
- ವೆಂಕಟೇಶ್ ಕಲಿಪಿ
ಬೆಂಗಳೂರು (ಫೆ.17) : ಕಕ್ಷಿದಾರರ ಪರ ಖಾಸಗಿ ಕಂಪನಿಗೆ ಲೀಗಲ್ ನೋಟಿಸ್ ನೀಡಿದ ಕಾರಣಕ್ಕಾಗಿ ವಂಚನೆ ಮತ್ತು ಅಪರಾಧಿಕ ಒಳಸಂಚು ಆರೋಪದಡಿ ಬರೊಬ್ಬರಿ 10 ವರ್ಷ ಕ್ರಿಮಿನಲ್ ಪ್ರಕರಣ ಎದುರಿಸಿದ ವಕೀಲರೊಬ್ಬರಿಗೆ ಹೈಕೋರ್ಟ್ ನೆಮ್ಮದಿ ಕರುಣಿಸಿದೆ.
ವಂಚನೆ ಮತ್ತು ಅಪರಾಧಿಕ ಒಳಸಂಚು ಆರೋಪದಡಿ ಬೆಂಗಳೂರಿನ ವಕೀಲ ಎಲ್. ಕುಮಾರ್ ವಿರುದ್ಧ ಪೊಲೀಸರು ಸಲ್ಲಿಸಿದ್ದ ದೋಷಾರೋಪ ಪಟ್ಟಿ ಮತ್ತು ಅದಕ್ಕೆ ಸಂಬಂಧಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ವಕೀಲ ವೃತ್ತಿ ಮಾಡುವ ಕುಮಾರ್ ತಮ್ಮ ಕಕ್ಷಿದಾರರ ಪರ ದೂರುದಾರ ಕಂಪನಿಗೆ ಲೀಗಲ್ ನೋಟಿಸ್ ನೀಡಿದ್ದಾರೆ. ಹೀಗೆ ನೋಟಿಸ್ ನೀಡಿದ್ದಕ್ಕೆ ಪ್ರತಿಯಾಗಿ ಕಂಪನಿ ವಕೀಲರ ವಿರುದ್ಧ ‘ಒಳಸಂಚಿನಲ್ಲಿ ಭಾಗಿಯಾಗಿದ್ದಾರೆ’ಎಂದು ಪೊಲೀಸರಿಗೆ ದೂರು ನೀಡಿದೆ. ಆದರೆ ಕುಮಾರ್ ಅಪರಾಧ ಕೃತ್ಯ ಎಸಗಿರುವುದಕ್ಕೆ ಯಾವುದೇ ನಿರ್ದಿಷ್ಟ ಸಾಕ್ಷ್ಯವಿಲ್ಲ. ಇದರಿಂದ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣದ ವಿಚಾರಣೆ ಮುಂದುವರಿಸಲು ಅನುಮತಿಸುವುದು ಕಾನೂನಿನ ದುರ್ಬಳಕೆಯಾಗಲಿದೆ. ಇದು ರದ್ದುಪಡಿಸಲು ಅರ್ಹ ಪ್ರಕರಣ ಎಂದು ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರ ಪೀಠ ಆದೇಶಿಸಿದೆ.
ಪ್ರಕರಣದ ವಿವರ: ವಕೀಲ ಕುಮಾರ್ ಅವರ ಕಕ್ಷಿದಾರರಾದ ಕೃಷ್ಣ ಹಾಗೂ ಇತರೆ ಎಂಟು ಮಂದಿ ಖಾಸಗಿ ಎಲೆಕ್ಟ್ರಾನಿಕ್ ಕಂಪನಿಯಿಂದ 2014ರ ಮಾ.21ರಿಂದ ಮೇ 6ರವರೆಗೆ ಟಿ.ವಿ ಸೇರಿ ಇನ್ನಿತರ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಸಾಲದಲ್ಲಿ ಖರೀದಿಸಿದ್ದರು. ಸಾಲ ಮರುಪಾವತಿಸದ್ದಕ್ಕೆ ಅವರ ಮನೆಗೆ ತೆರಳಿದ್ದ ಕಂಪನಿ ಪ್ರತಿನಿಧಿಗಳು ಗಲಾಟೆ ಮಾಡಿ ಹಣ ಪಾವತಿಗೆ ಒತ್ತಡ ಹೇರಿದ್ದರು. ಇದರಿಂದ ಕೃಷ್ಣ ಮತ್ತಿತರರು ತಮ್ಮ ವಕೀಲ ಕುಮಾರ್ ಬಳಿಗೆ ತೆರಳಿ ಕಂಪನಿ ಕಿರುಕುಳದ ಬಗ್ಗೆ ವಿವರಿಸಿದ್ದರು.
ಇದನ್ನೂ ಓದಿ: ಕಲಬುರಗಿ ಹೈಕೋರ್ಟ್ ಫೈವ್‌ಸ್ಟಾರ್ ಹೋಟೆಲ್‌ನಂತಿದೆ:ನ್ಯಾ। ಓಕಾ ಮೆಚ್ಚುಗೆ!
