ಈಶ್ವರಪ್ಪ, ಯತ್ನಾಳ್‌ರಿಂದ ಹೊಸ ಸಂಘಟನೆ ಆರ್‌ಸಿಬಿ!

By Kannadaprabha NewsFirst Published Sep 23, 2024, 4:56 AM IST
Highlights

ಈ ಹಿಂದೆ ರಾಯಣ್ಣ ಬ್ರಿಗೇಡ್ ನಿರ್ಮಿಸುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ತಮ್ಮ ಶಕ್ತಿ ತೋರಿಸಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ರಾಜ್ಯದ ಬಲಿಷ್ಠ ಸಮುದಾಯ ಎನಿಸಿಕೊಂಡ ಪಂಚಮಸಾಲಿ ಸಮಾಜದ ಜೊತೆಗೆ ಸೇರಿ ಆರ್‌ಸಿಬಿ (ರಾಯಣ್ಣ ಚೆನ್ನಮ್ಮ ಬ್ರಿಗೇಡ್) ಸಂಘಟನೆಯ ಪ್ಲಾನ್ ಮಾಡಿದ್ದಾರೆ.

ಶಶಿಕಾಂತ ಮೆಂಡೆಗಾರ

 ವಿಜಯಪುರ (ಸೆ.23): ಈ ಹಿಂದೆ ರಾಯಣ್ಣ ಬ್ರಿಗೇಡ್ ನಿರ್ಮಿಸುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ತಮ್ಮ ಶಕ್ತಿ ತೋರಿಸಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ರಾಜ್ಯದ ಬಲಿಷ್ಠ ಸಮುದಾಯ ಎನಿಸಿಕೊಂಡ ಪಂಚಮಸಾಲಿ ಸಮಾಜದ ಜೊತೆಗೆ ಸೇರಿ ಆರ್‌ಸಿಬಿ (ರಾಯಣ್ಣ ಚೆನ್ನಮ್ಮ ಬ್ರಿಗೇಡ್) ಸಂಘಟನೆಯ ಪ್ಲಾನ್ ಮಾಡಿದ್ದಾರೆ. ಹೆಚ್ಚಿನ ಜನಸಂಖ್ಯೆ ಹೊಂದಿರುವ ಎರಡು ಬಹುಸಂಖ್ಯಾತ ಸಮಾಜಗಳು ಸೇರಿ ಬ್ರಿಗೇಡ್ ಮಾಡುತ್ತಿರುವುದರಿಂದ ಸಹಜವಾಗಿಯೇ ಇದು ರಾಜ್ಯದಲ್ಲಿ ಕಿಚ್ಚು ಹೊತ್ತಿಸಲಿದೆ. ಇನ್ನು ಆರ್‌ಸಿಬಿ ರಚನೆ ಬಗ್ಗೆ ವಿಜಯಪುರದಿಂದಲೇ ಸಭೆಗಳು ಶುರುವಾಗಿವೆ.

Latest Videos

ಪಂಚಮಸಾಲಿ ಜಗದ್ಗುರು ಇಟ್ಟ ಹೆಸರು:

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಹಿಂದೂ ಹುಲಿ ಎನಿಸಿಕೊಂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಕೆ.ಎಸ್.ಈಶ್ವರಪ್ಪನವರಿಗೆ ರಾಯಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಕೂಡಲಸಂಗಮ ಪೀಠದ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ನೀವು ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಹೆಸರಿನಲ್ಲಿ ಸಂಘಟನೆ ಮಾಡಬೇಕು, ನೊಂದವರಿಗೆ, ಬಡವರಿಗೆ, ದಲಿತರಿಗೆ, ಹಿಂದುಳಿದವರಿಗೆ ಶಕ್ತಿ ತುಂಬಬೇಕು ಎಂದು ಸಲಹೆ ನೀಡಿದ್ದರು.

ಸತ್ತರೂ ಬಿಜೆಪಿ ಧ್ವಜ ಹಾಕ್ಕೊಂಡೆ ಸಾಯ್ತಿನಿ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ

ವಿಜಯಪುರದಿಂದಲೇ ಆರ್‌ಸಿಬಿಗೆ ಶಕ್ತಿ?

