ಆದರೆ ಅವರನ್ನ ದಾರಿ ತಪ್ಪಿಸಲಾಗ್ತಿದೆ. ಬೇಕಿದ್ರೆ ಎಲ್ಲರ ಜೊತೆ ಕೂತು ಮಾತನಾಡ್ತೇನೆ. ಮತ್ತೊಂದು ಕಡೆ ಹನುಮಾನ್ ಧ್ವಜ ಕಟ್ಟಲು ಅವಕಾಶ ಮಾಡಿಕೊಡೋಣ. ಖಾಸಗಿ ಜಾಗದಲ್ಲಿ ಅಥವಾ ದೇವಾಲಯದ ಮುಂದೆ ಹಾಕಲು ಅವಕಾಶ ಕೊಡೊಣ. ನಾನು ರಾಮನ ಭಕ್ತ, ನಮ್ಮ ಮನೆ ದೇವರು ವಿಷ್ಣು. ನಾವು ಯಾವುದೇ ಧ್ವಜದ ವಿರೋಧಿಗಳಲ್ಲ. ಪಂಚಾಯ್ತಿಯಲ್ಲಿ ಇದಕ್ಕೆ ಅನುಮೋದನೆ ನೀಡಿದ್ರೆ ತಪ್ಪು. ಅವರ ವಿರುದ್ಧವೂ ಕ್ರಮ ಆಗುತ್ತದೆ. ಇದರಲ್ಲಿ ನಾವಾಗಲಿ, ಸ್ಥಳೀಯ ಶಾಸಕರಾಗಲಿ ರಾಜಕೀಯ ಮಾಡ್ತಿಲ್ಲ. ಸಂವಿಧಾನ ವಿರುದ್ಧ ಆಗಿರೋದ್ರಿಂದ ತೆರವು ಮಾಡಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅನುಮತಿ ಕೊಟ್ಟಿದ್ದೇನು?
ಕೆರಗೋಡು ಗ್ರಾಮದ ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ಕಳೆದ 35 ವರ್ಷಗಳಿಂದ ಧಾರ್ಮಿಕ,ಸಾಮಾಜಿಕ ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಟ್ರಸ್ಟ್ ಸಕ್ರಿಯವಾಗಿದೆ. ಈ ಟ್ರಸ್ಟ್‌ನಿಂದ ಕಳೆದ ಡಿಸೆಂಬರ್ 24 ರಂದು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ರಂಗಮಂದಿರದ ಆವರಣದಲ್ಲಿ ಧ್ವಜಸ್ಥಂಭ ನಿರ್ಮಿಸಲು ಅನುಮತಿ ನೀಡುವಂತೆ ಕೋರಿತ್ತು. ಸದರಿ ಧ್ವಜಸ್ತಂಬದಲ್ಲಿ ತ್ರಿವರ್ಣ ಧ್ವಜ, ಕರ್ನಾಟಕದ ಬಾವುಟ ಹಾರಿಸಲಾಗುವುದು, ಗ್ರಾಮ ಪಂಚಾಯತಿಯ ಷರತ್ತುಗಳಿಗೆ ಬದ್ಧರಾಗಿ ಇರುವುದಾಗಿ ತಿಳಿಸಿದ್ದರು. ಅದರಂತೆ ಡಿ.29 ರಂದು ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯು ಧ್ವಜಸ್ಥಂಭ ನಿರ್ಮಾಣಕ್ಕೆ ಒಪ್ಪಿಗೆ ನೀಡಿತ್ತು. ಜ.5 ರಂದು ಪಂಚಾಯತಿ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಧ್ವಜಸ್ತಂಬ ನಿರ್ಮಿಸಲು ಯಾವುದೇ ಆಕ್ಷೇಪಣಾ ಇಲ್ಲ ಎಂದು ವರದಿ ನೀಡಿದ್ದರು. ಈ ಮದ್ಯೆ ಧ್ವಜಸ್ತಂಬ ನಿರ್ಮಾಣ ಕಾಮಗಾರಿ ಆರಂಭಿಸಿರುವುದನ್ನು ಕಂಡ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅನುಮತಿ ನಂತರ ಕಾಮಗಾರಿ ನಡೆಸಬೇಕು ಅಲ್ಲಿಯವರೆಗೂ ನಡೆಸಬಾರದು ಎಂದು ಟ್ರಸ್ಟ್ ಗೆ ನೋಟಿಸ್ ನೀಡಿದ್ದರು.
ಕಾಂಗ್ರೆಸ್ ಸೇರುವಂತೆ ಸುಮಲತಾರನ್ನು ಯಾರೂ ಸಂಪರ್ಕಿಸಿಲ್ಲ: ಸಚಿವ ಚಲುವರಾಯಸ್ವಾಮಿ
ನಂತರದ ದಿನಗಳಲ್ಲಿ ಧ್ವಜ ಸ್ಥಂಬದಲ್ಲಿ ರಾಷ್ಟ್ರ ಧ್ವಜ ಹಾಗೂ ಕರ್ನಾಟಕದ ಕನ್ನಡ ಬಾವುಟವನ್ನು ಮಾತ್ರ ಹಾರಿಸುವುದಕ್ಕೆ ಮಾತ್ರ ಅವಕಾಶವಿದ್ದು ಬೇರೆ ಯಾವುದೇ ಧಾರ್ಮಿಕ,ರಾಜಕೀಯ ಪಕ್ಷದ ಬಾವುಟವನ್ನು ಹಾರಿಸುವಂತಿಲ್ಲ. ಧ್ವಜ ಹಾರೋಹಣ ಮಾಡುವ ಸಮಯ ಬೆಳಗ್ಗೆ 7ರಿಂದ 8 ಗಂಟೆ ಬಳಿಕ ಸಂಜೆ 5:30ರಿಂದ 5:45 ರೊಳಗೆ ಇಳಿಸಬೇಕು. ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾರ್ಪಾಡು ಮಾಡುವ ಸುತ್ತೋಲೆಗಳಿಗೆ ಬದ್ದರಾಗತಕ್ಕದ್ದು. ಯಾವುದೇ ಗಲಬೆಗಳಿಗೆ ಅವಕಾಶ ಕೊಡದಂತೆ ಬದ್ದರಾಗಿರತಕ್ಕದ್ದು ಎಂದು ಷರತ್ತು ಹಾಕಲಾಗಿತ್ತು.
ಆದರೆ, ಶ್ರೀ ಗೌರಿಶಂಕರ ಸೇವಾ ಟ್ರಸ್ಟ್‌ನಿಂದ ಗ್ರಾಮ ಪಂಚಾಯಿತಿಯ ಎಲ್ಲ ನಿಯಮಗಳನ್ನು ಮೀರಿ ಜ.20ರಂದು ಸಂಜೆ ಹಿಂದೂ ಭಗವದ್ ಹನುಮಾನ್ ಧ್ವಜವನ್ನು ಹಾರಿಸಲಾಗಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರ ಭದ್ರತೆಯಲ್ಲಿ ಧ್ವಜವನ್ನು ಇಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.