BWSSB Annual Income: ನೀರಿನ ಘಟಕಗಳಿಂದ ಜಲಮಂಡಳಿಗೆ ವಾರ್ಷಿಕ ₹8 ಕೋಟಿ ಆದಾಯ

Kannadaprabha News, Ravi Janekal |   | Kannada Prabha
Published : Nov 03, 2025, 08:18 AM IST
BWSSB RO plant management

ಸಾರಾಂಶ

ಬಿಬಿಎಂಪಿಯಿಂದ ಜಲಮಂಡಳಿಗೆ ಹಸ್ತಾಂತರಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಲಾಭದಾಯಕವಾಗಿಸಲು ಜಲಮಂಡಳಿ ಮುಂದಾಗಿದೆ. ಟೆಂಡರ್ ಮೂಲಕ ನಿರ್ವಹಣೆ ವಹಿಸಿ, ವಾರ್ಷಿಕ ₹8 ಕೋಟಿ ಆದಾಯ ಗಳಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯು ದರ ಏಕೀಕರಣ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಒಳಗೊಂಡಿದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ನ.3): ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಜವಾಬ್ದಾರಿಯನ್ನು ಬಿಬಿಎಂಪಿಯು ಜಲಮಂಡಳಿಗೆ ಹಸ್ತಾಂತರಿಸುತ್ತಿದ್ದಂತೆ ಈ ಘಟಕಗಳು ಲಾಭದಾಯಕಗೊಳಿಸಲು ಜಲಮಂಡಳಿ ಟೆಂಡರ್‌ ನೀಡುವ ಮೂಲಕ ವಾರ್ಷಿಕ ₹8 ಕೋಟಿ ಆದಾಯ ನಿರೀಕ್ಷಿಸಿದೆ.

ಈವರೆಗೆ ಶಾಸಕ, ಸಂಸದರು, ಸಚಿವರು, ರಾಜ್ಯಸಭಾ ಸದಸ್ಯರ ವಿವಿಧ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ನಿರ್ವಹಣೆ ಜವಾಬ್ದಾರಿ ನೀಡಲಾಗುತ್ತಿತ್ತು. ಬಿಬಿಎಂಪಿಯು ವಾರ್ಷಿಕ ಸುಮಾರು ₹150 ಕೋಟಿ ಅನುದಾನ ನೀಡಿ ನಿರ್ವಹಣೆ ಮಾಡುತ್ತಿತ್ತು. ಇತ್ತೀಚಿಗೆ ಬಿಬಿಎಂಪಿ ಈ ಘಟಕಗಳನ್ನು ಬೆಂಗಳೂರು ಜಲಮಂಡಳಿಗೆ ಹಸ್ತಾಂತರ ಮಾಡಿದೆ. ಈಗ ಜಲಮಂಡಳಿಯು ಆರ್‌ಓ ಘಟಕಗಳನ್ನು ದುರಸ್ತಿಪಡಿಸಿ, ನಿರ್ವಹಣೆಗೆಯ ಜತೆಗೆ ಲಾಭದಾಯಗೊಳಿಸುವ ಯೋಜನೆ ರೂಪಿಸಿದೆ.

