Karnataka Vidyavardhaka Sangha: ಅನುದಾನ ಸಿಗದೆ ಸೊರಗಿದ ಕರ್ನಾಟಕ ವಿದ್ಯಾವರ್ಧಕ ಸಂಘ

Kannadaprabha News, Ravi Janekal |   | Kannada Prabha
Published : Nov 03, 2025, 09:15 AM IST
Karnataka Vidyavardhaka Sangha

ಸಾರಾಂಶ

ಕನ್ನಡದ ಉಳಿವಿಗಾಗಿ ಹೋರಾಡಿದ 135 ವರ್ಷಗಳ ಇತಿಹಾಸದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮುಖ್ಯಮಂತ್ರಿಗಳ ಭರವಸೆಯ ಹೊರತಾಗಿಯೂ ಶಾಶ್ವತ ಅನುದಾನ,ಜಾಗದ ಕೊರತೆಯಿಂದ ಸಂಘವು ತನ್ನ ಚಟುವಟಿಕೆ ವಿಸ್ತರಿಸಲು ಪ್ರಯಾಸಪಡುತ್ತಿದೆ.

ವಿಶೇಷ ವರದಿ

ಧಾರವಾಡ (ನ.3): ಕನ್ನಡಕ್ಕೆ ಕುತ್ತು ಬಂದಾಗಲೆಲ್ಲ ಹೋರಾಟದ ಮುಂಚೂಣಿಯಲ್ಲಿರುವ ಮತ್ತು ಗೋಕಾಕ ಚಳವಳಿ, ಕನ್ನಡ ಸಾಹಿತ್ಯ ಪರಿಷತ್‌ ಜನ್ಮತಾಳಲು ಕಾರಣವಾದ 135 ವರ್ಷ ಇತಿಹಾಸ ಹೊಂದಿರುವ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ರಾಜ್ಯ ಸರ್ಕಾರ ಮರೆತಿದೆ.

ಕನ್ನಡದ ಉಳಿವಿಗಾಗಿ ರಾಜ್ಯಾದ್ಯಂತ ತನ್ನ ಕಾರ್ಯಚಟುವಟಿಕೆ ವಿಸ್ತರಿಸಲು ಸಂಘವು ಏನೆಲ್ಲಾ ಪ್ರಯತ್ನಿಸಿದರೂ ಸಂಘಕ್ಕೆ ಶಾಶ್ವತ ಅನುದಾನ ಇಲ್ಲದೇ ಪ್ರಯಾಸ ಪಡುವಂತಾಗಿದೆ. ಸರ್ಕಾರದ ಮಟ್ಟದಲ್ಲಿ ವಿದ್ಯಾವರ್ಧಕ ಸಂಘದ ಯಾವ ಪ್ರಸ್ತಾವನೆಗೂ ಬೆಲೆ ಇಲ್ಲದಂತಾಗಿರುವುದು ಸೋಜಿಗದ ಸಂಗತಿ. ಆಗಾಗ ಹೊರನಾಡು ಕನ್ನಡ ಸಮ್ಮೇಳನ, ಗಡಿನಾಡು ಸಮ್ಮೇಳನ ಹಾಗೂ ದತ್ತಿ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗುವ ಸ್ಥಿತಿ ಸಂಘದ್ದಾಗಿದೆ.

ಸಿದ್ದರಾಮಯ್ಯ ಭರವಸೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017ರಲ್ಲಿ ಸಂಘದ 128ನೇ ಸಂಸ್ಥಾಪನಾ ದಿನಾಚರಣೆಗೆ ಆಗಮಿಸಿದ್ದರು. ಸಂಘಕ್ಕೆ ಐದು ಎಕರೆ ಜಾಗ ಒದಗಿಸುವ ಘೋಷಣೆ ಮಾಡಿದ್ದರು. ಆದರೆ, ಜಾಗ ಮಂಜೂರಾತಿ ವಿಷಯ ಇನ್ನು ಪ್ರಸ್ತಾವ ಹಂತದಲ್ಲಿಯೇ ಇದೆಯೇ ಹೊರತು ಜಾಗ ನೀಡಲು ಸರ್ಕಾರ ಹೇಳಿಕೊಳ್ಳುವ ಪ್ರಯತ್ನ ಮಾಡಿಲ್ಲ ಎಂಬುದು ಮತ್ತಷ್ಟು ಬೇಸರದ ಸಂಗತಿ. ಜತೆಗೆ ಸಂಘದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಕಲಾ ಗ್ರಾಮ ನಿರ್ಮಿಸುವ ಕನಸು ಸಹ ಕನಸಾಗಿಯೇ ಉಳಿದಿದೆ.

