ಈಗ ಪರೀಕ್ಷೆಗೆ ಗೈರಾದರೂ ಆಗಸ್ಟಲ್ಲಿ ಚಾನ್ಸ್: ಹೊಸ ಪರೀಕ್ಷಾರ್ಥಿಳೆಂದೇ ಪರಿಗಣನೆ!

By Kannadaprabha NewsFirst Published Jun 25, 2020, 7:39 AM IST
Highlights

ಈಗ ಪರೀಕ್ಷೆಗೆ ಗೈರಾದರೂ ಆಗಸ್ಟಲ್ಲಿ ಬರೆಯಿರಿ| ಅನಾರೋಗ್ಯದಿಂದ ಪರೀಕ್ಷೆ ಬರೆಯದಿದ್ದವರಿಗೆ ಆಗಸ್ಟ್‌ಗೆ ಪೂರಕ ಪರೀಕ್ಷೆ| ಆಗಲೂ ಹೊಸ ಪರೀಕ್ಷಾರ್ಥಿಗಳು ಎಂದು ಪರಿಗಣನೆ: ಸುರೇಶ್‌ ಕುಮಾರ್‌

 ಬೆಂಗಳೂರು(ಜೂ.25): ಗುರುವಾರದಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಯಾವುದೇ ವಿದ್ಯಾರ್ಥಿ ಗೈರು ಹಾಜರಾಗಿ ಆಗಸ್ಟ್‌ನಲ್ಲಿ ನಡೆಯುವ ಪೂರಕ ಪರೀಕ್ಷೆ ತೆಗೆದುಕೊಂಡರೇ ಅವರನ್ನು ಹೊಸದಾಗಿ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳೆಂದೇ ಪರಿಗಣಿಸಲಾಗುವುದು. ಹೀಗಾಗಿ ಕಂಟೈನ್ಮೆಂಟ್‌ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಅಭಯ ನೀಡಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಅನಾರೋಗ್ಯದಿಂದ ಯಾವುದೇ ವಿದ್ಯಾರ್ಥಿ ಪರೀಕ್ಷೆಗೆ ಗೈರು ಹಾಜರಾದರೆ ಆಗಸ್ಟ್‌ನಲ್ಲಿ ನಡೆಯಲಿರುವ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಹಾಗೂ ಈ ವಿದ್ಯಾರ್ಥಿಗಳನ್ನು ಪುನಾರರ್ತಿತ ಎಂದು ಪರಿಗಣಸದೆ ಹೊಸದಾಗಿ ಪರೀಕ್ಷೆ ತೆಗೆದುಕೊಂಡವರು ಎಂದೇ ಪರಿಗಣಿಸಲಾಗುವುದು ಎಂದು ತಿಳಿಸಿದರು.

ಕೊರೋನಾ ಭೀತಿ ನಡುವೆ ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ

10 ವಿದ್ಯಾರ್ಥಿಗಳಿಗೆ ಕೊರೋನಾ:

ಎಸ್ಸೆಸ್ಸೆಲ್ಸಿ ಪರೀಕ್ಷೆ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳ ಪೈಕಿ 10 ಮಂದಿಗೆ ಕರೋನಾ ಸೋಂಕಿದೆ ಹಾಗೂ 9 ಮಂದಿ ಗೃಹ ಕ್ವಾರಂಟೈನ್‌ನಲ್ಲಿದ್ದಾರೆ. ಈ 19 ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಕಂಟೈನ್ಮೆಂಟ್‌ ವಲಯವೆಂದು ಪರಿಗಣಿಸಲಾಗಿರುವ ರಾಜ್ಯದ 11 ಜಿಲ್ಲೆಗಳ 27 ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳನ್ನು ಸುರಕ್ಷಿತ ವಲಯಗಳಿಗೆ ಸ್ಥಳಾಂತರಿಸಲಾಗಿದೆ. 7,490 ವಿದ್ಯಾರ್ಥಿಗಳು ಸ್ಥಳಾಂತರಿಸಿದ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದರು.

ರಾಜ್ಯಾದ್ಯಂತ 8.48 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಸರ್ವ ರೀತಿಯಲ್ಲಿಯೂ ಸರ್ಕಾರ ಕ್ರಮ ಕೈಗೊಂಡಿದೆ. ಪರೀಕ್ಷಾ ಕೇಂದ್ರಗಳು ಕೇವಲ ಪರೀಕ್ಷಾ ಕೇಂದ್ರಗಳಲ್ಲ, ಸುರಕ್ಷಿತ ಕೇಂದ್ರಗಳಾಗಿವೆ. ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಬೇಡಿ, ಪೋಷಕರು ಕೂಡ ಧೈರ್ಯಗೆಡದೆ ಪರೀಕ್ಷೆಗಳಿಗೆ ಮಕ್ಕಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದರು.

