Child Marriage ಕೊರೋನಾ ವೇಳೆ ರಾಜ್ಯದಲ್ಲಿ 296 ಬಾಲ್ಯ ವಿವಾಹ, ದೇಶದಲ್ಲಿ ಕರ್ನಾಟಕದಲ್ಲೇ ಹೆಚ್ಚು!

By Kannadaprabha NewsFirst Published Mar 23, 2022, 4:34 AM IST
Highlights

- ಹಾಸನ, ಮಂಡ್ಯ, ಮೈಸೂರಲ್ಲೇ ಹೆಚ್ಚು 
- ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚು
- ಬಾಲ್ಯ ವಿವಾಹ ಪಿಡುಗು ನಿವಾರಣೆಗೆ ಕ್ರಮ

ಬೆಂಗಳೂರು(ಮಾ.23): ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ 571 ಬಾಲ್ಯ ವಿವಾಹಗಳು ಜರುಗಿದ್ದು, ಈ ಪೈಕಿ ಕೋವಿಡ್‌ಪೀಡಿತ ವರ್ಷವಾಗಿದ್ದ 2020-21ನೇ ಸಾಲಿನಲ್ಲಿ 296 ಬಾಲ್ಯ ವಿವಾಹಗಳು ನಡೆದಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್‌ ತಿಳಿಸಿದ್ದಾರೆ.

ಕಾಂಗ್ರೆಸ್‌ನ ಡಾ. ಕೆ. ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2018-19ನೇ ಸಾಲಿನಲ್ಲಿ 119, 2019-20ನೇ ಸಾಲಿನಲ್ಲಿ 156 ಬಾಲ್ಯ ವಿವಾಹಗಳು ನಡೆದಿವೆ, ಆದರೆ 2020-21ನೇ ಸಾಲಿನಲ್ಲಿ ಅತಿ ಹೆಚ್ಚು 296 ಬಾಲ್ಯ ವಿವಾಹ ನಡೆದಿರುವ ಬಗ್ಗೆ ವರದಿಯಾಗಿದೆ. ಅತಿ ಹೆಚ್ಚು ಪ್ರಕರಣ ಹಾಸನ (39), ಮಂಡ್ಯ (34), ಮೈಸೂರು (31), ರಾಮನಗರ (20)ದಲ್ಲಿ ನಡೆದಿವೆ. ಬೆಂಗಳೂರು ಗ್ರಾಮಾಂತರ, ಬೆಳಗಾವಿ, ರಾಯಚೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ತಲಾ 18 ಬಾಲ್ಯ ವಿವಾಹ ಆಗಿವೆ ಎಂದು ತಿಳಿಸಿದರು.

ಬಾಲ್ಯವಿವಾಹಕ್ಕೆ ಒತ್ತಾಯಿಸಿ ಕೋಣೆಯಲ್ಲಿ ಕೂಡಿ ಹಾಕಿದ್ದ ಬಾಲಕಿ ಎಸ್ಕೇಪ್, SSLC ಪರೀಕ್ಷೆಗೆ ಹಾಜರ್!

ಆದರೆ ಕೇಂದ್ರದ ಅಪರಾಧ ದಾಖಲಾತಿಗಳ ಸಂಸ್ಥೆಯ 2020ನೇ ಸಾಲಿನ ವರದಿಯಲ್ಲಿ ರಾಜ್ಯದಲ್ಲಿ 184 ಬಾಲ್ಯ ವಿವಾಹ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಉಳಿದ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿರುತ್ತದೆ ಎಂದರು.

ಪಿಡುಗು ನಿವಾರಣೆಗೆ ಕ್ರಮ:
ಬಾಲ್ಯ ವಿವಾಹ ಹೆಚ್ಚಾಗಿರುವ 9 ಜಿಲ್ಲೆ ಸೇರಿದಂತೆ 26 ಜಿಲ್ಲೆಗಳಲ್ಲಿ ಒಂದು ತಿಂಗಳ ಕಾಲ ಬಾಲ್ಯ ವಿವಾಹ ನಿಷೇಧಿಸುವ ಕಾಯ್ದೆ ಕುರಿತು 911 ಬಸ್‌ ಬ್ರ್ಯಾಂಡಿಂಗ್‌ ಮಾಡುವ ಮೂಲಕ ಅರಿವು ಮೂಡಿಸಲಾಗಿದೆ. ರಾಜ್ಯಾದ್ಯಂತ ಬಾಲ್ಯ ವಿವಾಹ ನಿಷೇಧ ಅಭಿಯಾನ, ‘ವಿಡಿಯೋ ಆನ್‌ ವ್ಹೀಲ್ಸ್‌’ ವಾಹನಗಳ ಮೂಲಕ 788 ಹೋಬಳಿಗಳಲ್ಲಿ 3000 ಪ್ರದರ್ಶನ ಮತ್ತು 7 ಬಿಬಿಎಂಪಿ ವಲಯಗಳಲ್ಲಿ 350 ಪ್ರದರ್ಶನ ಏರ್ಪಡಿಸುವ ಮೂಲಕ ಅರಿವು ಮೂಡಿಸಲಾಗಿದೆ. ಆಕಾಶವಾಣಿಯಲ್ಲಿ ಒಂದು ತಿಂಗಳ ಕಾಲ ಬಾಲ್ಯ ವಿವಾಹ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

