ಬೆಂಗಳೂರಿನ ಮೂರೂ ಆಸ್ಪತ್ರೆಗಳು ಬಹುತೇಕ ಭರ್ತಿ!

By Kannadaprabha NewsFirst Published Jun 25, 2020, 7:27 AM IST
Highlights

ನಗರದ ಮೂರು ಕೊರೋನಾ ಆಸ್ಪತ್ರೆ ಬಹುತೇಕ ಭರ್ತಿ| ಬೌರಿಂಗ್‌, ವಿಕ್ಟೋರಿಯಾ, ರಾಜೀವ್‌ ಗಾಂಧಿ ಆಸ್ಪತ್ರೆ ಫುಲ್‌| -ರೋಗಲಕ್ಷಣ ಇಲ್ಲದವರು ಕೋವಿಡ್‌ ಕೇಂದ್ರಗಳಿಗೆ ವರ್ಗ| -ಖಾಸಗಿ ಆಸ್ಪತ್ರೆಗಳಲ್ಲೂ ಶೀಘ್ರ ಮತ್ತಷ್ಟುಬೆಡ್‌ಗಳು ಲಭ್ಯ

 

ಲಿಂಗರಾಜು ಕೋರಾ

ಬೆಂಗಳೂರು(ಜೂ.25): ರಾಜಧಾನಿ ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಕೊರೋನಾ ಸೋಂಕಿತರ ಚಿಕಿತ್ಸೆಗೆ ಇದುವರೆಗೆ ನಿಗದಿಪಡಿಸಿದ್ದ ಪ್ರಮುಖ ಮೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದ್ದ ಹಾಸಿಗೆಗಳು ಬಹುತæೕಕ ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ರೋಗಲಕ್ಷಣಗಳಿಲ್ಲದ ಕೆಲವರನ್ನು ಕೋವಿಡ್‌ ಕೇಂದ್ರಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ.

ವಿಕ್ಟೋರಿಯಾ, ಬೌರಿಂಗ್‌ ಮತ್ತು ರಾಜೀವ್‌ ಗಾಂಧಿ ಆಸ್ಪತ್ರೆಗಳಲ್ಲಿ ಕೋವಿಡ್‌ ಸೋಂಕಿತರಿಗೆ ಒಟ್ಟಾರೆ ಇರುವ ಹಾಸಿಗೆ ಸೌಲಭ್ಯಗಳು ಕೇವಲ 810 ಮಾತ್ರ. ಈ 810ರ ಪೈಕಿ ವಿಕ್ಟೋರಿಯಾದಲ್ಲಿ 500, ಬೌರಿಂಗ್‌ನಲ್ಲಿ 136, ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ 114 ಜನರಲ್‌ ಮತ್ತು ಆಕ್ಸಿಜನ್‌ ಸೌಲಭ್ಯವುಳ್ಳ ಹಾಸಿಗೆಗಳಿವೆ. ಜೊತೆಗೆ ಐಸಿಯು ವಾರ್ಡುಗಳಲ್ಲಿ 80 ಹಾಸಿಗೆ ಸೌಲಭ್ಯಗಳಿವೆ. ಆದರೆ, ನಗರದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ ಜೂನ್‌ 22ರಂದೇ 919ಕ್ಕೆ ಏರಿಕೆಯಾಗಿ ಲಭ್ಯ ಹಾಸಿಗೆಗಳಿಗಿಂತ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಬುಧವಾರ ಇದು 1124ಕ್ಕೆ ಏರಿಕೆಯಾಗಿದೆ. ಹಾಸಿಗೆಗಳು ಬಹುತæೕಕ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಬುಧವಾರ ಕೂಡ ರಾಜೀವ್‌ ಗಾಂಧಿ ಆಸ್ಪತ್ರೆಗೆ ಬಂದ ಕೆಲ ಸೋಂಕಿತರನ್ನು ನಗರದ ಹೊರ ವಲಯದಲ್ಲಿ ಗುರುತಿಸಿರುವ ಹೊಸ 16 ಆಸ್ಪತ್ರೆಗಳಿಗೆ ಕಳಹಿಸಲಾಗಿದೆ.