ಆರ್ಥಿಕವಾಗಿ ಹಿಂದುಳಿದವರು, ಯುವಕರು, ಬಡವರ ಧ್ವನಿಯಾಗಲು ಸೂಕ್ತ ವೇದಿಕೆ ಬೇಕಿರುವುದರಿಂದ ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಹೆಸರಿನಲ್ಲಿ ಸಂಘಟನೆ ನಿರ್ಮಿಸಬೇಕಿರುವ ವಿಚಾರದ ಕುರಿತು ವಿಜಯಪುರದಿಂದಲೇ ಮೊದಲ ಸಭೆ ಶುರುವಾಗಿದೆ. ನಗರದ ಮಹಾಲ-ಐನಾಪುರದ ಹುಲಜಂತಿ ಮಠದಲ್ಲಿ ಸಭೆ ನಡೆಸಿದ ಕೆ.ಎಸ್.ಈಶ್ವರಪ್ಪ ತಮ್ಮ ಆಪ್ತರು, ಸಮುದಾಯದ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು, ಬೆಂಬಲಿಗರು ಸೇರಿ ಬಳಗ ಜೊತೆ ಸಭೆ ನಡೆಸಿದ್ದಾರೆ. ಮುಖ್ಯವಾಗಿ ಹುಲಜಂತಿ ಮಹಾರಾಜರು, ಮಖಣಾಪುರ ಮಹಾರಾಜರು, ಮುಖಂಡರಾದ ರಾಜು ಬಿರಾದಾರ, ಈರಣ್ಣ ಹಳೆಗೌಡರ ಸೇರಿ ಹಲವರ ಜೊತೆಗೆ ಸಭೆ ನಡೆದಿದೆ. ಆರ್‌ಸಿಬಿ ರಚನೆ ಮಾಡುವುದು, ಹೋರಾಟದ ರೂಪುರೇಷೆಗಳನ್ನು ನಿರ್ಮಿಸುವುದು ಹೇಗೆ ಎಂಬ ಬಗ್ಗೆ ಚರ್ಚೆ ನಡೆದಿದೆ.

ಮುಂದಿನ ಸಭೆ ಬಾಗಲಕೋಟೆ

ಮೊದಲಸಭೆ ವಿಜಯಪುರದಲ್ಲಿ ಆಗಿದ್ದು ಎರಡನೇ ಸಭೆಯನ್ನು ಅಕ್ಟೋಬರ್ 20ರಂದು ಬಾಗಲಕೋಟೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಮುಖಂಡರು, ಮಠಾಧೀಶರು, ಲಿಂಗಾಯತ, ಕುರುಬ ಸಮುದಾಯಗಳು ಸೇರಿ ಪ್ರಮುಖರ ಸಭೆ ನಡೆಸಿ ಬಾಗಲಕೋಟೆ ಜಿಲ್ಲೆಯಲ್ಲೂ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಆರ್‌ಸಿಬಿ (ರಾಯಣ್ಣ ಚೆನ್ನಮ್ಮ ಬ್ರಿಗೇಡ್) ಹೆಸರು ಅ.20ರಂದು ಬಾಗಲಕೋಟೆಯಲ್ಲಿ ಅಧಿಕೃತವಾಗಿ ಘೋಷಣೆ ಸಾಧ್ಯತೆ ಇದೆ.

ಬಿಜೆಪಿಗೆ ಸೆಡ್ಡು ಹೊಡೆಯುವ ಪ್ಲಾನ್‌

ಈ ಹಿಂದೆ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದ ಈಶ್ವರಪ್ಪ ಮತ್ತೆ ಬಿಜೆಪಿ ನಾಯಕರಿಗೆ ಹಿಂದುತ್ವದ ಹೆಸರಿನಲ್ಲಿ ಸಂಘಟನೆ ನಿರ್ಮಿಸಿ ತಾಕತ್ತು ತೋರಲು ಮುಂದಾಗಿದ್ದಾರೆ. ಇದಕ್ಕೆ ಪಂಚಮಸಾಲಿ ಸ್ವಾಮೀಜಿ ಸಹ ಸಾಥ್ ನೀಡಿದ್ದಾರೆ. ಕಳೆದ ಮೂರೂವರೆ ವರ್ಷಗಳಿಂದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡಿ ಎಂದು ಹೋರಾಟ ನಡೆಸುತ್ತಿದ್ದರೂ ಸರ್ಕಾರಗಳು ಕ್ಯಾರೆ ಎನ್ನುತ್ತಿಲ್ಲ. ಇದರಿಂದ ಬಹುಸಂಖ್ಯಾತ ಲಿಂಗಾಯತರು ಸಹ ಎಲ್ಲ ಪಕ್ಷಗಳ ಮೇಲೆ ಬೇಸರಗೊಂಡಿದ್ದಾರೆ. ಇದೀಗ ಜಾತ್ಯಾತೀತವಾಗಿ ಬ್ರಿಗೇಡ್ ನಿರ್ಮಿಸಿ ಯುವ ಪಡೆಯೊಂದಿಗೆ ಅಧಿಕಾರಶಾಹಿಗಳಿಗೆ ಪಾಠ ಕಲಿಸಲು ಮುಂದಾಗಿದ್ದಾರೆ.

