
ಬೆಂಗಳೂರು (ಅ.14): ಕನ್ನಡಿಗರ ಭಾಷಾಭಿಮಾನವನ್ನು ಭಯೋತ್ಪಾದನಾ ದಾಳಿಗೆ ಹೋಲಿಸಿ ವಿವಾದಕ್ಕೀಡಾಗಿದ್ದ ಬಾಲಿವುಡ್ನ ಖ್ಯಾತ ಗಾಯಕ ಸೋನು ನಿಗಮ್ (Sonu Nigam) ಅವರಿಗೆ ಬೆಂಗಳೂರಿನಲ್ಲಿ ಮತ್ತೊಮ್ಮೆ ವಿರೋಧ ವ್ಯಕ್ತವಾಗಿದೆ. ಅಕ್ಟೋಬರ್ 24ರಂದು ನಗರದಲ್ಲಿ ಆಯೋಜಿಸಲಾಗಿರುವ ಸೋನು ನಿಗಮ್ ಅವರ ಸಂಗೀತ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ವತಿಯಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಅಧಿಕೃತ ಮನವಿ ಸಲ್ಲಿಸಲಾಗಿದೆ.
ಕರವೇ ರಾಜ್ಯ ಅಧ್ಯಕ್ಷ ಟಿ.ಎ. ನಾರಾಯಣಗೌಡ (T.A. Narayana Gowda) ಅವರ ನೇತೃತ್ವದಲ್ಲಿ ಪೊಲೀಸ್ ಆಯುಕ್ತರಿಗೆ ಸಲ್ಲಿಸಲಾಗಿರುವ ಮನವಿಯಲ್ಲಿ, 'ಕನ್ನಡಿಗರ ಭಾಷಾಭಿಮಾನವನ್ನು ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಹೋಲಿಸಿ ಅವಮಾನಿಸಿರುವ ಗಾಯಕ ಸೋನು ನಿಗಮ್ ಅವರ ಸಂಗೀತ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು' ಎಂದು ಬಲವಾಗಿ ಆಗ್ರಹಿಸಲಾಗಿದೆ.
2025ರ ಏಪ್ರಿಲ್ನಲ್ಲಿ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ, ಕನ್ನಡ ಹಾಡು ಹಾಡುವಂತೆ ಕೋರಿದ್ದ ವಿದ್ಯಾರ್ಥಿಯೊಬ್ಬರಿಗೆ ಪ್ರತಿಕ್ರಿಯಿಸಿದ್ದ ಸೋನು ನಿಗಮ್, "ಕನ್ನಡ, ಕನ್ನಡ, ಕನ್ನಡ.. ಇದೇ ಕಾರಣಕ್ಕೆ ಪಹಲ್ಗಾಮ್ನಲ್ಲಿ ಘಟನೆ (ಭಯೋತ್ಪಾದಕ ದಾಳಿ) ಸಂಭವಿಸಿತು' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕನ್ನಡ ಹಾಡು ಕೇಳುವುದು ಯಾವುದೇ ದೃಷ್ಟಿಯಲ್ಲೂ ಅಪರಾಧವಲ್ಲವಾದರೂ, ಕನ್ನಡಿಗರ ಭಾಷಾಭಿಮಾನವನ್ನು ಭಯೋತ್ಪಾದನಾ ದಾಳಿಗೆ ಹೋಲಿಸುವುದು ಅತ್ಯಂತ ಖಂಡನೀಯ ಹಾಗೂ ಕನ್ನಡಿಗರ ಸ್ವಾಭಿಮಾನಕ್ಕೆ ಮಾಡಿದ ದೊಡ್ಡ ಅಪಮಾನವಾಗಿದೆ ಎಂದು ಕರವೇ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ 2025ರ ಮೇ 2ರಂದೇ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿದೆ.
ಸೋನು ನಿಗಮ್ ಅವರ 'ದಿ ರೆವಲ್ಯೂಷನ್ ಇಂಡಿಯಾ ಟೂರ್' (The Revolution India Tour) ಸಂಗೀತ ಕಾರ್ಯಕ್ರಮವು ಬಾಗಲೂರು ರಸ್ತೆಯ ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ಭಾರತೀಯ ಮಾಲ್ ಆಫ್ ಬೆಂಗಳೂರು (Bhartiya Mall of Bengaluru) ಆವರಣದಲ್ಲಿ ಅಕ್ಟೋಬರ್ 24ರಂದು ಸಂಜೆ 7 ಗಂಟೆಗೆ ಆಯೋಜನೆಯಾಗಿದೆ ಎಂಬ ಮಾಹಿತಿ ಲಭ್ಯವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