ರಾಜ್ಯದಲ್ಲೇ ಅತಿ ಹೆಚ್ಚು 361 ಸಂಯೋಜಿತ ಕಾಲೇಜುಗಳನ್ನು ಹೊಂದಿರುವ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ (ಆರ್‌ಸಿಯು) ಶೈಕ್ಷಣಿಕ ಚಟುವಟಿಕೆಗಳಿಂದ ಸಂಶೋಧನಾ ಕಾರ್ಯಗಳವರೆಗೂ ಎಲ್ಲವೂ ಓಕೆ.
ಶ್ರೀಶೈಲ ಮಠದ
ಬೆಳಗಾವಿ (ಮಾ.27): ರಾಜ್ಯದಲ್ಲೇ ಅತಿ ಹೆಚ್ಚು 361 ಸಂಯೋಜಿತ ಕಾಲೇಜುಗಳನ್ನು ಹೊಂದಿರುವ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ (ಆರ್‌ಸಿಯು) ಶೈಕ್ಷಣಿಕ ಚಟುವಟಿಕೆಗಳಿಂದ ಸಂಶೋಧನಾ ಕಾರ್ಯಗಳವರೆಗೂ ಎಲ್ಲವೂ ಓಕೆ. ಆದರೆ, ಸುಮಾರು ಅರ್ಧದಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆಯೇ ದೊಡ್ಡ ಸಮಸ್ಯೆ. ಕುಂದಾನಗರಿ ಬೆಳಗಾವಿ ಸಮೀಪದ ಭೂತರಾಮನಹಟ್ಟಿಯಲ್ಲಿ ಸ್ಥಾಪನೆಯಾಗಿರುವ ರಾಣಿ ಚೆನ್ನಮ್ಮ ವಿವಿಯಿಂದ ಬಾಗಲಕೋಟೆ ಜಿಲ್ಲೆಯ 73 ಕಾಲೇಜುಗಳನ್ನು ಬೇರ್ಪಡಿಸಿ ಹಿಂದಿನ ಸರ್ಕಾರ ಬಾಗಲಕೋಟೆ ವಿವಿಯನ್ನು ಹೊಸದಾಗಿ ಸ್ಥಾಪಿಸಿತು. ಅಲ್ಲಿಯವರೆಗೂ ಆರ್‌ಸಿಯು 400 ಕ್ಕೂ ಹೆಚ್ಚು ಕಾಲೇಜುಗಳು, ಸುಮಾರು 2 ಲಕ್ಷ ವಿದ್ಯಾರ್ಥಿಗಳನ್ನು ಒಳಗೊಂಡಿತ್ತು.
ಎಲ್ಲವೂ ಸರಿಯಾಗಿದೆ ಎನ್ನುವಂತಿರುವ ವಿವಿಯಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ಜೊತೆಗೆ ಆಡಳಿತಾತ್ಮಕ ಕಾರ್ಯಕ್ಕೆ ಸಂಬಂಧಿಸಿದ ಉಪ ಕುಲಸಚಿವರು, ಸಹಾಯಕ ಕುಲ ಸಚಿವರು, ಪ್ರಾಂಶುಪಾಲರ ಹುದ್ದೆಗಳೂ ಖಾಲಿ ಇವೆ. ವಿವಿಯ ನಿತ್ಯ ಕಾರ್ಯನಿರ್ವಹಣೆಗೆ ಅತಿಥಿ ಉಪನ್ಯಾಸಕರು, ಗುತ್ತಿಗೆ, ಹೊರಗುತ್ತಿಗೆ ನೌಕರರೇ ಅಸರೆಯಾಗಿದ್ದಾರೆ. ವಿವಿಯ ಇನ್ನಷ್ಟು ಪ್ರಗತಿ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ನಿರೀಕ್ಷೆ ಮಾಡುತ್ತಿದೆ. 2010-11ನೇ ಸಾಲಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆ ವ್ಯಾಪ್ತಿಯನ್ನು ಹೊಂದಿದ್ದು, ಒಟ್ಟು 361 ಸಂಯೋಜಿತ ಕಾಲೇಜುಗಳಿವೆ. ಹೀಗಾಗಿ ರಾಜ್ಯದಲ್ಲೇ ಅತಿ ಹೆಚ್ಚು ಸಂಯೋಜಿತ ಕಾಲೇಜುಗಳನ್ನು ಹೊಂದಿದ ವಿವಿ ಎಂಬ ಖ್ಯಾತಿಯೂ ಇದೆ.
ರಾಜ್ಯದ ಏಕೈಕ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯಗೆ ಸ್ವಂತ ಕಟ್ಟಡವಿಲ್ಲ!
ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಸುಮಾರು 1.39 ಲಕ್ಷ ವಿದ್ಯಾರ್ಥಿಗಳು ಈ ವಿವಿಯಡಿ ವ್ಯಾಸಂಗ ಮಾಡುತ್ತಿದ್ದಾರೆ. ದಾಖಲೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೂ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಾಯಂ ಬೋಧಕರ ನೇಮಕಾತಿ ಮಾತ್ರ ನಡೆಯುತ್ತಿಲ್ಲ. ಹೀಗಾಗಿ ಅತಿಥಿ ಉಪನ್ಯಾಸಕರಿಂದಲೇ ಬೋಧನೆ ನಡೆಯುತ್ತಿದೆ. ಸರ್ಕಾರ ಮಂಜೂರು ಮಾಡಿರುವ 137 ಬೋಧಕ ಹಾಗೂ 287 ಬೋಧಕೇತರ ಹುದ್ದೆಗಳ ಪೈಕಿ 82 ಬೋಧಕ ಸಿಬ್ಬಂದಿ ಮತ್ತು 141 ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 55 ಬೋಧಕ ಹುದ್ದೆ ಮತ್ತು 153 ಬೋಧಕೇತರ ಹುದ್ದೆಗಳು ಇನ್ನೂ ಖಾಲಿ ಉಳಿದಿವೆ. ಸರ್ಕಾರ ಮಂಜೂರು ಮಾಡಿದ 6 ಉಪಕುಲಸಚಿವರ ಪೈಕಿ ಇಬ್ಬರು ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೂ 4 ಹುದ್ದೆಗಳು ಖಾಲಿಯಿವೆ.
13 ಸಹಾಯಕ ಕುಲಸಚಿವರ ಪೈಕಿ 8 ಜನ ಮಾತ್ರ ಸೇವೆ ಸಲ್ಲಿಸುತ್ತಿದ್ದು, 5 ಹುದ್ದೆಗಳು ಖಾಲಿ ಉಳಿದಿವೆ. ಹೀಗೆ ಕಾಯಂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆಯಿಂದ ನಲಗುತ್ತಿರುವ ಆರ್‌ಸಿಯುಗೆ ಅತಿಥಿ ಉಪನ್ಯಾಸಕರು, ಗುತ್ತಿಗೆ, ಹೊರಗುತ್ತಿಗೆ ನೌಕರರೇ ಆಸರೆಯಾಗಿದ್ದಾರೆ. ಈ ಸಿಬ್ಬಂದಿಗೆ ಅಂತರಿಕ ಸಂಪನ್ಮೂಲದಿಂದ ವೇತನ ನೀಡಲಾಗುತ್ತಿದೆ. ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯಕ್ಕೆ ಮಂಜೂರಾದ ಒಂದು ಪ್ರಾಚಾರ್ಯರ ಹುದ್ದೆ ಖಾಲಿಯಿದೆ. ಈ ಕಾಲೇಜಿಗೆ ಒಟ್ಟು 15 ಬೋಧಕ ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 5 ಹುದ್ದೆಗೆ ನೇಮಕ ಮಾಡಲಾಗಿದೆ. 10 ಹುದ್ದೆಗಳು ಖಾಲಿ ಉಳಿದಿವೆ. ಅಲ್ಲದೇ, ಈ ಕಾಲೇಜಿಗೆ ಮಂಜೂರಾದ ಎಲ್ಲ 10 ಬೋಧಕೇತರ ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆಯೇ ನಡೆದಿಲ್ಲ. 2024-25ನೇ ಸಾಲಿಗೆ 62 ತಾತ್ಕಾಲಿಕ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ.
ವಿವಿಯ ಅಂತರಿಕ ಸಂಪನ್ಮೂಲ ₹73.94 ಕೋಟಿ ಇದೆ. ಸರ್ಕಾರದಿಂದ ₹ 35.32 ಕೋಟಿ ವೇತನ ಬಿಡುಗಡೆಯಾಗಿದ್ದು, ಈ ಪೈಕಿ ₹33.92 ಕೋಟಿ ಖರ್ಚಾಗಿದೆ. ಪಿಂಚಣಿ ವೇತನ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಎಸ್‌ಸಿಎಸ್‌ಪಿ ಯೋಜನೆಯಡಿ ₹28.80 ಲಕ್ಷ ಪಿಎಚ್‌ಡಿ ಅನುದಾನ ಬಿಡುಗಡೆಯಾಗಿದ್ದು, ಈ ಪೈಕಿ ₹ 19.92 ಲಕ್ಷ ಖರ್ಚಾಗಿದೆ.
