PSI Recruitment Scam ಎಸ್‌ಐ ನೇಮಕ ವಿಭಾಗದ ನಾಲ್ವರು ಸಿಐಡಿ ಬೋನಿಗೆ, ಅಕ್ರಮ ಖಚಿತ!

Published : May 11, 2022, 04:03 AM IST
PSI Recruitment Scam ಎಸ್‌ಐ ನೇಮಕ ವಿಭಾಗದ ನಾಲ್ವರು ಸಿಐಡಿ ಬೋನಿಗೆ, ಅಕ್ರಮ ಖಚಿತ!

ಸಾರಾಂಶ

- ಇಬ್ಬರು ಮಧ್ಯವರ್ತಿಗಳು ಕೂಡ ಬಂಧನ - ನೇಮಕಾತಿ ವಿಭಾಗದಲ್ಲೇ ಅಕ್ರಮ ಖಚಿತ - ಡ್ಯಾಂಗೆ ಮೊಬೈಲ್‌ ಎಸೆದಿದ್ದ ಬ್ಲೂಟೂತ್‌ ಎಂಜಿನಿಯರ್‌ 

ಬೆಂಗಳೂರು(ಮೇ.11): ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಪರೀಕ್ಷಾ ಅಕ್ರಮದಲ್ಲಿ ನೇಮಕಾತಿ ವ್ಯವಸ್ಥೆಯೇ ಪಾಲ್ಗೊಂಡಿರುವುದು ಖಚಿತವಾಗಿದ್ದು, ನೇಮಕಾತಿ ವಿಭಾಗದ ನಾಲ್ವರು ಅಧಿಕಾರಿಗಳು ಹಾಗೂ ಇಬ್ಬರು ಮಧ್ಯವರ್ತಿಗಳು ಸೇರಿದಂತೆ ಒಟ್ಟು ಆರು ಮಂದಿ ಮಂಗಳವಾರ ಸಿಐಡಿ ಬಲೆಗೆ ಬಿದ್ದಿದ್ದಾರೆ.

ನೇಮಕಾತಿ ವಿಭಾಗದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹರ್ಷ, ಸಶಸ್ತ್ರ ಮೀಸಲು ಪಡೆಯ ಸಬ್‌ ಇನ್ಸ್‌ಪೆಕ್ಟರ್‌ ಶ್ರೀನಿವಾಸ್‌, ಹೆಡ್‌ ಕಾನ್‌ಸ್ಟೇಬಲ್‌ ಲೋಕೇಶ್‌, ದ್ವಿತೀಯ ದರ್ಜೆ ಸಹಾಯಕ ಶ್ರೀಧರ್‌ ಹಾಗೂ ಮಧ್ಯವರ್ತಿಗಳಾದ ಮಂಜುನಾಥ್‌ ಮತ್ತು ಶರತ್‌ ಬಂಧಿತರಾಗಿದ್ದು, ಪರೀಕ್ಷೆ ಮುಗಿದ ಬಳಿಕ ನೇಮಕಾತಿ ವಿಭಾಗದ ಸ್ಟ್ರಾಂಗ್‌ ರೂಮ್‌ನಲ್ಲಿದ್ದ ಕೆಲ ಅಭ್ಯರ್ಥಿಗಳ ಒಎಂಆರ್‌ ಶೀಟ್‌ಗಳನ್ನು ಈ ಆರೋಪಿಗಳು ತಿದ್ದಿದ್ದಾರೆ. ಇದಕ್ಕೆ ತಲಾ ಅಭ್ಯರ್ಥಿಯಿಂದ 30 ರಿಂದ 40 ಲಕ್ಷ ರು. ವಸೂಲಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

PSI ಅಕ್ರಮ ಕೇಸ್, ವಿಚಾರಣೆ ವೇಳೆ ದಿವ್ಯಾ ಹಾಗರಗಿ ಪಶ್ಚಾತಾಪದ ಮಾತು

ಇದರೊಂದಿಗೆ ಪೊಲೀಸ್‌ ನೇಮಕಾತಿ ಹಗರಣದಲ್ಲಿ ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಆಗಿದ್ದು, ಈ ಪ್ರಕರಣವು ರಾಜ್ಯ ಪೊಲೀಸ್‌ ಇತಿಹಾಸಕ್ಕೆ ರಾಷ್ಟ್ರ ಮಟ್ಟದಲ್ಲಿ ಭಾರಿ ಕಳಂಕ ತಂದಿದೆ. ಅಕ್ರಮ ಕೃತ್ಯ ಬೆಳಕಿಗೆ ಬಂದ ದಿನದಿಂದ ಇದುವರೆಗೆ ರಾಜಕಾರಣಿಗಳು, ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳನ್ನು ಸೆರೆಹಿಡಿದಿದ್ದ ಸಿಐಡಿ, ಈಗ ತನ್ನ ಕಾರ್ಯಾಚರಣೆಯನ್ನು ಎರಡನೇ ಘಟ್ಟಕ್ಕೆ ವಿಸ್ತರಿಸುತ್ತಿದ್ದಂತೆ ‘ಅಕ್ರಮ ಕೂಟ’ದ ಮೂಲ ಬೇರು ಎನ್ನಲಾದ ನೇಮಕಾತಿ ವಿಭಾಗದ ಬುಡಕ್ಕೆ ಕೊಡಲಿ ಪೆಟ್ಟು ಬಿದ್ದಿದೆ.

