ಸದಾ ಕಾನೂನು, ವಾದ-ಪ್ರತಿವಾದ, ಪರಾಮರ್ಶೆ ನಡೆಯುವ ಹೈಕೋರ್ಟ್‌ನಲ್ಲಿ ನಾಡಗೀತೆ ಕುರಿತಂತೆ ಸಲ್ಲಿಸಿರುವ ಅರ್ಜಿ ಸಂಬಂಧ ಅರ್ಜಿದಾರರು ಐದು ವಿಭಿನ್ನ ರಾಗದಲ್ಲಿ ಕುವೆಂಪು ಅವರ ನಾಡಗೀತೆ ಹಾಡುವ ಮೂಲಕ ವಾದ ಮಂಡಿಸಿದ ವಿಶೇಷ ಪ್ರಸಂಗ ನಡೆಯಿತು.
ಬೆಂಗಳೂರು (ಜು.14): ಸದಾ ಕಾನೂನು, ವಾದ-ಪ್ರತಿವಾದ, ಪರಾಮರ್ಶೆ ನಡೆಯುವ ಹೈಕೋರ್ಟ್‌ನಲ್ಲಿ ನಾಡಗೀತೆ ಕುರಿತಂತೆ ಸಲ್ಲಿಸಿರುವ ಅರ್ಜಿ ಸಂಬಂಧ ಅರ್ಜಿದಾರರು ಐದು ವಿಭಿನ್ನ ರಾಗದಲ್ಲಿ ಕುವೆಂಪು ಅವರ ನಾಡಗೀತೆ ಹಾಡುವ ಮೂಲಕ ವಾದ ಮಂಡಿಸಿದ ವಿಶೇಷ ಪ್ರಸಂಗ ನಡೆಯಿತು. ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರ 2022ರ ಸೆ.25ರಂದು ಹೊರಡಿಸಿದ ಆದೇಶ ಆಕ್ಷೇಪಿಸಿ ಅರ್ಜಿ ಸಲ್ಲಿಸಿರುವ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಖುದ್ದಾಗಿ ಕೋರ್ಟ್ ಹಾಲ್‌ನಲ್ಲಿ, ಸಿ.ಅಶ್ವತ್ಥ ಅವರು ಸಂಯೋಜಿಸಿರುವ ರಾಗದಲ್ಲೇ ನಾಡಗೀತೆ ಹಾಡುವುದು ಸಮಂಜಸ ಎಂದು ವಿವಿಧ ರಾಗಗಳ ಬಗ್ಗೆ ಪ್ರತಿಪಾದಿಸಿದರು.
ಆಗ, ‘ರಾಗಗಳ ಹೆಸರು ಹೇಳಿದರೆ ಸಾಲದು, ಹಾಡಿ ತೋರಿಸಿ’ ಎಂದು ನ್ಯಾ.ಕೃಷ್ಣ ಎಸ್. ದೀಕ್ಷಿತ್ ನುಡಿದರು. ಹೀಗಾಗಿ ತಮ್ಮ ವಾದಕ್ಕೆ ಪೂರಕವಾಗಿ ‘ಉದಯ ರವಿಚಂದ್ರಿಕೆ’, ‘ಜಂಜೂಟಿ’, ‘ಹಿಂದೋಳ’, ‘ಕಲ್ಯಾಣಿ’ ಮತ್ತು ‘ಮಾಯಾ ಮಾಳವ ಗೋಳ’ ರಾಗದಲ್ಲಿ ನಾಡಗೀತೆಯನ್ನು ಹಾಡಿದರು. ‘ಇದರಿಂದ ಪ್ರಕರಣದಲ್ಲಿ ಅಡಗಿರುವ ವಿಚಾರಗಳು ಗಂಭೀರವಾಗಿದೆ’ ಎಂದು ಅಭಿಪ್ರಾಯಪಟ್ಟ ನ್ಯಾ.ದೀಕ್ಷಿತ್ ಅವರು, ಪ್ರಕರಣದ ಕುರಿತಂತೆ ಸರ್ಕಾರಿ ವಕೀಲರು ಆಳವಾಗಿ ವಿಚಾರಗಳನ್ನು ಪರಿಶೀಲಿಸಿ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಸಮರ್ಪಕ ಮತ್ತು ಸಮಗ್ರವಾದ ಮಾಹಿತಿ ಕಲೆಹಾಕಿ ನ್ಯಾಯಾಲಯದ ಮುಂದಿಡಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜು.31ಕ್ಕೆ ಮುಂದೂಡಿದರು.
