
ಬೆಂಗಳೂರು (ಮಾ.2): ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಸಿನಿಮಾ ನಿರ್ಮಿಸಲು ಅನುಕೂಲವಾಗುವಂತೆ ಮೈಸೂರು ಸಮೀಪ 150 ಎಕರೆ ಜಾಗದಲ್ಲಿ ವಿಶ್ವದರ್ಜೆಯ ಹೈಟೆಕ್ ಫಿಲ್ಮ್ ಸಿಟಿ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಶನಿವಾರ ವಿಧಾನಸೌಧ ಮೆಟ್ಟಿಲುಗಳ ಮೇಲೆ ‘16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ’ ಉದ್ಘಾಟಿಸಿ ಮಾತನಾಡಿ, ಕೆಐಎಡಿಬಿಯಿಂದ ವಾರ್ತಾ ಇಲಾಖೆಗೆ ಜಮೀನು ಹಸ್ತಾಂತರ ಮಾಡಲಾಗಿದೆ.
ವಿಶ್ವದರ್ಜೆಯ ಎಲ್ಲ ಸೌಲಭ್ಯಗಳು, ತಂತ್ರಜ್ಞಾನ ಸೌಲಭ್ಯ ಇರುವ ಫಿಲ್ಮ್ ಸಿಟಿ ನಿರ್ಮಿಸುತ್ತೇವೆ. ಸಿನಿಮಾ ರಂಗದ ಜೊತೆ ನಮ್ಮ ಸರ್ಕಾರ ಎಂದಿಗೂ ಇರುತ್ತದೆ. ಚಿತ್ರರಂಗ ಕೂಡ ನಮ್ಮ ಸಮಾಜ, ಬದುಕಿನ ವಿಚಾರಗಳನ್ನು ಪ್ರತಿಬಂಬಿಸುವ, ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುವ ಸಿನಿಮಾಗಳನ್ನು ನಿರ್ಮಿಸಬೇಕು ಎಂದರು.
ಡಾ.ರಾಜ್‌ಕುಮಾರ್ ಕನಸಿನಂತೆ ಮೈಸೂರು ಫಿಲ್ಮ್ ಸಿಟಿಗೆ ಶೀಘ್ರವೇ ಶಂಕು: ಸಿಎಂ ಸಿದ್ದರಾಮಯ್ಯ ಭರವಸೆ
ದೇಶದ ಶೇ.1ರಷ್ಟು ಜನರಲ್ಲಿ ಶೇ.50ರಷ್ಟು ಸಂಪತ್ತು ಇರುವುದರಿಂದ ಸಮಾಜದಲ್ಲಿ ಅಸಂತೋಷ, ಅಸಹನೆ, ಅಸಮಾಧಾನ, ದ್ವೇಷ ಭಾವನೆ ಸ್ವಾಭಾವಿಕವಾಗಿ ತಲೆ ಎತ್ತುತ್ತದೆ. ಅದನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ವ ಜನಾಂಗದ ಶಾಂತಿ ತೋಟ ಪರಿಕಲ್ಪನೆಯಲ್ಲಿ ಈ ಚಿತ್ರೋತ್ಸವ ಮಾಡಲಾಗುತ್ತಿದೆ. ಸಿನಿಮಾ ಒಂದು ಪ್ರಭಾವಿ ಮಾಧ್ಯಮ. ಸಿನಿಮಾಗಳಲ್ಲಿ ಮೌಢ್ಯ ತೋರಿಸಬಾರದು. ಹಿಂದೆ ರಾಜಕುಮಾರ್ ಅವರ ಸಿನಿಮಾಗಳು ಸಾಮಾಜಿಕ ಸಂದೇಶ ನೀಡುತ್ತಿದ್ದವು. ಇಂದು ಅಂತಹ ಸಿನಿಮಾಗಳು ಬರುತ್ತಿಲ್ಲ. ಹೀಗಾಗಿ, ಜನರು ಸಿನಿಮಾ ನೋಡುವುದು ಕಡಿಮೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶೂಟಿಂಗ್‌ಗೆ ಅನುಮತಿ ಕೇಳಲು ನಮ್ಮ ಬಳಿ ಬರಲೇಬೇಕು: ಡಿಕೆಶಿ ಖಡಕ್ ಮಾತು
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ನಮ್ಮ ಸಿನಿಮಾ ರಂಗದವರ ಬಗ್ಗೆ ನನಗೆ ಬಹಳ ಸಿಟ್ಟಿದೆ. ಕೆಲಸ ಇದ್ದಾಗ ನಮ್ಮ ಬಳಿ ಬರುತ್ತಾರೆ. ನಂತರ ಬಳಸಿ ಬಿಸಾಡುತ್ತಾರೆ. ನಮ್ಮ ಪಕ್ಷದಿಂದ ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದ್ದೆವು. ಈ ವೇಳೆ ಚಿತ್ರರಂಗದ ಕೆಲವರು ಮಾತ್ರ ಜೊತೆಯಾದರು. ಬಹುತೇಕರು ಬರಲೇ ಇಲ್ಲ. ಈ ರೀತಿ ಮಾಡುವವರ ನಟ್, ಬೋಲ್ಟ್ ಟೈಟ್ ಮಾಡುವುದು ಹೇಗೆಂಬುದು ನನಗೆ ಗೊತ್ತು. ನಾನು ಚಿತ್ರರಂಗದಿದಲೇ ಬಂದವನು. ಸಿನಿಮಾ ನಿರ್ಮಾಣಕ್ಕೆ ಶೂಟಿಂಗ್ ಅನುಮತಿ ಸೇರಿ ಅನೇಕ ಕೆಲಸಗಳಿಗೆ ನಮ್ಮ ಬಳಿ ಬರಬೇಕಾಗುತ್ತದೆ. ನಾನು ಏನು ಮಾಡಬೇಕೋ ಮಾಡುತ್ತೇನೆ. ಇದನ್ನು ಎಚ್ಚರಿಕೆ ಅಂತಲೋ ಅಥವಾ ಕೋರಿಕೆ ಅಂತಲೋ ಭಾವಿಸಬಹುದು ಎಂದು ಹೇಳಿದರು.