ಒಎಂಆರ್‌ ಶೀಟ್‌ ತಿದ್ದಿದ್ದರೇ?:
545 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಒಎಂಆರ್‌ ಶೀಟ್‌ ತಿದ್ದಿದ ಆರೋಪದ ಮೇರೆಗೆ 22 ಅಭ್ಯರ್ಥಿಗಳ ವಿರುದ್ಧ ನಗರ ಹೈಗ್ರೌಂಡ್‌್ಸ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ಸಿಐಡಿ, ಈ ಅಭ್ಯರ್ಥಿಗಳ ಪೈಕಿ 16 ಮಂದಿಯನ್ನು ಬಂಧಿಸಿದ್ದಾರೆ. ಇನ್ನುಳಿದ ಆರು ಮಂದಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರೆಸಿದೆ. ಬಂಧಿತ ಅಭ್ಯರ್ಥಿಗಳ ವಿಚಾರಣೆ ಹಾಗೂ ಪರೀಕ್ಷಾ ಕೇಂದ್ರದ ಸಾಂದರ್ಭಿಕ ಸಾಕ್ಷ್ಯ ಆಧರಿಸಿ ನೇಮಕಾತಿ ವಿಭಾಗದ ನಾಲ್ವರು ಹಾಗೂ ಈ ಅಕ್ರಮ ಕೂಟಕ್ಕೆ ಮಧ್ಯವರ್ತಿಗಳಾಗಿದ್ದ ಇಬ್ಬರು ಸಿಐಡಿ ಗಾಳಕ್ಕೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

PSI Recruitment Scam: 11 ಮಂದಿಗೆ ನ್ಯಾಯಾಂಗ ಬಂಧನ

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಕಲಬುರಗಿ ಹಾಗೂ ಬೆಂಗಳೂರಿನಲ್ಲಿ ಪ್ರತ್ಯೇಕ ಜಾಲಗಳು ಬಯಲಾಗಿದ್ದವು. ಕಲಬುರಗಿ ನಗರದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಮುಗಿದ ಬಳಿಕ ಸಿಸಿಟಿವಿ ಕ್ಯಾಮೆರಾ ಆಫ್‌ ಮಾಡಲಾಗಿತ್ತು. ಹಣ ಕೊಟ್ಟಅಭ್ಯರ್ಥಿಗಳ ಒಎಂಆರ್‌ ಶೀಟ್‌ಗಳನ್ನು ಪರೀಕ್ಷಾ ಮೇಲ್ವಿಚಾರಕರಾಗಿದ್ದ ತನ್ನ ಶಾಲೆಯ ಶಿಕ್ಷಕರ ಮೂಲಕ ದಿವ್ಯಾ ತಿದ್ದಿಸಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಆದರೆ ಬೆಂಗಳೂರಿನಲ್ಲಿ ಪರೀಕ್ಷಾ ಕೇಂದ್ರಗಳ ತಪಾಸಣೆ ನಡೆಸಿದಾಗ ಅಕ್ರಮಕ್ಕೆ ಪುರಾವೆ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ತೀವ್ರವಾಗಿ ಪ್ರಶ್ನಿಸಿದಾಗ ನೇಮಕಾತಿಯಲ್ಲಿದ್ದ ‘ಅಕ್ರಮ ಕೂಟ’ವು ಬೆಳಕಿಗೆ ಬಂದಿದೆ ಎಂದು ಮೂಲಗಳು ಹೇಳಿವೆ.

ಕಳೆದ 2021ರ ಅಕ್ಟೋಬರ್‌ನಲ್ಲಿ ರಾಜ್ಯದ 92 ಕೇಂದ್ರಗಳಲ್ಲಿ ಪಿಎಸ್‌ಐ ನೇಮಕಾತಿ ಲಿಖಿತ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆ ಮುಗಿದ ಬಳಿಕ ಬೆಂಗಳೂರಿನ ಅರಮನೆ ರಸ್ತೆಯ ಸಿಐಡಿ ಕೇಂದ್ರ ಕಚೇರಿ ಆವರಣದಲ್ಲಿರುವ ರಾಜ್ಯ ಪೊಲೀಸ್‌ ನೇಮಕಾತಿ ವಿಭಾಗಕ್ಕೆ ಎಲ್ಲ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳು ರವಾನೆಯಾಗಿದ್ದವು. ಆಗ ಸ್ಟ್ರಾಂಗ್‌ ರೂಮ್‌ನಲ್ಲೇ ತಮಗೆ ಹಣ ಕೊಟ್ಟಿದ್ದ ಅಭ್ಯರ್ಥಿಗಳ ಒಎಂಆರ್‌ ಶೀಟ್‌ಗಳನ್ನು ನೇಮಕಾತಿ ವಿಭಾಗದ ಅಧಿಕಾರಿಗಳು ತಿದ್ದಿರಬಹುದು ಎಂದು ಆರೋಪ ಬಂದಿದೆ.

