ಕನ್ನಡ ರಾಜ್ಯೋತ್ಸವದ ದಿನ ಕನ್ನಡದಲ್ಲೇ ಮಾತನಾಡಿದ ರಜಿನಿ, ಜೂ. ಎನ್‌ಟಿಆರ್‌

By Sharath Sharma KalagaruFirst Published Nov 1, 2022, 6:01 PM IST
Highlights

Karnataka Ratna Award to Puneeth Rajkumar: ನಮ್ಮನ್ನಗಲಿದ ಖ್ಯಾತ ನಟ ಪುನೀತ್‌ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಜಿನಿಕಾಂತ್ ಮತ್ತು ಜೂನಿಯರ್‌ ಎನ್‌ಟಿಆರ್‌ ಕೂಡ ಭಾಗಿಯಾಗಿದ್ದರು.

ಬೆಂಗಳೂರು: ಕನ್ನಡ ರಾಜ್ಯೋತ್ಸವದ ದಿನವಾದ ಇಂದು ಕರ್ನಾಟಕ ರತ್ನ ಪ್ರಶಸ್ತಿಯನ್ನು ಪುನೀತ್‌ ರಾಜ್‌ಕುಮಾರ್‌ ಅವರಿಗೆ ನೀಡಲಾಯಿತು. ಪುನೀತ್‌ ಪರವಾಗಿ ಅವರ ಮಡದಿ ಅಶ್ವಿನಿ ಸ್ವೀಕರಿಸಿದರು. ವಿಧಾನಸೌಧದ ಮುಂದೆ ನಡೆದ ಅಭೂತಪೂರ್ವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಪ್ರಶಸ್ತಿ ನೀಡಿದರು. ಕಾರ್ಯಕ್ರಮದಲ್ಲಿ ಸೂಪರ್‌ ಸ್ಟಾರ್‌ ರಜಿನಿಕಾಂತ್‌, ಜೂನಿಯರ್‌ ಎನ್‌ಟಿಆರ್‌ ಕೂಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಜಿನಿಕಾಂತ್‌ ಮತ್ತು ಜೂನಿಯರ್‌ ಎನ್‌ಟಿಆರ್‌ ಇಬ್ಬರೂ ಕನ್ನಡದಲ್ಲೇ ಮಾತನಾಡಿದ್ದನ್ನು ಅಭಿಮಾನಿಗಳಿಗೆ ಮತ್ತು ಕನ್ನಡಿಗರಿಗೆ ಸಂತಸ ಮೂಡಿಸಿದೆ. 

ಕಿಕ್ಕಿರಿದು ಸೇರಿದ ಜನಸಾಗರದ ಮುಂದೆ ಅಭಿಮಾನಿಗಳ ದೈವ ರಜಿನಿಕಾಂತ್‌ ಕನ್ನಡದಲ್ಲೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕನ್ನಡಿಗರಿಗೆ ತಿಳಿಸಿದರು. ನಂತರ ಅವರು ವರನಟ ಡಾ. ರಾಜ್‌ಕುಮಾರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಅವರನ್ನು ನೆನೆದರು. ಪುನೀತ್‌ ರಾಜ್‌ಕುಮಾರ್‌ ನಟ ಎಂಬ ಕಾರಣಕ್ಕೆ ಅವರ ಅಂತಿಮ ದರ್ಶನಕ್ಕೆ ಲಕ್ಷಾಂತರ ಜನ ಬರಲಿಲ್ಲ. ಅವರ ಮಾನವೀಯತೆಗೆ, ವ್ಯಕ್ತಿತ್ವಕ್ಕೆ ಜನ ಬಂದು ಭೇಟಿ ನೀಡಿದ್ದಾರೆ. ಪುನೀತ್‌ ವ್ಯಕ್ತಿತ್ವ ಶ್ರೇಷ್ಟವಾದದ್ದು. ಹಿಂದೆಯೊಮ್ಮೆ ಸ್ನೇಹಿತರ ಜೊತೆ ಡಾ. ರಾಜ್‌ ಶಬರಿಮಲೆಗೆ ಪಾದಯಾತ್ರೆ ಮಾಡಿದ್ದರು. 