ಅಧಿಕಾರಿಗಳ ಪ್ರಕಾರ ನಗರದ ಈ ಮೂರೂ ಆಸ್ಪತ್ರೆಗಳಲ್ಲಿ ಇನ್ನೂ 115 ಹಾಸಿಗೆಗಳು ಖಾಲಿ ಇವೆ. ಎಸಿಮ್ಟಮ್ಯಾಟಿಕ್‌’ (ಸೋಂಕು ಲಕ್ಷಣ ಇಲ್ಲದ) ಸೋಂಕಿತರನ್ನು ಕೋವಿಡ್‌ ನಿಗಾ ಕೇಂದ್ರಗಳಿಗೆ ವರ್ಗಾಯಿಸಲಾಗುತ್ತಿದೆ. ಹಾಗಾಗಿ ಹಾಸಿಗೆಗಳು ಖಾಲಿಯಾಗುತ್ತಿವೆ ಎಂದು ಹೇಳುತ್ತಾರೆ. ಇದರ ಜತೆಗೆ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಅನುಮತಿ ನೀಡಲಾಗಿದ್ದು ಅಲ್ಲೂ ಶೀಘ್ರ ಸಾಕಷ್ಟುಬೆಡ್‌ಗಳು ಸಿಗಲಿವೆ.

ಈ ಮಧ್ಯೆ, ಸರ್ಕಾರ, ಹೊಸದಾಗಿ ಬರುವ ಸೋಂಕಿತರಿಗೆ ಅವಕಾಶ ಮಾಡಿಕೊಡಲು ಯಾವುದೇ ಲಕ್ಷಣಗಳಿಲ್ಲದ ಸೋಂಕಿತರನ್ನು (ಎಸಿಮ್ಟಮ್ಯಾಟಿಕ್‌) ಕೋವಿಡ್‌ ನಿಗಾ ಕೇಂದ್ರಗಳಿಗೆ (ಸಿಸಿಸಿ) ಮತ್ತು ಸೌಮ್ಯ ಮತ್ತು ಸಾಧಾರಣ ಸ್ವರೂಪದ ಲಕ್ಷಣಗಳಿರುವ ಸೋಂಕಿತರನ್ನು ಬೇರ್ಪಡಿಸಿ ಅವರಿಗಾಗಿ ಬೆಂಗಳೂರು ಹಾಗೂ ಬೆಂ.ಗ್ರಾಮಾಂತರ ಜಿಲ್ಲೆಗಳಲ್ಲಿ ಈಗಾಗಲೇ ಗುರುತಿಸಲಾಗಿರುವ 16 ಸರ್ಕಾರಿ ಆಸ್ಪತ್ರೆಗಳಿಗೆ ವರ್ಗಾಯಿಸಲು ಮುಂದಾಗಿದೆ. ಗುರುವಾರದಿಂದ ಆರಂಭವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಈ ಆಸ್ಪತ್ರೆಗಳ ಅಧಿಕಾರಿಗಳು.

ಈಗಾಗಲೇ ಮೂರೂ ಆಸ್ಪತ್ರೆಗಳಿಗೆ ತಮ್ಮಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರನ್ನು ಎಸಿಮ್ಟಮ್ಯಾಟಿಕ್‌, ಸೌಮ್ಯ ಮತ್ತು ಸಾಧಾರಣ ಲಕ್ಷಣಗಳ ಸೋಂಕಿತರು ಮತ್ತು ಹೈ-ರಿಸ್ಕ್‌ ಸೋಂಕಿತರೆಂದು ಗುರುತಿಸಲು ಸೂಚನೆ ನೀಡಲಾಗಿದೆ. ಮೊದಲ ಹಂತದಲ್ಲಿ ಎಸಿಮ್ಟಮ್ಯಾಟಿಕ್‌ ಸೋಂಕಿತರನ್ನು ನಗರದ ಹೊರವಲಯದ ರವಿಂಶಕರ್‌ ಗುರೂಜಿ ಆಶ್ರಮ, ಹಜ್‌ ಭವನ ಸೇರಿದಂತೆ ವಿವಿಧೆಡೆ ಸ್ಥಾಪಿಸಲಾಗಿರುವ ಕೋವಿಡ್‌ ನಿಗಾ ಕೇಂದ್ರಗಳಿಗೆ ವರ್ಗಾಯಿಸಲು ಸೂಚಿಸಲಾಗಿದೆ.

