ಎಮರ್ಜೆನ್ಸಿ ಡಾಕ್ಟರ್ ಹೇಳಿದ ಕೊರೊನಾದ ಕತೆಗಳು..!

ಕೊರೊನಾದ ರೋಗಿಗಳನ್ನು ನೋಡುತ್ತ, ಅವರಿಗೆ ಚಿಕಿತ್ಸೆ ನೀಡುತ್ತ ನಾನೂ ಮಾನಸಿಕವಾಗಿ ಅಸ್ವಸ್ಥಳಾಗುವಂತಾಗುತ್ತದೆ ಅನ್ನುತ್ತಾಳೆ ಇಲ್ಲಿ ಒಬ್ಬ ಡಾಕ್ಟರ್.

 

The stories told by Emergency doctor of covid ward

ನಾನೊಬ್ಬ ಫಸ್ಟ್ ಇಯರ್ ರೆಸಿಡೆಂಟ್ ಡಾಕ್ಟರ್. ಕೋವಿಡ್‌ ಕೇರ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದೇನೆ. ನಾನು ನೋಡಿದ ಕೋವಿಡ್‌ನ ಮೊದಲ ಸಾವು ಅಂದರೆ 40 ವರ್ಷದ ಒಬ್ಬ ವ್ಯಕ್ತಿಯದು. ಹಿಂದಿನ ದಿನ ಅವರನ್ನು ಐಸಿಯುಗೆ ಅಡ್ಮಿಟ್‌ ಮಾಡಲಾಗಿತ್ತು. ಆತನ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆದರೆ ಈಗಿನ್ನೂ ಅವರಿಗೆ 40 ವರ್ಷವಾದ್ದರಿಂದ ಬದುಕಿ ಉಳಿಯಬಹುದು ಅಂತ ಯೋಚಿಸಿದೆ. ಆದರೆ ಮರುದಿನ ಆತ ಅಸುನೀಗಿದ್ದರು. ಹೇಗೆ ಪ್ರತಿಕ್ರಿಯಿಸಬೇಕೋ ನನಗೆ ಗೊತ್ತಾಗಲಿಲ್ಲ. ಇದು ನಡೆದದ್ದು 2021 ಮಾರ್ಚ್‌ನಲ್ಲಿ.

ಆಗ ನಾನಿನ್ನೂ ಐಸಿಯುನಲ್ಲಿ ಕೆಲಸ ಮಾಡಲು ಆರಂಭಿಸಿದವಳು. ನನ್ನ ಸೀನಿಯರ್‌ಗಳು ಹೇಳುತ್ತಿದ್ದರು- 2020 ಬಹಳ ಕೆಟ್ಟ ವರ್ಷ ಆಗಿತ್ತು ಅಂತ. ಆದರೆ, 2021 ಅದಕ್ಕಿಂತಲೂ ಕೆಟ್ಟದಾಗಿರಲಿದೆ ಎಂಬುದು ಕೆಲವು ದಿನಗಳಲ್ಲಿಯೇ ಪ್ರೂವ್ ಆಯಿತು. ಪ್ರತಿದಿನ 5-6 ಗಂಭೀರ ಕೇಸ್‌ಗಳು ಆಸ್ಪತ್ರೆಗೆ ಬರುತ್ತಿದ್ದವು. ಅವರಲ್ಲಿ 2-3 ಮಂದಿ ಸಾಯುತ್ತಿದ್ದರು. 
ಏಪ್ರಿಲ್ ಮೊದಲ ವಾರದಲ್ಲಿ 22 ವರ್ಷದ ಒಬ್ಬ ವ್ಯಕ್ತಿ ಅಡ್ಮಿಟ್ ಆದರು. ಗಂಭೀರ ಲಕ್ಷಣಗಳು ಇದ್ದುದರಿಂದ ಎಮರ್ಜೆನ್ಸಿ ವಾರ್ಡಿಗೆ ಶಿಫ್ಟ್ ಮಾಡಿದೆವು. ಅಲ್ಲಿ 3-4 ದಿನಗಳು ಹಾಗೇ ಮುಂದುವರಿದೆವು. ಅವರು ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ ಎಂದು ನನಗೆ ತಿಳಿದಿತ್ತು. ಆದರೆ ಪ್ರತಿದಿನ ಅವರ 50 ವರ್ಷ ತಂದೆ- ತಾಯಿ ಅಲ್ಲಿಗೆ ಬರುತ್ತಿದ್ದರು. ನಾವು ಅವನಿಗೆ ಹಣ್ಣು- ತರಕಾರಿ ಕೊಟ್ಟರೆ ಅವನು ಚೇತರಿಸಿಕೊಳ್ಳಬಹುದಲ್ವಾ ಎಂದು ಆಸೆಯಿಂದ ಪ್ರಶ್ನಿಸುತ್ತಿದ್ದರು. ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ- ದೇವರು ಎಂದು ನಮ್ಮ ಕೈ ಬಿಡೋಲ್ಲ ಎನ್ನುತ್ತಿದ್ದರು.