2010ರಲ್ಲಿ ಆರ್‌ಸಿಯು ಸ್ಥಾಪನೆ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬೇರ್ಪಟ್ಟು ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು 2010-11ನೇ ಸಾಲಿನಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆ ಮೂರು ಜಿಲ್ಲಾ ವ್ಯಾಪ್ತಿಯೊಳಗೊಂಡು ಸ್ಥಾಪನೆಯಾಗಿತ್ತು. 2023ರಲ್ಲಿ ಜಮಖಂಡಿಯಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯದ ಸ್ಥಾಪನೆಯಾಯಿತು. ಹೀಗಾಗಿ ಆರ್‌ಸಿಯು ಈಗ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಯ ವ್ಯಾಪ್ತಿಯನ್ನು ಮಾತ್ರ ಒಳಗೊಂಡಿದೆ. ವಿಜಯಪುರದಲ್ಲಿ ಸ್ನಾತಕೋತ್ತರ ಕೇಂದ್ರ ಮತ್ತು ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜನ್ನು ಹೊಂದಿದೆ. 42 ಕಾಲೇಜುಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. 21 ವಿಷಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ 2780ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ, ರಾಣಿ ಚನ್ನಮ್ಮ ಅಧ್ಯಯನ ಪೀಠ, ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠ ಹಾಗೂ ಪಂಡಿತ ದೀನದಯಾಳ್ ಉಪಾಧ್ಯಾಯ ಅಧ್ಯಯನ ಪೀಠ ವಿವಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. 4 ವಿಷಯಗಳಲ್ಲಿ ಪಿಜಿ ಡಿಪ್ಲೋಮಾ ಕೋರ್ಸ್‌ಗಳು, 437ಕ್ಕಿಂತ ಹೆಚ್ಚು ಸಂಶೋಧನಾರ್ಥಿಗಳಿಂದ ಹಲವಾರು ವಿಷಯಗಳಲ್ಲಿ ಪಿಎಚ್‌ಡಿ ಸಂಶೋಧನೆಗಳು ನಿರಂತವಾಗಿ ನಡೆಯುತ್ತಿವೆ. ಮೂಲ ಸೌಕರ್ಯಗಳ ಕೊರತೆ ನಡುವೆಯೂ ವಿವಿಧ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗಿದೆ.
ಆರ್‌ಸಿಯುಗೆ ಹೊಸ ಕಟ್ಟಡ ಭಾಗ್ಯ: ಭೂತರಾಮನಹಟ್ಟಿಯಲ್ಲಿ 178.14 ಎಕರೆ ಪ್ರದೇಶದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ಥಾಪನೆಗೊಂಡಿದೆ. ವಿವಿಯ ಮುಖ್ಯ ಆವರಣದಲ್ಲಿ ಆಡಳಿತ ಕಚೇರಿ ಮತ್ತು 2 ವಸತಿ ನಿಲಯಗಳು, ಪ್ರಮುಖ ಶೈಕ್ಷಣಿಕ ಕಟ್ಟಡಗಳನ್ನು ಹೊಂದಿದೆ. ಹಿರೇಬಾಗೇವಾಡಿ ಬಳಿ 126 ಎಕರೆ ಜಾಗದಲ್ಲಿ ಆರ್‌ಸಿಯು ಹೊಸಕಟ್ಟಡ ತಲೆ ಎತ್ತುತ್ತಿದೆ. 9 ಕಟ್ಟಡಗಳ ಕಾರ್ಯ ಪ್ರಗತಿಯಲ್ಲಿದೆ. ಕೇಂದ್ರದ ಪಿಎಂ ಉಷಾ ಯೋಜನೆಯಡಿ ₹100 ಕೋಟಿ ವಿಶೇಷ ಅನುದಾನ ಸಿಕ್ಕಿದೆ.
ದಾವಣಗೆರೆ ವಿವಿಯಲ್ಲಿ ದುಡ್ಡಿದೆ, ವಿದ್ಯಾರ್ಥಿಗಳಿಲ್ಲ! ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪ್ರತಿ ಶೈಕ್ಷಣಿಕ ವರ್ಷದಲ್ಲಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವ ಮುಖಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗೆ ಸ್ಪಂದಿಸುತ್ತಿದೆ. ಜಾಗತಿಕವಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬದಲಾಗುತ್ತಿರುವ ಪ್ರವೃತ್ತಿ ಹಾಗೂ ಆಸಕ್ತಿಗಳನ್ನು ಗುರುತಿಸಿ, ಸ್ಪರ್ಧಾತ್ಮಕ ಯುಗಕ್ಕೆ ತಕ್ಕ ಶೈಕ್ಷಣಿಕ ಹೊಸ ಆಯಾಮಗಳನ್ನು ಅನುಷ್ಠಾನಗೊಳಿಸಲಾಗಿದೆ. ವಿಶ್ವವಿದ್ಯಾಲಯದಲ್ಲಿ ಕಾಯಂ ಬೋಧಕ ಸಿಬ್ಬಂದಿ ಕೊರತೆ ನಿಗಿಸುವ ನಿಟ್ಟಿನಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ.
- ಪ್ರೊ.ಸಿ.ಎಂ.ತ್ಯಾಗರಾಜ್, ಕುಲಪತಿ, ಆರ್‌ಸಿಯು