ಮನವಿಗೆ ಇಲ್ಲ ಬೆಲೆ:

ವಿದ್ಯಾವರ್ಧಕ ಸಂಘವು ನಗರದ ಕೇಂದ್ರ ಸ್ಥಳದಲ್ಲಿದೆ. ಮಹಾನಗರ ಪಾಲಿಕೆ ಕಚೇರಿಯ ಎದುರಿದ್ದು, ಇರುವ 20 ಗುಂಟೆ ಜಾಗದಲ್ಲಿ ಪಾಪು ಭವನ, ಕಚೇರಿ, ಗ್ರಂಥಾಲಯ, ಕಲಾ ಗ್ಯಾಲರಿ, ಕನ್ನಡ ಪುಸ್ತಕ ಮನೆ, ಮಹಿಳಾ ವಿಶ್ರಾಂತಿ ಗೃಹ ಹಾಗೂ ಬಾಡಿಗೆ ಅಂಗಡಿಗಳು ಸಹ ಇವೆ. ವಾಹನ ನಿಲುಗಡೆಗೆ ಜಾಗವೇ ಇಲ್ಲ. ಸಂಘದ ಅಭ್ಯುದಯ ಮತ್ತು ಚಟುವಟಿಕೆ ವಿಸ್ತರಣೆಗೆ ಅನುದಾನ, ಜಾಗ ಒದಗಿಸಬೇಕು ಎಂದು ಹಲವು ಬಾರಿ ಸಂಘ ಸಲ್ಲಿಸಿದ ಮನವಿಗಳ ರಾಶಿ ಇದೆಯೇ ಹೊರತು ಯಾವ ಕಾರ್ಯವಾಗಿಲ್ಲ.

ಸಂಘವು ನಿತ್ಯದ ದತ್ತಿ ಅಂಗವಾಗಿ ಕನ್ನಡದ ಜ್ಞಾನ ವಿಸ್ತರಣೆಗೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಯನ್ನು ನಿರಂತರವಾಗಿ ಆಯೋಜಿಸುತ್ತಿದೆ. ರಾಜ್ಯೋತ್ಸವ ಸಡಗರದ ‌ಹೊತ್ತಿನಲ್ಲಿ ಬರೋಬ್ಬರಿ ಒಂದು ತಿಂಗಳು ಕಾಲ ಸಂಗೀತ, ನೃತ್ಯ, ನಾಟಕ, ಧರೆಗೆ ದೊಡ್ಡವರು, ಸಾಧಕರಿಗೆ ಸನ್ಮಾನದಂತಹ ಹತ್ತಾರು ಕಾರ್ಯಕ್ರಮಗಳ ಮೂಲಕ ಇಡೀ ನವೆಂಬರ್‌ ತಿಂಗಳು ಕನ್ನಡಮಯ ಕಾರ್ಯಕ್ರಮಗಳಿರುತ್ತವೆ.

ಇನ್ನೂ ಇದೆ ನಿರೀಕ್ಷೆ:

ಸಂಘಕ್ಕೆ ಜಾಗ, ಅನುದಾನ ಇತ್ಯಾದಿ ಬೇಡಿಕೆಗಳ ಕುರಿತು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಸಂಘದವರು ಉತ್ತರ ಕರ್ನಾಟಕ ಭಾಗದ ಶಾಸಕರು, ಸಚಿವರಿಗೆ ಹಲವಾರು ಬಾರಿ ಪತ್ರ ಬರೆದು ಆಗ್ರಹಿಸಲಾಗಿದೆ. ಆದರೆ, ಉತ್ತರವಿಲ್ಲ. ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಾದರೂ ಸಂಘಕ್ಕೆ ಶಾಶ್ವತ ಅನುದಾನ ಸಿಗಬಹುದೆಂಬ ನಿರೀಕ್ಷೆ ಇದೆ. ಕಾದು ನೋಡಬೇಕಿದೆ.

ವಿದ್ಯಾವರ್ಧಕ ಸಂಘದ ವಿಷಯವಾಗಿ ಹಲವು ಬಾರಿ ವಿಧಾನಸಭಾ ಮೆಟ್ಟಿಲೇರಿದ್ದೇವೆ. ಪ್ರಯತ್ನ ಇನ್ನೂ ಸಾಗುತ್ತಿದೆ. ಐದು ಎಕರೆ ಜಾಗ, ಪ್ರತಿ ವರ್ಷ ₹ 2 ಕೋಟಿ ಶಾಶ್ವತ ಅನುದಾನ, ಕಲಾ ಗ್ರಾಮ ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದರೆ ತಮ್ಮ ಕಾರ್ಯಚಟುವಟಿಕೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಅನುಕೂಲ ಆಗಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ''''ಕನ್ನಡಪ್ರಭ''''ಕ್ಕೆ ಪ್ರತಿಕ್ರಿಯಿಸಿದರು. ಕಸಾಪ ಗೌರವ ಸಂಘಕ್ಕೆ ದೊರೆಯಲಿ..

ಕನ್ನಡ ಸಾಹಿತ್ಯ ಪರಿಷತ್ತಿನ ಜನ್ಮಕ್ಕೆ ಕಾರಣವಾದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಸರ್ಕಾರದಿಂದ ಕಸಾಪಕ್ಕೆ ದೊರೆಯುವ ಎಲ್ಲ ಸೌಲಭ್ಯಗಳು ದೊರೆಯಲೇಬೇಕು. ಈ ಸೌಲಭ್ಯಗಳ ಬಗ್ಗೆ ಈಗಾಗಲೇ ಸಂಘದಿಂದ ನಿರಂತರ ಪ್ರಯತ್ನ ನಡೆದಿದ್ದು, ಸರ್ಕಾರ ಕೂಡಲೇ ಸ್ಪಂದಿಸಬೇಕು. ಸಾಧ್ಯವಾದರೆ, ಈ ಚಳಿಗಾಲದ ಅಧಿವೇಶನದಲ್ಲಿ ಶಾಶ್ವತ ಅನುದಾನದ ಘೋಷಣೆ ಸಹ ಮಾಡಬೇಕು.

ಶ್ರೀನಿವಾಸ ವಾಡಪ್ಪಿ, ಸಂಘದ ಗೌರವ ಉಪಾಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್