ಆದರೆ ಸುಮಾರು ಕೋವಿಡ್ ಪ್ರಕರಣಗಳನ್ನು ನೋಡಿದ ಕಾರಣ, ಇದ್ಯಾವುದು ನಡೆಯುವುದಿಲ್ಲ ಎಂದು ನನಗೆ ಅನಿಸುತ್ತಿತ್ತು. ಆದರೆ ಅವರ ಆಶಾವಾದವನ್ನು ಭಂಗಗೊಳಿಸಲು ಮನಸ್ಸು ಒಪ್ಪಲಿಲ್ಲ. 5ನೇ ದಿನ ಆತ ತೀರಿಕೊಂಡ. ಈ ವಿಚಾರವನ್ನು ಅವರ ಹೆತ್ತವರಿಗೆ ನಾನೇ ಹೇಳಬೇಕಾಗಿ ಬಂತು. ಅದು ನನ್ನ ಹಾಗೂ ಅವರ ಎದೆ ಒಡೆದ ಸನ್ನಿವೇಶ. ಅವರ ಪ್ರತಿಕ್ರಿಯೆ ನನ್ನ ಅಂತರಂಗವನ್ನೇ ಘಾಸಿಗೊಳಿಸಿತು. ನಾನೂ ಅಂತರಂಗದಲ್ಲಿ ಸತ್ತಂತೆಯೇ ಆಗಿದ್ದೆ.

ಇದಾದ ಬಳಿಕ, ಇಂಥದೇ ಕ್ರಿಟಿಕಲ್ ಸನ್ನಿವೇಶದಲ್ಲಿದ್ದ ರೋಗಿಗಳ ಮನೆಯವರಿಗೆ ನಾನು ಸನ್ನಿವೇಶವನ್ನು ನಿಧಾನವಾಗಿ ಮನದಟ್ಟು ಮಾಡಿಸಿ ಅವರನ್ನು ರೆಡಿ ಮಾಡುತ್ತಿದ್ದೆ. ಪಲ್ಸ್ ರೇಟ್ ಇಳೀತಾ ಇದೆ, ಔಷಧಿಗೆ ಸ್ಪಂದಿಸ್ತಾ ಇಲ್ಲ- ಇತ್ಯಾದಿ ಹೇಳುವ ಮೂಲಕ ಅವರನ್ನು ಸಾವಿನ ಸನ್ನಿವೇಶಕ್ಕೆ ರೆಡಿ ಮಾಡ್ತಾ ಇದ್ದೆ. ಕೊನೇ ಪಕ್ಷ ಅವರಲ್ಲಿ ಸುಳ್ಳು ಭರವಸೆ ಮೂಡಿಸಲಿಲ್ಲ ಎಂಬ ತೃಪ್ತಿ ನನ್ನದು.

ಪ್ರೀತಿಸಿ ವರಿಸಿದ ಗಂಡನನ್ನೇ ಕೊಂದ ಅಪವಾದ, ಕಳೆದದ್ದು ಜೈಲಲ್ಲಿ: ಕೇಳಿ ಈಕೆಯ ಕಥೆ! ...

ಹಾಗೇ ನಾನು ಪೇಷೆಂಟ್‌ಗಳಿಗೆ ಸುಳ್ಳು ಹೇಳಲೂ ಕಲಿತೆ. ಅವರು ನನ್ನ ಬಳಿ ಕೇಳುತ್ತಿದ್ದರು- ನಾನು ಬೇಗ ಗುಣವಾಗಬಹುದಾ ಅಂತ. ಖಂಡಿತವಾಗಿಯೂ ನೀವು ಗುಣಮುಖರಾಗಿ ನಡೆದುಕೊಂಡು ಮನೆಗೆ ಹೋಗ್ತೀರಿ ಅಂತ ಹೇಳುತ್ತಿದ್ದೆ. ಅವರು ಗುಣಮುಖರಾಗಲಾರರು ಎಂದು ನನಗೆ ಗೊತ್ತಿರುತ್ತಿತ್ತು. ಆದರೆ ಅವರ ಬದುಕಿನ ಕೊನೆಯ ಕ್ಷಣಗಳನ್ನು ಒತ್ತಡ ಭಯದಲ್ಲಿ ಕಳೆಯುವುದನ್ನು ನಾನು ನೋಡಲಾರದವಳಾಗಿದ್ದೆ.

ಬೆತ್ತಲೆಯಾದರೆ ಇಮ್ಯೂನಿಟಿ ಪವರ್ ಹೆಚ್ಚುತ್ತಾ ? ...