ಇದರಿಂದ ಕಂಪನಿಗೆ 2014ರ ಜೂ.16ರಂದು ಲೀಗಲ್ ನೋಟಿಸ್ ನೀಡಿದ್ದ ಕುಮಾರ್, ಇದೊಂದು ಸಿವಿಲ್ ವ್ಯಾಜ್ಯವಾಗಿದೆ. ಸಾಲ ಮರು ಪಾವತಿಸದಿದ್ದರೆ ಕೋರ್ಟ್ ಮೂಲಕ ವಸೂಲಾತಿ ಪ್ರಕ್ರಿಯೆ ನಡೆಸಬೇಕು. ಅದನ್ನು ಬಿಟ್ಟು ಮನೆಗೆ ತೆರಳಿ ಗಲಾಟೆ ಮಾಡಬಾರದು ಎಂದು ತಿಳಿಸಿದ್ದರು.ಇದಾದ ಆರು ತಿಂಗಳ ಬಳಿಕ ಕಂಪನಿ ಪ್ರತಿನಿಧಿ ನಗರದ ಕೆ.ಆರ್.ಪುರ ಪೊಲೀಸ್ ಠಾಣೆಗೆ ದೂರು ನೀಡಿ, ಕೃಷ್ಣ ಮತ್ತಿತರರು ವಂಚನೆ ಮಾಡುವ ಉದ್ದೇಶದಿಂದ ಸಾಲದಲ್ಲಿ ಟಿ.ವಿ. ಸೇರಿ ಇನ್ನಿತರ ಎಲೆಕ್ಟ್ರಾನಿಕ್ ವಸ್ತು ಖರೀದಿಸಿದ್ದಾರೆ. ನಂತರ ಅವುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದರು. ತರುವಾಯ ಸಾಲ ಪಾವತಿಸದೆ ವಂಚಿಸಿದ್ದಾರೆ. ಈ ಕೃತ್ಯಕ್ಕೆ ವಕೀಲ ಕುಮಾರ್ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದರು.
ಈ ಕುರಿತು ತನಿಖೆ ನಡೆಸಿದ ಪೊಲೀಸರು ವಂಚನೆ ಮತ್ತು ಅಪರಾಧಿಕ ಒಳಸಂಚು ಆರೋಪದಡಿ 10ನೇ ಎಸಿಎಂಎಂ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿತ್ತು. ಅರ್ಜಿದಾರ ವಕೀಲ ಕುಮಾರ್ ಅವರನ್ನೇ ಮೊದಲ ಆರೋಪಿಯನ್ನಾಗಿ ಮಾಡಲಾಗಿತ್ತು. ಇದರಿಂದ ಅವರು ಪ್ರಕರಣ ರದ್ದತಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: ದೈಹಿಕ ಸಂಪರ್ಕವಿಲ್ಲದ ಹೆಂಡತಿಯ ಪ್ರೇಮ ಸಂಬಂಧ ವ್ಯಭಿಚಾರವಲ್ಲ : ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು! ಏನಿದು ಪ್ರಕರಣ?
ಕುಮಾರ್ ಪರ ವಕೀಲ ಡಿ.ಮೋಹನ್ ಕುಮಾರ್, ಅರ್ಜಿದಾರರು ಯಾವುದೇ ಅಪರಾಧ ಕೃತ್ಯ ಎಸಗಿಲ್ಲ. ತಮ್ಮ ಕಕ್ಷಿದಾರರ ಪರ ಲೀಗಲ್ ನೋಟಿಸ್ ನೀಡಿದ್ದಾರೆ. ಅದು ಕರ್ತವ್ಯದ ಭಾಗ. ಅದಕ್ಕೆ ಪ್ರತಿಕಾರವಾಗಿ ಕಂಪನಿ ಸುಳ್ಳು ದೂರು ನೀಡಿದೆ. ಮೇಲಾಗಿ ಪೊಲೀಸರು ಸಾಲದಲ್ಲಿ ಟಿ.ವಿ. ಖರೀದಿಸಿದವರನ್ನೇ ಪ್ರಕರಣದಲ್ಲಿ ಸಾಕ್ಷಿದಾರರನ್ನಾಗಿ ಮಾಡಿದ್ದಾರೆ ಎಂದು ತಿಳಿಸಿದರು.
ಅಲ್ಲದೆ, ಸಾಕ್ಷಿದಾರರೇ ಖುದ್ದಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಕಂಪನಿಗೆ ಸಾಲ ಮರು ಪಾವತಿಸಲಾಗಿದೆ. ಹಾಗಾಗಿ, ಜಪ್ತಿ ಮಾಡಿರುವ ಟಿ.ವಿ ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಹಿಂದಿರುಗಿಸಲು ಕಂಪನಿಗೆ ನಿರ್ದೇಶಿಸುವಂತೆ ಕೋರಿದ್ದರು. ಸಾಲ ಮರುಪಾವತಿಸಿರುವುದನ್ನು ಪ್ರಮಾಣ ಪತ್ರದ ಮೂಲಕ ಕೋರ್ಟ್‌ಗೆ ತಿಳಿಸಿದ್ದಾರೆ. ಹಾಗಾಗಿ, ಪ್ರಕರಣದಲ್ಲಿ ಕುಮಾರ್ ಅವರ ಯಾವುದೇ ತಪ್ಪಿಲ್ಲದ ಕಾರಣ ದೋಷಾರೋಪ ಪಟ್ಟಿ ರದ್ದುಪಡಿಸಬೇಕು ಎಂದು ಕೋರಿದ್ದರು. ಈ ಮನವಿ ಪುರಸ್ಕರಿಸಿ ಹೈಕೊರ್ಟ್ ಆದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