ರಾಯಣ್ಣ ಬ್ರಿಗೇಡ್‌ಗೆ ಕೊಕ್ಕೆ ಹಾಕಿದ್ದ ಬಿಜೆಪಿ

ಹಿಂದೆ ಈಶ್ವರಪ್ಪನವರು ರಾಯಣ್ಣ ಬ್ರಿಗೇಡ್ ಸಂಘಟನೆ ಮಾಡಿದ್ದ ವೇಳೆ ಲಕ್ಷ ಲಕ್ಷ ಜನರು ಬಂದಿದ್ದರು. ಬಳಿಕ, ಬಿಜೆಪಿ ಹೈಕಮಾಂಡ್‌ ಕರೆದು ರಾಯಣ್ಣ ಬ್ರಿಗೇಡ್ ನಿಲ್ಲಿಸಿದರು. ಆದರೆ ಆಗ ರಚಿಸಿದ್ದ ರಾಯಣ್ಣ ಬ್ರಿಗೇಡ್ ಬಿಡಬಾರದಿತ್ತು ಎಂದು ನನಗೆ ಈಗ ಅನಿಸುತ್ತಿದೆ ಎಂದು ಸ್ವತಃ ಈಶ್ವರಪ್ಪನವರೇ ಪಶ್ಚಾತಾಪ ಪಡುತ್ತಿದ್ದಾರೆ.

ರಾಯಣ್ಣ ಬ್ರಿಗೇಡ್ ರೀತಿ ಒಂದು ಸಂಘಟನೆ ಆಗಬೇಕು ಎಂದು ಎಲ್ಲರೂ ಕೇಳುತ್ತಿದ್ದಾರೆ. ಬಡವರಿಗೆ, ಹಿಂದುಳಿದವರಿಗೆ ಅನ್ಯಾಯ ಆಗದಂತೆ ಏನಾದರೂ ಮಾಡಬೇಕಿದೆ. ಇದೀಗ ಸಭೆ ನಡೆಸಿ ಮುಂದೆ ಏನು ಮಾಡಬೇಕು ಎಂದು ಚರ್ಚೆ ಮಾಡುತ್ತೇವೆ. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಮಸಾಲಿ ಸ್ವಾಮಿಜಿಯೇ ಹೆಸರು ಸೂಚಿಸಿರುವಂತೆ ಆರ್‌ಸಿಬಿ ಬಗ್ಗೆ ಆಪ್ತ ವಲಯದಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ.

.ಕೆ.ಎಸ್.ಈಶ್ವರಪ್ಪ, ರಾಯಣ್ಣ ಬ್ರಿಗೇಡ್ ರೂವಾರಿ

ಆರ್‌ಸಿಬಿ ಬಹುತೇಕ ಫೈನಲ್

ಬಿಜೆಪಿಗೆ ಬಂಡಾಯದ ಬಾವುಟ ಹಾರಿಸಿರುವ ಈಶ್ವರಪ್ಪನವರು ಹಿಂದೆ ರಾಯಣ್ಣ ಬ್ರಿಗೇಡ್ ಮಾಡಿ ಕೈ ಬಿಟ್ಟಿದ್ದರಿಂದ ತಮ್ಮ ರಾಜಕೀಯ ಜೀವನದಲ್ಲಿ ಅಸ್ತವ್ಯಸ್ತವಾಗಿದೆ. ಆದರೆ, ಈ ಬಾರಿ ರಾಜ್ಯದ ಎಲ್ಲ ವರ್ಗಗಳ ಯುವಕರು, ಬೆಂಬಲಿಗರ ಜೊತೆಗೂಡಿ ಬ್ರಿಗೇಡ್ ಕಟ್ಟುವ ನಿರ್ಧಾರ ಮಾಡಿದ್ದಾರೆ. ಇದಕ್ಕೆ ಸಾಥ್ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಜಮಖಂಡಿ ತಾಲೂಕಿನ ಜಕನೂರಿನ ಕಾರ್ಯಕ್ರಮದಲ್ಲಿ ಈಶ್ವರಪ್ಪನವರನ್ನು ಮತ್ತೆ ಪಕ್ಷಕ್ಕೆ ತಂದು ಸಿಎಂ ಮಾಡುವ ಮಾತುಗಳನ್ನಾಡಿದ್ದು ಈ ಎಲ್ಲ ಬೆಳವಣಿಗೆಗೆ ಪುಷ್ಠಿ ನೀಡಿದೆ.

click me!