ಹೋರಾಟದ ವೇಳೆ ನಮ್ಮ ಜೊತೆಗೆ ಸಾಧು ಕೋಕಿಲಾ ಸೇರಿ ಕೆಲವರು ಮಾತ್ರ ಸಾಥ್ ನೀಡಿದರು. ಕಷ್ಟದ ಸಂದರ್ಭದಲ್ಲಿ ನಮ್ಮ ಜೊತೆಗಿದ್ದವರ ಕೈ ಹಿಡಿಯಬೇಕಾಗಿದ್ದು ನಮ್ಮ ಜವಾಬ್ದಾರಿ. ಅದಕ್ಕಾಗಿ ನಮ್ಮ ಸರ್ಕಾರ ಬರುತ್ತಿದ್ದಂತೆ ಸಾಧು ಕೋಕಿಲಾ ಅವರನ್ನು ಅಕಾಡೆಮಿ ಅಧ್ಯಕ್ಷರಾಗಿ ನೇಮಿಸಿದ್ದೇವೆ. ನಮ್ಮ ಜೊತೆಗಿರುವವರಿಗೆ ಸೂಕ್ತ ಗೌರವ ನೀಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
Kannada Entertainment Live: ಸಿನಿ ರಂಗದ ಬಗ್ಗೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಡಿಸಿಎಂ ಖಡಕ್ ಮಾತು
ಸರ್ಕಾರದ ಆಚಾರ, ವಿಚಾರಗಳನ್ನು ಪ್ರಚಾರ ಮಾಡುವುದು ಸಿನಿಮಾ ರಂಗದವರ ಧರ್ಮ. ಇಂತಹ ದೊಡ್ಡ ಕಾರ್ಯಕ್ರಮಕ್ಕೆ ಸಿನಿಮಾ ರಂಗದ ಕೆಲವೇ ಕೆಲ ಜನರು ಬಂದಿದ್ದಾರೆ. ಚಿತ್ರೋತ್ಸವಕ್ಕೆ ಸಿನಿಮಾ ರಂಗದವರೇ ಬಾರದಿದ್ದರೆ ಹೇಗೆ? ಕೆಲ ಜನ ಮಾತ್ರ ವೇದಿಕೆ ಎದುರು ಕುಳಿತಿದ್ದಾರೆ. ಇಂತಹ ಕಾರ್ಯಕ್ರಮಕ್ಕೆ ಸಿನಿಮಾ ರಂಗದ ಎಲ್ಲರೂ ಇರಬೇಕಿತ್ತು. ನಾವು ಎಲ್ಲವನ್ನೂ ಗಮನಿಸುತ್ತೇವೆ. ನಾಡಿ ಮಿಡಿತ ಅರಿಯುತ್ತೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ನಾಡಿದ್ದಿಂದ ಶೂಟಿಂಗ್ ಶುರು-ಶಿವಣ್ಣ: ಚಿತ್ರೋತ್ಸವದ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ನಟ ಶಿವರಾಜ್‌ಕುಮಾರ್, ಚಿತ್ರೋತ್ಸವ ಎನ್ನುವುದು ನಮ್ಮ ಮನೆಯ ಹಬ್ಬ ಇದ್ದಂತೆ. ಇದರಲ್ಲಿ ಎಲ್ಲರೂ ಭಾಗವಹಿಸಬೇಕು. ನಮ್ಮ ಚಿತ್ರರಂಗ ಅಂತರಾಷ್ಟ್ರೀಯ ಮಟ್ಟದಲ್ಲಿದೆ. ಇದರಲ್ಲಿ ಕೆಲಸ ಮಾಡುವುದು ನನಗೆ ಹೆಮ್ಮೆಯ ಸಂಗತಿ. ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟವಿದ್ದಂತೆ. ಎಲ್ಲರನ್ನೂ ಎರಡು ಕೈಗಳಿಂದ ಸ್ವಾಗತಿಸುತ್ತದೆ. ನಾಡಿದ್ದಿನಿಂದ ನಾನು ಶೂಟಿಂಗ್ ಆರಂಭಿಸುತ್ತೇನೆ ಎಂದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಮಾತನಾಡಿ, ದೀನ ದಲಿತರು, ಜನ ಸಾಮಾನ್ಯರ ವಿಚಾರಗಳನ್ನು ಒಳಗೊಂಡಿರುವ ಜಗತ್ತಿನ 60 ದೇಶಗಳ 200 ಸಿನಿಮಾಗಳು ಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿವೆ. ಅಕಾಡೆಮಿಯಿಂದ ಸಿನಿಮಾ ಮಂದಿರ ನಿರ್ಮಿಸಲು ಸರ್ಕಾರ ಸಹಕಾರ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಕೆ.ಜೆ.ಜಾರ್ಜ್, ಮಾಜಿ ಸಚಿವೆ ಉಮಾಶ್ರೀ, ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್, ಶಾಸಕ ರಿಜ್ವಾನ್ ಅರ್ಷದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬಿ.ಬಿ. ಕಾವೇರಿ, ಆಯುಕ್ತ ಹೇಮಂತ್ ನಿಂಬಾಳ್ಕರ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