ಈ ವೇಳೆ 42 ಕಿಲೋಮೀಟರ್‌ ಹಾದಿಯುದ್ದಕ್ಕೂ ಅವರ ಹೆಗಲ ಮೇಲೆ ಒಬ್ಬ ಪುಟ್ಟ ಹುಡುಗನಿದ್ದ. ಅವನ್ನು ಕಂಡರೆ ಯಾತ್ರಿಗಳಿಗೆಲ್ಲರಿಗೂ ಪರಮ ಪ್ರೀತಿ. ಎಲ್ಲರೂ ಅಕ್ಕರೆಯಿಂದ ಅವನನ್ನು ಎತ್ತಿಕೊಳ್ಳುತ್ತಿದ್ದರು. ಆ ಪುಟ್ಟ ಹುಡುಗ ಬೇರಾರೂ ಅಲ್ಲ, ಅದು ಪುನೀತ್‌ ರಾಜ್‌ಕುಮಾರ್‌. ಅವರ ಅಪ್ಪು ಸಿನೆಮಾವನ್ನು ಬಿಡುಗಡೆಗೂ ಮುನ್ನವೇ ನೋಡಿದ್ದೆ. ನೋಡಿ ಚಿತ್ರ ನೂರು ದಿನ ಖಂಡಿತವಾಗಿ ಓಡುತ್ತದೆ ಎಂದು ರಾಜ್‌ಕುಮಾರ್‌ ಅವರಿಗೆ ಹೇಳಿದ್ದೆ. ಅದರಂತೆ ಅಪ್ಪು ಸಿನೆಮಾ ಶತ ದಿನೋತ್ಸವದ ಸಂಭ್ರಮ ಕಂಡಿತು ಎಂದು ರಜಿನಿಕಾಂತ್‌ ನೆನಪಿಸಿಕೊಂಡರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಜೂನಿಯರ್‌ ಎನ್‌ಟಿಆರ್‌ ಕೂಡ ಪುನೀತ್‌ ರಾಜ್‌ಕುಮಾರ್‌ ಅವರನ್ನು ಹೊಗಳಿದರು. ಸಂಸ್ಕಾರ ಎಂಬುದು ಬಳುವಳಿಯಾಗಿ ಬರುವಂತದ್ದು, ಅಂತಸ್ತು, ಆಸ್ತಿ ಎಲ್ಲವೂ ಬಳುವಳಿಯಾಗಿ ಬರಬಹುದು. ಆದರೆ ವ್ಯಕ್ತಿತ್ವ ಎಂಬುದು ವ್ಯಕ್ತಿಯ ಕೈಯಲ್ಲೇ ಇರುತ್ತದೆ. ಪುನೀತ್‌ ರಾಜ್‌ಕುಮಾರ್‌ರದ್ದು ಮೇರು ವ್ಯಕ್ತಿತ್ವ. ಅವರ ನಿಜವಾದ ಸಂಪಾದನೆ ಜನರ ಪ್ರೀತಿ, ವಿಶ್ವಾಸ ಮತ್ತು ಅಭಿಮಾನ. ಅವರಿಲ್ಲದ ಚಿತ್ರರಂಗ ನಡೆಸಿಕೊಳ್ಳುವುದೇ ಕಷ್ಟವಾಗುತ್ತದೆ ಎಂದು ಭಾವುಕರಾದರು. 

ಇದನ್ನೂ ಓದಿ: Puneeth Rajkumar: ಪುನೀತ್‌ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

ಪುನೀತ್ ರಾಜ್‌ಕುಮಾರ್‌ ಅವರ ಭಾವಚಿತ್ರವನ್ನು ಜೂನಿಯರ್‌ ಎನ್‌ಟಿಆರ್‌ ತಮ್ಮ ಮನೆಯಲ್ಲಿ ಇಟ್ಟುಕೊಂಡಿರುವ ಫೋಟೊ ಇತ್ತೀಚೆಗಷ್ಟೆ ವೈರಲ್‌ ಆಗಿತ್ತು. ಪುನೀತ್‌ ಮೇಲಿನ ಸ್ನೇಹ ಮತ್ತು ಅಭಿಮಾನದಿಂದ ಮನೆಯಲ್ಲಿ ಫೋಟೊ ಫ್ರೇಮ್‌ ಹಾಕಿಸಿ ಇಟ್ಟುಕೊಂಡಿರುವುದನ್ನು ಪುನೀತ್‌ ಮತ್ತು ಎನ್‌ಟಿಆರ್‌ ಇಬ್ಬರ ಅಭಿಮಾನಿ ಬಳಗವೂ ಶ್ಲಾಘಿಸಿದ್ದರು. ಇದೀಗ ಅಪ್ಪು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಭಾಗಿಯಾಗುವ ಮೂಲಕ ನಿಜವಾದ ಗೆಳೆತನವನ್ನು ಜೂನಿಯರ್‌ ಎನ್‌ಟಿಆರ್‌ ಎತ್ತಿ ಹಿಡಿದಿದ್ದಾರೆ. 

ಇದನ್ನೂ ಓದಿ: ಅಪ್ಪು ಕರ್ನಾಟಕ ರತ್ನ: ಸಮಾಧಿಗೆ ರಾಘಣ್ಣ ಪೂಜೆ

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಕೂಡ ಅಪ್ಪು ಅವರನ್ನು ಹಾಡಿ ಹೊಗಳಿದರು. ಪುನೀತ್‌ ರಾಜ್‌ಕುಮಾರ್‌ ಜನರ ಮನಸ್ಸಿನಲ್ಲಿದ್ದಾರೆ, ಕನ್ನಡಿಗರಲ್ಲಿದ್ದಾರೆ, ನಮ್ಮ ಭಾಷೆಯಲ್ಲಿದ್ದಾರೆ, ಹೃದಯದಲ್ಲಿದ್ದಾರೆ ಎಂದರು. ಮರಳಿ ಕೆಳಗೆ ಬಂದು ನೋಡಿ ಪುನೀತ್‌ ರಾಜ್‌ಕುಮಾರ್‌ ಅವರೇ ಲಕ್ಷಾಂತರ ಅಭಿಮಾನಿಗಳು ನಿಮ್ಮನ್ನು ಆರಾಧಿಸುತ್ತಿದ್ದಾರೆ. ನೀವು ಮತ್ತೆ ಹುಟ್ಟಿ ಬರಬೇಕು ಎಂದರು. 

click me!