ನೀರಿನ ಘಟಕಗಳಿಂದ ವಾರ್ಷಿಕ ₹8 ಕೋಟಿ ಆದಾಯ

1,084 ಆರ್‌ಒಘಟಕಗಳ ನಿರ್ವಹಣೆಗೆ 50 ರಿಂದ 55 ಘಟಕ ಇರುವ 20 ಪ್ಯಾಕೇಜ್‌ ಮಾಡಿ ಟೆಂಡರ್‌ ಆಹ್ವಾನಿಸಲಾಗಿದೆ. ಗ್ರಾಹಕರಿಂದ ಬರುವ ಹಣದಲ್ಲಿ ಶೇ.60 ರಷ್ಟು ಗುತ್ತಿಗೆದಾರರಿಗೆ, ಶೇ.40 ರಷ್ಟು ಜಲಮಂಡಳಿ ಪಡೆಯಲಿದೆ. ಗುತ್ತಿಗೆದಾರರಿಗೆ ನೀಡುವ ಶೇ.60ರಷ್ಟರ ಪೈಕಿ ಶೇ.50 ರಷ್ಟು ನಿರ್ವಹಣೆ ವೆಚ್ಚವಾಗಿ, ಶೇ.10ರಷ್ಟು ಲಾಭವನ್ನು ಗುತ್ತಿಗೆದಾರರಿಗೆ ನೀಡಲಾಗುತ್ತದೆ.

ಜಲಮಂಡಳಿಯ ಶೇ.40 ರ ಪೈಕಿ ಶೇ. ಶೇ.22.5 ರಷ್ಟು ವಿದ್ಯುತ್‌ ಬಿಲ್‌ ಪಾವತಿಗೆ ಹಾಗೂ ಶೇ.12.50 ರಷ್ಟು ಜಲಮಂಡಳಿಯು ಆದಾಯ ಪಡೆಯಲಿದೆ. ಉಳಿದ ಶೇ5 ರಷ್ಟು ಇತರೆ ವೆಚ್ಚಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಮೂಲಕ ಬೆಂಗಳೂರು ಜಲಮಂಡಳಿಗೆ ಸುಮಾರು 8 ಕೋಟಿ ರು.ನಷ್ಟು ವಾರ್ಷಿಕವಾಗಿ ಆದಾಯ ಬರುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದಾಯವಿಲ್ಲದೇ ₹150 ಕೋಟಿ ವೆಚ್ಚ:

ಈವರೆಗೆ ನಿರ್ವಹಣೆ ವೆಚ್ಚಕ್ಕೆ ಬಿಬಿಎಂಪಿ ಸುಮಾರು 150 ಕೋಟಿ ರು. ವೆಚ್ಚ ಮಾಡುತ್ತಿತ್ತು. ಆದರೆ, ₹1 ರುಪಾಯಿ ಸಹ ಆದಾಯ ಪಾಲಿಕೆಗೆ ಬರುತ್ತಿರಲಿಲ್ಲ. ಜನಪ್ರತಿನಿಧಿಗಳ ಅನುದಾನದಲ್ಲಿ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಹಿಂಬಾಲಕರಿಗೆ ನಿರ್ವಹಣೆಯ ಜವಾಬ್ದಾರಿ ನೀಡಲಾಗುತ್ತಿತ್ತು. ಗ್ರಾಹಕರು ನೀಡುವ ಹಣವನ್ನು ಅವರೇ ಪಡೆಯುತ್ತಿದ್ದರು. ಆದರೆ, ನಿರ್ವಹಣೆಯನ್ನು ಬಿಬಿಎಂಪಿ ಮಾಡುತ್ತಿತ್ತು. ಇದೀಗ ಎಲ್ಲ ಘಟಕಗಳ ನಿರ್ವಹಣೆಯನ್ನು ಗುತ್ತಿಗೆ ನೀಡಲಾಗುತ್ತಿದೆ. ಗುತ್ತಿಗೆ ಪಡೆದವರು ನಿರ್ವಹಣೆ ಮಾಡಿ ಲಾಭ ಪಡೆಯಲಿದ್ದಾರೆ. ಜತೆಗೆ, ಒಂದಿಷ್ಟು ಆದಾಯ ಬರುವ ರೀತಿ ಜಲಮಂಡಳಿ ಯೋಜಿಸಿದೆ.

