ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ ರಾಜೇಂದ್ರ, ತಮ್ಮ ಮೇಲೆ ಕೊಲೆ ಯತ್ನ ನಡೆದಿದೆ ಎಂದು ಡಿಜಿಪಿ ಅಲೋಕ್ ಮೋಹನ್ ಅವರಿಗೆ ದೂರು ನೀಡಿದ್ದಾರೆ. ನವೆಂಬರ್‌ನಲ್ಲಿ ಕೊಲೆಗೆ ಸಂಚು ರೂಪಿಸಲಾಗಿತ್ತು ಮತ್ತು ಜನವರಿಯಲ್ಲಿ ಸುಪಾರಿ ನೀಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಬೆಂಗಳೂರು (ಮಾ.27): ರಾಜ್ಯದಲ್ಲಿ ಇತ್ತೀಚೆಗೆ ಮುನ್ನೆಲೆಗೆ ಬಂದಿದ್ದ ಹನಿಟ್ರ್ಯಾಪ್ ಬಗ್ಗೆ ದೂರು ಕೊಡಲು ಬರುವುದಾಗಿ ಹೇಳಿದ್ದ ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರು ನನ್ನ ಮೇಲೆ ಕೊಲೆ ಯತ್ನ ನಡೆದಿದ್ದು, ಈ ಬಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರಿಗೆ ದೂರು ಕೊಡಲು ಬಂದಿದ್ದೇನೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜೇಂದ್ರ ಅವರು, ಇವತ್ತು ನಾನು ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಅವರನ್ನ ಭೇಟಿ ಮಾಡಿದ್ದೇನೆ. ಒಂದು ವಾರದಿಂದ ಎಲ್ಲಾ ಕಡೆ ಈ ವಿಷಯ ಚರ್ಚೆ ಆಗುತ್ತಿದೆ. ಇದರ ಬಗ್ಗೆ ತನಿಖೆ ಆಗಬೇಕು. ಇದರ ಹಿಂದೆ ಯಾರು ಇದ್ದಾರೆ ಅಂತ ತಿಳಿಬೇಕು. ಇವತ್ತು ನಾನು ದೂರು ಕೊಟ್ಟಿರೋದು, ನವೆಂಬರ್ 16 ರಂದು ನನ್ನ ಮಗಳ ಹುಟ್ಟುಹಬ್ಬ ಇರುತ್ತದೆ. ಶ್ಯಾಮಿಯಾನದವರ ರೂಪದಲ್ಲಿ ನನ್ನ ಮರ್ಡರ್ ಮಾಡೋಕೆ ಮುಂದಾಗಿದ್ದರು. ನನಗೆ ತಡವಾಗಿ ಆ ವಿಷಯ ಗೊತ್ತಾಗಿದೆ ಎಂದು ಹೇಳಿದ್ದಾರೆ.
ಜನವರಿಯಲ್ಲಿ ನನ್ನ ಮೇಲೆ ಕೊಲೆ ಯತ್ನ ಆಗಿರುವುದರ ಬಗ್ಗೆ ಆಡಿಯೋ ರೆಕಾರ್ಡ್ ಸಿಗುತ್ತದೆ. ಆ ಆಡಿಯೋ ನಲ್ಲಿ ನನಗೆ ಸುಪಾರಿ ಕೊಟ್ಟ ಸಂದೇಶ ಇರುತ್ತದೆ. ಆ ಆಡಿಯೋ ನಲ್ಲಿ 5 ಲಕ್ಷ ರೂಪಾಯಿಗೆ ಡೀಲ್ ಮಾಡಿದ್ದರು. ಆ ರೆಕಾರ್ಡಿಂಗ್ ನಲ್ಲಿ ಏನಿದೆ ಅನ್ನೋದರ ಬಗ್ಗೆ ನಾನು ಡಿಜಿ ಅವರಿಗೆ ಕಂಪ್ಲೇಂಟ್ ಕೊಟ್ಟಿದೀನಿ ಎಂದು ಮಾಹಿತಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಹೈಕಮಾಂಡ್ ಒತ್ತಡಕ್ಕೆ ಮಣಿದರಾ ರಾಜಣ್ಣ?: ಕುತೂಹಲ ಹುಟ್ಟಿಸಿದ ಸಚಿವರ ನಡೆ
ನನ್ನನ್ನು ಕೊಲೆ ಮಾಡಲು ಬಂದವರ ಪೈಕಿ ಸೋಮ, ಭರತ್ ಅನ್ನೋ ಹೆಸರುಗಳು ಕೇಳಿ ಬಂದಿವೆ. ಜನವರಿಯಲ್ಲಿ ನನಗೆ ಈ ಮಾಹಿತಿ ಬಂತು. ಇದು ಬೇರೆ ಬೇರೆ ರೀತಿಯ ನಡುವಳಿಕೆಯಿಂದ ಕಂಡುಬರುತ್ತಿದೆ. ನಾಳೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಕೊಡುತ್ತೇನೆ. ಆಡಿಯೋ ನಲ್ಲಿ ಇಬ್ಬರು ಮಾತನಾಡಿದ್ದಾರೆ. ಮೊದಲಿನಿಂದಲೂ ನಮ್ಮ ಮನೆಗೆ ಶಾಮಿಯಾನ ಅವರೇ ಹಾಕುತ್ತಿದ್ದರು. ಆದರೆ, ಆ ತಂಡದಲ್ಲಿ ಅವರು ಮಾಲೀಕರಿಗೆ ಗೊತ್ತಿಲ್ಲದೇ ಸೇರಿಕೊಂಡಿದ್ದರು. ಇಬ್ಬರು ಬಂದಿದ್ದರು ಎಂಬ ಮಾಹಿತಿ ನನಗಿದೆ ಎಂದು ತಿಳಿಸಿದರು.
ನನಗೆ ಕೊಲೆ ಬೆದರಿಕೆ ಇದೆ. ಅವತ್ತು ಯಾರು ಯಾರು ಮನೆಗೆ ಬಂದಿದ್ದರು ಅನ್ನೋದು ತನಿಖೆ ಆಗುತ್ತಿದೆ. ನಾನು ಕೊಟ್ಟಿರೋದು ಕೊಲೆ ಬೆದರಿಕೆ ಕಂಪ್ಲೇಂಟ್. ನನ್ನ ತಂದೆ ನೀಡಿರೋದು ಹನಿಟ್ರ್ಯಾಪ್ ಕಂಪ್ಲೇಂಟ್. ನಾನು ಈ ಕಂಪ್ಲೇಂಟ್ ತಗೋಳೋಕೆ ಬರಲ್ಲ ಅಂತ ಡಿಜಿ ಅವರು ಹೇಳಿದ್ದಾರೆ. ಇದೀಗ ನಾನು ತುಮಕೂರು ಎಸ್‌ಪಿಗೆ ಕಚೇರಿಗೆ ಹೋಗಿ ದೂರು ಕೊಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಹನಿಟ್ರ್ಯಾಪ್ ರಹಸ್ಯ ಬಿಚ್ಚಿಟ್ಟ ಸಚಿವ ರಾಜಣ್ಣ; ಎರಡು ಬಾರಿಯೂ ಬೇರೆ ಬೇರೆ ಹುಡುಗಿಯರು ಬಂದಿದ್ದರು!