ಈ ಪ್ರಕರಣದ ಅನುಮಾನದ ಮೇರೆಗೆ ಮಂಗಳವಾರ ವಿಚಾರಣೆಗೆ ಹಾಜರಾಗಿದ್ದ ನೇಮಕಾತಿ ವಿಭಾಗದ ಅಧಿಕಾರಿಗಳನ್ನು ತೀವ್ರವಾಗಿ ಪ್ರಶ್ನಿಸಿ ಹೇಳಿಕೆ ಪಡೆದ ಸಿಐಡಿ ತಂಡ, ಬಳಿಕ ಸಂಜೆ ಅವರನ್ನು ಬಂಧನಕ್ಕೊಳಪಡಿಸಿದೆ ಎಂದು ಮೂಲಗಳು ಹೇಳಿವೆ.

15 ಪ್ರಶ್ನೆಗೆ ಮಾತ್ರ ಅಭ್ಯರ್ಥಿಗಳ ಉತ್ತರ!
ಪಿಎಸ್‌ಐ ಪರೀಕ್ಷೆಯಲ್ಲಿ 150 ಅಂಕಗಳ ಎರಡನೇ ಪತ್ರಿಕೆ (ಸಾಮಾನ್ಯ ಜ್ಞಾನ)ಯ ಒಎಂಆರ್‌ ಶೀಟ್‌ಗಳು ತಿದ್ದುಪಡಿಯಾಗಿವೆ. ಬೆಂಗಳೂರಿನಲ್ಲಿ ಅಕ್ರಮ ನಡೆಸಿದ್ದ ಅಭ್ಯರ್ಥಿಗಳು, 15 ರಿಂದ 20 ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಬಳಿಕ ಆ ಅಭ್ಯರ್ಥಿಗಳ ಒಎಂಆರ್‌ ಶೀಟ್‌ಗಳನ್ನು ಕೆಲವರು ತಿದ್ದುಪಡಿ ಮಾಡಿ 120ಕ್ಕಿಂತ ಹೆಚ್ಚಿನ ಅಂಕ ಗಳಿಸಲು ನೆರವಾಗಿದ್ದಾರೆ. ಇದರಿಂದ 50 ಅಂಕಗಳ ಮೊದಲ ಪತ್ರಿಕೆಯಲ್ಲಿ 10 ರಿಂದ 15 ಅಂಕ ಪಡೆದವರು, ಎರಡನೇ ಪತ್ರಿಕೆಯಲ್ಲಿ ಅಧಿಕ ಅಂಕಗಳಿಸಿ ರಾರ‍ಯಂಕ್‌ ಪಡೆದಿದ್ದಾರೆ ಎನ್ನಲಾಗಿದೆ.

ಸ್ಟ್ರಾಂಗ್‌ ರೂಮ್‌ ಉಸ್ತುವಾರಿಯಲ್ಲಿದ್ದ ಆರೋಪಿಗಳು!
ಬಂಧಿತ ಹರ್ಷ, ಶ್ರೀಧರ್‌, ಲೋಕೇಶ್‌ ಹಾಗೂ ಶ್ರೀನಿವಾಸ್‌ ನೇಮಕಾತಿ ವಿಭಾಗದಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನಿಟ್ಟಿದ್ದ ಸ್ಟ್ರಾಂಗ್‌ ರೂಮ್‌ನ ಉಸ್ತುವಾರಿಯಲ್ಲಿದ್ದರು. ರಾತ್ರಿ ವೇಳೆ ಆರೋಪಿಗಳು ಒಎಂಆರ್‌ ಶೀಟ್‌ ತಿದ್ದಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಹಿರಿಯ ಅಧಿಕಾರಿ ಬುಡಕ್ಕೆ ಬೆಂಕಿ..!
ಪೊಲೀಸ್‌ ನೇಮಕಾತಿ ಅಕ್ರಮದಲ್ಲಿ ಕೆಳ ಹಂತದ ಸಿಬ್ಬಂದಿ ಸಿಐಡಿ ಬಲೆಗೆ ಬಿದ್ದ ಬೆನ್ನಲ್ಲೇ ಈಗ ನೇಮಕಾತಿ ವಿಭಾಗದ ಹಿರಿಯ ಅಧಿಕಾರಿಗಳಿಗೆ ಆತಂಕ ಶುರುವಾಗಿದೆ. ಮೇಲಾಧಿಕಾರಿಗಳ ಕಣ್ತಪ್ಪಿಸಿ ಇಂಥ ದೊಡ್ಡ ಮಟ್ಟದ ಹಗರಣ ನಡೆದಿರಲು ಸಾಧ್ಯವಿಲ್ಲ. ಮುಂದಿನ ಹಂತದಲ್ಲಿ ಭರ್ಜರಿ ವಿಕೆಟ್‌ ಬೀಳಬಹುದು ಎನ್ನಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬೀದಿ ನಾಯಿಗಳಿಗೆ ಪ್ರತಿನಿತ್ಯ 2 ಬಾರಿ ಚಿಕನ್‌ ರೈಸ್‌ !
ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!