
ಕೊಡಗು/ಬೆಳಗಾವಿ (ಫೆ.17): ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿರುವ ಯುವಕರಿಗೆ ಹೆಣ್ಣು ಸಿಗುತ್ತಿಲ್ಲವೆಂದು ದೂರು ಹೆಚ್ಚಾಗುತ್ತಿವೆ. ಇದರ ನಡುವೆ ಕೊಡಗಿನ ಯುವಕ ತನಗೆ ಹೆಣ್ಣು ಸಿಕ್ಕಿಲ್ಲವೆಂದು ಗುಂಡು ಹಾರಿಸಿಕೊಂಡು ಸಾವಿಗೀಡಾದರೆ, ಬೆಳಗಾವಿಯ ಯುವಕ ನಿಶ್ಚಿತಾರ್ಥ ಮಾಡಿಕೊಂಡ ಮದುವೆ ಸಂಬಂಧ ಮುರಿದುಬಿತ್ತು ಎಂದು ಸಾವಿಗೆ ಶರಣಾದ ಘಟನೆ ನಡೆದಿದೆ. ಇಬ್ಬರೂ ಮದುವೆ ಆಗಿಲ್ಲವೆಂದು ಆತ್ಮಹತ್ಯೆಗೆ ಶರಣಾಗಿರುವುದು ಇಡೀ ಸಮಾಜವೇ ಮರುಕಪಡುವಂತಾಗಿದೆ.
ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕೆ.ಬೋಯಿಕೇರಿ ಗ್ರಾಮದ ಯುವಕ ಬಿ.ಪಿ. ಅನಿಲ್ ಕುಮಾರ್ @ ಸತೀಶ್ ತನ್ನ ಮನೆಯಲ್ಲೇ ಸಿಂಗಲ್ ಬ್ಯಾರಲ್ ಬಂದೂಕಿನಿಂದ ಶೂಟ್ ಮಾಡಿಕೊಂಡು ಸಾವಿಗೀಡಾಗಿದ್ದಾನೆ. ಕುಡಿದ ಮತ್ತಿನಲ್ಲಿ ತನ್ನ ಗನ್‌ನಿಂದಲೇ ಶೂಟ್ ಮಾಡಿಕೊಂಡಿದ್ದಾನೆ. ಊರಿನಲ್ಲಿ ಆಚಾರಿ ಕೆಲಸ ಮಾಡಿಕೊಂಡಿದ್ದ ಅನಿಲ್‌ಗೆ ಯಾವಾಗ ಮದುವೆ ಮಾಡಿಕೊಳ್ತೀಯಾ ಎಂದು ಕೇಳುವವರ ಸಂಖ್ಯೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ತಾನು ಕುಡಿದಾಗಲೆಲ್ಲಾ ಮದುವೆ ಆಗುತ್ತಿಲ್ಲ, ಶೂಟ್ ಮಾಡಿಕೊಂಡು ಸಾಯುತ್ತೇನೆ ಎಂದು ಹೇಳುತ್ತಿದ್ದನು. ಆದರೆ, ನಿನ್ನೆ ತಡರಾತ್ರಿ ವೇಳೆ ತನ್ನದೇ ಗನ್‌ನಿಂದ ಶೂಟ್ ಮಾಡಿಕೊಂಡಿದ್ದು, ಆತನ ಮುಖ ಛಿದ್ರ, ಛಿದ್ರವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.
ಇನ್ನು ಪೊಲೀಸರ ಪರಿಶೀಲನೆ ನಂತರ ಯುವಕನ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತನಗೆ ಮದುವೆ ಆಗಲಿಲ್ಲ ಎಂದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ. ಅನಿಲ್‌ಗೆ 43 ವರ್ಷ ವಯಸ್ಸಾಗಿದ್ದರೂ ಮದುವೆ ಆಗಿರಲಿಲ್ಲ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ತನ್ನಿಂದಾಗಿ ಆತನ ಸಹೋದರನಿಗೂ ಮದುವೆಯಾಗಿರಲಿಲ್ಲ. ಹೀಗಾಗಿ ಕೆಲವು ದಿನಗಳ ಹಿಂದೆಯಷ್ಟೇ ಸ್ನೇಹಿತರ ಬಳಿ ಜೀವನ ಬೇಸರವಾಗಿದೆ ಎಂದೆಲ್ಲಾ ಹೇಳಿಕೊಂಡಿದ್ದನು. ಏಕೆ ಎಂದು ಕೇಳಿದ್ದಕ್ಕೆ ಮದುವೆ ಆಗಿಲ್ಲ ಎಂದು ಹೇಳಿದ್ದನು.