ಎರಡನೇ ಹಂತದಲ್ಲಿ ಸೌಮ್ಯ ಮತ್ತು ಸಾಧಾರಣ ಸ್ವರೂಪದ ಲಕ್ಷಣಗಳಿರುವ ಸೋಂಕಿತರನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಹೊಸದಾಗಿ ಗುರುತಿಸಿರುವ 16 ಸರ್ಕಾರಿ ಆಸ್ಪತ್ರೆಗಳಿಗೆ ವರ್ಗಾಯಿಸಲಾಗುವುದು. ಈ ಆಸ್ಪತ್ರೆಗಳಲ್ಲಿ 1300 ಹಾಸಿಗೆಗಳ ಸೌಲಭ್ಯ ಮಾಡಲಾಗಿದೆ. ಹೈ-ರಿಸ್ಕ್‌ ಸೋಂಕಿತರು ಹಾಗೂ ಹೊಸದಾಗಿ ಬರುವ ಸೋಂಕಿತರಿಗೆ ಮಾತ್ರ ವಿಕ್ಟೋರಿಯಾ, ಬೌರಿಂಗ್‌ ಮತ್ತು ರಾಜೀವ್‌ ಗಾಂಧಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರಿನಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವಿಕ್ಟೋರಿಯಾ, ಬೌರಿಂಗ್‌ ಮತ್ತು ರಾಜೀವ್‌ ಗಾಂಧಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರ ಪೈಕಿ ಲಕ್ಷಣಗಳಿಲ್ಲದ (ಎಸಿಮ್ಟಮ್ಯಾಟಿಕ್‌) ಸೋಂಕಿತರನ್ನು ಗುರುತಿಸಿ ಕೋವಿಡ್‌ ನಿಗಾ ಕೇಂದ್ರಗಳಿಗೆ ವರ್ಗಾಯಿಸಲಾಗುತ್ತಿದೆ. ಆ ಮೂಲಕ ಹೊಸದಾಗಿ ಸೋಂಕು ದೃಢಪಡುವವರ ಚಿಕಿತ್ಸೆಗೆ ಹಾಸಿಗೆ ವ್ಯವಸ್ಥೆಗೆ ಕ್ರಮ ವಹಿಸಲಾಗುತ್ತಿದೆ.

- ಡಾ| ಗಿರೀಶ್‌, ವೈದ್ಯಕೀಯ ಶಿಕ್ಷಣ ನಿರ್ದೇಶಕ

ನಮ್ಮ ಆಸ್ಪತ್ರೆಯಲ್ಲಿ ಒಟ್ಟು 104 ಹಾಸಿಗೆ ಸೌಲಭ್ಯವಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬಹುತೇಕ ಭರ್ತಿಯಾಗಿದೆ. ಹೊಸ ಸೋಂಕಿತರ ಚಿಕಿತ್ಸೆಗೆ ಅವಕಾಶ ಕಲ್ಪಿಸಲು ಸರ್ಕಾರದ ಸೂಚನೆಯಂತೆ ಸುಮಾರು 40 ಜನ ಎಸಿಮ್ಟಮ್ಯಾಟಿಕ್‌ ಸೋಂಕಿತರನ್ನು ಗುರುತಿಸಿದ್ದು ಕೋವಿಡ್‌ ನಿಗಾ ಕೇಂದ್ರಗಳಿಗೆ ಶೀಘ್ರ ವರ್ಗಾಯಿಸಲಾಗುವುದು.

- ಡಾ.ನಾಗರಾಜು, ರಾಜೀವ್‌ ಗಾಂಧಿ ಆಸ್ಪತ್ರೆ ಆಸ್ಪತ್ರೆ ನಿರ್ದೇಶಕ

click me!