ಶೇ.50ರಷ್ಟು ಅನಧಿಕೃತ ವಿದ್ಯುತ್‌:

ನಗರದಲ್ಲಿರುವ 1,084 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಶೇ.50 ರಷ್ಟು ಘಟಕಗಳಿಗೆ ಬೆಸ್ಕಾಂ ನಿಂದ ಅಧಿಕೃತವಾಗಿ ವಿದ್ಯುತ್‌ ಸಂಪರ್ಕವನ್ನು ಪಡೆದುಕೊಳ್ಳದೇ, ನಡೆಸಲಾಗುತ್ತಿತ್ತು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ. ಜಲಮಂಡಳಿಗೆ ಹಸ್ತಾಂತರಗೊಂಡ ಬಳಿಕ ಇದೀಗ ಅಧಿಕೃತವಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಂಡಿದೆ. ಇನ್ನೂ ಅಧಿಕೃತವಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಂಡ ಘಟಕಗಳ ವಿದ್ಯುತ್‌ ಬಿಲ್‌ ಲಕ್ಷಾಂತರ ರು. ಬಾಕಿ ಇದೆ. ಜಲಮಂಡಳಿಯು ಹಸ್ತಾಂತರದ ನಂತರ ವಿದ್ಯುತ್‌ ಬಿಲ್‌ ಪಾವತಿಸಲಿದೆ. ಈ ಹಿಂದಿನ ಬಿಲ್‌ನ್ನು ಬಿಬಿಎಂಪಿಯೇ ಪಾವತಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್‌ಗೆ ಯುಪಿಐ ಮತ್ತು ಪ್ರಿಪೇಡ್‌ ಕಾರ್ಡ್‌ ಜಾರಿ ಹಣ ಸೋರಿಕೆ ತಡೆಯಲು ನಾಣ್ಯದ ಬಳಕೆ ವ್ಯವಸ್ಥೆ ನಿಲ್ಲಿಸಲು ನಿರ್ಧರಿಸಲಾಗಿದ್ದು, ಎಲ್ಲ ಆರ್‌ಒ ಘಟಕದಲ್ಲಿ ಯುಪಿಐ ಮೂಲಕ ಹಣ ಪಾವತಿಸಿ ನೀರು ಪಡೆಯಲು ಕ್ಯೂರ್‌ ಆರ್‌ ಕೋಡ್‌ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ. ಜತೆಗೆ, ಯುಪಿಐ ಬಳಕೆ ಇಲ್ಲದವರಿಗೆ ಜಲಮಂಡಳಿಯಿಂದ ಪ್ರೀಪೇಡ್‌ ಕಾರ್ಡ್‌ ನೀಡುವುದು. ಗ್ರಾಹಕರು ಜಲಮಂಡಳಿಯ ಸೇವಾ ಕೇಂದ್ರ ಅಥವಾ ಕಿಯೋಸ್ಕ್‌ಗಳಲ್ಲಿ ಕಾರ್ಡ್‌ಗೆ ಹಣ ಭರ್ತಿ ಮಾಡಿ ಬಳಸುವ ವ್ಯವಸ್ಥೆ ಡಿಸೆಂಬರ್‌ ವೇಳೆಗೆ ಜಾರಿಗೆ ತರಲು ಉದ್ದೇಶಿಸಿದೆ.

₹10 ದರ ನಿಗದಿ

ಶುದ್ಧ ನೀರಿನ ಘಟಕಗಳಿಗೆ (ಆರ್‌ಓ ಫಟಕ) ಏಕ ರೂಪದ ದರ ನಿಗದಿಗೆ ಬೆಂಗಳೂರು ಜಲಮಂಡಳಿ ನಿರ್ಧರಿಸಲಾಗಿದ್ದು, ಕೆಲವು ಆರ್‌ಓ ಘಟಕದಲ್ಲಿ 5 ರು, ಮತ್ತೆ ಕೆಲವು ಘಟಕದಲ್ಲಿ 10 ರು. ದರ ನಿಗದಿ ಪಡಿಸಲಾಗಿತ್ತು. ಇದೀಗ, ಪ್ರತಿ 20 ಲೀಟರ್‌ಗೆ 10 ರು.ಗೆ ನಿಗದಿಗೆ ಜಲಮಂಡಳಿ ಚಿಂತನೆ ನಡೆಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