ಇದನ್ನೂ ಓದಿ: ಗಂಡನ ಪರಸ್ತೀ ಸಹವಾಸ; ಮಗು ಕೊಂದು ಸಾವಿಗೆ ಶರಣಾದ ಗ್ರಾಮ ಪಂಚಾಯತಿ ಅಧ್ಯಕ್ಷೆ!
ಊರಿನವರೊಂದಿಗೆ ಚನ್ನಾಗಿದ್ದ, ಒಳ್ಳೆಯ ಹುಡುಗನಾಗಿದ್ದ ಆಚಾರಿ ಅನಿಲ್ ಅವರ ತಂದೆ 2010ರಲ್ಲಿ ತೀರಿಕೊಂಡಿದ್ದರು. ಇದಾದ ನಂತರ ಒಂದು ವರ್ಷದಲ್ಲಿ ಮದುವೆ ಮಾಡಿಕೊಳ್ಳಬೇಕು ಎಂದು ಎಷ್ಟೇ ಹೆಣ್ಣು ಹುಡುಕಿದರೂ ಹೆಣ್ಣು ಸಿಗಲೇ ಇಲ್ಲ. ಇದಾದ ಬಳಿಕವೂ ಎಷ್ಟೇ ಹುಡುಕಿದರೂ ನೋಡಿದ ಹೆಣ್ಣು ಮಕ್ಕಳು ಈತನನ್ನಾಗಲೀ, ಈತನ ಅಣ್ಣನನ್ನಾಗಲೀ ಮದುವೆ ಮಾಡಿಕೊಳ್ಳಲು ಒಪ್ಪಿರಲಿಲ್ಲ ಎಂದು ಮೃತ ಅನಿಲ್‌ನ ಅಣ್ಣ ಉಮೇಶ್ ಹೇಳಿದ್ದಾನೆ. ಆದರೆ, ನನ್ನ ತಮ್ಮನಿಗೆ ಮದುವೆ ಆಗದೇ ಇರುವುದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರು ದಾಖಲಾಗಿದೆ. ಆದರೆ, ತನಿಖೆ ನಡೆಯದೆ ನಾವು ಯಾವ ನಿರ್ಧಾರವನ್ನು ಮಾಡಲಾಗಲ್ಲ. ತನಿಖೆ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದ್ದಾರೆ.
ಮದುವೆ ಮುರಿದು ಬಿದ್ದಿದ್ದಕ್ಕೆ ಬಸವರಾಜ ಸಾವು: ಬೆಳಗಾವಿ ತಾಲೂಕಿನ ಕೆ.ಕೆ. ಕೊಪ್ಪ ಗ್ರಾಮದಲ್ಲಿ ಬಸವರಾಜ ಸೋಮಪ್ಪ ಡೊಂಗರಗಾವಿ (28) ಎನ್ನುವ ಯುವಕ ತಾನು ಹೆಣ್ಣು ನೋಡಿ, ಮದುವೆ ಗುರುತು ಮಾಡಿಕೊಂಡರೂ ಮುರಿದು ಬೀಳುತ್ತಿವೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಹಲವು ವರ್ಷಗಳಿಂದ ಮದುವೆ ಮಾಡಿಕೊಳ್ಳಲು ಹಲವಾರು ಸಂಬಂಧ ಹುಡುಕಿದ್ದರೂ, ಎಲ್ಲ ಸಂಬಂಧಗಳೂ ರದ್ದಾಗುತ್ತಿವೆ ಎಂದು ಮನನೊಂದಿದ್ದನು. ನಿನ್ನೆ ಇದೇ ದುಃಖದಲ್ಲಿ ಹೊಲದ ಬಳಿ ಹೋದ ಬಸವರಾಜ ಮರಕ್ಕೆ ನೇಣು ಬಿಗಿದುಕ್ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ಕುಟುಂಬದ ನಾಲ್ವರ ದುರಂತ ಅಂತ್ಯ; ಇಂಚಿಂಚು ಮಾಹಿತಿ ಬಿಚ್ಚಿಟ್ಟ ಪೊಲೀಸರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