ತಮಿಳುನಾಡು, ತೆಲಂಗಾಣ ಮತ್ತು ಪುದುಚೆರಿಯಲ್ಲಿ ಪರೀಕ್ಷೆ ರದ್ದುಗೊಳಿಸಿರುವುದರಿಂದ ರಾಜ್ಯದಲ್ಲಿಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದುಗೊಳಿಸುವಂತೆ ಆಗ್ರಹವಿದೆ. ಆದರೆ, ನೆರೆ ರಾಜ್ಯಗಳಲ್ಲಿ ಉದ್ಯೋಗ ಸೇರಿದಂತೆ ಇನ್ನಿತರ ದಾಖಲೆಗಳಿಗಾಗಿ ದ್ವಿತೀಯ ಪಿಯುಸಿ ಅಂಕಪಟ್ಟಿಯನ್ನು ಪರಿಗಣಿಸುತ್ತಾರೆ. ರಾಜ್ಯದಲ್ಲಿ 10ನೇ ತರಗತಿ ಪರೀಕ್ಷೆ ಬಹಳ ಮುಖ್ಯವಾಗಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸಲಾಗುತ್ತಿದ್ದು, ಪ್ರತಿಷ್ಠೆಗಾಗಿ ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

SSLC ಎಕ್ಸಾಮ್‌: ಕೊರೋನಾ ಸೋಂಕಿತ ಸೇರಿ ನಾಲ್ವರಿಗಿಲ್ಲ ಪರೀಕ್ಷೆ ಬರೆಯಲು ಅವಕಾಶ

1-2 ನಿಮಿಷ ಮಾಸ್ಕ್‌ ತೆಗೆಯಬಹುದು:

ರಾಜ್ಯ ಕೋವಿಡ್‌-19 ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರಾಗಿರುವ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಸುದರ್ಶನ್‌ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಮೂರು ಗಂಟೆಗಳ ಕಾಲ ಮಾಸ್ಕ್‌ ಧರಿಸಿಕೊಳ್ಳಲು ಕಷ್ಟವಾದಲ್ಲಿ ಒಂದೆರಡು ನಿಮಿಷಗಳಿಗೊಮ್ಮೆ ತೆಗೆದು ದೀರ್ಘ ಉಸಿರಾಟ ಮಾಡಿ ಮತ್ತೆ ಹಾಕಿಕೊಳ್ಳುವಂತೆ ತಿಳಿಸಿದರು.

ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಬಂದ ತಕ್ಷಣ ಮೂಗಿನ ಕೆಳ ಭಾಗಕ್ಕೆ ಇಳಿಸಿ ಉಸಿರಾಟ ಮಾಡಿದರೆ ಸಮಸ್ಯೆ ಇಲ್ಲ. ಕೆಮ್ಮುವಾಗ ಮತ್ತು ಸೀನುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಿದರೆ ಬೇರಾರ‍ಯವ ಸಮಸ್ಯೆ ಆಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಬೇಡಿ ಎಂದು ತಿಳಿಸಿದರು.

‘ವಿದ್ಯಾರ್ಥಿಗಳಿಗೆ ಸೋಂಕು ತಗುಲದಂತೆ ನೋಡಿಕೊಳ್ಳಿ’

ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ: ಪ್ರಕರಣ ದಾಖಲಿಸಲು ಸೂಚನೆ

ರಾಜ್ಯಾದ್ಯಂತ ಗುರುವಾರ ನಡೆಯಲಿರುವ ಎಸ್‌ಎಸ್‌ಎಲ್‌ಸಿ ದ್ವಿತೀಯ ಭಾಷೆ ಇಂಗ್ಲಿಷ್‌ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ವದಂತಿ ಹಬ್ಬಿದೆ. ಇದರ ವಿರುದ್ಧ ಕ್ರಮಕ್ಕೆ ಸಚಿವ ಸುರೇಶ್‌ ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಫೇಸ್‌ಬುಕ್‌ನಲ್ಲಿ ಅನಾಮಧೇಯ ಖಾತೆಯಲ್ಲಿ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆಯನ್ನು ಅಪ್‌ಲೋಡ್‌ ಮಾಡಿ ಇದನ್ನೇ ಮುಖ್ಯ ಪರೀಕ್ಷೆ ಪ್ರಶ್ನೆಪತ್ರಿಕೆ ಎಂದು ವಿದ್ಯಾರ್ಥಿಗಳ ದಾರಿ ತಪ್ಪಿಸುತ್ತಿದ್ದಾರೆ. ಈ ಕಿಡಿಗೇಡಿಗಳ ವಿರುದ್ಧ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿ ಸೂಕ್ತ ಶಿಸ್ತುಕ್ರಮ ಕೈಗೊಳ್ಳಬೇಕು’ ಎಂದು ಸುರೇಶ್‌ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.

ಮಾಧ್ಯಮಗಳು ಇಂತಹ ಸುದ್ದಿಗಳನ್ನು ಬಿತ್ತರಿಸುವಾಗ ಅತ್ಯಂತ ಜಾಗರೂಕವಾಗಿ ಆಲೋಚಿಸಿ ಖಚಿತಪಡಿಸಿಕೊಂಡು ಕ್ರಮ ವಹಿಸಬೇಕು. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಸಮಾಜದ ಆತ್ಮ ವಿಶ್ವಾಸವನ್ನು ವೃದ್ಧಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಲಾಕ್‌ಡೌನ್‌ ಘೋಷಣೆ ಆದರೆ ಪರೀಕ್ಷೆ ಪರಿಗಣನೆ

ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗುತ್ತಿವೆ. ಒಂದು ವೇಳೆ ಮತ್ತೊಮ್ಮೆ ಲಾಕ್‌ಡೌನ್‌ ಘೋಷಿಸಿದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಪರಿಗಣಿಸಿಯೇ ವ್ಯವಸ್ಥೆ ಮಾಡಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯದ ಮಟ್ಟಿಗೆ ಲಾಕ್‌ಡೌನ್‌ ಜಾರಿಗೊಳಿಸುವ ಚಿಂತನೆ ಇಲ್ಲ. ಆದರೆ, ಇದೇ ರೀತಿಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚಳವಾದರೆ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಆ ವೇಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

click me!