ಕಳೆದ ಎರಡು ವಾರಗಳಲ್ಲಂತೂ ನೋಡಬಾರದುದನ್ನೆಲ್ಲಾ ನಾನು ನೋಡಿದ್ದೇನೆ. ಗಂಭೀರ ಸ್ಥಿತಿಯಲ್ಲಿದ್ದ ಒಬ್ಬಾಕೆ ಮಹಿಳೆಯನ್ನು ಅಡ್ಮೀಟ್ ಮಾಡಲಾಯಿತು. ಆಕೆಯನ್ನು ಐಸಿಯುಗೆ ಕೊಂಡೊಯ್ಯುತ್ತಿದ್ದಾಗ ಆಕೆ ಹೇಳಿದ ಕೊನೆಯ ಮಾತುಗಳು- ''ನಂಗೆ 11 ವರ್ಷ ಮತ್ತು 4 ವರ್ಷದ ಇಬ್ಬರು ಮಕ್ಕಳು, ಅವರನ್ನು ಬಿಟ್ಟು ನಾನು ಸಾಯಲಾರೆ...'' ಆದರೆ ನಾಲ್ಕು ಗಂಟೆಯ ನಂತರ, ಆಕೆ ಸತ್ತ ಸುದ್ದಿಯನ್ನು ನಾನು ಇದೇ ಮಕ್ಕಳಿಗೆ ಹೇಳಬೇಕಾಗಿ ಬಂತು. ಆಕೆಯ ದೇಹವನ್ನು ನೋಡಲೂ ಆ ಮಕ್ಕಳಿಗೆ ಅವಕಾಶವಾಗಲಿಲ್ಲ. 4 ವರ್ಷದ ಮಗುವಂತೂ ''ನಾನು ಅಮ್ಮನನ್ನು ಹಗ್ ಮಾಡಬೇಕು'' ಎಂದು ಹೇಳುತ್ತಾ ಭೋರಿಟ್ಟು ಅತ್ತಿತು. ಆಕೆಯನ್ನು ಬದಿಗೆ ಸರಿಸುವುದಲ್ಲದೆ ನನಗೆ ಬೇರೆ ಮಾರ್ಗವಿರಲಿಲ್ಲ. ಆ ಕ್ಷಣದಲ್ಲಿ ಹೇಗೆ ಫೀಲ್ ಮಾಡಬೇಕು ಎನ್ನುವುದೇ ನನಗೆ ಅರ್ಥವಾಗಲಿಲ್ಲ. 

ಬೇಸರ ಬೇಡ: ಲಾಕ್‌ಡೌನ್‌ ದಿನಗಳನ್ನು ಹೀಗೆ ಹಸನಾಗಿಸಿಕೊಳ್ಳಿ..! ...

ಇದನ್ನೆಲ್ಲ ನೋಡುತ್ತಾ ನನ್ನ ಮಾನಸಿಕ ಸ್ಥಿತಿಯೂ ಕುಗ್ಗಿದೆ. ನಮ್ಮ ಆಸ್ಪತ್ರೆಯ ಶವಾಗಾರದಲ್ಲಿ ರಾಶಿಬಿದ್ದಿರುವ ಶವಗಳನ್ನು ನೋಡುತ್ತ ಇದ್ದರೆ, ನಾನು ಹುಟ್ಟಲೇಬಾರದಾಗಿತ್ತು ಅಂತ ಅನಿಸುತ್ತದೆ. ಆದರೆ, ನಾನು ಇನ್ನೊಬ್ಬರ ಬದುಕನ್ನು ಉಳಿಸುವ ಕಾಯಕದಲ್ಲಿ ಇದ್ದೇನೆ ಎಂಬ ಭರವಸೆಯೇ ನನ್ನನ್ನು ಈ ಕೆಲಸದಲ್ಲಿ ಮುನ್ನಡೆಸಿದೆ.

ನಾನು ಹೀಗೆ ಇಲ್ಲಿ ಕೆಲಸ ಮಾಡುತ್ತಿರುವಂತೆಯೇ ಇತರ ಆರೋಗ್ಯ ಸೇವೆ ಸಿಬ್ಬಂದಿಗಳೂ ನಮ್ಮ ತಂದೆ ತಾಯಿಗೆ ಕೋವಿಡ್‌ ಬಂದರೆ ಮಾಡಬಹುದು ಎಂದು ಭಾವಿಸುತ್ತೇನೆ. ನನ್ನ ತಂದೆ ತಾಯಿ ಇಬ್ಬರಿಗೂ 50 ವರ್ಷ ಮೇಲಾಗಿದೆ. ಇಬ್ಬರೂ ನನ್ನಿಂದ ದೂರ ಕೇರಳದಲ್ಲಿ ಇದ್ದಾರೆ. ನನಗೆ ಕೋವಿಡ್‌ ಬಂದರೆ, ನಾನು ಸತ್ತರೆ ನನ್ನ ಹೆತ್ತವರು ಏನು ಮಾಡಬಹುದು ಎಂಬ ಚಿಂತನೆಯೂ ಆಗೀಗ ನನ್ನಲ್ಲಿ ಹಾದುಹೋಗುತ್ತದೆ. ಇದನ್ನೆಲ್ಲ ಅರ್ಥ ಮಾಡಿಕೊಳ್ಳಿ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಈ ದಿನಗಳಲ್ಲಿ ಮನೆಯಲ್ಲಿ ಸುರಕ್ಷಿತವಾಗಿರೋದೇ ಸ್ವರ್ಗ. 

ಕೃಪೆ: ಹ್ಯೂಮನ್ಸ್ ಆಫ್ ಬಾಂಬೇ, ಫೇಸ್‌ಬುಕ್

Latest Videos
Follow Us:
Download App:
  • android
  • ios