ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ತನಿಖೆ ಯಾವುದೇ ರೀತಿಯಲ್ಲೂ ವಿಳಂಬವಾಗಿಲ್ಲ ಎಂದು ಸಿಬಿಐ ವಕೀಲರು ಗುರುವಾರ ಹೈಕೋರ್ಟ್ ಮುಂದೆ ಬಲವಾಗಿ ವಾದ ಮಂಡಿಸಿದರು.
ಬೆಂಗಳೂರು (ಜು.14): ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ತನಿಖೆ ಯಾವುದೇ ರೀತಿಯಲ್ಲೂ ವಿಳಂಬವಾಗಿಲ್ಲ ಎಂದು ಸಿಬಿಐ ವಕೀಲರು ಗುರುವಾರ ಹೈಕೋರ್ಟ್ ಮುಂದೆ ಬಲವಾಗಿ ವಾದ ಮಂಡಿಸಿದರು. ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಕುರಿತ ಸಿಬಿಐ ತನಿಖೆ ರದ್ದುಪಡಿಸುವಂತೆ ಕೋರಿ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರ ಪೀಠ ವಿಚಾರಣೆ ನಡೆಸಿತು. ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ಈವರೆಗೆ ಸ್ವತಂತ್ರವಾಗಿ 596 ದಾಖಲೆ ಸಂಗ್ರಹಿಸಲಾಗಿದೆ.
84 ಸಾಕ್ಷಿಗಳನ್ನು ಪರಿಶೀಲಿಸಲಾಗಿದೆ. ತನಿಖೆ ಯಾವುದೇ ರೀತಿಯಲ್ಲೂ ವಿಳಂಬವಾಗಿಲ್ಲ. 2020ರ ಅ.3ಕ್ಕೆ ಎಫ್‌ಐಆರ್ ದಾಖಲಾಗಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐಗೆ ಸೂಕ್ತ ವಿವರಣೆ ನೀಡಲು ಸಾಧ್ಯವಿಲ್ಲ ಎಂದು ತಿಳಿದು ಅರ್ಜಿದಾರರು, ಎಫ್‌ಐಆರ್ ರದ್ದು ಕೋರಿ 2022ರ ಜು.28ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವಿವರಿಸಿದರು. ಅಂತಿಮವಾಗಿ ಸಿಬಿಐ ವಕೀಲರ ವಾದಕ್ಕೆ ಪ್ರತಿಕ್ರಿಯಿಸಲು ಡಿ.ಕೆ. ಶಿವಕುಮಾರ್ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಜು.21ಕ್ಕೆ ಮುಂದೂಡಿತು. ಕಾನೂನಿನ ಅನ್ವಯ ತನಿಖೆ ನಡೆದಿಲ್ಲ ಎಂಬ ಅರ್ಜಿದಾರರ ವಾದವನ್ನು ಆಕ್ಷೇಪಿಸಿದ ಸಿಬಿಐ ವಕೀಲರು, ಪೊಲೀಸ್ ವರಿಷ್ಠಾಧಿಕಾರಿ ಪ್ರಕರಣದ ತನಿಖೆ ನಡೆಸಲು ಅನುಮತಿಸಬೇಕು.
ಖಾಸಗಿಯವರಿಗೆ ಸರ್ಕಾರಿ ಜಮೀನಿನ ಪರಿಹಾರ ನೀಡಿದ್ದರೆ ಕ್ರಮ: ಡಿಕೆಶಿ
ಅದೇ ರೀತಿ ಪೊಲೀಸ್ ವರಿಷ್ಠಾಧಿಕಾರಿ ತನಿಖೆ ನಡೆಸಲು ಡಿವೈಎಸ್‌ಪಿಗೆ ಅನುಮತಿಸಿದ್ದಾರೆ. ಆದ್ದರಿಂದ, ಇಲ್ಲಿ ಯಾವುದೇ ಕಾನೂನಿನ ಲೋಪವಾಗಿಲ್ಲ ಎಂದು ತಿಳಿಸಿದರು. ಅಲ್ಲದೆ, ತಮ್ಮ ಚುನಾವಣಾ ಪ್ರಮಾಣಪತ್ರ ಮತ್ತು ಎಫ್‌ಐಆರ್‌ನಲ್ಲಿ ನಮೂದಿಸಿದ ಆಸ್ತಿ ಮೌಲ್ಯದಲ್ಲಿ ವ್ಯತ್ಯಾಸವಿದೆ ಎಂಬುದಾಗಿ ಅರ್ಜಿದಾರರು ಆಕ್ಷೇಪಿದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿನ ಲೂಲು ಮಾಲ್‌ನಲ್ಲಿ ಅರ್ಜಿದಾರರ ಶೇ.21ರಷ್ಟುಷೇರು ಮಾತ್ರ (7.8 ಕೋಟಿ ಹಣ) ಪರಿಗಣಿಸಲಾಗಿದೆ. ಇಲ್ಲಿ ಭೂಮಿ ಮೌಲ್ಯವನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದು, ಉಳಿದ ವಿಚಾರದ ಕುರಿತು ತನಿಖೆ ನಡೆಯುತ್ತಿದೆ.
ವರ್ಗಾವಣೆ ದಂಧೆ ನಡೆದಿದ್ರೆ ನಿವೃತ್ತಿ: ಸಿದ್ದು ಸವಾಲ್
ಅರ್ಜಿದಾರರ ಪತ್ನಿಯ ಬಳಿ 17.33 ಕೋಟಿ ರು. ಮೌಲ್ಯದ ಆಸ್ತಿ ಇತ್ತು. ಅದು ಈಗ 42.05 ಕೋಟಿ ಮೌಲ್ಯ ಹೊಂದಿದ್ದು, ಅದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಮಕ್ಕಳ ಬಳಿ 61.75 ಲಕ್ಷ ರು. ಮೌಲ್ಯದ ಆಸ್ತಿ ಇತ್ತು, ಈಗ ಅದು 75 ಕೋಟಿ ರು. ಮೌಲ್ಯ ಹೊಂದಿದೆ. ಅದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿ ವಾದ ಪೂರ್ಣಗೊಳಿಸಿದರು. ಇದೇ ವೇಳೆ ಸಿಬಿಐ ತನಿಖೆಯ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ ಅದರಲ್ಲಿನ ಮಾಹಿತಿ ಬಹಿರಂಗಪಡಿಸಲು ಮುಂದಾದ ಪ್ರಸನ್ನಕುಮಾರ್ ಅವರನ್ನು ತಡೆದ ನ್ಯಾಯಪೀಠ, ಮುಚ್ಚಿದ ಲಕೋಟೆಯಲ್ಲಿನ ಮಾಹಿತಿ ಗೌಪ್ಯವಲ್ಲವೇ, ಅದನ್ನು ನ್ಯಾಯಾಲಯ ಪರಿಶೀಲಿಸಲಿದೆ ಎಂದು ತಿಳಿಸಿತು.