
ಬೆಂಗಳೂರು(ಮೇ.11): ರಾಜ್ಯದಲ್ಲಿ ಮುಂದಿನ ಎರಡು ದಿನ ಭಾರಿ ಮಳೆ ಮತ್ತು ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಒಳನಾಡಿನ ಜಿಲ್ಲೆಗಳು ಮತ್ತು ಕರಾವಳಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮೇ 14ರವರೆಗೂ ರಾಜ್ಯದ ಹಲವು ಭಾಗದಲ್ಲಿ ಮಳೆ ಸುರಿಯುವ ಸಾಧ್ಯತೆ ಹೆಚ್ಚಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಹೇಳಿದೆ.
ಆಂಧ್ರಪ್ರದೇಶ ಕರಾವಳಿಯ ತೀರದಲ್ಲಿ ‘ಆಸಾನಿ’ ಚಂಡಮಾರುತ ಪ್ರಬಲವಾಗಿರುವ ಪರಿಣಾಮ ಆಂಧ್ರದ ಜೊತೆ ಗಡಿ ಹಂಚಿಕೊಂಡಿರುವ ರಾಜ್ಯದ ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಯಚೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭರ್ಜರಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಕೇಂದ್ರದ ಹಂಗಾಮಿ ನಿರ್ದೇಶಕಿ ಗೀತಾ ಅಗ್ನಿಹೋತ್ರಿ ಹೇಳಿದ್ದಾರೆ.
Mandya Rain Effect 90ಕ್ಕೂ ಹೆಚ್ಚು ತೆಂಗಿನಮರ ನೆಲಸಮ, ಕಣ್ಣೀರಿಟ್ಟ ವೃದ್ಧೆ
ಗಡಿ ಜಿಲ್ಲೆಗಳ ಜೊತೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಕೊಡಗು ಮತ್ತು ದಾವಣಗೆರೆ ಜಿಲ್ಲೆಯಲ್ಲೂ ಮುಂದಿನ ಎರಡು ದಿನ ಮಳೆ ಅಬ್ಬರ ಹೆಚ್ಚಿರಲಿದೆ ಎಂದು ಗೀತಾ ಅಗ್ನಿಹೋತ್ರಿ ತಿಳಿಸಿದ್ದಾರೆ.
ರಾಜ್ಯ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ, ಒಳನಾಡಿನ ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಕೊಪ್ಪಳ, ರಾಯಚೂರು ಜಿಲ್ಲೆಯಲ್ಲಿಯೂ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ.
ರಾಜ್ಯದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಉಷ್ಣತೆ ವಾಡಿಕೆಗಿಂತ ಕಡಿಮೆ ಆಗಿದೆ. ಮುಂದಿನ ಎರಡ್ಮೂರು ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉಷ್ಣತೆ ವಾಡಿಕೆಗಿಂತ ಕಡಿಮೆ ಇರುವ ಸಾಧ್ಯತೆ ಹೆಚ್ಚಿದೆ. ಮಳೆ, ಮೋಡ ಕವಿದ ವಾತಾವರಣ ಇರುವುದರಿಂದ ತೇವಾಂಶ ಅಧಿಕವಾಗಿರಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ 8.30ಕ್ಕೆ ಮುಕ್ತಾಯಗೊಂಡ 24 ಗಂಟೆ ಅವಧಿಯಲ್ಲಿ ಚಾಮರಾಜನಗರದ ಉಮ್ಮತ್ತೂರಿನಲ್ಲಿ 7.7 ಸೆಂ.ಮೀ, ಮಂಡ್ಯದ ಉಪ್ಪರ್ಕನಹಳ್ಳಿ 4.8 ಸೆಂ.ಮೀ, ಮೈಸೂರಿನ ಅಟ್ಟಹಳ್ಳಿ 4.4 ಸೆಂ.ಮೀ ಮಳೆಯಾಗಿದೆ.
Bengaluru Rains: ಬೆಂಗ್ಳೂರಲ್ಲಿ ಮುಂದುವರಿದ ಮಳೆ: ಧರೆಗುರುಳಿದ ಮರಗಳು..!
ರಾಜ್ಯದಲ್ಲಿ ಮಳೆಗೆ ಅಪಾರ ಕೃಷಿ ಹಾನಿ
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಆಸಾನಿ’ ಚಂಡಮಾರುತದ ಪ್ರಭಾವದಿಂದಾಗಿ ರಾಜ್ಯದ ಕೆಲಜಿಲ್ಲೆಗಳಲ್ಲಿ ಅಕಾಲಿಕ ಮಳೆಯಾಗುತ್ತಿದ್ದು ಕೃಷಿಗೆ ಅಪಾರ ಹಾನಿಯಾಗಿವೆ. ಮಳೆ ಸಂಬಂಧಿ ಕಾರಣಗಳಿಗೆ ಇಬ್ಬರು ಗಾಯಗೊಂಡಿದ್ದಾರೆ.
ರಾಜಧಾನಿ ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗದ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಉತ್ತರ ಕರ್ನಾಟಕದ ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಹಲವಡೆಯೂ ಭಾರಿ ಬಿರುಗಾಳಿ ಮಳೆ ಸುರಿದಿದ್ದು ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿಲ್ಲಿ ರಾಮೇಶ್ವರ ಬಂಡಿಯಲ್ಲಿ ಮರವೊಂದು ವೃದ್ಧನ ಮೇಲೆ ಬಿದ್ದು ಸೊಂಟ ಮುರಿದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಳೆಯಿಂದ ಭತ್ತ, ಮೆಕ್ಕೆಜೋಳ ಮತ್ತು ಬಾಳೆ ಬೆಳೆಗೆ ಅಪಾರ ಹಾನಿ ಸಂಭವಿಸಿದೆ. ಕೊಪ್ಪಳ ಜಿಲ್ಲೆಯ ಕುಟುಗನಳ್ಳಿ ಗ್ರಾಮದ ಸಮೀಪ ಪಪ್ಪಾಯಿ ತೋಟ ಮತ್ತು ಚಿಕ್ಕು ತೋಟ ಸಂಪೂರ್ಣ ಹಾನಿಯಾಗಿದ್ದು ಲಕ್ಷಾಂತರ ರು. ನಷ್ಟವಾಗಿದೆ. ಕೋಲಾರ ಜಿಲ್ಲೆಯಲ್ಲೂ ಬಿರುಗಾಳಿ ಮಳೆಯಿಂದ ಕೊಯ್ಲಿಗೆ ಬಂದಿರುವ ವಾರ್ಷಿಕ ಬೆಳೆಗಳಾದ ಮಾವು, ಪಪ್ಪಾಯಿ, ಟೊಮೆಟೋ ಬೆಳೆಗಳು ನೆಲಕಚ್ಚಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