ದಾವಣಗೆರೆಯಲ್ಲಿ ಬಾಲ್ಯ ವಿವಾಹದಿಂದ 5ನೇ ತರಗತಿ ವಿದ್ಯಾರ್ಥಿಯನ್ನು ಕಾಪಾಡಿದ ಶಿಕ್ಷಕರು

ಬಾಲ್ಯ ವಿವಾಹ ದುಷ್ಪರಿಣಾಮ ಕುರಿತು ಜಾಗೃತಿ ಜಾಥಾ
ತಾಲೂಕಿನಲ್ಲಿ ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸುವ ವಾಹನ ಜಾಥಾ ಕಾರ್ಯಕ್ರಮಕ್ಕೆ ತಹಸೀಲ್ದಾರ್‌ ನಾಗರಾಜ ನಾಯ್ಕಡ್‌ ಸೋಮವಾರ ಚಾಲನೆ ನೀಡಿದರು. 2 ದಿನಗಳಲ್ಲಿ ಪ್ರತಿದಿನ 5 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸೋಮವಾರ ತಾಲೂಕಿನ ಪಟ್ಟಣ, ಹಳದಿಪುರ, ಸಂತೆಗುಳಿ, ಖರ್ವಾ ಮತ್ತು ಗೇರುಸೊಪ್ಪಾದಲ್ಲಿ ಜಾಥಾ ನಡೆಯಿತು. ಮಂಗಳವಾರ ಮಂಕಿ, ಚಿತ್ತಾರ, ಗುಣವಂತೆ, ಇಡಗುಂಜಿ ಭಾಗದಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು.

ಜಾಥಾಕ್ಕೆ ಚಾಲನೆ ನೀಡಿದ ತಹಸೀಲ್ದಾರ ನಾಗರಾಜ ನಾಯ್ಕಡ್‌ ಮಾತನಾಡಿ, ಸರ್ಕಾರ, ಕಾನೂನು ಇದ್ದರೂ ಕಾನೂನು ಮೀರಿ ಇಂದಿಗೂ ಬಾಲ್ಯವಿವಾಹದಂತಹ ಪ್ರಕರಣ ನಡೆಯುತ್ತಲಿದೆ. ಸರ್ಕಾರದ ಇಲಾಖೆಯ ಜತೆ ಸಾರ್ವಜನಿಕರು ಈ ಕಾಯ್ದೆ ಉಲ್ಲಂಘನೆಯಾಗದಂತೆ ಜಾಗೃತಿ ವಹಿಸಿ. ಸಮುದಾಯದಲ್ಲಿ ಇಂತಹ ಪ್ರಕರಣ ನಡೆಯುತ್ತಿದ್ದರೆ, ಅಧಿಕಾರಿಗಳ ಗಮನಕ್ಕೆ ತರುವಂತೆ ಮನವಿ ಮಾಡಿದರು.

ನ್ಯೂ ಇಂಗ್ಲೀಷ್‌ ಶಾಲೆಯ ವಿದ್ಯಾರ್ಥಿಗಳಾದ ಬೃಂದಾ ಶಾನಭಾಗ ಹಾಗೂ ಕಾಂತಿ ಹೆಗಡೆ ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮದ ಕುರಿತು ಮಾತನಾಡಿ, ಕೈಯಲ್ಲಿ ಬೊಂಬೆ ಹಿಡಿಯುವ ವಯಸ್ಸಿನಲ್ಲಿ ಮಗು ಹಿಡಿಯಬೇಕಾಗುತ್ತದೆ. ಈ ಅನಿಷ್ಠ ಪದ್ಧತಿಯನ್ನು ಹೊಗಲಾಡಿಸಬೇಕಿದೆ ಎಂದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎಂ.ಹೆಗಡೆ, ಪಿಎಸೈ ಮಹಾಂತೇಶ, ಮಹಿಳಾ ಮೇಲ್ವಿಚಾರಕಿ ಭಾರತಿ ಭಟ್ಟ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷ ಪಾಟೀಲ, ನಾರಾಯಣಗೌಡ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

click me!