ವೇಣುಗೋಪಾಲ್ ಹತ್ಯೆ ಧರ್ಮ, ರಾಜಕೀಯ ವ್ಯಾಪ್ತಿಗೆ ಬರಲ್ಲ: ಸಚಿವ ಮಹದೇವಪ್ಪ
ವಾದ-ಪ್ರತಿವಾದ: ಇದಕ್ಕೂ ಮುನ್ನ ವಿಚಾರಣೆ ವೇಳೆ ಸರ್ಕಾರಿ ವಕೀಲರು, ಕುವೆಂಪು ಅವರು ಕೆಲವೊಂದು ಷರತ್ತು ವಿಧಿಸಿ ಸಿನಿಮಾದಲ್ಲಿ ನಾಡಗೀತೆ ಬಳಸಲು ಮತ್ತು ರಾಗ ಸಂಯೋಜಿಸಲು ಅನುಮತಿ ನೀಡಿದ್ದಾರೆ ಎಂದರು. ಆಗ ನ್ಯಾಯಮೂರ್ತಿಗಳು, ಕುವೆಂಪು ಅವರು ಅನುಮತಿ ನೀಡಿರುವುದು ನಿಜವೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಿಕ್ಕೇರಿ ಪರ ವಕೀಲರು, ಕುವೆಂಪು ಸಾಹಿತ್ಯ ಬಳಕೆಗೆ ಮಾತ್ರ ಅನುಮತಿ ನೀಡಿದ್ದಾರೆ ಹೊರತು ಸಂಗೀತ ಸಂಯೋಜನೆಗೆ ಅಲ್ಲ ಎಂದರು.
ಅದರಿಂದ ತೃಪ್ತರಾಗದ ನ್ಯಾಯಮೂರ್ತಿಗಳು, ಪ್ರಕರಣದ ಕುರಿತು ಸಂಪೂರ್ಣ ಮಾಹಿತಿಯನ್ನು ನ್ಯಾಯಾಲಯ ತಿಳಿಯಬೇಕಿದೆ. ನಿಮ್ಮ ಕಕ್ಷಿದಾರರು ಲಭ್ಯವಿದ್ದರೆ ಅವರನ್ನು ಕರೆಯಿಸಿ ಎಂದು ಸೂಚಿಸಿದರು. ಇದೇ ವೇಳೆ ಕೋರ್ಟ್ ಹಾಲ್‌ನಲ್ಲಿ ಕಿಕ್ಕೇರಿ ಕೃಷ್ಣಮೂರ್ತಿ ಹಾಜರಿದ್ದನ್ನು ತಿಳಿದು, ಅವರಿಂದಲೇ ಹೆಚ್ಚಿನ ಮಾಹಿತಿ ಕೇಳಿತು.
ವಾದ ಮಂಡನೆಗೆ ನಿಂತ ಕಿಕ್ಕೇರಿ, ಕುವೆಂಪು ಅವರು ವಾಸ್ತವವಾಗಿ ಸಿನಿಮಾಕ್ಕೆ ನಾಡಗೀತೆಯ ಸಾಲು ಬಳಸಲು ಅನುಮತಿ ನೀಡಿದ್ದರು. ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಅವರು ಕಲ್ಯಾಣಿ ರಾಗದಲ್ಲಿ ಸಂಗೀತ ಸಂಯೋಜಿಸಿದ್ದಾರೆ. ಅಶ್ವತ್ ಅವರು ಉದಯ ರವಿಚಂದ್ರಿಕೆ ರಾಗ ಮತ್ತು ಅನಂತಸ್ವಾಮಿ ಅವರು ಮಾಯಾ ಮಾಳವ ಗೋಳ ಸಂಗೀತದಲ್ಲಿ ರಾಗ ಸಂಯೋಜಿಸಿದ್ದಾರೆ. ಇದಲ್ಲದೆ, ಇನ್ನು ಹಲವು ರಾಗದಲ್ಲಿ ನಾಡಗೀತೆಯನ್ನು ಹಾಡಬಹುದಾಗಿದೆ ಎಂದರು.
ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ‘ರಾಗಗಳ ಹೆಸರು ಹೇಳಿದರೆ ಸಾಕಾಗುವುದಿಲ್ಲ. ಹಾಡಿನ ಸೌಂದರ್ಯ ಹಾಗೂ ಪ್ರಾಮುಖ್ಯತೆ, ವಿವಿಧ ರಾಗಗಳಲ್ಲಿನ ವ್ಯತ್ಯಾಸವನ್ನು ಪ್ರಸ್ತುತ ಪಡಿಸುವುದು ಉತ್ತಮ. ವಿವಿಧ ರಾಗದಲ್ಲಿ ಹಾಡಲು ಸಾಧ್ಯವಿದೆ ಎಂದಾದರೆ ನೀವು ಹಾಡಿ ತೋರಿಸಬಹುದೇ’ ಎಂದು ಕಿಕ್ಕೇರಿ ಅವರನ್ನು ಪ್ರಶ್ನಿಸಿದರು. ನ್ಯಾಯಮೂರ್ತಿಗಳ ಸೂಚನೆಗೆ ಒಪ್ಪಿದ ಕಿಕ್ಕೇರಿ, ‘ಉದಯ ರವಿಚಂದ್ರಿಕೆ, ಜಂಜೂಟಿ, ಹಿಂಧೋಳ, ಕಲ್ಯಾಣಿ ಮತ್ತು ಮಾಯಾ ಮಾಳವ ಗೋಳ ರಾಗದಲ್ಲಿ ನಾಡಗೀತೆಯ ಸಾಲು ಹಾಡಿದರು.
ಅಲ್ಲದೆ, ಅನಂತಸ್ವಾಮಿ ಅವರು ನಾಡಗೀತೆಯ ಕೇವಲ ಒಂದು ಪಲ್ಲವಿ ಮತ್ತು ಎರಡು ಚರಣಗಳಿಗೆ ಮಾತ್ರ ರಾಗ ಸಂಯೋಜಿಸಿದ್ದಾರೆ. ಒಂದು ವೇಳೆ ಅನಂತಸ್ವಾಮಿಯವರೇ ಸಂಯೋಜಿಸಿದ ಧಾಟಿಯಲ್ಲೇ ಹಾಡುವುದಾದರೆ, ಅವರು ಪೂರ್ಣ ಪ್ರಮಾಣದಲ್ಲಿ ಸಂಯೋಜಿಸಿದ ಧಾಟಿಯನ್ನು ನಮ್ಮ ಮುಂದೆ ಸರ್ಕಾರ ಪ್ರಸ್ತುತಪಡಿಸಲಿ. ಆಗ ನಾವು ಒಪ್ಪುತ್ತೇವೆ. ಎರಡು ಚರಣಗಳನ್ನು ಸಂಯೋಜಿಸಿರುವಾಗ ಪೂರ್ತಿ ಹಾಡನ್ನು ಅದೇ ಧಾಟಿಯಲ್ಲಿ ಹಾಡುವುದನ್ನು ಹೇಗೆ ಕಡ್ಡಾಯ ಮಾಡಲಾಗುತ್ತದೆ. ಇನ್ನೂ ಸಿ. ಅಶ್ವತ್ ಅವರು, ನಾಡಗೀತೆಯ ಎಲ್ಲ ಚರಣಗಳಿಗೂ ರಾಗದಲ್ಲಿ ಸಂಯೋಜಿಸಿದ್ದಾರೆ. ಹಾಗಾಗಿ, ಅದೇ ರಾಗದಲ್ಲಿ ನಾಡಗೀತೆ ಹಾಡುವುದು ಸಮಂಜಸ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು.
ಶಕ್ತಿ ಯೋಜನೆ ಎಫೆಕ್ಟ್: ಸವದತ್ತಿ ಯಲ್ಲಮ್ಮನಿಗೆ 1.37 ಕೋಟಿ ಕಾಣಿಕೆ
ವಿವಿಧ ರಾಗದಲ್ಲಿ ನಾಡಗೀತೆಯನ್ನು ಕೇಳಿದ ನ್ಯಾಯಮೂರ್ತಿಗಳು, ‘ಸುಗಮ ಸಂಗೀತ ವಿದ್ವಾಂಸರಾಗಿರುವ ಕಿಕ್ಕೇರಿ ಅವರು ಪ್ರಕರಣವನ್ನು ಪರಿಗಣಿಸಲು ಯೋಗ್ಯವಾದ ಕಾರಣಗಳನ್ನು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅವರು ನಾಡಗೀತೆಯ ಸಾಲುಗಳನ್ನು ಶಾಸ್ತ್ರೀಯತೆಯೊಂದಿಗೆ ಮಧುರವಾಗಿ ಹಾಡಿದ್ದಾರೆ. ಜತೆಗೆ, ಪ್ರಕರಣವನ್ನು ಮೆರಿಟ್ ಮೇಲೆ ಖುದ್ದು ವಾದ ಮಂಡಿಸಿದ್ದಾರೆ. ಹಾಗಾಗಿ, ಈ ಕುರಿತು ಸರ್ಕಾರಿ ವಕೀಲರು ತಮ್ಮ ಪ್ರತಿಕ್ರಿಯೆ ತಿಳಿಸಬೇಕು’ ಎಂದು ಸೂಚಿಸಿದರು.